Thursday, November 26, 2009

ಗಮ್ಯ

ಆತ ಬಸ್ಸಿನಲ್ಲಿ ಹೊರಟಿದ್ದ. ಹೋಗಲೇನೂ ಗೊತ್ತು ಗುರಿಯಿರಲಿಲ್ಲ. ಆತ ತೀರ್ಮಾನಿಸಿಬಿಟ್ಟಿದ್ದ. ಬದುಕೆಂಬುದು ಕೊನೆಗಾಣದ ಪ್ರಯಾಣ. ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತದೆ. ಆದರೆ ಚಲಿಸುತ್ತಲೇ ಇರಬೇಕು. ಚಲಿಸದೇ ಇರುವುದು ನೆನಪುಗಳು ಮಾತ್ರ. ನೆನಪಾದರೂ ಎಲ್ಲಿಯವರೆಗೆ ಇದ್ದಾವು. ಹೊಸ ನೆನಪು ಬರುವವರೆಗೆ, ಹಳೆಯದೆಲ್ಲಾ ಮರೆವವರೆಗೆ. ಮುಂದೆ? ಮತ್ತೆ ಹೊಸದೊಂದು ಬದುಕು, ಹೊಸದೊಂದು ಪ್ರಯಾಣ.

ಆತನಿಗಾಗಲೇ ಇಳಿವಯಸ್ಸು. ನೋಡಲು ಕೂಡ ಹಾಗೇ ಕಾಣ್ತಿದ್ದ. ತಲೆಯಲ್ಲಿ ಅಲ್ಲಲ್ಲಿ ಕಾಣ್ತಿದ್ದ ಬೆಳ್ಳಿಕೂದಲು. ಕಣ್ಣಿಗಿನ್ನೂ ಮುಪ್ಪು ಬಂದಿರಲಿಲ್ಲ. ಆದರೆ ಆರೋಗ್ಯವಂತನೆಂದು ಮಾತ್ರ ಯಾರು ಬೇಕಾದರೂ ಹೇಳಬಹುದಿತ್ತು.

ಈಗತಾನೇ ವೃದ್ಧಾಶ್ರಮದಿಂದ ಹೊರ ಬಂದಿದ್ದ. ಎಷ್ಟೆಲ್ಲಾ ಕಷ್ಟಪಟ್ಟು ಏನು ಮಾಡಿದರೇನು, ಎಲ್ಲಾ ಮಕ್ಕಳು ವಿದೇಶೀ ಪ್ರಿಯರು. ಹಾರಿಬಿಟ್ಟಿದ್ದರು. ಮಕ್ಕಳು ಕೂಡ ಹಕ್ಕಿಮರಿಗಳಂತಲ್ಲವೇನು? ಆತ ಯೋಚಿಸುತ್ತಿದ್ದ.

ದೊಡ್ಡವಾಗುವ ತನಕ ಅವಕ್ಕೆ ಉಪಚಾರ ಮಾಡಬೇಕು. ಊಟ ತಿನ್ನಿಸಬೇಕು. ಹಾರುವುದ ಕಲಿಸಬೇಕು. ಬಿದ್ದರೂ ಮೇಲೇಳುವುದನ್ನು ತಿಳಿಸಬೇಕು. ಅಷ್ಟೇ ಅಲ್ಲವೇ ನಮ್ಮ ಕೆಲಸ. ಮೈ ಬೆಳೆಯುತ್ತಿದ್ದಂತೆಯೇ, ರೆಕ್ಕೆ ಬಲಿಯುತ್ತಿದ್ದಂತೆಯೇ ಹಾರಿಬಿಡುತ್ತವೆ. ಇಡೀ ನೀಲಿ ಆಗಸ ಅವುಗಳದ್ದಲ್ಲವೇ, ಹುಡುಕಲು ಏನೆಲ್ಲಾ ಇರುತ್ತದೆ. ಕಡೇವರೆಗೂ ಗೂಡಿನಲ್ಲಿಯೇ ಬಿದ್ದಿರಲು ಸಾಧ್ಯವೇ? ಹಾರಿ ಬಿಡುತ್ತವೆ ಎಂದು ಹಾರುವುದನ್ನೇ ಹೇಳಿಕೊಡದಿರಲಾದೀತೇ?

ಅವನ ಮಕ್ಕಳೂ ಅಷ್ಟೇ. ರೆಕ್ಕೆ ಬಲಿವ ತನಕ ಆತನ ಜೊತೆಗಿದ್ದರು. ಮುಂದೆ ಬೆಳೆದ ನಂತರ ದೇಶ ಸುತ್ತಲು ಹೊರಟು ಹೋದರು. ಅವನಿಗೇನೂ ಕೊರತೆಯಿರಲಿಲ್ಲ. ಅಥವಾ ಅವರು ಹಾಗೆ ಭಾವಿಸಿದ್ದರು.

ಅವನ ಕಷ್ಟ ಅವನಿಗೇ ಗೊತ್ತು. ಆ ಇಳಿವಯಸ್ಸಿನಲ್ಲಿ ಸಂಗಾತಿಯಿರಲಿಲ್ಲ. ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯರಿರಲಿಲ್ಲ.

ಮಕ್ಕಳೆಲ್ಲಾ ಮಾತಾಡಿಕೊಂಡು ಆತನನ್ನು ವೃದ್ಧಾಶ್ರಮವೊಂದಕ್ಕೆ ಸೇರಿಸಿದ್ದರು. ಪ್ರತಿ ತಿಂಗಳೂ ಹಣ ಕಳಿಸುತ್ತೀವಿ. ತೊಂದರೆಯಿಲ್ಲವಲ್ಲ? ಎಲ್ಲರೂ ಕೇಳಿದ್ದರು.

ನನ್ನನ್ನು ನಾನು ನೋಡಿಕೊಳ್ಳಬಲ್ಲೆ. ಪ್ರತಿ ಉತ್ತರಿಸಿದ್ದ.

ಮರಿಗಳು ಹಾರಿದ್ದವು. ವೃದ್ಧಾಶ್ರಮ ಬೇಸರವಾಗತೊಡಗಿತು. ಬಿಟ್ಟು ಹೊರಬಂದ. ಕೈಯಲ್ಲಿ ಕಾಸಿತ್ತು. ಮುಂದೆ ಹೋಗಲು ಗುರಿಯಿರಲಿಲ್ಲ. ವೃದ್ಧಾಶ್ರಮದ ಹೊರಗೇ ಬಸ್ ಸ್ಟಾಪಿತ್ತು. ಹೋಗ್ತಿದ್ದ ಹಾಗೇ ಬಸ್ ಬಂದಿತ್ತು. ಹತ್ತಿ ಕುಳಿತಿದ್ದ. ಬದುಕು ಚಲಿಸುತ್ತದೆ. ಆದರೆ ಬದುಕಿನ ಚುಕ್ಕಾಣಿ ನಾವು ಹಿಡಿದಿರಬೇಕು. ಬದುಕು ನಮ್ಮನ್ನು ಹಿಡಿದಿರಬಾರದು. ಯೋಚಿಸುತ್ತಾ ಕುಳಿತಿದ್ದ.

ಅಷ್ಟರಲ್ಲಿ ಮುಂದಿನ ಸ್ಟಾಪ್ ಬಂದಿತ್ತು. ಕಂಡಕ್ಟರ್ ಇನ್ನೂ ಟಿಕೆಟ್ ಕೇಳಲು ಶುರು ಮಾಡಿರಲಿಲ್ಲ. ಸಿಟಿ ದಾಟಿದ ಮೇಲೇನೇ ಅವನು ಕೇಳಲು ಶುರು ಮಾಡೋದು. ಜನ ಹತ್ತುತ್ತಿದ್ದರು.

ಅವನಿಗೆ ಆಶ್ಚರ್ಯವಾಯಿತು. ಎಲ್ಲರೂ ಚಲಿಸುತ್ತಿದ್ದಾರೆ. ಎಲ್ಲರೂ ಬದುಕುತ್ತಿದ್ದಾರೆ. ಎಲ್ಲರಿಗೂ ಒಂದು ಗಮ್ಯವಿದೆ. ಆದರೆ ಎಲ್ಲಿಯವರೆಗೆ? ಒಮ್ಮೆಯಾದರೂ ಗಮ್ಯವಿಲ್ಲದೆ ಪ್ರಯಾಣ ಮಾಡಿದ್ದಾರಾ ಅವರು? ಬದುಕನ್ನ ಅದರ ಪಾಡಿಗೆ ಬಿಟ್ಟಿದ್ದಾರಾ? ನಿಜ ತಿಳಿಯದ ಜನ.
ಅವನಿಗಿನ್ನೂ ತನ್ನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ.

ಅಮ್ಮಾ ಇಲ್ಲಿ ಬಾ, ಅಜ್ಜನ ಪಕ್ಕ ಜಾಗ ಖಾಲಿ ಇದೆ.

ಮಗುವೊಂದು ಕೂಗತೊಡಗಿದಾಗಲೇ ಆತ ತನ್ನ ಯೋಚನೆಯನ್ನೆಲ್ಲಾ ತುಂಡರಿಸಿದ್ದು. ಗಮನವಿಟ್ಟು ನೋಡಿದ. ಮಗುವೊಂದು ತನ್ನ ತಾಯಿಗಿಂತ ಮುಂಚೆ ಬಸ್ಸನ್ನು ಹತ್ತಿ ಸೀಟಿಗಾಗಿ ತನ್ನ ತಾಯಿಯನ್ನು ಕರೆಯುತ್ತಿತ್ತು. ಆತನಿಗೆ ಕರು ಅಂಬಾ ಎಂದಂತೆ ಅನಿಸಿತು. ಮುಂದೆ ಇದೇ ದೊಡ್ಡದಾದಾಗ ತಾಯಿಯ ನೆನೆವುದೇ ಎಂದು ಯೋಚಿಸಿ ಅವನಿಗೆ ಖೇದವಾಯಿತು.

ಹೂಂ ಅಜ್ಜನ ಪಕ್ಕ ಕೂತ್ಕೋ ಕಂದಾ. ಅಮ್ಮ ಮಗುವನ್ನ ಅವನ ಪಕ್ಕಕ್ಕೆ ಕೂರಿಸಿ ತಾನು ಕೊನೆಯಲ್ಲಿ ಕೂತಳು.

ಅವನು ಅವಳ ಕಡೆಗೊಮ್ಮೆ ಮಗುವಿನ ಕಡೆಗೊಮ್ಮೆ ನೋಡಿದ. ಆಕೆಗೆ ಸುಮಾರು ಮೂವತ್ತಿರಬಹುದು. ಮಗುವಿಗೆ ಮೂರೂವರೆ-ನಾಲ್ಕಿರಬಹುದೆಂದು ಲೆಕ್ಕ ಹಾಕಿದ.

ಕಿಟಕಿಯ ಕಡೆ ತಲೆ ಮಾಡಿ ಓಡುವ ಮರಗಳನ್ನೇ ನೋಡುತ್ತಾ ಕುಳಿತ. ನಾನೂ ಒಂದು ಮರವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಪ್ರಯಾಣ ಎಂದೂ ಮಾಡಬೇಕಾಗಿರಲಿಲ್ಲ. ಬದುಕು ಚಲಿಸುತ್ತಿರಲಿಲ್ಲ. ಯಾವುದರ ಚಿಂತೆಯೂ ಇರುತ್ತಿರಲಿಲ್ಲ. ಪ್ರತಿ ವಸಂತಕ್ಕೊಮ್ಮೆ ಹೊಸ ಹಕ್ಕಿಗಳು ಬರುತ್ತಿದ್ದವು. ಮರಿಹಕ್ಕಿಗಳ ಗದ್ದಲ ದಿನವೆಲ್ಲಾ ಇರುತ್ತಿತ್ತು. ಬೇಸರದ ಮಾತೇ ಇಲ್ಲ. ಪ್ರತಿ ವಸಂತಕ್ಕೊಮ್ಮೆ ಹೊಸ ಗದ್ದಲ. ಏನು ಸಂತೋಷವಿರುತ್ತಿತ್ತು ಎಂದು ನಿಟ್ಟುಸಿರುಬಿಟ್ಟ. ಮುಂದಿನ ಜನ್ಮದಲ್ಲಾದರೂ ಮರವಾಗಬೇಕು.

ಪಕ್ಕಕ್ಕೊಮ್ಮೆ ನೋಡಿದ. ಮಗು ತಾಯ ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಮಾಡಿತ್ತು.

ಒಂದು ಕಾಲದಲ್ಲಿ ತನ್ನ ಮಕ್ಕಳೂ ಹೀಗೇ ಇದ್ದರಲ್ಲವೇ, ಹೀಗೇ ಮಲಗಿದ್ದರಲ್ಲವೇ ತನ್ನ ತೊಡೆಯ ಮೇಲೆ? ಆತನ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಏನೋ ಧೂಳು ಬಿದ್ದವನಂತೆ ನಟಿಸಿ ಕಣ್ಣೀರ‍ನ್ನ ಒರೆಸಿಕೊಂಡ.

ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬಸ್ಸನ್ನು ಊಟಕ್ಕೆಂದು ನಿಲ್ಲಿಸಲಾಯಿತು. ಊರ ಹೊರಗೆ ಯಾವುದೋ ಢಾಬಾ. ಎಲ್ಲಾ ಹೊಂದಾಣಿಕೆ. ಆತನೆಂದುಕೊಂಡ.

ಬದುಕು ಹೊಂದಿಕೊಳ್ಳುತ್ತಾ ತನ್ನ ಅಸಲಿಯತ್ತನ್ನೇ ಕಳೆದುಕೊಳ್ಳುತ್ತದೆ. ಹೌದು ತಾನೀಗ ಹೊಂದಿಕೊಂಡಿಲ್ಲವೇ. ತನ್ನ ಅಸಲಿಯತ್ತನ್ನೆಲ್ಲಾ ಬಿಟ್ಟು ಮುಂದೆ ಹೊರಟಿಲ್ಲವೇ? ಅರೆ, ಹೊರಟಿದ್ದೇನೆ. ಆದರೆ ಎಲ್ಲಿಗೆ? ಎಲ್ಲಿಗೆಂದೇ ಗೊತ್ತಿಲ್ಲವಲ್ಲ. ಕಂಡಕ್ಟರ್ ಕೇಳಿದ್ದಕ್ಕೆ ಕೊನೇ ಸ್ಟಾಪೆಂದಿದ್ದ. ಕಂಡಕ್ಟರ್ ಇವನನ್ನೊಂಥರಾ ನೋಡಿ ಮರು ಮಾತಾಡದೆ ಟಿಕೆಟ್ ಕೊಟ್ಟಿದ್ದ. ಅವನಿಗೇನೋ ಅನುಮಾನ ಬಂದಂತಿತ್ತು.

ಊಟಕ್ಕೆಂದು ಎಲ್ಲರೂ ಇಳಿದು ಹೋದರು. ಯಾಕೆ ಊಟವಿಲ್ಲವಿಂದರೆ ಜೀವನ ಸಾಧ್ಯವಿಲ್ಲವೇನು. ತನ್ನನ್ನೇ ಪ್ರಶ್ನಿಸಿಕೊಂಡ ಅವನು ಅಲ್ಲಿಯೇ ಕುಳಿತ.

ಅವನ ಪಕ್ಕಕ್ಕೆ ಕುಳಿತಿದ್ದ ತಾಯಿ ಮಗು ಕೂಡ ಅಲ್ಲಿಯೇ ಉಳಿದಿದ್ದರು. ತಾಯಿ ಬ್ಯಾಗಿಂದ್ಯಾವುದೋ ಬಾಕ್ಸ್ ತೆಗೆದಳು. ಮಗು ಆಗಲೇ ಎದ್ದು ಕುಳಿತಿತ್ತು. ಅವರು ಊಟ ತಂದಿದ್ದರು. ತಾಯಿ ಬಾಕ್ಸಿನ ಮುಚ್ಚಳದಲ್ಲಿ ಸ್ವಲ್ಪ ಮೊಸರನ್ನ ಹಾಕಿ ಮಗುವಿಗೆ ಕೊಟ್ಟಳು. ಇವನು ಅವರ ಕಡೇನೇ ನೋಡುತ್ತಿದ್ದ. ಮಗುವಿಗೆ ಏನನ್ನಿಸಿತೋ ಏನೋ ’ಊಟ ಮಾಡಲ್ವ ತಾತ?’ ಕೇಳೇ ಬಿಟ್ಟಿತ್ತು.

ಏನೋ ಯೋಚನೆ ಮಾಡುತ್ತಿದ್ದವನಿಗೆ ದಿಢೀರನೇ ಈ ಪ್ರಶ್ನೆ ಅರ್ಥವಾಗಲಿಲ್ಲ. ತಿಳಿದ ನಂತರ ಎದೆಯೊತ್ತಿಬಂದಂತಾಯಿತು.

ಇಲ್ಲಾ ಪುಟ್ಟಾ, ನಂಗೆ ಹಸಿವಿಲ್ಲ. ಅದಕ್ಕೆ ಉತ್ತರಿಸಿದ್ದ.

ತಗೋ ಒಂದು ತುತ್ತು ತಿನ್ನು. ಮಗು ತನ್ನ ಪುಟ್ಟ ಕೈ ಚಾಚಿತ್ತು.

ಅವನಿಂದ ಇನ್ನು ತಡೆದುಕೊಳ್ಳಲಾಗಲಿಲ್ಲ. ಕಣ್ಣೀರು ತಾನೇ ತಾನಾಗಿ ಹರಿಯತೊಡಗಿತು.

ತನ್ನ ಮಕ್ಕಳಿಗೆ ತಾನು ಹೀಗೇ ಅಲ್ಲವೇ ಊಟ ಮಾಡಿಸುತ್ತಿದ್ದುದು. ಅವರಿಗೆ ನೆನಪಲ್ಲುಳಿಯಿತೇನು?

ತಾಯಿ ಗಾಬರಿಯಾದಳು. ಏಯ್ ಏನ್ ಹೇಳಿದ್ಯೋ? ಮಗುವಿಗೆ ಗದರ ಹೋದಳು.

ಏನಿಲ್ಲ ಬಿಡಮ್ಮಾ, ಇಂಥಾ ಒಂದು ಪ್ರೀತಿ ಮಾತು ಕೇಳಿ ಅದ್ಯಾವ ಕಾಲವಾಗಿತ್ತೋ.

ಅವನಿಗೆ ಕೊರಳಸೆರೆಯುಬ್ಬಿ ಬಂದಿತ್ತು. ತಾ ಕಂದಾ ತಿನ್ನಿಸು. ಅವನು ಆ ಮಾಡಿದ. ಆ ಪುಟ್ಟ ಕೈಯಲ್ಲಿ ಅದು ನಾಲ್ಕು ಕಾಳನ್ನ ಅವನ ಬಾಯಿಗೆ ಹಾಕಿತು. ಅವನ ಕಣ್ಣಲ್ಲಿ ಅಮೃತ ಕುಡಿದಷ್ಟು ಸಂತಸ ಎದ್ದು ಕಾಣುತ್ತಿತ್ತು.

ಸಮಾಧಾನ ಮಾಡಿಕೊಂಡು ಎದ್ದು ಬಸ್ಸಿಳಿದು ಹೋದ. ಮತ್ತೆ ಹತ್ತಿದಾಗ ಅವನ ಕೈತುಂಬಾ ಬಿಸ್ಕೆಟ್, ಹಣ್ಣು ಮತ್ತೆ ಚಾಕ್ ಲೇಟ್ ಗಳು. ಮಗುವಿನ ಕೈಗೆ ಕೊಟ್ಟ. ತಾಯಿಗದು ಅರ್ಥವಾಗಿತ್ತು. ಆಕೆಯೇನೂ ಹೇಳಲಿಲ್ಲ. ಬಸ್ಸು ಮತ್ತೆ ಹೊರಟಿತು. ಮಗುವಿಗಾಗಲೇ ಅವನು ಫ್ರೆಂಡ್ ಆಗಿಬಿಟ್ಟಿದ್ದ.

ಎಲ್ಲಿಗ್ಹೋಗ್ಬೇಕು ತಾತಾ? ಮುದ್ದಾಗಿ ಪ್ರಶ್ನಿಸಿತು.

ಗೊತ್ತಿಲ್ಲ ಕಣಪ್ಪಾ.

ನಂಜೊತೆಗೆ ಬರ್ತೀಯಾ?

ಹೂಂ ಕಂದಾ. ಮರುಮಾತಿಲ್ಲದೆ ಒಪ್ಪಿಗೆಯಿತ್ತಿದ್ದ.

ಅವನಿಗೇ ಆಶ್ಚರ್ಯವಾಗಿತ್ತು ತನ್ನ ಉತ್ತರ ಕೇಳಿ. ಬದುಕು ಎಲ್ಲಿಂದೆಲ್ಲಿಗೆ ಕರೆದೊಯ್ಯುತ್ತದಲ್ಲಾ? ಅವನು ತನ್ನಲ್ಲೇ ಪ್ರಶ್ನಿಸಿಕೊಂಡ.

ಮಗುವಿನ ಮನೆಯೆದುರೇ ಮನೆಯೊಂದ ಬಾಡಿಗೆ ಹಿಡಿದ. ಅವನ ಬದುಕಿಗೆ ಮತ್ತೊಂದು ಗಮ್ಯ ಗೋಚರಿಸಿತ್ತು. ಮತ್ತೊಂದು ಮರಿಹಕ್ಕಿಗೆ ಹಾರುವುದ ಹೇಳಿಕೊಡಲು ಸಿದ್ಧನಾಗಿದ್ದ.

ಅವನೀಗ ಪ್ರತೀ ದಿನವೂ ಆ ಮಗುವಿನ ಜೋಡಿ ಸಂಜೆ ತಿರುಗಲು ಹೋಗುವುದು ಸಾಮಾನ್ಯವಾಗಿತ್ತು.


...............................................................................

"ಸುಮಾರು ಆರು ವರ್ಷಗಳ ಕೆಳಗೆ ನಾನು ಬರೆದ ಕಥೆಯಿದು. ಕೆಲಸದ ಮೇಲೆ ದೂರದೇಶಕ್ಕೆ ಹೋದ ಗೆಳೆಯನೊಬ್ಬ ಅಲ್ಲೇ ನೆಲೆಸುವ ಬಗ್ಗೆ ಹೇಳಿದಾಗ ಇದ್ಯಾಕೋ ನೆನಪಾಯಿತು."

9 comments:

  1. ಕಂಗಳು ತುಂಬುವ ಒಂದು ಅಸಹಾಯಕರ ಸನ್ನಿವೇಶ..

    ReplyDelete
  2. ಆನಂದ್,
    ಸನ್ನಿವೇಶದ ನಿರೂಪಣೆ ಸೊಗಸಾಗಿದೆ....

    ReplyDelete
  3. ಮನಕ್ಕೆ ತಟ್ಟಿದ, ಕೆಲ ಕ್ಷಣ ಮನ ಕುಲುಕಿದ ಕಥೆ.. ನಿರೂಪಣೆ ಸುಂದರವಾಗಿದೆ.. ಕೈಗೆ ಎಟುಕದ ಗಮ್ಯ ನೆನೆದು ದುಃಖ ಪಡೋದ್ರಲ್ಲಿ ಅರ್ಥವಿಲ್ಲ... ಸಾಕಷ್ಟು alternative ಮತ್ತು ಅಷ್ಟೇ attractive ಗಮ್ಯಗಳು ಸಿಕ್ಕೇ ಸಿಗುತ್ತವೆ.. ಹೃದಯದ ಕಣ್ಣು ತೆರೆದು ಕುಳಿತಿರಬೇಕಷ್ಟೇ... ಮಕ್ಕಳಿಂದ ದೂರವಾದ ಹಿರಿಯ ಜೀವದ ವ್ಯತೆ ಕೇಳಿ ಬೇಸರವಾದರೂ ಕೊನೆಯಲ್ಲಿ ಆತ ಕಂಡುಕೊಂಡ ಗಮ್ಯದ ಕತೆ ಇಷ್ಟವಾಯ್ತು... ಆರು ವರ್ಷದ ಹಿಂದೆ ಬರೆದಿದ್ದಾ..? ಆಗಲೆ ಹೀಗಿತ್ತು... ಈಗ ಇನ್ನೂ ಕೆಟ್ಟದಾಗಿದೆ ಪರಿಸ್ಥಿತಿ...

    ReplyDelete
  4. ಇದು ಕಥೆಯಲ್ಲ .ಇಂದಿನ ಅನೇಕ ಜನರ ವ್ಯಥೆ.ಓದುತ್ತ ಕಣ್ಣಂಚು ಒದ್ದೆಯಾಯಿತು.

    ReplyDelete
  5. ಇದು ಇಂದಿನ ಕಾಟು ವಾಸ್ತವ ಸರ್. ಅಪ್ಪ ಅಮ್ಮ ಏನೇನೋ ಕನಸು ಕಟ್ಟಿ ಮಕ್ಕಳ ಭವಿಷ್ಯ ರೂಪಿಸುತ್ತಾರೆ ..ಆ ಮಕ್ಕಳು ಹೆತ್ತವರನ್ನ ಕೊನೆಗೆ ಕಡೆಗಣಿಸುತ್ತಾರೆ . ಎಂತ ಮಜಾ ನೋಡಿ . ಈ ಮಕ್ಕಳಿಗೆ ತಮಗೂ ವಯಸ್ಸಾಗುತ್ತೆ ಎನ್ನುವ ಅರಿವೇ ಇರುವುದಿಲ್ಲ .ಇತಿಹಾಸ ಮತ್ತೆ ಮರುಕಳಿಸುತ್ತೆ

    ReplyDelete
  6. ಆನಂದ,
    ಬದುಕು ಸ್ವಲ್ಪ ವಿಚಿತ್ರ.. ಏನೋ ಆಗಬೇಕು ಅನ್ಕೊಂಡಿರ್ತಿವಿ.. ಆದರೆ ಇನ್ನೇನೋ ಆಗುತ್ತೆ... ನಿಮ್ಮ ಚಂದದ ಕಥೆಯಲ್ಲಿ ಅಜ್ಜನನ್ನೇ ನೋಡಿ ಎಲ್ಲ ಕಳಕೊಂಡ.. ಎಲ್ಲಿಗೋ ಪಯಣ ಬೆಳೆಸಿದ... ಕೊನೆಗೆ ಬದುಕು ಮತ್ತೆಲ್ಲಿಗೋ ಕರೆದುಕೊಂಡು ಹೋಯ್ತು..
    ಒಳ್ಳೆಯ ಮೆಸೇಜ್ ಇದೆ.
    ನಿಮ್ಮವ,
    ರಾಘು.

    ReplyDelete
  7. ಮನ ಕುಲುಕಿದ ಕಥೆ, ಓದುತ್ತ ಕಣ್ಣಂಚು ಒದ್ದೆಯಾಯಿತು

    ReplyDelete
  8. ಯಾಕೋ ಈ ಕಥೆ ಓದಿ ಒಂಥರಾ ಸಂಕಟ ಆಯ್ತು... ಓದುಗರ ಮನದಲ್ಲಿ ಯಾವುದಾದರೂ ಭಾವನೆ ಉಕ್ಕಿದರೆ ಕಥೆ ಚೆನ್ನಾಗಿದೆ ಎಂದೇ ಅರ್ಥವಲ್ಲವೇ?

    ReplyDelete