ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿವಾಗ
ಹುಣ್ಣಿಮೆಯ ಹೂಬಾಣ ಎಲ್ಲೆಲ್ಲೂ ಬಿದ್ದಾಗ
ಚೆಲುವಾಂಗ ಚಂದಿರ ಖಿಲ್ಲೆಂದು ನಕ್ಕಾಗ
ನನ್ನೆದೆಯ ಸ್ಫೂರ್ತಿಯೇ ನಾ ನೆನೆವೆ ನಿನ್ನಾಗ
ಮುಗಿಲೆತ್ತರದಲಿ ಮೇಘ ಸಿಟ್ಟಾದಾಗ
ಊರ ಬಯಲಲಿ ಕೋಲ್ಮಿಂಚು ಕುಣಿವಾಗ
ಮುಗಿಲಹನಿ ಮುತ್ತಾಗಿ ಸುರಿವಾಗ
ನನ್ನೆದೆಯ ಗೀತೆಯೇ ನಾ ನೆನೆವೆ ನಿನ್ನಾಗ
ಬಾನಂಚಿನಲಿ ನೇಸರ ಕೆಂಪಾದಾಗ
ಜೋಡಿಹಕ್ಕಿಗಳು ಬಾನಲ್ಲಿ ನಲಿವಾಗ
ತಂಗಾಳಿ ನನಗೆಂದೇ ಬೀಸಿದಾಗ
ನನ್ನೆದೆಯ ಒರತೆಯೇ ನಾ ನೆನೆವೆ ನಿನ್ನಾಗ
ಈ ಹೃದಯ ಪ್ರತಿಬಾರಿ ಬಡಿವಾಗ
ಧಮನಿ ಧಮನಿಯಲೂ ಪ್ರೀತಿ ಹರಿವಾಗ
ನಿನ್ನ ಹೆಸರೊಂದೇ ಉಸಿರಾದಾಗ
ನನ್ನೆದೆಯ ಕನಸೇ ನಾ ನೆನೆವೆ ನಿನ್ನಾಗ
ಯಾರಪ್ಪಾ ಅವಳು? ;-)
ReplyDeleteಅಂಥಾ ವಿಷಯಗಳನ್ನ ಹೀಗೆ ಇಂಥಾ ಜಾಗಗಳಲ್ಲಿ ಹೇಳ್ಲಿಕ್ಕಾಗಲ್ಲ. :)
ReplyDelete