ಯುಕಿ ಉರುಶಿಬಾರ ಬರೆದಿರುವ ಮುಶಿಶಿ ಅನ್ನೋ ಜಪಾನೀ ಅನಿಮೇಶನ್ ಸರಣಿಯೊಂದರ ಕತೆಯನ್ನ ಸಾಧ್ಯವಾದಷ್ಟು ಕನ್ನಡೀಕರಿಸಿದ್ದೇನೆ.
ಮೂಲ ಕತೆ ಹೋಗೋ ಜಾಡೇ ಬೇರೆ ಆದರೂ, ನಮ್ಮ ನೆಲಕ್ಕೆ ಹೊಂದಿಸೋ ಪ್ರಯಾಸ ಪಟ್ಟಿದ್ದೀನಿ.
ಒಪ್ಪಿಸಿಕೊಳ್ಳಿ
-------
ಮಳೆ ಚೆನ್ನಾಗಿ ಸುರೀತಾ ಇತ್ತು. ಸಂಜೆ ಬೇರೆ ಆಗಿತ್ತು. ಕೆಲಸಕ್ಕೆ ಅಂತ ಹೊರಗೆ ಬಂದವರು, ಮನೆಗೆ ಹೋಗೋಕಾಗ್ದೆ, ಎಲ್ರೂ ಮರದ ಕೆಳಗೆ ಕುಳಿತಿದ್ವಿ. ಹಾಳೂ ಮೂಳೂ ಅಂತ ಮಾತಾಡ್ತಾ ಇರಬೇಕಾದ್ರೆ ಯಾರೋ ಒಬ್ಬ, ಜಾಸ್ತಿ ವಯಸ್ಸಾಗಿರಲಿಲ್ಲ, ಸುಮಾರು ಹತ್ರತ್ರ ಮೂವತ್ತಿರಬಹುದೇನೋ, ಆ ಮಳೇಲೇ ನಡಕೊಂಡು ಬರ‍್ತಾ ಇದ್ದ. ಬೆನ್ನಿಗೇನೋ ಕಟ್ಟಿಕೊಂಡಂಗಿತ್ತು. ಮಳೇಲಿ ಏನೂ ಕಾಣ್ತಿರಲಿಲ್ಲ.
ನಾವೆಲ್ಲಾ ಕುಳಿತಿದ್ದು ನೋಡಿ, ನಾವು ಕೂತಿದ್ದ ಕಡೆಗೇ ಬಂದ.
ಅವನು ಒಂದು ಹಂಡೆ ಹೊತ್ತುಕೊಂಡು ಬಂದಿದ್ದ.
ಮಳೇಲಿ ಬೇಜಾರಾಗಿ ಕುಳಿತಿದ್ದೋರಿಗೆ ಏನೋ ಚಿಕ್ಕ ಸಂತೋಷ, ಕುತೂಹಲ, ಇವನನ್ನ ಮಾತಾಡಿಸ್ತಾ ಸಮಯ ಹಾಳು ಮಾಡಬೌದು ಅಂತ.
’ಏನಪ್ಪಾ ಹಂಡೆ ಚೆನ್ನಾಗಿದೆ, ಮಾರ‍್ತೀಯಾ?’ ನಾನು ಕೇಳಿದೆ.
’ಊಹೂಂ, ಇಲ್ಲ. ಇದನ್ನ ಮಾರೋಕೆ ತಂದಿಲ್ಲ.’ ಹೇಳಿದ.
ಮತ್ಯಾಕಪ್ಪಾ, ಇಷ್ಟು ದೊಡ್ಡ ಹಂಡೆ ಹೊತ್ಕೊಂಡು ಈ ಮಳೇಲಿ ಹೀಗೆ ಅಲೀತಾ ಇದ್ದೀಯಾ? ಯಾರೋ ಕೇಳಿದ್ರು.
ಅವನು ಎರಡು ನಿಮಿಷ ಮಾತಾಡಲಿಲ್ಲ.
ಇದರಲ್ಲಿ ಕಾಮನಬಿಲ್ಲನ್ನು ಹಿಡಿದು ಊರಿಗೆ ತಗೊಂಡ್ಹೋಗೋಣ ಅಂತಿದ್ದೀನಿ ಅಂದು ನಕ್ಕ.
ಎಲ್ರೂ ನಕ್ರು. ಜನಕ್ಕೆ ಹೊಸ ಹುರುಪು ಬಂದಿತ್ತು. ಧೋ ಅಂತ ಸುರಿಯೋ ಮಳೇಲಿ ಹುಚ್ಚುಚ್ಚಾಗಿ ಮಾತಾಡೋನು ಸಿಕ್ಕಿದ್ದ.
ಆಯ್ತು ಕಣಪ್ಪ, ಹಂಗೇ ಅಂತ ಇಟ್ಕಳಣ. ಅದನ್ಯಾಕಪ್ಪಾ ನೀನು ಹಿಡೀಬೇಕು?
ಅವನಿಗೂ ಒಬ್ಬನೇ ಅಡ್ಡಾಡಿ ಬೇಜಾರಾಗಿತ್ತೇನೋ, ನೀಟಾಗಿ ಕೂತ್ಕೊಂಡು ಮಾತು ಶುರೂ ಮಾಡ್ದ.
ನಂದು ಘಟ್ಟದ ಕೆಳಗಡೆ ಒಂದೂರು, ಮನೇಲಿ ನಾಲ್ಕು ಜನ ಇದ್ದೀವಿ. ಅಪ್ಪ, ಅಮ್ಮ, ಅಣ್ಣ ಮತ್ತು ನಾನು.
ಅಪ್ಪ ಮೊದಲೆಲ್ಲಾ ಸೇತುವೆ ಕಟ್ತಾ ಇದ್ರು. ನಮ್ಮ ಮನೆತನದ ಕೆಲಸ ಅದು. ಇತ್ತೀಚಿಗೆ ಏನೂ ಮಾಡ್ತಿಲ್ಲ. ಊರೋರೆಲ್ಲಾ ಅವ್ರಿಗೆ ಹುಚ್ಚು ಅಂತಾರೆ.
ನಾನು ಚಿಕ್ಕೋನಿದ್ದಾಗಿಂದನೂ ಜನ ಅವರಿಗೆ ಅಣಕಿಸ್ತಾನೇ ಇದ್ರು.
ಅವರಿಗೆ ಮಳೆ ಕಂಡ್ರೆ ಅದೇನೂ ಪ್ರೀತಿ. ಒಂಥರಾ ಖುಷಿ. ಮಳೆ ಬರ್ತಿದ್ದ ಹಾಗೇನೇ ಹೊರಗೆ ಓಡ್ಹೋಗ್ ಬಿಡೋರು. ಅದೆಲ್ಲಿಗೆ ಹೋಗ್ತಿದ್ರೋ ಅವ್ರಿಗೇ ಗೊತ್ತಾಗ್ತಾ ಇರಲಿಲ್ಲ. ಮಳೆ ಎಲ್ಲಾ ನಿಂತ ಮೇಲೆ ಎಲ್ಲಾದ್ರೂ ಒಂದ್ಕಡೆ ಕೆಸರುಗುಂಡೀಲಿ ಅರ್ದಮರ್ದ ಹೂತ್ಹೋಗಿರೋರು. ನೋಡ್ದೋರು ಯಾರಾದ್ರೂ ಕರ‍್ಕೊಂಡು ಬಂದು ಮನೇಗಿ ಬಿಡೋರು. ಒಂದೊಂದ್ಸಲ ತಾವಾಗೇ ಮನೆಗೆ ಬರೋರು. ಮೈತುಂಬಾ ಕೊಚ್ಚೆ, ಗಾಯ. ಅವರಿಗೆ ಅದ್ಯಾವ್ದ್ರ ಪರಿವೇನೇ ಇರ್ತಿರ‍್ಲಿಲ್ಲ. ಆದ್ರೆ ತುಂಬಾ ದುಃಖದಲ್ಲಿರ್ತಿದ್ರು.
’ಈ ಸಲನೂ ಸಿಗ್ಲಿಲ್ಲ.’
ಪ್ರತೀಸಲ ವಾಪಸ್ ಬಂದಾಗಲೂ ಅದನ್ನೇ ಹೇಳ್ತಿದ್ರು. ನಾನು ಏನಪ್ಪಾ ಅಂದ್ರೆ ಅಮ್ಮ ಗದರಿಸಿ ಓಡಿಸಿಬಿಡೋಳು.
ಅಪ್ಪ ಈ ರೀತಿ ಆದ್ರಲ್ಲಾ ಅಂತ ಅನ್ನೋದಕ್ಕಿಂತನೂ, ಅದೇನೂಂತ ಗೊತ್ತಾಗ್ಲಿಲ್ವಲ್ಲಾ ಅಂತ ಬೇಜಾರಾಗೋದು.
ಒಂದಿನ ಅಪ್ಪ ನನ್ನನ್ನ ಊರ ಹೊರಗಡೆ ತೋಪಲ್ಲಿ ಅಡ್ಡಾಡಿಸ್ತಾ ಇದ್ರು. ಅವತ್ತು ಒಳ್ಳೆ ಬಿಸಿಲಿತ್ತು. ಅವತ್ತೂ ಅಪ್ಪಂಗೆ ಬೇಜಾರಾಗಿತ್ತು.
ಯಾಕಪ್ಪಾ ಬೇಜಾರಾಗಿದೀಯ? ಅಂತ ಕೇಳ್ದೆ.
ಏನಿಲ್ಲ ಬಿಡಪ್ಪ. ನನ್ನ ದುಃಖ ನಂಗೆ. ಅಂದ್ರು.
ನಾನು ಬಿಡಲಿಲ್ಲ. ಹೇಳಪ್ಪಾ ಏನಾಯ್ತು?
ಇಂಥಾ ಬಿಸಲಲ್ಲಿ, ಮಳೆ ಬೀಳ್ಬೇಕು ಕಣೋ. ಆಗ ನೋಡು ನಿಜವಾದ ಸಂತೋಷ.
ಮಳೆ ಬಂದ್ರೆ ಏನಾಗುತ್ತೆ? ನಂಗೇನೂ ಗೊತ್ತಾಗಿರಲಿಲ್ಲ.
ಕಾಮನಬಿಲ್ಲು ಬರುತ್ತೆ ಕಣೋ!
ಅಪ್ಪನ ದನಿಯಲ್ಲಿ ಏನೋ ಒಂಥರಾ ಖುಷಿಯಿತ್ತು.
ಅದನ್ನೇ ಏನಪ್ಪಾ ನೀನು ಪ್ರತೀ ಸಲ ಹುಡಕ್ಕೊಂಡು ಹೋಗೋದು ?
ಅಪ್ಪ ಒಂದ್ನಿಮಿಷ ಸುಮ್ನಿದ್ರು.
ಹೌದು ಮಗನೇ. ಆದ್ರೆ ಅಮ್ಮಂಗೆ ಹೇಳ್ಬೇಡ. ನಾನು ಯಾರಿಗಾದ್ರೂ ಹೇಳಿದ್ರೆ ಅವಳಿಗೆ ತುಂಬಾ ಸಿಟ್ಟು ಬರುತ್ತೆ. ನಂಗೆ ಬುದ್ಧಿ ಸರಿಯಿಲ್ಲ ಅಂತ ಅಣಕಿಸ್ತಾರೆ ಅಂತ ಬೈತಾಳೆ.
ನಂಗೆ ಕುತೂಹಲ ಹೆಚ್ಚಾಗ್ತಾ ಇತ್ತು. ಕಾಮನಬಿಲ್ಲು ಕಂಡ್ರೆ ಏನಾಗುತ್ತಪ್ಪಾ?
ಅಪ್ಪನ ಜೊತೆಗೆ ಯಾರೂ ಜಾಸ್ತಿ ಮಾತಾಡ್ತಾ ಇರ್ಲಿಲ್ಲ. ಕಾಮನಬಿಲ್ಲಿನ ಬಗ್ಗೆ ಕೇಳಿದ್ದು ಅವರಿಗೆ ಒಳ್ಳೇ ಹುರುಪು ಬೇರೆ ಕೊಟ್ಟಂಗಾಗಿತ್ತು.
ನೀವೆಲ್ಲಾ ಅದನ್ನ ದೂರದಿಂದ ನೋಡಿದ್ದೀರ. ನಾನು ಅದನ್ನು ಹತ್ತಿರದಿಂದ ನೋಡಿದ್ದೀನಿ. ಅದನ್ನ ಮುಟ್ಟಿದೀನಿ ಗೊತ್ತಾ. ಆ ಸಂತೋಷ ನಿಮಗೆಲ್ಲಾ ಗೊತ್ತಾಗಲ್ಲ.
ಅಷ್ಟೊತ್ತೆಗಾಗಲೇ ನಾವಿಬ್ರೂ ಎದರಾ ಬದರಾ ಕುಳಿತಿದ್ವಿ. ಅಪ್ಪನ ಮುಖದಲ್ಲಿ ಗೆಲುವು. ಕಣ್ಣುಗಳು, ಅವ್ರು ಈಗ್ಲೇ ಅದನ್ನ ನೋಡ್ತಾ ಇದ್ದಾರೇನೋ ಅನ್ನೋ ಹಾಗೆ ಹೊಳೀತಾ ಇದ್ವು.
ಅಪ್ಪನ ಮಾತಿನ್ನೂ ಮುಗಿದಿರಲಿಲ್ಲ.
ಆಗ ನೀನಿನ್ನೂ ಹುಟ್ಟಿರಲಿಲ್ಲ. ನಾನು ಒಂದ್ಸಲ ಶಿಕಾರಿಗೆ ಅಂತ ಕಾಡಿಗೆ ಹೋಗಿದ್ದೆ. ರಾತ್ರಿ ಮರದ್ಮೇಲೇ ನಿದ್ದೆ ಮಾಡ್ಬಿಟ್ಟಿದ್ದೆ. ಬೆಳಗ್ಗೆ ಎದ್ದು ಹಾಗೇ ಅಡ್ಡಾಡ್ತಾ ವಾಪಸ್ ಹೊರಟಿದ್ದಾಗ ಇದ್ದಕ್ಕಿದ್ದಂತೆ ಮಳೆ ಸುರಿಯೋಕೆ ಶುರು ಮಾಡ್ತು. ನಾನು ಮತ್ತೂ ಸ್ವಲ್ಪ ಹೊತ್ತು ಕಾಡೊಳಗೇ ಉಳ್ಕೊಂಡೆ. ಮಳೆ ನಿಲ್ಲಲ್ಲ ಅಂತ ಅನಿಸಿದಾಗ, ಮಳೇಲೇ ನೆಂದ್ಕೊಳ್ತ ಮನೆಗೆ ಹೊರಟೆ. ಸ್ವಲ್ಪ ದೂರ ಹೋಗಿರ‍್ಲಿಲ್ಲ, ಅವಾಗ ಕಾಣ್ತು ನೋಡು ಕಾಮನಬಿಲ್ಲು!
ನನಗೆ ಮೊದಲು ಅದೇನೂ ಅಂತಾನೇ ಗೊತ್ತಾಗಿರ‍್ಲಿಲ್ಲ. ಒಂಥರಾ ಬೆಳಕು. ಅದೇನು ಮಜಾ ಅಂತೀಯಾ. ನಾನು ಮಳೇಲೇ ನೆನೆಯುತ್ತಾ ಅದರೊಳಗೆ ಹೋಗ್ಬಂದೆ. ಅಷ್ಟೇ ಮತ್ತೆ ನನಗೆ ಅದು ಅಲ್ಲಿ ಕಾಣ್ಲಿಲ್ಲ.
ಮನೆಗೆ ಬಂದು ನಿಮ್ಮಮ್ಮಂಗೆ ಹೇಳ್ದೆ. ಅವ್ಳು ನಂಬ್ಲಿಲ್ಲ. ಅವಳನ್ನ ಕರ‍್ಕೊಂಡು ಅದು ಕಂಡಿದ್ದ ಜಾಗಕ್ಕೆ ಕರೆದೊಯ್ದೆ. ಆದ್ರೆ ಅಲ್ಲಿ ಅದು ಕಂಡಿತ್ತು ಅಂತ ತೋರಿಸೋಕೆ ಏನೂ ಇರಲಿಲ್ಲ.
ಒಂದಿನ ದೂರದಲ್ಲಿ ಕಾಣ್ತು. ನಾನು ಅದರ ಕಡೆಗೇನೇ ಓಡತೊಡಗಿದೆ. ಇನ್ನೂ ಸ್ವಲ್ಪ ದೂರ ಇದೆ ಅನ್ನೋವಷ್ಟರಲ್ಲಿ ಮಾಯವಾಗ್ಬಿಟ್ತು. ಅಷ್ಟೇ ನೋಡು ಅವತ್ತಿಂದ ಅದು ನನಗೆ ಕಂಡಿಲ್ಲ.
ಇದನ್ನೆಲ್ಲಾ ನಿಂಗೆ ಹೇಳ್ದೆ ಅಂತ ಅಮ್ಮನಿಗೆ ಹೇಳ್ಬಿಡಬೇಡ ಮತ್ತೆ.
ನಾನು, ಇಲ್ಲ ಹೇಳಲ್ಲ ಅಂತ ಮಾತು ಕೊಟ್ಟೆ.
ಅಪ್ಪ, ನಾನು ದೊಡ್ಡೋನಾಗೋವರೆಗೂ ಮಳೆ ಬಂದಾಗ ಹೊರಗೆ ಓಡ್ತಾನೇ ಇದ್ರು. ವಯಸ್ಸಾಗ್ತಾ ಬಂದ ಹಾಗೆ ನಾವೆಲ್ಲಾ ಅವರನ್ನ ಹಿಡಿದು ಒಳಗೆ ಕೂರಿಸ್ತಾ ಇದ್ವಿ.
ಈಗ ಅವರು ಪೂರ್ತಿ ಹಾಸಿಗೆ ಹಿಡ್ದಿದಾರೆ. ಅವ್ರ ಕೊನೇ ಆಸೆ ಮತ್ತೆ ಕಾಮನಬಿಲ್ಲನ್ನು ನೋಡೋದು. ಅದನ್ನ ಮುಟ್ಟೋದು.
ಅವರಿಗೋಸ್ಕರ ನಾನೀಗ ಆ ಕಾಮನಬಿಲ್ಲನ್ನ ಹಿಡಿಯೋಕೆ ಹೊರಟಿದ್ದೀನಿ.
ಹಾಗಾದ್ರೆ ನೀನು ಬರಿಗೈಯಲ್ಲಿ ಕಾಮನಬಿಲ್ಲನ್ನ ಹೊರಟಿದ್ದೀಯಾ ಅನ್ನು. - ಗುಂಪಲ್ಲಿ ಯಾರೋ ಕೇಳಿದ್ರು.
ಅದು ಸಿಗೋ ತನಕ ನನಗೆ ಗೊತ್ತಿಲ್ಲ. ಅಂತ ಅವನಂದ.
ಕತೆ ಚೆನ್ನಾಗಿತ್ತು. ಆದ್ರೆ ಕೊನೆ ಇನ್ನೂ ಸ್ವಲ್ಪ ಚೆನ್ನಾಗಿರಬೇಕಿತ್ತು. ಇನ್ನೊಬ್ರು ಯಾರೋ ಹೇಳಿದ್ರು.
ಇವನು ಸುಮ್ಮನೆ ನಕ್ಕ.
ಅಷ್ಟೊತ್ತಿಗೆ ಮಳೆ ನಿಂತಿತ್ತು. ಎಲ್ರೂ ಮನೆಗೆ ಹೋದ್ರು. ನಾನು ಅವನು ಇಬ್ರೇ ಉಳಿದ್ವಿ. ಅವನೂ ಎದ್ದು ನಿಂತ.
ಕಾಮನಬಿಲ್ಲು ಹಿಡಿಯೋದಾದ್ರೆ, ಈ ಕಡೆ ಗುಡ್ಡದ ಕಡೆ ಹೋಗು. ಒಂದೇ ಸಮನೆ ಮಳೆ ಸುರೀತಾ ಇರುತ್ತೆ. ಸಿಕ್ರೂ ಸಿಗಬೌದು. ನಾನು ಹೇಳಿದೆ.
ನನಗೇಕೋ ಅವನ ಕತೆ ನಿಜ ಅಂತ ಅನ್ನಿಸಿತ್ತು.
ನಾನೂ ನಿಂಜೊತೆ ಬರ್ತೀನಿ. ಎದ್ದು ನಿಂತೆ.
ಇದು ನಿಜ ಅಂತ ನಿನಗ್ಯಾಕೆ ಅನ್ನಿಸ್ತು? ಮತ್ತೆ ನೀನ್ಯಾಕೆ ನನ್ನ ಜೊತೆಗೆ ಬರ್ತೀಯ? ಅವನು ಕೇಳಿದ.
ಏನಿಲ್ಲ, ಇನ್ನೊಂದು ಹದಿನೈದು ದಿನ ನನಗೇನೂ ಕೆಲಸ ಇಲ್ಲ. ಪ್ರತೀ ವರ್ಷ ಮೇಳಕ್ಕೆ ಹೋಗ್ತಿದ್ದೆ. ಈ ವರ್ಷ ನಿಂಜೊತೆಗೆ ಬರ್ತೀನಿ. ಅಷ್ಟೊರಳಗೆ ನೀನು ಮನಸು ಬದಲಾಯಿಸಿ ಹಂಡೆ ಮಾರಿದ್ರೆ, ಅದೂ ಒಂದು ರೀತಿ ಲಾಭನೇ ಅಲ್ವಾ?
ಎರಡು ನಿಮಿಷ ಅವನು ಸುಮ್ಮನಿದ್ದ. ಮನೇಲಿ ಹೇಳಲ್ವಾ ಅಂತ ಕೇಳಿದ.
ತೊಂದ್ರೆ ಇಲ್ಲ. ಅವರಿಗೆ ಅಭ್ಯಾಸ ಆಗಿದೆ. ಮನೆಗೆ ಹೋಗ್ಲಿಲ್ಲ ಅಂದ್ರೆ ಮೇಳಕ್ಕೆ ಹೋಗಿದಾನೆ ಅಂತ ತಿಳ್ಕೋತಾರೆ.
ಅವನು ನಕ್ಕ. ಅದೊಂಥರಾ ಮತ್ತೊಬ್ಬ ಹುಚ್ಚ ಸಿಕ್ಕ ಬಿಡು ಅನ್ನೋ ಹಾಗಿತ್ತು.
ನಾವಿಬ್ರೂ ಅವತ್ತು ರಾತ್ರಿ ಗುಡ್ಡದಲ್ಲಿಯೇ ಉಳಿದೆವು.
ನೀನು ಹೀಗೆ ಎಷ್ಟು ದಿವಸದಿಂದ ಅಲೀತಾ ಇದ್ದೀಯಾ? ಅಂತ ಕೇಳಿದೆ.
ಸ್ವಲ್ಪ ಹೊತ್ತು ಸುಮ್ಮನಿದ್ದು ’ನಾಲ್ಕು ವರ್ಷ’ ಅಂದ.
ನಿಜ ಹೇಳು, ಹೀಗ್ಯಾಕೆ ಅಲೀತಾ ಇದ್ದೀಯ? ಯಾರದ್ರೂ ಪ್ರೀತಿಪಾತ್ರರನ್ನ ಹೀಗೆ ಸಾಯೋ ಸ್ಥಿತೀಲಿ ಬಿಟ್ಟು ನಾಲ್ಕು ವರ್ಷ ಯರೂ ಅಡ್ಡಾಡಲ್ಲ. ನಿಮ್ಮಪ್ಪನಿಗೋಸ್ಕರ ಕಾಮನಬಿಲ್ಲು ತರ್ತೀನಿ ಅನ್ನೋದು ನಿಜಾನಾ? ನಾನು ಕೇಳಿದೆ.
ನಾನು ಒಂದೊಂದು ಪ್ರಶ್ನೆ ಕೇಳ್ದಾಗಲೂ ಅವನು ಯೋಚನೆ ಮಾಡ್ತಿದ್ದ. ಈ ಸಲ ಸ್ವಲ್ಪ ಜಾಸ್ತೀನೇ ಸುಮ್ಮನಿದ್ದ.
ಹೌದು ನಿಜ. ಆದರೆ ಅದೊಂದೇ ಕಾರಣ ಅಲ್ಲ. ಅವನು ಹಾಗೇ ಆಕಾಶ ನೋಡ್ತ ಮಾತಾಡ್ತಿದ್ದ.
ನಾನು ಸುಮ್ಮನೆ ಅವನನ್ನು ನೋಡ್ತಾ ಕುಳಿತಿದ್ದೆ.
ಅವನು ನನ್ನ ಕಡೆ ನೋಡಲೂ ಇಲ್ಲ. ಮಾತು ಮುಂದುವರೆಸಿದ.
ನಾನಿನ್ನೂ ನನ್ನ ಹೆಸರು ಹೇಳಿಲ್ಲ ಅಲ್ವಾ? ನನ್ಹೆಸರು ಇಂದ್ರ ಧನುಷ್. ನನ್ನ ಕಡೆ ನೋಡ್ದ.
ಅವನ ಹೆಸರು ಕೇಳಿಲ್ಲ ಅಂತ ಅನ್ನೋದು ಆಗ ನನಗೆ ನೆನಪಾಯ್ತು.
ಅವನು ಮಾತು ಮುಂದುವರೆಸಿದ.
ವಿಚಿತ್ರವಾಗಿದೆ ಅಂತ ಅನ್ಸುತ್ತಾ?
ನನಗೂ ಹಾಗೇ ಅನ್ನಿಸುತ್ತಿತ್ತು. ಊರ ಜನಕ್ಕೂ!
ನಮ್ಮ ಹಳ್ಳೀಲಿ ಈ ರೀತಿ ಯಾರದ್ದೂ ಹೆಸರಿರಲಿಲ್ಲ.
ಅಪ್ಪನ್ನ ಕೇಳಿದ್ದಕ್ಕೆ ’ನಾನು ನೋಡಿರೋ ಅತ್ಯಂತ ಸುಂದರವಾದ ವಸ್ತು ಹೆಸರನ್ನ ನಿನಗಿಟ್ಟಿದ್ದೀನಿ.’ ಅಂತ ಹೇಳಿದ್ರು.
ಊರ ಜನ ನನ್ನ ಹೆಸರಿಡ್ಕೊಂಡು ತುಂಬಾ ಕಾಡ್ತಿದ್ರು. ಹೋಗ್ಲಿ ಬಿಡು. ನಾನು ಹೇಳ್ಲಿಕ್ಕೆ ಹೊರಟಿದ್ದು ಅದನ್ನಲ್ಲ.
ನಾನು ಅವಾಗ ಹೇಳಿದ ಹಾಗೆ, ಅಪ್ಪ ಸೇತುವೆ ಕಟ್ತಾ ಇದ್ರು. ಅಣ್ಣಾನು ಸಹ ಅಪ್ಪನ ದಾರೀಲೇ ಸೇತುವೆ ಕಟ್ಟೋದನ್ನ ಕಲಿತ. ನನಗೆ ಆ ಥರದ್ದೇನೂ ಬರ್ತಿರಲಿಲ್ಲ. ಒಬ್ಬ ಕೂಲಿಯವನ ಕೆಲಸ ಅಷ್ಟೇ ನನ್ನಿಂದ ಮಾಡಲು ಆಗ್ತಾ ಇದ್ದದ್ದು.
ಎಲ್ಲೆಲ್ಲಿ ಸೇತುವೆ ಕಟ್ಟಿ ಬಂದ್ರೂ, ನಮ್ಮೂರಿನ ಸೇತುವೆ ಮಾತ್ರ ನಮಗೆ ಸವಾಲಾಗಿತ್ತು. ಎಷ್ಟೇ ಬಲವಾಗಿ ಕಟ್ಟಿದ್ರೂ, ಮಳೆಗಾಲದಲ್ಲಿ ಸೇತುವೆ ಮುರಿದು ಬೀಳ್ತಿತ್ತು.
ಪ್ರತೀ ಸಲ ಬಿದ್ದಾಗಲೂ, ಅಣ್ಣ ಒಂದು ಹೊಸ ಯೋಜನೆ ರೂಪಿಸ್ತಿದ್ದ. ಈ ಸಲ ಕಟ್ಟೇ ಕಟ್ತೀನಿ ಅಂತ ಹೊರಡ್ತಿದ್ದ. ಊರ ಜನ ಅವನನ್ನ ಹೊಗಳೋರು. ನನಗೇನೂ ಬರ್ತಿರಲಿಲ್ವಲ್ಲಾ ನನ್ನ ಕಂಡ್ರೆ ಅವರೆಗೆ ಅಷ್ಟಕ್ಕಷ್ಟೇ. ಮೇಲಾಗಿ ನನ್ಹೆಸ್ರು ಬೇರೆ ವಿಚಿತ್ರವಾಗಿತ್ತು. ನನಗೆ ಅಣಕಿಸೋರು.
ನನಗೆ ಮೊದ್ ಮೊದ್ಲು ಬೇಜಾರಾಗ್ತಿರಲಿಲ್ಲ. ಆದ್ರೆ ಆಮೇಲಾಮೇಲೆ ಅದನ್ನೆಲ್ಲಾ ತಡಕೊಳ್ಳಿಕ್ಕಾಗ್ತಾ ಇರ್ಲಿಲ್ಲ. ಹೊರಗೆ ಹೋಗೋದನ್ನ ನಿಲ್ಲಿಸಿ ಬಿಟ್ಟೆ.
ಮನೇಲಿ ಅಪ್ಪ ಮಲಗಿರ್ತಾ ಇದ್ರಲ್ಲ, ಅವರ ಜೊತೆಗೇನೇ ಇರ್ತಿದ್ದೆ.
ಅವಾಗೆಲ್ಲ ನನಗವರು ಕಾಮನಬಿಲ್ಲಿನ ಕಥೆ ಹೇಳ್ತಿದ್ರು.
ಹಾಗೇ ತುಂಬಾ ದಿನ ಕಳೆದು ಬಿಟ್ಟೆ. ಒಂದಿನ ರಾತ್ರಿ ಅವರು ನನ್ನನ್ನ ಕರೆದರು. ಹತ್ತಿರ ಹೋದ ಮೇಲೆ ಒಂದು ಚೀಟಿ ಕೊಟ್ಟರು.
ಏನಪ್ಪಾ ಇದು? ಅಂತ ಕೇಳಿದೆ.
ನಿನಗೆ ನಿನ್ನ ಹೆಸರು ಇಷ್ಟ ಇಲ್ಲ ಅಲ್ವಾ? ನಾನು ನೋಡಿದ ತುಂಬಾ ಸುಂದರವಾದ ವಸ್ತು ಅದು. ಅದನ್ನೇ ನಿನಗೆ ಹೆಸರಾಗಿ ಇಟ್ಟಿದ್ದೆ. ತಗೋ ಈ ಚೀಟಿಯಲ್ಲಿ ನಿನಗೆ ಬೇರೆ ಹೆಸರು ಯೋಚನೆ ಮಾಡಿ ಬರ‍್ದಿದ್ದೀನಿ. ನಿನ್ನ ಹೆಸರು ಬದಲಿಸಿಕೋ. ಅಪ್ಪ ಹೇಳಿದ್ರು.
ನನಗೆ ತುಂಬಾ ಬೇಜಾರಾಯಿತು. ಅಪ್ಪಂಗೂ ನನ್ನ ಬಗ್ಗೆ ಗೊತ್ತಾಗಿ ಹೋಯ್ತಲ್ಲ. ಹಾಗೇ ಯೋಚನೆ ಮಾಡ್ತಾ ಹೋದೆ. ನಾನೇನು ಮಾಡ್ತಿದ್ದೀನಿ? ಯಾಕೆ ಹೀಗಿದ್ದೀನಿ? ನನಗೇ ಒಂಥರಾ ಅನಿಸೋಕೆ ಶುರುವಾಯ್ತು.
ನಾನು ಆ ಚೀಟಿ ಓದಲಿಲ್ಲ. ಇಲ್ಲ ಕಣಪ್ಪಾ, ನನಗೇನೂ ಬೇಜಾರಿಲ್ಲ. ನಾನು ಹೆಸರು ಬದಲಿಸೋದಿಲ್ಲ. ನಾನು ಒಂದಿನ ಒಳ್ಳೇ ಸೇತುವೆ ಕಟ್ತೀನಿ. ಏನೇನೋ ಬಡಬಡಿಸಿದೆ.
ಆ ರಾತ್ರಿ ನಾನು ಮನೆ ಬಿಟ್ಟು ಬಂದೆ.
ಅವತ್ತಿಂದಾ ಹೀಗೆ ಅಲೀತಾ ಇದ್ದೀನಿ.
ಅವನು ಮಾತು ಮುಗಿಸಿದ.
ನಿನಗ್ಯಾವತ್ತೂ ನೀನೊಂದು ಮುಖವಾಡ ಹಾಕ್ಕೊಂಡಿದೀಯ ಅಂತ ಅನ್ಸಲ್ವಾ? ನಿನಗೆ ಸೇತುವೆ ಕಟ್ಟೋಕೆ ಬರಲ್ಲ. ನಿನ್ನ ಹೆಸರು ವಿಚಿತ್ರವಾಗಿದೆ ಅಂತ ಜನ ನಗ್ತಾರೆ ಅನ್ನೋ ಕಾರಣಕ್ಕೆ ಮನೆ ಬಿಟ್ಟು ಬಂದೆ. ಸರಿ. ಆದ್ರೆ ಬೇರೆ ಯಾವ್ದಾದ್ರೂ ಊರಲ್ಲಿ ನೆಲೆಯೂರಬಹುದಿತ್ತಲ್ವಾ? ಬೇರೆ ಯಾವ್ದಾದ್ರೂ ಕೆಲ್ಸ ಮಾಡ್ತ ಜೀವನ ಮಾಡಬಹುದಿತ್ತು. ಇಲ್ಲ, ನೀನು ನಿನ್ನ ದುಃಖಾನ ದೊಡ್ಡದು ಮಾಡ್ಕೊಳ್ಳಿಕ್ಕೇ ಅಂತ ಈ ಕಾಮನಬಿಲ್ಲನ್ನ ಹುಡಕ್ಕೊಂಡು ಹೊರಟಿದ್ದೀಯ. ಇದರಲ್ಲಿ ನಿನ್ನ ಪಾಲೆಷ್ಟು, ನಿಮ್ಮಪ್ಪನ ಪಾಲೆಷ್ಟು? - ನನಗೆ ಗೊತ್ತಿಲ್ಲದ ಹಾಗೇನೇ ನಾನು ಕೇಳ್ಬಿಟ್ಟಿದ್ದೆ. ಕೇಳಬಾರದಿತ್ತೇನೋ ಅಂತ ಕೇಳಿದ ಮೇಲೆ ಅನ್ನಿಸಿತು.
ಒಮ್ಮೆ ಜೋರಾಗಿ ಉಸಿರು ಬಿಟ್ಟ.
ನಿಜ, ನಾನು ತುಂಬಾ ಸಲ ನನ್ನನ್ನಾನೇ ಕೇಳ್ಕೊಳ್ಳೋ ಪ್ರಶ್ನೆ ಅದು. ಮನೆ ಬಿಟ್ಟು ಬಂದ ತಕ್ಷಣ ಏನು ಮಾಡ್ಲಿ ಅಂತ ಗೊತ್ತಾಗ್ಲಿಲ್ಲ. ಅಪ್ಪ ಆ ರೀತಿ ಮಾತಾಡಿದ್ದು ನೋಡಿ, ನನ್ನ ಬಗ್ಗೆ ನಂಗೇ ಮರುಕ ಹುಟ್ಟಿ, ಒಂಥರಾ ಭಾವೋದ್ವೇಗಕ್ಕೆ ಒಳಗಾಗಿ, ಹೊರಗೆ ಬಂದ್ಬಿಟ್ಟಿದ್ದೆ. ಆದ್ರೆ ಮುಂದೆ ಏನು ಮಾಡ್ಬೇಕು ಅಂತ ಯೋಚನೆ ಮಾಡಿರ್ಲಿಲ್ಲ. ಅಲೀತಾ ಅಲೀತಾ ಬೆಳಗಾಗೋದೊರಳಗೆ ಕಾಡು ಮಧ್ಯಕ್ಕೆ ಬಂದು ಬಿಟ್ಟಿದ್ದೆ. ಬೆಳಗ್ಗೆ ಸೂರ್ಯ ಹುಟ್ತಾ ಇದ್ದ ಹಾಗೇ ಮಳೆ ಶುರುವಾಯ್ತು. ನನಗೆ ಅಪ್ಪನ ನೆನಪಾಯ್ತು. ಅಪ್ಪನ ಕಾಮನಬಿಲ್ಲಿನ ನೆನಪಾಯ್ತು. ನನಗೆ ಕೂಡ ಕಾಮನಬಿಲ್ಲು ಅಂದ್ರೆ ಪ್ರೀತಿ. ಒಂಥರಾ ಸೆಳೆತ. ಹೊರಗೆಲ್ಲಾ ಓಡ್ಹೋಗದೇ ಇದ್ರೂ ಮಳೆ ಬಂದ್ರೆ ನಂಗೂ ಖುಷಿಯಾಗ್ತಿತ್ತು. ಆಗ ಮಳೆ ಆಗ್ತಾ ಇದ್ದ ಹಾಗೇ, ಅಪ್ಪನ ಕನಸನ್ನ ಪರೀಕ್ಷೆ ಮಾಡೇ ಬಿಡೋಣ. ಅದು ನಿಜಕ್ಕೂ ಅವರು ಹೇಳಿದ ಹಾಗೇ ಇರುತ್ತೋ ಇಲ್ವೋ ಅಂತ ಒಮ್ಮೆ ನೋಡೇ ಬಿಡೋಣ. ಅಪ್ಪನ್ನ ಹುಚ್ಚ ಅಂದೋರನ್ನ, ನನ್ಹೆಸ್ರನ್ನ ಆಡ್ಕೊಂಡು ನಕ್ಕೋರಿಗೆ ನಿಜ ತೋರಿಸೇ ಬಿಡೋಣ ಅಂತ ತೀರ್ಮಾನ ಮಾಡ್ದೆ. ಆದ್ರೆ ಈ ನಾಕು ವರ್ಷಗಳಲ್ಲಿ ಸಾಕಷ್ಟು ಮಳೆ ನೋಡಿದ್ದೀನಿ. ತುಂಬಾ ಸಲ ಕಾಮನಬಿಲ್ಲನ್ನ ನೋಡಿದ್ದೀನಿ. ಆದ್ರೆ, ಅಪ್ಪ ಹೇಳಿದ ರೀತಿ, ಅಷ್ಟು ಹತ್ತಿರದಲ್ಲಿ ಯಾವ್ದೂ ಕಂಡಿಲ್ಲ. ಇತ್ತೀಚೆಗೆ ಯಾಕೋ ನಂಗೂ ಕೂಡ ಈ ಯಾತ್ರೆ ಮುಗೀತಾ ಬಂದಿದೆಯೇನೋ ಅಂತ ಅನ್ನಿಸ್ತಿದೆ. ತುಂಬಾ ದಿನ ಈ ರೀತಿ ನಾನು ಅಲೀಲಾರೆ. ಆದ್ರೆ ಈ ಹೊತ್ತಿಗೂ ಅಪ್ಪ ಹೇಳಿದ್ದು ಸುಳ್ಳು ಅಂತ ನನಗನ್ನಿಸ್ತಿಲ್ಲ.
ಆವಿಬ್ರೂ ಆಮೇಲೆ ಆ ರಾತ್ರಿ ಏನೂ ಮಾತಾಡ್ಲಿಲ್ಲ. ಹಾಗೇ ಮಲಗಿ ನಿದ್ದೆ ಹೋಗಿಬಿಟ್ಟಿದ್ದೆವು.
ಬೆಳಗ್ಗೆ ಎದ್ದಾಗ ಸ್ವಚ್ಛ ಆಕಾಶ. ಒಂದೇ ಒಂದು ಮೋಡ ಕಾಣ್ತಿರ‍್ಲಿಲ್ಲ. ದೂರ ದೂರಕ್ಕೂ ಹಸಿರೇ ಹಸಿರು. ಬೆಳ್ಳಂ ಬೆಳಗ್ಗೆ ಕಾಡಲ್ಲಿ ಮುಂಜಾನೆ ಗಾಳಿ ಕುಡಿಯೋದೇ ಒಂದು ಸುಖ. ನಾವಿಬ್ರೂ ಗುಡ್ಡದ ತುದೀಲಿ ಇದ್ದದ್ರಿಂದ ದೃಶ್ಯ ಇನ್ನೂ ಮನಮೋಹಕವಾಗಿತ್ತು. ಬೆಳ್ಳಕ್ಕಿಗಳು ಹಾರಿ ಹೋಗೋದು, ತಲೆ ಮೇಲೆ ಯಾರಾದ್ರೂ ಮೊಟಕಿದ್ರೇನೋ ಅನ್ನೊ ಹಾಗೆ ಯಾವ್ಯಾವ್ದೋ ಹಕ್ಕಿಗಳು ಕೂಗೋದು. ಹಿತವಾದ ಬಿಸಿಲು. ನಾನಂತೂ ಸುಮ್ನೆ ಹಾಗೇ ಎದ್ದು ಕುಳಿತು ಬಿಟ್ಟಿದ್ದೆ.
ಹೂಂ, ಎಚ್ಚರವಾಯ್ತೇನು. ಅವನು ಕೇಳಿದ.
ನಾನು ಮುಗುಳ್ನಕ್ಕೆ. ಆ ಬೆಳಗ್ಗೆ ನಂಗೊಂಥರಾ ಖುಷಿ ಕೊಟ್ಟಿತ್ತು.
ಎಲ್ಲಿಗೆ ಹೋಗೋಣ?
ಹಿಂದಿನ ದಿನ, ಗುಡ್ಡದಲ್ಲಿ ಮಳೆ ಆಗುತ್ತೆ ಅಂತ ನಾನೇ ಹೇಳಿದ್ದು ಮರೆತು ಹೋಗಿತ್ತು.
ಮಳೆ ಎಲ್ಲಿ ಆಗುತ್ತೆ ಅಂತ ಹೇಗೆ ಹೇಳೋದು? ನಾನು ಮತ್ತೆ ಕೇಳಿದೆ.
ಈ ನಾಲ್ಕು ವರ್ಷಗಳಲ್ಲಿ ಏನಾಗ್ಲಿಲ್ಲ ಅಂದ್ರೂ, ಅದೊಂದು ಮಾತ್ರ ಕಲ್ತಿದ್ದೀನಿ. ಒಂದು ಹಂತಕ್ಕೆ ಎಲ್ಲಿ ಮಳೆ ಆಗುತ್ತೆ ಅಂತ ಹೇಳಬಲ್ಲೆ. ನಡಿ ಆ ತಪ್ಪಲಿನ ಕಡೆ ಹೋಗೋಣ. ನಾಳೆ ಹೊತ್ತಿಗೆ ಮಳೆ ಆಗುತ್ತೆ.
ಅವನು ಗುಡ್ಡ ಇಳಿಯತೊಡಗಿದ.
ನಾನೂ, ಅವನೂ ಆ ತಪ್ಪಲು ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಕಾಡೊಳಗೆ ಎಷ್ಟು ಮೈಲಿ ನಡೆದಿದ್ದೆವೊ? ಅವನಿಗೆ ಕಾಡು ಚೆನ್ನಾಗಿ ಪರಿಚಯವಾಗಿತ್ತು. ಯಾವ ಹಣ್ಣು ತಿನ್ನಬೇಕು, ಏನು ಎಲ್ಲ ಅಂತಾ ಹೇಳ್ತಾ ಹೋಗ್ತಾ ಇದ್ದ.
ಇನ್ನೂ ಸ್ವಲ್ಪ ಹೊತ್ತಿಗೆ ಮಳೆಯಾಗುತ್ತೆ ನೋಡು ಅಂತ ಹೇಳಿದ.
ನಿಂಗೆ ಅದ್ಹೇಗೆ ಗೊತ್ತಾಗುತ್ತೆ? ನಾನು ಕೇಳಿದೆ.
ನಾಲ್ಕು ವರ್ಷ ನನ್ಹಾಗೇ ಅಲಿ. ನೀನೂ ಹೇಳ್ತೀಯಾ. ಇಬ್ಬರೂ ನಕ್ಕೆವು.
ಅವನು ಹೇಳಿದ ಹಾಗೆ, ಸ್ವಲ್ಪ ಹೊತ್ತಿನಲ್ಲಿಯೆ ಮಳೆ ಶುರುವಾಯ್ತು.
ಆ ರಾತ್ರಿ ಪೂರ್ತಿ ಮಳೆ ಬರ್ತಾನೇ ಇತ್ತು.
ಬೆಳಗ್ಗೆ ಎದ್ದು ಮಳೆಯೊಳಗೇ ನಡೀತಾ ಹೋದ್ವಿ. ಮಳೆ ಬರುವಾಗ ಕಾಡು ಅಷ್ಟು ಚೆನ್ನಾಗಿ ಕಾಣುತ್ತೆ ಅಂತ ನನಗವತ್ತೇ ಗೊತ್ತಾಗಿದ್ದು.
ಸ್ವಲ್ಪ ದೂರ ಹೋಗ್ತಿದ್ದ ಹಾಗೇ, ದೂರದಲ್ಲಿ ಬೆಳಕು ಕಂಡಂಗಾಯ್ತು. ಮೊದಲು ಅವನೇ ನೋಡಿದ್ದು.
ಹೇಯ್! ಅಲ್ಲಿ ಅಲ್ಲಿ. ಅಂತ ಹೇಳಿದವನೇ ಓಡತೊಡಗಿದ. ನಾನೂ ಅವನ ಹಿಂದೇನೇ ಓಡಿದೆ.
ಅಲ್ಲಿಗೆ ಹೋಗ್ತಿದ್ದ ಹಾಗೇನೇ ನಾವಿಬ್ರೂ ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ವಿ.
ಎಷ್ಟು ಎತ್ತರಕ್ಕೆ ನೋಡಿದ್ರೂ ಅಷ್ಟು ಎತ್ತರಕ್ಕೆ ಬೆಳಕು. ನಾವು ಅಷ್ಟು ಹತ್ತಿರ ಇದ್ದರೂ ಬಿಸಿ ತಟ್ಟಲಿಲ್ಲ ಅಂತ ಆಮೇಲೆ ನೆನಪಾಯ್ತು. ಅದು ಕಾಮನಬಿಲ್ಲೋ ಏನೋ ಅಂತ ನನಗೆ ಗೊತ್ತಾಗಲಿಲ್ಲ. ಆದ್ರೆ ಅದರಷ್ಟು ಸುಂದರವಾದ ದೃಶ್ಯವನ್ನು ನಾನಂತ್ರೂ ನೋಡಿರಲಿಲ್ಲ. ಒಂದೊಂದು ಬೆಳಕಿನ ಕಣವೂ ಕ್ಷಣ ಕ್ಷಣಕ್ಕೆ ಬಣ್ಣ ಬದಲಾಯಿಸುತಿತ್ತು. ಅದೆಷ್ಟು ಬಣ್ಣಗಳು, ಅದೇನು ವೇಗ, ಅದೇನು ದೃಶ್ಯ.
ನಾವಿಬ್ರೂ ಮಂಡಿಯೂರಿ ಕುಳಿತುಬಿಟ್ವಿ. ಅವನ ಕಣ್ಣಲ್ಲಾಗಲೇ ಕಣ್ಣೀರು.
ಅವನು ಎದ್ದು ಬೆಳಕಿನೆಡೆಗೆ ನಡೆಯತೊಡಗಿದ. ಕೈ ಮುಂದೆ ಚಾಚಿದ್ದ. ಒಂಥರಾ ಯಾರನ್ನೋ ಕರೆಯುತ್ತಾ ಹೋಗ್ತಾರಲ್ಲ, ಹಾಗೆ.
ನಾನ್ ಫಟ್ ಅಂತ ಎದ್ದು, ಓಡ್ಹೋಗಿ ಅವನನ್ನ ಹಿಡಿದು ಕೆಳಗೆ ಕೂರ‍್ಸಿದೆ.
ನಮಗದೆಷ್ಟು ವಿಚಿತ್ರವಾಗಿ ಆ ಜಾಗದಲ್ಲಿ ಆ ಬೆಳಕು ಕಂಡಿತ್ತೋ, ಅಷ್ಟೇ ವಿಚಿತ್ರವಾಗಿ ಅದು ಅಲ್ಲಿಂದ ಮಾಯವಾಗಿ ಬಿಡ್ತು. ನನಗಂತೂ ಅದು ಕಾಮನಬಿಲ್ಲು ಅಂತ ಒಪ್ಪಲಿಕ್ಕೆ ಆಗಲಿಲ್ಲ. ಆದ್ರೆ ಅದಕ್ಕಿಂತಾ ಅದು ಮನೋಹರವಾಗಿತ್ತು.
ಸ್ವಲ್ಪ ಹೊತ್ತಾದ ಮೇಲೂ ನಮಗೆ ಆ ಗುಂಗಿನಿಂದ ಹೊರ ಬರಲು ಆಗಿರ‍್ಲಿಲ್ಲ. ಹಾಗೇ ಮಲಗಿ ಬಿಟ್ವಿ. ಹಾಗೇ ಮಲಗಿ ಬಿಟ್ವಿ. ಒಂದೆರಡು ಗಂಟೆ ಬಿಟ್ಟು ಎದ್ವಿ.
ಅವನ ಮುಖದ ಮೇಲೆ ಪ್ರಶಾಂತತೆ ನೆಲೆಸಿತ್ತು. ಅವನ ಕಣ್ಣುಗಳು ಈಗ ಏನನ್ನೂ ಹುಡುಕುತ್ತಿರಲಿಲ್ಲ.
ಈಗ ಮನಸ್ಸು ಹಗುರವಾಗಿದೆ. ಆದ್ರೆ ಎಲ್ಲಾ ಖಾಲಿಯಾದ ಮೇಲೆ ಇದ್ದಕ್ಕಿದ್ದಂತೇ ಒಂದು ತೂತಾದಂತಾಗಿದೆ.
ಬಹುಶಃ ನನ್ನ ಗುರಿ ಇದೇ ಇತ್ತೇನೋ. ಅವನು ಹೇಳ್ತಾನೇ ಹೋದ.
ಮುಂದೇನು ಮಾಡ್ತೀಯಾ? ಕೇಳ್ದೆ.
ಗೊತ್ತಿಲ್ಲ. ಅವನುತ್ತರಿಸಿದ್ದ.
ಆ ಸಂಜೆ ನಾವು ಒಬ್ಬರಿಗೊಬ್ಬರು ವಿದಾಯ ಹೇಳಿದ್ವಿ. ಅವನು ಮುಂದೆ ಎಲ್ಲಿಗೆ ಹೋದ್ನೋ ಗೊತ್ತಾಗಲಿಲ್ಲ.
ಮತ್ತೊಂದು ಮಳೆಗಾಲ ಕಳೆಯೋ ಹೊತ್ತಿಗೆ, ಒಂದು ಸುದ್ದಿ ಅಲೆದಾಡತೊಡಗಿತ್ತು.
ಘಟ್ಟದ ಕೆಳಗೆ ಯಾರೋ ಅದ್ಭುತವಾದ ಸೇತುವೆ ಕಟ್ಟಿದಾನಂತೆ. ಎಂಥಾ ಪ್ರವಾಹಕ್ಕೂ ಅದು ಬೀಳೋಲ್ಲ ಅಂತ ಜನ ಹೊಗಳ್ತಾ ಇದ್ರು.
ನನಗೆ ಅವನು ನೆನಪಾದ.
naanu nanna jeevanadalli odida atyanta sundara kathegalalli ondu idu... nange ishtu khushi yaake aagtide anta gottilla..
ReplyDeleteಆನಂದ,
ReplyDeleteAnimation ಆಧರಿಸಿ ಬರೆದದ್ದು ಅಂತ ಹೇಳಿದ್ದೀರಿ. ಆದರೆ ಇದರಲ್ಲಿ ನಿಮ್ಮ ಬರವಣಿಗೆಯ ಪ್ರತಿಭೆ ಎದ್ದು ಕಾಣ್ತಾ ಇದೆ. ತುಂಬಾ ಸುಂದರವಾಗಿ ಬರೆದಿದ್ದೀರಿ. ಈ ಕತೆಯು ಪತ್ರಿಕೆಗಳಲ್ಲೂ ಸಹ ಪ್ರಕಟವಾಗಲೇಬೇಕು. ಅಂದರೆ ಇನ್ನೂ ಹೆಚ್ಚು ಓದುಗರು
ಖುಶಿ ಪಡುವರು. ದಯವಿಟ್ಟು ಪತ್ರಿಕೆಗಳಿಗೆ ಕಳುಹಿಸಿರಿ.
ಜ್ಯೋತಿ,
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮಗಷ್ಟು ಇಷ್ಟವಾದದ್ದು ತಿಳಿದು ನಿಜಕ್ಕೂ ಖುಶಿಯಾಯ್ತು.
ಸುನಾಥ ಕಾಕಾ,
ReplyDeleteನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಆಯ್ತು, ಪತ್ರಿಕೆಗಳಿಗೆ ಕಳಿಸಿಕೊಡ್ತೇನೆ :)