Tuesday, July 5, 2011

ಪಾಪಿ ಪರದೇಶಿ



ಗುಂಪಲ್ಲಿದ್ದೂ ಇಲ್ಲದಿದ್ದಂತೆ, ಜೊತೆಯಿದ್ದೂ ದೂರವಿದ್ದಂತೆ, ಜನಜಂಗುಳಿಯಲ್ಲಿದ್ದರೂ ಒಂಟಿಯಾಗಿರುವುದು ಅತ್ಯಂತ ಯಾತನಾದಾಯಕ. ಪರದೇಶಿಯಾಗಿ, ಪರಕೀಯನಾಗಿ, ಗುಂಪಿಗೆ ಸೇರದ ಪದವಾದಾಗ ಬಾಳು ಬವಣೆ. ಜೊತೆಯಿದ್ದವರಿಂದ ದೂರವಾಗಿ ಆಚೆ ದಡದಲ್ಲಿ ಕೂತು ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿ ಸಮಯ ಮುಂದಕ್ಕೆ ಓಡುವುದನ್ನು ಕ್ಷಣ ಕ್ಷಣವೂ ಎಣಿಸಬಹುದು. ಅಲ್ಲೆಲ್ಲೋ ಇರುವುವರು ಈಗೇನು ಮಾಡುತ್ತಿರಬಹುದು, ನನ್ನ ನೆನಪಿದೆಯೇ? ನಾನಲ್ಲಿದ್ದಿದ್ದಲ್ಲಿ ಹೇಗಿರುತ್ತಿತ್ತು?‌ ಬಹುಶಃ ಅಲ್ಲಿರುವವರಿಗೂ ಇದೇ ಗೊಂದಲವಿರಬಹುದಲ್ಲವೇ? ಕೆಲವೊಮ್ಮೆ  ದುಃಖ ಹಂಚಿಕೊಳ್ಳಲು ಮನಸ್ಸಾಗದು. ಸಂತಸ ಹಂಚಿಕೊಂಡಷ್ಟು ಸುಲಭವಾಗಿ ದುಃಖ ಹಂಚಲಾಗದು. ಮನಸ್ಸು ಹಗುರಾಗುವ ಮುನ್ನ ಎಳೆಯಲಾಗದಷ್ಟು ಭಾರವಾಗುತ್ತದೆ. ಆ ಕ್ಷಣ ಹೊತ್ತು ನರಕಯಾತನೆ.

ದೂರದೂರಿಗೆ ಹೋದಷ್ಟೂ ನೆನಪುಗಳ ಭಾರ ಭಾರಿ.  ಎಲ್ಲಿ ಏನು ನೋಡಿದರೂ‌ ಹೋಲಿಸಲು ಮನ ನಿಂತುಬಿಡುತ್ತದೆ. ಅದೆಷ್ಟೇ ಎತ್ತರದ ಕಟ್ಟಡವಿದ್ದರೂ, ಊರಲ್ಲಿ ಕಟ್ಟಿದ ಎರಡಂತಸ್ತಿನ ಮನೆ ನೋಡಿದ ಖುಶಿಯಾಗದು. ಮೈ ಕೊರೆವ ಚಳಿ, ಮುಂಜಾನೆ ನದಿಯಲ್ಲಿ ಮಿಂದ ನೆನಪಿನ ಎಳೆ ಹೊತ್ತು ತರುತ್ತದೆ. ಅದೇನೇ ಪಂಚತಾರಾ ಹೋಟಲಿನ ತಿಂಡಿಯಾಗಿದ್ದರೂ ಅಮ್ಮನ ಕೈ ತುತ್ತಿನ ಮುಂದೇನೂ‌ ಅಲ್ಲ. ಮೂರು ಹೊತ್ತೂ‌ ಉರಿವ ದೀಪಗಳು 'ಅಯ್ಯೋ ಎಂಟಕ್ಕೆ ಕರೆಂಟ್ ಹೋಗುತ್ತೆ, ಬೇಗ ಮಿಕ್ಸಿ ಹಾಕು' ಅನ್ನುವ ಧಾವಂತ ದುಮ್ಮಾನಗಳಿಗೆ ಜಾಗವಿಲ್ಲದಂತೆ ಮಾಡಿದೆ. ಅದೆಲ್ಲಾ ಈಗ ಮತ್ತೆ ಬೇಕಾಗಿದೆ. ಸುಖದ ಸುಪ್ಪತ್ತಿಗೆಯಿದ್ದರೂ ಏನೋ ಅತೃಪ್ತಿ. ಕಳಚಿದ ಕೊಂಡಿಗೆ ಮನ ತಡಪಡಿಸುತ್ತಿದೆ. ಮಲಗುವ ಮುನ್ನ ಈ ದಿನ ಅಮ್ಮ ಕ್ಯಾಲೆಂಡರಿನಲ್ಲಿ ಮತ್ತೊಂದು ಗೀಟನ್ನೆಳೆದಿರುತ್ತಾಳೆ ಎಂಬ ನೆನಪಾಗುತ್ತದೆ. ದಿನದ ಲೆಕ್ಕ ಅವಳಿಟ್ಟರೆ, ಈ ಹೊತ್ತಿಗೆ ನಾನೇನು ಮಾಡುತ್ತಿರುತ್ತೀನಿ ಎಂಬ ಲೆಕ್ಕ ಅಪ್ಪನ ಪಾಲಿನದ್ದು. ಅವರಿಬ್ಬರ ಲೆಕ್ಕದ ವರದಿ ನನಗೊಪ್ಪಿಸುವುದು ನನ್ನ ತಂಗಿಯ ಕೆಲಸ.
ಸದಾ ಗೆಳೆಯರ ಬಳಗದಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊಸ ಹವೆ ಇನ್ನೂ ಒಗ್ಗಿಲ್ಲ. ಪಾಪಿಗಳು, ಮಾತಿಗೆ ಸಿಕ್ಕಾಗೊಮ್ಮೆ ತಾವೇನೇನು ಮಾಡಿದೆವೆಂಬ ಸುದ್ದಿ ಹೇಳಿ ಹೊಟ್ಟೆ ಉರಿಸುತ್ತಾರೆ. ಸದ್ಯಕ್ಕೆ ಸಂಗೀತವೊಂದೇ ಸಂಗಾತಿಯಾಗಿದೆ.

---

ಮನಸು ಹುಚ್ಚು ಹಯದ ಮೇಲೆ ಹೊರಟಿದೆ. ಒಮ್ಮೊಮ್ಮೆ ತೀವ್ರವಾಗಿ ಕಾಡುವ ಒಂಟಿತನ, ಮತ್ತೊಮ್ಮೆ ಮುದ ನೀಡುತ್ತದೆ. ಕ್ಷಣ ಚಿತ್ತ, ಕ್ಷಣ ಪಿತ್ಥ. ಸುಮ್ಮನೆ ಬರೆಯುತ್ತಾ ಹೊರಟರೆ ಏನಾದರೂ ಸಿಗಬಹುದೆಂದು ಭಾವಿಸಿದವನಿಗೆ ಆತ್ಮಾವಲೋಕನಕ್ಕೊಂದು ಅವಕಾಶ ಸಿಕ್ಕಂತಾಗಿದೆ. ಕೆಲವೊಮ್ಮೆ ಜೀವನದ ನಿರರ್ಥಕತೆಯ ಬಗ್ಗೆ ಯೋಚಿಸಿದರೆ, ಮಗದೊಮ್ಮೆ ಅತುಲ ಸಾಧ್ಯಾ ಸಾಧ್ಯತೆಗಳ ಬಗ್ಗೆ, ವಿಪುಲ ಅವಕಾಶಗಳ ಬಗ್ಗೆ ಯೋಚಿಸುವಂತಾಗುತ್ತದೆ. ಒಟ್ಟಿನಲ್ಲಿ ಹೂಳೆತ್ತಬೇಕಾಗಿದೆ. ಜಡವಾಗಿರುವುದು ನನಗೇ ಗೊತ್ತಾಗುವಷ್ಟು ಬೇಸರವಾಗಿದೆ. ಕನಸಿನ ರೆಕ್ಕೆ ಬಿಚ್ಚಿ ಹಾರಬೇಕೆಂದುಕೊಂಡರೂ‌ ಮೇಲೆ ಯಾವುದೋ‌ ಅದೃಶ್ಯ ಪಂಜರವಿದೆಯೇನೋ ಎಂಬಂತೆ ಸುಮ್ಮನೆ ಕುಳಿತಿದ್ದೀನಿ. ಬಹುಶಃ ಇದೇ ಮೊದಲ ಬಾರಿಗೆ ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಯೋಚಿಸಿದ್ದರ ಫಲವಿರಬೇಕು. ಸುಮ್ಮನಿದ್ದುಬಿಡಬೇಕು. ಸುಮ್ಮನಿರುವುದು ಬಲು ಕಷ್ಟ. ದೈನಂದಿನ ಕಾರ್ಯ ಕಲಾಪಗಳು ಹೇಗೋ‌ ನಡೆದು ಹೋಗುತ್ತವೆ. ಯಾವುದರಲ್ಲೂ ಮನಸ್ಸಿಲ್ಲ. ಅಪ್ಪನಿಗೆ ಕಣ್ಣು ಹೊಡೆದು, ಒಂದಿಷ್ಟು ಪ್ರೇಮ ಕಾವ್ಯ ಸಂಕಲನಗಳನ್ನೆತ್ತುಕೊಂಡು ಬಂದವನು ಅದರಲ್ಲಿ ಒಂದನ್ನೂ ಮುಟ್ಟಿಲ್ಲ. ವ್ಯಾಸರ ಕತೆಗಳು ಈ ಸಮಯದಲ್ಲಿ ಹೆಚ್ಚಾಗಿ ಅರ್ಥವಾಗುತ್ತಿವೆ. ಬರೆಯ ಹೊರಟರೆ ವಿಚಾರಗಳೇ ಇಲ್ಲ. ಯಾವತ್ತೋ ಅರ್ಧ ಬರೆದ ಕತೆಗಳನ್ನು ಮುಂದುವರೆಸೋಣವೆಂದರೆ, ಬರೆದ ಅರ್ಧವೇ ನೆನಪಿಲ್ಲ. ಒಲವಿನ ಹಂಗಿಲ್ಲದೆ ಕವಿತೆ ಬರೆಯಲೂ ಮನಸ್ಸಿಲ್ಲ. ನನ್ನೆಲ್ಲ ಕಥೆಗಳೂ ನನ್ನ ಒಂದಿಲ್ಲೊಂದು ಭಾವ ತೀವ್ರತೆಯಲ್ಲಿ ಬರೆದಂತವು. ಈ ಭಾವ ಹೀನತೆಯಲ್ಲಿ ಏನಾದರೂ‌ ಹುಟ್ಟಬಹುದೆಂಬ ನಿರೀಕ್ಷೆಯಲ್ಲಿ...

---

ಮನೆಯೆದುರು ಬಿದ್ದಿರುವ ಹಿಮವನ್ನೇ ದಿಟ್ಟಿಸುತ್ತಾ ಕುಳಿತಿದ್ದೇನೆ. ಕೋಣೆಯೊಳಗಿಂದ ಕಲ್ಯಾಣಿ ತೇಲಿ ಬರುತ್ತಿದೆ. ನೆನಪುಗಳು ಒಂದೊಂದಾಗಿ ಬಂದು ಕದ ತಟ್ಟುತ್ತಿವೆ. ಕೆಲವು ಅತೀ ಮಧುರ, ಕೆಲವು ಹಾಗೇ ಘಟಿಸಿದಂತವು, ಮತ್ತೆ ಕೆಲವು ಇನ್ನೂ ಅರಗಿಸಿಕೊಳ್ಳಲಾಗದಂತಹವು. ಎಲ್ಲವೂ ನನ್ನವೇ. ಮನೆ ನನ್ನದೇ, ಮನ ನನ್ನದೇ. ಕದ ತೆರೆದರೆ ಸಾಕು ಒಳಮನೆಯಿಂದ ನಡು ಮನೆಗೆ ಬಂದು ಕೂರುತ್ತವೆ. ಎದೆಯ ಕಪಾಟಿನಲ್ಲಿ ಎಷ್ಟೆಲ್ಲಾ ಅಡಗಿದ್ದವು. ಪ್ರೀತಿ, ಅಸೂಯೆ, ಸಣ್ಣತನ, ಸಾವು, ಹಗೆ, ದುಃಖ, ನಗೆ, ನಲಿವು, ಸಾಧನೆ. ನಾನು ಸುಮ್ಮನೆ ನಗುತ್ತೇನೆ.  ಅವೂ ಸುಮ್ಮನೆ ನಗುತ್ತವೆ. ಮತ್ತದೇ ಮೌನ. ಅದು ಶಾಂತಿಯೋ, ರುದ್ರ ತಾಂಡವದ ಮುನ್ಸೂಚನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಸಹನೀಯ. ಸುಮ್ಮನೆ ಯೋಚಿಸುತ್ತಾ ಕುಳಿತರೆ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋದಂತೆ ಭಾಸ. ರುದ್ರ ರಮಣೀಯ. ಅಲೆಗಳ ರೌದ್ರತೆಯಲ್ಲೂ ಒಂದು ಲಯ, ತಾಳವಿದ್ದಂತೆ. ಅವುಗಳಿಗೆ ನನ್ನನ್ನೊಪ್ಪಿಸಿ ಶರಣಾಗುತ್ತೇನೆ. ಒಂದು ವಿಲಕ್ಷಣ ಆನಂದ.  ಕಲ್ಯಾಣಿ ಮುಗಿದರೂ ಕಣ್ತೆರೆಯಲು ಮನಸ್ಸಿಲ್ಲ.

---

ಈಗ ಮತ್ತೆ ನ್ಯೂಯಾರ್ಕ್ ಗೆ ಹೋಗಿ ಬಂದೆ. ಕೆಲಸದ ಮೇಲೆ ಬೇರೆ ಊರಿಗೆ ಹೋದ ಮೇಲೆ ಪುನಃ ಅಲ್ಲಿಗೆ ಹೋಗಲಾಗಿರಲಿಲ್ಲ. ಎಲ್ಲಿಗೇ ಹೋದರೂ ಕೆಲ ಕಾಲ ಇದ್ದ ತಕ್ಷಣ ಅದೆಷ್ಟು ನಮ್ಮದು ಅನಿಸುತ್ತದೆ. ಅರೇ, ನಾನು ಹೋಗಿ ಬರುತ್ತಿದ್ದ ದಾರಿ, ಹತ್ತುತ್ತಿದ್ದ ರೈಲು, ಕಾಫಿ ಕುಡಿಯುವ ಜಾಗ, ಸಿನಿಮಾ ಥಿಯೇಟರು, ಎಲ್ಲವೂ ನನ್ನದೆನ್ನುವ ಭಾವ. ಬಹುಶಃ ನಾವಿರುವುದೇ ಹಾಗೇನೋ. ಊರಿಂದೂರಿಗೆ, ಪರದೇಶಕ್ಕೇ ಹೋದರೂ  ಕೆಲವೇ ದಿನಗಳಲ್ಲಿ ಎಲ್ಲವೂ ನಮ್ಮದೆನಿಸುತ್ತವೆ. ಒಂದಿಷ್ಟು ಜನರ ಪರಿಚಯವಾಗುತ್ತದೆ. ಗೆಳೆತನ ಮೂಡುತ್ತದೆ. ಮತ್ತೊಂದಿಷ್ಟು ದಿನಗಳಲ್ಲಿ ಅವರ ಮನೆಯಲ್ಲಿ ಯಾರಿದ್ದಾರೆ, ನಮ್ಮ ಮನೆಯಲ್ಲಿ ಎಷ್ಟು ಜನ, ನಮ್ಮಗಳ ಕಷ್ಟ ಸುಖ ಎಲ್ಲದರ ಪ್ರವರವೂ ಆಗಿ ಹೋಗುತ್ತದೆ. ನಮ್ಮದೇ ಪ್ರಪಂಚ ಹುಟ್ಟುಕೊಂಡಿರುತ್ತದೆ, ಕೇವಲ ನಮ್ಮದೇ ಆದ ಪ್ರಪಂಚ. ಅದೆಷ್ಟು ವಿಚಿತ್ರವಲ್ಲವೇ, ನಮ್ಮ ಕುಟುಂಬ, ನಮ್ಮ ಊರು, ನಮ್ಮ ಬಳಗ, ನಮ್ಮ ಸ್ನೇಹಿತರು ಎಲ್ಲರನ್ನೂ ಬಿಟ್ಟು ಬಂದಿದ್ದೀವಿ ಎಂದು ಕೊರಗುವಷ್ಟರಲ್ಲಿಯೇ ನಮಗರಿವಿಲ್ಲದಂತೆಯೇ ಮತ್ತೊಂದು ಎಲ್ಲಾ "ನಮ್ಮಗಳು"‌ಹುಟ್ಟಿಕೊಂಡಿರುತ್ತವೆ. ಎಲ್ಲೆಲ್ಲಿಯೋ ಕಟ್ಟಿದ ಅನೇಕ ಚಿಕ್ಕ ಚಿಕ್ಕ ಪ್ರಪಂಚಗಳ ಸಮೂಹವೇ ನನ್ನ ಬದುಕು.

ಹುಟ್ಟಿದ ಊರಲ್ಲಿ ಬೆಳೆಯಲಿಲ್ಲ, ಬೆಳೆದ ಕಡೆ ಉಳಿಯಲಿಲ್ಲ. ಇದು ನನ್ನದು ಎಂದು ಅನಿಸುವಷ್ಟರಲ್ಲಿಯೇ ಕಾಲಿಗೆ ಚಕ್ರ ಕಟ್ಟಿಕೊಂಡಾಗಿದೆ. ನಮ್ಮದೇ ಊರು, ನೆಲ, ಜನ ಎಲ್ಲವನ್ನೂ ಬಿಟ್ಟು ಮುಂದೆ ಬಂದಾಗಿದೆ. ಬದುಕು ಎಲ್ಲಿಂದಲೋ ಶುರುವಾಗಿ ಅದೆಲ್ಲಿಗೆ ಕರೆದೊಯ್ಯುತ್ತಿದೆಯೋ ಗೊತ್ತಾಗುತ್ತಿಲ್ಲ.

---

ಇಲ್ಲಿಗೆ ಎಲ್ಲಾ ಮುಗಿಯಿತು ಎಂದು ಯಾವಾಗ ಅನಿಸುತ್ತದೋ ಆಗ ಸಮಯ ಓಡಲು ಶುರು ಮಾಡುತ್ತದೆ. ಅಯ್ಯೋ ಅಲ್ಲಿಗೆ ಹೋಗಬೇಕಿತ್ತು, ಅದನ್ನು ನೋಡಬೇಕಿತ್ತು, ಛೇ, ಆ ಡ್ರೆಸ್ ಪುಟ್ಟುಗೆ ಚೆನ್ನಾಗಿರ್ತಿತ್ತೇನೋ ತಗೊಂಡು ಬಿಡಬೇಕಿತ್ತು. ಮನಸ್ಸು ಯೋಚಿಸುವ ಧಾಟಿಯೇ ಬದಲಾಗುತ್ತದೆ. ಮನೆಗೆ ಹೋಗುವ ಸಮಯ ಹತ್ತಿರವಾಗುತ್ತಿದೆ. ದೇಶ ಬಿಟ್ಟು ಬಂದು ಕಾಲವಾಗಿದ್ದರೂ, ನಮ್ಮೂರು, ನಮ್ಮೋರು ಎಲ್ಲ ನೆನಪುಗಳೂ ಇನ್ನೂ ಹಸಿರು.
ಇಲ್ಲಿಗೆ ಬಂದ ಮೇಲೆ ಬರೆದ ಒಂದಿಷ್ಟು ಸಾಲುಗಳನ್ನು ಡೈರಿಯಿಂದ ಹಾಗೇ ಎತ್ತಿ ಇಲ್ಲಿಟ್ಟಿದ್ದೇನೆ. ಡೈರಿಯಿಂದ ಇನ್ನೊಂದಿಷ್ಟು  ಎತ್ತಬಹುದಿತ್ತೇನೋ, ಆದರೆ ಮನಸ್ಸಿಲ್ಲ. ಅದಾಗಲೇ ಊರಿಗೆ ಹೋಗಿಯಾಗಿದೆ. ಇನ್ನು ನಾನು ಹೋಗಬೇಕಷ್ಟೇ.

ಅಪ್ಪನಿಗೆ ಫೋನ್ ಮಾಡಿದರೆ, 'ಬಾ ಮಗನೇ ಬಾ. ಅಲ್ಲಿಗೆ ಹೋಗಿ ಕೊಬ್ಬಿದೀಯಾ, ಇಲ್ಲಿಗೆ ಬಂದ ಮೇಲೆ ಕುತ್ತಿಗೆಗೆ ಒಂದು ಗುದಿ ಕಟ್ತೀನಿ. ಅವಾಗ ಬುದ್ದಿ ಬರುತ್ತೆ' ಎಂದು ಹೆದರಿಸ್ತಿದಾರೆ. ನನ್ನ ತಂಗಿಯಂತೂ 'ಏಯ್ ಐಫೋನ್ ತಗೊಂಡ್ಯೇನೋ' ಅಂತ ಆವಾಜ್ ಹಾಕ್ತಿದಾಳೆ.  ಬೆಂಗಳೂರಿನ ರೂಂಮೇಟ್ 'ನಂಗೆ ಲ್ಯಾಪ್ ಟಾಪ್ ತರ್ಲಿಲ್ಲ ಅಂದ್ರೆ ಬರಲೇ ಬೇಡ' ಅಂತ ಹೇಳಿದ್ದಾನೆ. ಯಾರಿಗೆ ಏನು ತಗೊಂಡು ಹೋಗ್ಬೇಕೋ ಗೊತ್ತಾಗ್ತಿಲ್ಲ. ಅಮ್ಮ ಮಾತ್ರ, 'ಏನೂ ತರಬೇಡ ಮಗನೇ, ಸುಖವಾಗಿ ಬಂದ್ಬಿಡು ಅಷ್ಟೇ ಸಾಕು' ಅಂತ ಹೇಳ್ತಿದಾಳೆ.  ನಾನು ಈ ಸಲ ಅಮ್ಮನ ಮಾತು ಮೀರಲ್ಲ.

Monday, June 20, 2011

ಅಪಾರವ್ಯಾಸ


ಸಾಕಷ್ಟು ನೋಡಿಯಾಗಿದೆ, ಸಾಕಷ್ಟು ಸುತ್ತಿಯಾಗಿದೆ, ಆದರೂ ಅನುಭವ ಸಾಲದು. ತಲೆಯೆತ್ತಿ ನೋಡಿದರೆ ಯಾರಾದರೂ‌ ಕಂಡಾರೆಯೇ ಎಂದು ಕಣ್ಣರಸುತ್ತವೆ. ಏನೇ ಬಡಾಯಿ ಕೊಚ್ಚಿಕೊಂಡರೂ‌ ಕೆಲವು ಗಳಿಗೆ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿ ಮಗುವಾಗಬೇಕೆನಿಸುತ್ತದೆ. ಮಗುವಾಗುವುದರಲ್ಲಿ ಹಿತವಿದೆ. ದೊಡ್ಡವರು ಚಿಕ್ಕ ಮಕ್ಕಳೊಂದಿಗೆ ಆಡುವುದು ಅವುಗಳನ್ನು ಖುಶಿ ಪಡಿಸಲೋ ಅಥವಾ ತಾವು ಮಗುವಾಗುವ ಹಂಬಲಕ್ಕೋ ಎಂಬ ಗೊಂದಲ ನನಗಿದೆ. ಅವುಗಳ ಮುಗ್ಧ ಲೋಕದಲ್ಲಿ ತೊದಲು ಮಾತನ್ನಾಡುತ್ತಾ ಅಂಬೆಗಾಲಿಡುವುದೇ ಒಂದು ಮಹದಾನಂದ. ಊರಿಗೆ ಹೋದಾಗಲೆಲ್ಲಾ ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಕೆಲ ಹೊತ್ತು ಮಲಗಿರುತ್ತೇನೆ. ಆ ಸಮಯದಲ್ಲಿ ಅಮ್ಮನ ಪಾಲಿಗೆ ನಾನು ಕೇವಲ ತಿಂಗಳ ಕೂಸು, ನನಗೋ ಆ ಕೆಲ ಹೊತ್ತು ಮತ್ತಾವ ಅಷ್ಟೈಶ್ವರ್ಯವೂ ಬೇಡ. ಅದೆಲ್ಲಿರುತ್ತಾರೋ ಗೊತ್ತಿಲ್ಲ, ಸರಿಯಾಗಿ ಅದೇ ಸಮಯಕ್ಕೆ ಅಪ್ಪ ಬರ್ತಾರೆ.

ಆಹಾಹ ಬಾಲ ಲೀಲೆ ನೋಡಲೇ, ಎದ್ದೇಳೋ‌ ಭಾಡ್ಕೋವ್, ಮೆಲ್ಲನೆ ಒದೀತಾರೆ.

ಒಂಚೂರು ಕಾಫಿ ಕೊಡ್ತೀಯೇನೇ ಅಂತ ಅಮ್ಮನ ಕೇಳ್ತಾರೆ.

ನಾನು, ಅಮ್ಮ ಇಬ್ಬರೂ ಗೊಣಗ್ತೀವಿ. ಅಮ್ಮ ಎದ್ದು ಅಡಿಗೆ ಮನೆಗೆ ಹೋದ್ರೆ, ನಾನು ಲೊಕೇಷನ್ ಶಿಫ್ಟ್. ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ಮಲಗ್ತೀನಿ. ಎರಡೇ ನಿಮಿಷ ಅಷ್ಟೇ. ನಾನು ಮೈಮರೆತಿದೀನಿ ಅಂತ ಅನಿಸಿದ ಕೂಡಲೇ ಫಟ್ ಅಂತ ಕಾಲೆಳೆದುಕೊಂಡು ದೂರ ಸರೀತಾರೆ. ಧಡ್ ಅಂತ ನೆಲಕ್ಕೆ ತಲೆ ಬಡಿಯಬೇಕು. ಆದ್ರೆ ನಾನು ಬಿಸಿ ಹಾಲು ಕುಡಿದ ಬೆಕ್ಕು. ತಲೆಯನ್ನು ಗಾಳಿಯಲ್ಲಿ ಹಾಗೇ ಇಟ್ಟು ಅಪ್ಪನ ಕಡೆ ನೋಡಿ ಹೆಂಗೆ ಅಂತ ನಕ್ಕು, ಪುನಃ ತೊಡೆ ಮೇಲೆ ತಲೆಯಿಡಲು ಮಲಗಿದಂತೆಯೇ ತೆವಳಿ ಅವರ ಬಳಿ ಹೋಗ್ತೀನಿ. ಪ್ಲಾನ್ ಫೇಲ್ ಆಯ್ತು ಅಂತ ಅಪ್ಪಂಗೆ ಬೇಜಾರಾಗಿರುತ್ತೆ. ಹೋಗೋ ಬೇಕೂಫ ಅಂತ ಬೈಯ್ದು ಅವರೂ ಕುಳಿತಂತೆಯೇ ದೂರ ಸರಿಯುತ್ತಾ ಹೋಗ್ತಾರೆ. ನಾನು ತೆವಳುವುದೂ, ಅವರು ದೂರ ಸರಿಯುವುದೂ ನಡೆದೇ ಇರುತ್ತೆ, ಅಷ್ಟರಲ್ಲಿ ಅಮ್ಮ ಕಾಫಿ ಹಿಡಕೊಂಡು ಬಾಗಿಲಲ್ಲಿ ನಿಂತು 'ಅಯ್ಯೋ! ನೋಡ್ಲಿಕ್ಕಾಗಲ್ಲಪ್ಪಾ ನಿಮ್ಮಿಬ್ರನ್ನೂ' ಅಂತ ಅನ್ನಬೇಕು, ನಾವಿಬ್ರೂ ಸುಮ್ಮನಾಗಬೇಕು.

ದೊಡ್ಡವನಾಗಿದೀಯ, ಮಂಗ ಚೇಷ್ಟೆ ಬಿಡು. ವಯಸ್ಸಿಗೆ ತಕ್ಕ ಹಾಗೆ ಇರೋದನ್ನ ಕಲಿ ಅಂತ ಇತ್ಯಾದಿ ಉಪದೇಶಗಳನ್ನು ಅವಾಗವಾಗ ಅಪ್ಪ ನನ್ನ ಕಿವಿ ಮೇಲೆ ಒಗೀತಾನೇ ಇರ್ತಾರೆ. ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಅದ್ಭುತವಾದ ಕಿವಿ ನನಗಿವೆ. ಇಂಥ ಮಾತುಗಳೆಲ್ಲಾ, ಈ‌ ಕಿವಿಯಿಂದ ಹೊರಟು ಆ ಕಿವಿಯಿಂದ ಹೊರ ಹೋಗಿ ಬಿಡ್ತಾವೆ. ನಾನು ಬಿಡುಗಡೆಯ ನಿಟ್ಟುಸಿರು ಬಿಡುತ್ತೇನೆ. ನಾನೇನು ಕಡಿಮೆಯಿಲ್ಲ, ಉಲ್ಟಾ ಶುರು ಮಾಡ್ತೀನಿ. ನೋಡಪ್ಪಾ, ನಿಂಗೂ ವಯಸ್ಸಾಯ್ತು, ಮುದುಕನಾಗಿಬಿಟ್ಟೆ ಎಂದು ಹೇಳೋದೇ ತಡ, ಮುದುಕ ಅನ್ನಬೇಡ ನನ್ನ. ನನಗೇನ್ಲೇ ವಯಸ್ಸಾಗಿರೋದು ಮಹಾ. ಇನ್ನೂ ರಿಟೈರ್ ಆಗಿಲ್ಲ ಕಣೋ‌ ನಾನು. ವಾದ ಶುರು.

ನನ್ನ ತಂಗಿ ಮನೇಲಿ ಇದ್ದರಂತೂ ಇಬ್ಬರೂ ಸೇರಿ ಮುದುಕ ಅಂತ ಛೇಡಿಸಲು ಶುರು ಮಾಡ್ತೀವಿ. ಒಂದೆರಡು ನಿಮಿಷ ನಮ್ಮ ಜೊತೆ ವಾದ ಮಾಡಲು ನೋಡ್ತಾರೆ ಅಷ್ಟೇ, ಉಪದೇಶ ಎಲ್ಲಾ ಕಟ್, ಅಪ್ಪ ಮನೆಯಿಂದ ಎಸ್ಕೇಪ್... ಅಮ್ಮ ಮುಸಿಮುಸಿ ನಗುತ್ತಿರುತ್ತಾಳೆ.

ನಾನು ಪಿತೃಪೀಡಕನೆಂದು ನೀವಂದುಕೊಂಡರೆ ತಪ್ಪು. ಪುಣ್ಯಾತ್ಮ ನಮ್ಮಪ್ಪ ಕಾಡೋದೇ ಬೇರೆ ತರಹ. ನನ್ನ ಇಂಜಿನಿಯರಿಂಗ್ ರಿಸಲ್ಟ್ ನೋಡಲು ಕೂಡ ನನ್ನನ್ನು ಒಬ್ಬನನ್ನೇ ಕಳಿಸುತ್ತಿರಲಿಲ್ಲ. ಅದೆಷ್ಟೇ ಸಬ್ಜೆಕ್ಟಲ್ಲಿ ಫೇಲ್ ಆಗಿದ್ರೂ ಮನೆಗೆ ಬರ್ತೀನಿ ಕಣಪ್ಪಾ, ಹೊಳೆ ಹಾರುವಷ್ಟು ಮೂರ್ಖ ನಾನಲ್ಲ ಎಂದು ನಾನೇನೇ ಹೇಳಿದರೂ ಕೇಳ್ತಿರ್ಲಿಲ್ಲ.
ಕುಲೋದ್ಧಾರಕ ಕಣಪ್ಪಾ ನೀನು, ಅದ್ಹೆಂಗೋ ಒಬ್ಬನ್ನೇ ಕಳಿಸ್ಲಿ. ಜೊತೆಗೆ ನಾನೂ ಬರ್ತೀನಿ ಅಂತ ತಮಾಷಿಯಾಗೆ ತೇಲಿಸಿಬಿಡೋರು.
ರಿಸಲ್ಟ್ ನೋಡುವುದಕ್ಕೂ ಮುಂಚೆಯೇ ಜಗಳ. ಒಬ್ಬನೇ ಹೋಗ್ತೀನಿ ಅಂತ ನಾನು, ಜೊತೆಗೆ ನಾನೂ ಬರ್ತೀನಿ ಅಂತ ಅಪ್ಪ.
ಅಯ್ಯೋ ಕರ್ಕೊಂಡ್ ಹೋಗ್ಬಾರೋ, ಮನೇಲೇ ಇದ್ರೆ ನನ್ನ ಪ್ರಾಣ ತಿಂತಾರೆ ಅಂತ ಅಮ್ಮ ಜೋರು ಮಾಡ್ಬೇಕು. ಅಪ್ಪ ಏನೋ ಗೆದ್ದವರ ತರಹ ನನ್ನ ಕಡೆ ನೋಡಿ ಬಾರಲೇ ಹೋಗಣ ಅನ್ನಬೇಕು. ನಾನು ಮುಖ ಕೆಟ್ಟದಾಗಿ ಮಾಡ್ಕೊಂಡು ಗೊಣಗಾಡ್ತಾ ಹೊರಡ್ಬೇಕು.

ಸುಮಾರು ಹತ್ತನೇ ತರಗತಿಯಿಂದಲೂ ನಮ್ಮನೇಲಿ ಈ‌ ಜಗಳ ಇದ್ದಿದ್ದೇ.
ನಮ್ಮಿಬ್ಬರ ಜಗಳದ ಫಲವೋ, ಅವಳ ಅದೃಷ್ಟವೋ ಏನೋ, ನನ್ನ ತಂಗಿಯ ರಿಸಲ್ಟ್ ನೋಡುವ ಭಾಗ್ಯ ನನ್ನ ಪಾಲಿನದ್ದು. ಆದರೆ ನಾನು ಬಿಡಬೇಕಲ್ಲ. ರಿಸಲ್ಟ್ ಹೇಳುವಾಗ ಅವಳ ಗೆಳತಿಯರದ್ದೆಲ್ಲಾ ಹೇಳಿ ಅವಳದ್ದೇ ಹೇಳ್ತಿರಲಿಲ್ಲ. ಒಂದು ವೇಳೆ ಹೇಳಿದರೂ ಎಲ್ಲಾ ತಪ್ಪು ತಪ್ಪಾಗಿ ಹೇಳ್ತಿದ್ದೆ. ಸರಿಯಾಗಿ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಲು ಅವಳು ಹರ ಸಾಹಸ ಮಾಡಬೇಕು. ಆದರೆ ಅವಳ ಕಷ್ಟ ಅಲ್ಲಿಗೇ ಮುಗಿಯಲ್ಲ. ಡಿಗ್ರಿಯಲ್ಲಿ ಒಂದಿಷ್ಟು ಗೋಲ್ಡ್ ಮೆಡಲ್ ಅವಳಿಗೆ ಕೊಡ್ತಾರೆ ಅಂತ ಹೇಳಿದ್ಲೋ ಇಲ್ವೋ, ಶುರುವಾಯ್ತಲ್ಲಪ್ಪ. ಅಪ್ಪನ ಕಡೆಯಿಂದ ಅವಳ ಗುಣಗಾನ. ಫೋನ್ ಮಾಡ್ದಾಗೊಮ್ಮೆ ಕನಕಮಾಲಾ, ಸ್ವರ್ಣಮಾಲಾ, ರತ್ನಮಾಲಾ, ರತ್ನಮಂಜರಿ ಅಂತ ಏನೇನೋ ಹೇಳ್ತಾರೆ ಕಣೋ ತಡ್ಕಳ್ಳಿಕ್ಕಾಗಲ್ಲ ಅಂತ ಹೇಳ್ತಿದ್ಲು. ಪಾಪದ ಹುಡುಗಿ. ಈಗ ನಾನು, ಅಪ್ಪ ಇಬ್ಬರೂ ಅವಳ ಗುಣಗಾನ ಮಾಡ್ತೀವಿ.

ನಮ್ಮನೇಲಿ ಎಲ್ಲರಿಗೂ ಅಡ್ಡ ಹೆಸರುಗಳಿವೆ. ಅಮ್ಮನ ಪಾಲಿಗೆ ನಾನು ನನ್ನ ತಂಗಿ ಇಬ್ರೂ ಕಂದಾ. ಅವಳು ಯಾರನ್ನ ಕರೀತಿದ್ದಾಳೆ ಅಂತ ನಾವೇ ಊಹಿಸಬೇಕು. ಇನ್ನು ಅಪ್ಪ, ನನ್ನ ಪಾಪು, ಕಂದಾ, ಹೈವಾನ್, ಭಾಡ್ಕೋವ್, ಬೇಕೂಫ ಇತ್ಯಾದಿಯಾಗಿ ಕರೆಯುತ್ತಿರುತ್ತಾರೆ. ನನ್ನ ತಂಗಿಯನ್ನಂತೂ ಅದೇನೇನೋ ಕರೀತಿರ್ತಾರೆ. ಹೆಚ್.ಎನ್, ಎನ್.ಹೆಚ್, ಹೆಚ್.ಎಮ್, ಹೆಚ್.ಹೆಚ್.ಎಮ್. ಅಪ್ಪ ಮಗಳ ಮಧ್ಯೆ ಹೀಗೆ ಅವೆಷ್ಟೋ ಕೋಡ್ ಗಳಿವೆ. ನೀನು ಏನು ಬೇಕಾದ್ರೂ ಕರಿ, ಬೇರೆಯವರಿಗೆ ಮಾತ್ರ ಗೊತ್ತಾಗಬಾರದು ಅಂತ ಅವಳು ಅಪ್ಪನಿಗೆ ತಾಕೀತು ಮಾಡಿದ್ದಾಳೆ. ಕೆಲವೊಂದು ಅತಿ ಮಧುರವಾಗಿದ್ದರೂ, ಇನ್ನು ಕೆಲವು ಪಕ್ಕಾ ಬಯಲುಸೀಮೆಯವರು ಮಾತ್ರ ಹೇಳಬಲ್ಲಂತವು. ನನ್ನ ಪಾಲಿಗೆ ಮಾತ್ರ ಅವಳು ಪುಟ್ಟು. ಕೆಲವೊಮ್ಮೆ ಪ್ರೀತಿ ಹೆಚ್ಚಾಗಿ ಪಿಶಾಚಿ ಅಂತ ಕರೆದಾಗ ಅವಳೂ ಅಷ್ಟೇ ಪ್ರೀತಿ ತೋರಿಸ್ತಾಳೆ. ಅಮ್ಮನನ್ನು ನಾನು ಗುಂಡಿ, ಸುಂದರಿ ಎಂದು ಕರೆದರೆ , ಅಪ್ಪನನ್ನು ನಾವೆಲ್ಲಾ ಪಿತಾಶ್ರೀ, ಸಾಮಿ, ಅಪಾರ ಎಂದು ಕರೀತೀವಿ. ಸಾಮಿ ಎಂಬುದು ಸ್ವಾಮಿಯ ಅಪಭ್ರಂಶವಾದರೆ, ಅಪಾರದ ಹಿಂದೆ ಒಂದು ಪುಟ್ಟ ಕಥೆಯಿದೆ.

ಸರಿಯಾಗಿ ನೆನಪಿಲ್ಲ, ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದೆ ಅಂತ ಕಾಣುತ್ತೆ. ಕುಮಾರವ್ಯಾಸನನ್ನು ಓದುವುದಾಗಿ, ಅಪ್ಪ ಓದುತ್ತಿದ್ದ ಭಾರತ ಕಥಾಮಂಜರಿಯನ್ನು ಎತ್ತಿಕೊಂಡಿದ್ದೆ. ಹೀಗೇ ಓದುತ್ತಾ ಕುಳಿತಿದ್ದಾಗ ಒಂದು ದಿನ ಹೆಸರು ಹೊಳೆದೇ ಬಿಟ್ಟಿತ್ತು. ಮನೆಗೆ ಬಂದವನೇ ಹೇಳಿದ್ದೆ. ಅಪ್ಪಾ. ಗದಗಿನ ನಾರಾಯಣ ಕುಮಾರವ್ಯಾಸನಾದರೆ, ನೀನು, ಕೊಮಾರನಹಳ್ಳಿ ನಾರಾಯಣ ಅಪಾರವ್ಯಾಸ.
ಅಮ್ಮ, ಏನೋ ಹಂಗಂದ್ರೆ ಅಂತ ಕೇಳಿದ್ಲು.
ಅದೇನಮ್ಮ, ಸುತ್ತಳತೆ ಜಾಸ್ತಿ ಇದೆಯಲ್ಲ. ಅದಕ್ಕೇ ಆ ಹೆಸರು. ಅಪಾರ-ವ್ಯಾಸ.
ಅವತ್ತು ಅಪ್ಪ ಅಟ್ಟಿಸಿಕೊಂಡು ಬಂದಿದ್ದರು.
ಈಗ ಮನೆಯಲ್ಲಿ ಎಲ್ಲರೂ ಅವರನ್ನು 'ಅಪಾರ' ಎಂದು ಪ್ರೀತಿಯಿಂದ ಕರೆಯುತ್ತೀವಿ.

ಅಪಾರನನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯವೇ. ಯಾವಾಗ ಏನು ಮಾಡ್ತಾರೆ ಅಂತ ಹೇಳೋದು ಕಷ್ಟ. ತುಲಾ ರಾಶಿಯವರೇ ಹಾಗಂತೆ ಕಣೋ, ಮನಸ್ಸು ಮರ್ಕಟವಂತೆ. ನಂಗೆ ಮದುವೆಗೂ ಮುಂಚೇನೇ ಆನೆಗುಂದ ಅಣ್ಣ ಹೇಳಿದ್ದ ಎಂದು ಅಮ್ಮ ಹೇಳಿದರೆ, ಏನೇ ಅದು?‌ ಅಮ್ಮ ಮಗ ಸೇರ್ಕೊಂಡು ನನ್ನ ಬಗ್ಗೆ ಏನೇನೋ ಹೇಳ್ತೀರಾ ಅಂತ ಅಪ್ಪ ಗುಟುರು ಹಾಕ್ತಿರ್ತಾರೆ.
ಸಣ್ಣ ಸಣ್ಣ ವಿಷಯಕ್ಕೂ‌ ವಿಪರೀತವಾಗಿ ಖುಶಿ ಪಡುವ ಅಪ್ಪ, ನನಗೆ ಕೆಲಸ ಸಿಕ್ತು ಅಂತ ಗೊತ್ತಾದ ತಕ್ಷಣ ಇಡೀ ಊರಿಗೆ ಊಟ ಹಾಕ್ಸಿದ್ದ.
ಯಾಕಪ್ಪಾ ಕೆಲಸ ಬೇರೆ ಯಾರಿಗೂ ಸಿಗೋದೇ ಇಲ್ವೇ, ನಂಗೊಬ್ಬನಿಗೇನಾ ಅಂತ ಕೇಳಿದರೆ, ಊರೋವರ ಕಥೆ ತಗೊಂಡು ನನಗೇನೋ. ನನ್ನ ಮಗಂಗೆ ಕೆಲಸ ಸಿಕ್ಕಿದೆ ಅಂತ ನನಗೆ ಖುಶಿ, ನಮ್ಮ ಮನೆತನದಲ್ಲೇ ಓದ್ತಾ ಇರೋವಾಗಲೇ ಕೆಲ್ಸ ಸಿಕ್ಕಿದ್ದು ನಿಂಗೇ ಮೊದಲು. ನಿಮ್ಮ ಕಾಲೇಜಿನಲ್ಲೂ ಅಷ್ಟೇ ಅಲ್ವೇನೋ, ನಿಂಗೇ ತಾನೇ ಫಸ್ಟು?‌ ಅದೆಲ್ಲ ಬಿಡು. ನನ್ನ ಸಂತೋಷಕ್ಕೆ ನಾನು ಊಟ ಹಾಕಿಸಿದರೆ, ನಿಂಗೇನೋ‌ ಕಷ್ಟ?‌ ನಾನು ಸುಮ್ಮನಾಗಿದ್ದೆ.
ಏನಪ್ಪಾ ನಿನ್ಮಗ ಕೆಲ್ಸಕ್ಕೆ ಹೋಗ್ತತಾ, ಎಸ್ಟ್ ಸಣ್ಣಕೈತೆ? ಆಗ್ಲೇ ಸಿಕ್ತಾ?‌ ಸಂಬ್ಳ ಎಸ್ಟು ಎಂಬಿತ್ಯಾದಿ ಪ್ರಶ್ನೆಗಳನ್ನು ಊರ ಜನ ಕೇಳ್ತಿದ್ರೆ, ನಾನು ನಾಚಿಕೆಯಿಂದ ಮತ್ತಷ್ಟು ಮುದುಡಿ ಸಣ್ಣಗಾಗುತ್ತಿದ್ದೆ.

ಅದಲ್ಲಿಗೇ ಮುಗಿಯಲಿಲ್ಲ, ಅವರಿಗೆಲ್ಲಾ ಏನೇನು ಹೇಳಿದ್ರೋ ಗೊತ್ತಿಲ್ಲ. ಕೆಲಸಕ್ಕೆ ಸೇರಿ ಸ್ವಲ್ಪ ದಿನದ ಮೇಲೆ ಊರಿಗೆ ಹೋಗಿದ್ದೆ. ಊರಲ್ಲಿ ತಿರುಗಾಡಿಕೊಂಡು ಬಂದು ಅಪ್ಪನಿಗೆ ಹೇಳ್ದೆ, ಯಾಕೋ ಸ್ವಲ್ಪ ಜಾಸ್ತೀನೇ ಜನ ಮಾತಾಡ್ಸಿದ್ರು ಕಣಪ್ಪಾ ಇವತ್ತು.
ಹೌದು ಮಗನೇ, ನೀನು ಅವರ ಪಾಲಿಗೆ ಯಾವುದೋ ಬೇರೆ ಲೋಕದಿಂದ ಬಂದವನು ಕಣೋ ಅಂತ ಅಪ್ಪ ಹೇಳಿದ್ರು. ಅದರ ಅರ್ಥ ನನಗೆ ಗೊತ್ತಾಗಿದ್ದು ಮರುದಿನ.

ಊರಲ್ಲಿ ಒಬ್ಬರ ಮನೆಯಲ್ಲಿ ಕುಳಿತು ಟೀವಿ ನೋಡ್ತಾ ಮಾತಾಡ್ತಿದ್ದೆ. ಪಕ್ಕದ ಮನೆಯವರ ಮಗುವೊಂದು ಅಲ್ಲಿಗೆ ಬಂದು ಓದ್ತಾ ಇತ್ತು. ಆಗಾಗ ಟೀವಿ ನೋಡುವುದೂ, ನಮ್ಮ ಮಾತು ಕೇಳುವುದೂ ಮಾಡ್ತಾ ಇತ್ತು. ಆ ಹುಡುಗನ ಅಪ್ಪ ಆಗ ಅಲ್ಲಿಗೆ ಬಂದ. ಬಂದವನೇ ಆ ಮಗುವಿನ ತಲೆಗೊಂದು ರಪ್ಪನೆ ಹೊಡೆದು, 'ಲೇ ಆ ವಣ್ಣನ ತರ ಆಗಲೇ ಅಂತ ಹೇಳಿದ್ರೆ ಕಯ್ಯಾಗ ಪಾಟಿ ಹಿಡ್ಕಂಡ್ ಟೀವಿ ನೋಡ್ತೀಯ, ಆ ವಣ್ಣನ ಅಂಗ್ ಓದ್ಬುಕು ನೀನೂ' ಅಂದ.
ನನ್ನ ಕಡೆಗೆ ತಿರುಗಿ ಹೇಳಿದ. 'ನನ್ನ ಮಗಂಗೆ ಹೇಳ್ಬಿಟ್ಟಿವ್ನಿ ಕಣಪ್ಪಾ, ನಿನ್ನಂಗಾಗ್ಬೇಕು ಅಂತ'
ಆ ಮಗುವೋ, ನನ್ನನ್ನು ಕೊಲ್ಲುವಂತೆ ನೋಡುತ್ತಿತ್ತು. ನನಗೋ ತಡೆದುಕೊಳ್ಳಲಾಗದಷ್ಟು ಮುಜುಗರ. ಆ ಕ್ಷಣದಲ್ಲಿ ಅಪ್ಪನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.

ನಾನಿಲ್ಲಿಗೆ ಬಂದ ಮೇಲೆ ಅಪ್ಪನ ದರ್ಬಾರು ಮತ್ತೂ ಕಳೆಕಟ್ಟಿದೆಯಂತೆ. ಸಂಜೆ ಹೊತ್ತು ಊರವರ ಜೊತೆ ಮಾತಾಡ್ತಿರಬೇಕಾದ್ರೆ, ನಾನೇನಾದ್ರೂ ಫೋನ್ ಮಾಡಿದ್ರೆ, ಮಗ ಫೋನ್ ಮಾಡಿದ್ದಾನೆ. ಅಮೇರಿಕಾದಿಂದ ಅಂತ  ಎದ್ದು ಹೋಗ್ತಾರೆ.
ಮಾತು ಮುಗಿಸಿ ಹೋದ ಮೇಲೆ ಅವರೆಲ್ಲಾ ಸಹಜವಾಗಿಯೇ - ಯಪ್ಪಾ, ಮಗ ಅಮೆರಿಕಕ್ಕೆ ಹೋಗಯ್ತಾ? ಏನ್ಮಾಡ್ತತೆ? ಏಟು ವರ್ಸ ಆತು? ಯಾವಾಗ್ಬರ್ತತೆ? ಸಂಬ್ಳ ಎಸ್ಟು? ಲಕ್ಷಗಟ್ಳೇ ಬರ್ತಿರ್ಬೇಕ್ ಬುಡು... ಎಂದೆಲ್ಲಾ ಕೇಳ್ತಿದ್ರೆ ಅಪ್ಪ ಅಲ್ಲೆಲ್ಲೋ ಮೋಡದ ಮೇಲೆ ತೇಲಿ ತೇಲಿ...
ಅಮ್ಮ ಈ ಕಥೆಗಳನ್ನೆಲ್ಲಾ ಹೇಳ್ತಿರ್ತಾಳೆ. ನಾನು ಅಮ್ಮ ಮಾತಾಡ್ತಿರಬೇಕಾದ್ರೆ ಇವಿಷ್ಟೂ ಒಂದ್ಸಲ ಬಂದು ಹೋಗ್ಬೇಕು. ಇಬ್ರೂ ಬಿದ್ದು ಬಿದ್ದು ನಗ್ತಿದ್ರೆ, ಏಯ್ ಮಾತು ಮುಗ್ಸೇ, ಅಲ್ಲಿಂದ ಫೋನ್ ಮಾಡಿದ್ದಾನೆ. ಬಿಲ್ ಎಷ್ಟು ಬರುತ್ತೆ ಅಂತ ನಿಂಗೇನು ಗೊತ್ತು ಅಂತ ಗುಟುರು ಹಾಕ್ತಿರ್ತಾರೆ.
ಅವರು ಆಫೀಸಿಗೆ ಹೋದಾಗ್ಲೇ ಫೋನ್ ಮಾಡೋ, ನೆಮ್ಮದಿಯಾಗಿ ಮಾತಾಡೋಕೇ ಬಿಡಲ್ಲ ಅಂತ ಅಮ್ಮ ಅವರೆದುರಿಗೇ ಹೇಳ್ತಿರ್ತಾಳೆ.

ಚಿಕ್ಕವನಿದ್ದಾಗ ಅಪ್ಪ ಎಂದರೆ ಭಯ. ನಮ್ಮಿಬ್ಬರ ಮಾತುಕತೆ ಎಂದರೆ ಬಿಜಾಪುರದಲ್ಲಿ ಮಳೆ ಬಂದಂತೆ. ಏನೇ ಕೆಲಸ ಆಗಬೇಕೆಂದರೂ ಅಮ್ಮನ ಮೂಲಕವೇ. ಹಂತಹಂತವಾಗಿ ಅಪ್ಪನ ಜೊತೆ ಸಲಿಗೆ ಮೂಡುತ್ತಾ ಬಂದು, ಈಗ ಮನೆಯಲ್ಲಿ ಅಪ್ಪನ ಪಾಡು ಕೇಳತೀರದು. ಮದುವೆ ಆದ ಮೇಲೆ ಹೆಂಡತಿ ಎದುರಲ್ಲಿ ಅಪ್ಪನನ್ನು ಕಾಡಬಾರದೆಂದು ಅಜ್ಜಿ ಕಡೆಯಿಂದ ಉಪದೇಶವಾಗಿದೆ.

ನಾವು ಗೇಲಿ ಮಾಡ್ತಿದ್ರೆ, ಅಪ್ಪ ಶುರು ಮಾಡ್ತಾರೆ. ಇವತ್ತು ನಗ್ತಿದೀಯಲ್ಲ, ನಾಳೆ ನೀನೇ ಹೇಳ್ತೀಯಾ ಅಪ್ಪ ಕರಕ್ಟಾಗೇ ಹೇಳ್ತಿದ್ದ ಅಂತ. By the time you think your dad was right, your child will be thinking you to be a fool. ಗೊತ್ತಾ? ನಾನು, ನನ್ನ ತಂಗಿ ಇಬ್ರೂ ಅಪ್ಪ ಹಾಗೆ ಹೇಳಿದ್ದನ್ನೂ ಉಲ್ಟಾ ಸೀದಾ ಮಾಡಿ ಮತ್ತಷ್ಟು ನಗ್ತೀವಿ.

ಅದೆಷ್ಟೇ ಗೇಲಿ, ತಮಾಷೆ ಮಾಡಿದರೂ, ಏನೇ ಕೆಲಸ ಮಾಡಬೇಕೆಂದರೂ ಒಂದು ಸಲ ಅಪ್ಪನನ್ನು ಕೇಳಲೇ ಬೇಕು. ಒಮ್ಮೊಮ್ಮೆ ಗೇಲಿಯ ವಸ್ತುವಾಗುವ ಅಪ್ಪ, ಮತ್ತೊಮ್ಮೆ ಕೈ ಹಿಡಿದು ನಡೆಸುವ ಗುರು. ಅತ್ಯಂತ ಕಷ್ಟ ಪಟ್ಟು ಒಂದು ನೆಲೆ ಕಂಡುಕೊಂಡು, ಇವತ್ತಿಗೂ ಹೊಲ, ಅಂಗಡಿ, ಆಫೀಸು ಅಂತ ಹೋರಾಡುವ ಅಪ್ಪ, ನಾನು 'ಇವತ್ತು ಬೋರಾಗಿದೆ, ಆಫೀಸಿಗೆ ಯಾರು ಹೋಗ್ತಾರೆ' ಎಂದು ಅಂದುಕೊಳ್ಳುವ ಹೊತ್ತಿಗೆ ನೆನಪಾಗುತ್ತಾರೆ.

ಅಪಾರನನ್ನು ಅಪಾರವಾಗಿ ಮಿಸ್ ಮಾಡಿಕೊಳ್ಳುತ್ತಾ
-ಪಾಪು

Tuesday, June 14, 2011

That's how it was


Whenever I saw those photos with blue sky, beautiful clouds, colorful birds and insects, playful children, smiling people, wow, I'd exclaim and promise myself that one day I too will capture such pictures and I too will show it to the world. I must say little did I know then.

And when the time came I bought a nice "NIKON" ( read in quotes, I took pride in it then ) DSLR camera. Top notch, I told myself. And while I was bringing the camera home I could already see myself taking pictures of those grand sunsets, a wonderfully moon lit blue canyon, a solo exhibition and a national geographic 'photo of the year' award. Well, that was until I sat down with the camera and saw the different buttons and menu options on it. 
Would a silly thing such as camera menu option stop me from taking great photos? Never. Who do you think I am? An engineer. Yes, I can crack anything. And I did. I dropped the camera once. 

Just after learning the basics of the camera ( that's all one needs to know ) I went out and started taking only the great pictures. That great moment when the bird flapped its wings or when the sun sank into that river, where did they go? Right into my camera. How were the pictures? Awesome! I hadn't seen the snaps on my laptop yet. When I did, hey what went wrong? Why did the bird lose its neck? And why does the river look so dark? Why doesn't sky show any colors?

Boy, even an engineer needs to know certain things. A whole new world opened up for me. Aperture, Exposure, Shutter, ISO, white balance, metering - It felt like reading a dictionary. The words were all there, but nothing sank in. I started using those words like a pro. Firmly believing that one doesn't need to know everything, just start using the lingo and things will show up. And they did, but not in the way I wanted.

It wasn't long before I realized that the job doesn't end after clicking the shutter release button. There's a laborious job of post processing. Correcting all your mistakes. Adjusting the exposure, saturation, white balance, temperature, phew, and what not? But then again, I'm an engineer, yes that's what I am. I can pick up anything. I'm always open to learn new things. I'd learn photography, I told myself. Only if I knew that thats exactly what I wouldn't learn!

It started with the image editing softwares. By then I had realized that if I were to enhance my great pictures, I should use a great software. Since my laptop runs on linux I was forced to find the alternatives for the crazy photo editing softwares. Clearly the applications in the free world were not good enough for me. I ran those windows apps in linux - not a big deal for an engineer. Did it work? No. In no time, I was all into fixing linux to run those windows' softwares. I'd do anything to capture great pictures. But I wasn't learning anything about photography. I didn't worry about it then. In fact, that thought never crossed my mind. I had a bigger objective now, to fix Linux! I had to fix it otherwise I might have to use sissy windows. How I wished if I could run windows on linux. Nothing is impossible for an engineer, I'd run a virtual operating system! ( by the way, where is that great picture I promised? Just don't think about it for now alright, fix linux first ) 

Well, even the photo editors did not help much. I was short on the resources. 

To take great pictures you should have great lenses. A holy voice started speaking to me.

Lenses you say? Which ones? I questioned.

You see, it continued, to capture the wildlife ( ooooh the tiger ) you need a telephoto lense. To capture landscapes ( ah the great sunset ) wide angle lense and if you'd like to shoot the insects ( like the big ant, yes, i want to shoot them) macro lenses. And then there are others like prime lense, fisheye, zoom, super zoom, filters, converters.... stop it! I said, I want them all. No picture of mine should look bad.

Pictures were still no good. The divine voice started speaking again.

Son, when you take a picture, you should keep the camera still. Even with the slightest vibration you may mess up your shot. Did you buy the lenses with vibration reduction feature?

Ah! now I knew the problem. All I needed was a vibration reduction lense.
But why didn't you tell me this before? I asked.

You were not ready yet, my child. It said.

Pictures were still not great.

The voice spoke again. Son, when you capture the photo with long shutter speed, its hard to keep the camera still. You would need some tool to keep the camera still.
You should buy a tripod or a monopod or may be atleast a gorillapod. That'll help.

I asked again why it didn't tell me before.

You were not ready - was the reply.

When I complained that the images were not getting better, the godly voice spoke.

Son, there are times when the sun steps out of your way. Call it a fear of getting captured. But when the light is not good enough, you should manage it on your own. You can try buying the flashes. They come in various types. You can attach it to your camera or keep them separate. Oh, you may also consider buying umbrellas. No, not the ones you use during rains, but similar ones. You can control the harsh light and have a soothing effect on the subject.

Before I could ask, it said, I didn't tell this before because you were not ready.

Nothing changed, the pictures were not anything I wanted them to be.
This time, I was totally disappointed. When I started complaining, the voice spoke again.

Son, to capture a great photo you just need to envision it. Your camera and other accessories are tools to help you get that quicker or efficiently.
However harsh it may seem, you cannot take a great photo. You don't have what it takes. I'm sorry my child.

Bursting with anger, I asked - 'Why didn't you say so before?'

The voice calmly said, son, you wouldn't have believed me. You ask for the error report before accepting anything.
You are an engineer, thats how you are.

Sunday, January 9, 2011

ಕನಲು

ಶಹರಿನ ಗಗನಚುಂಬಿ ಕಟ್ಟಡಗಳ
ಬೆಂಕಿ ಪಟ್ಟಣದಂಥ ಗೂಡೊಳಗೆ
ಕೂತು ಗಾಜಿನ ಕಿಟಕಿಯಿಂದ
ಆಚೆ ನೋಡುವಾಗಲೇ ಬಿಟ್ಟು ಬಂದ
ಊರ ಮೂಲೆಯ ಮರದ ಮೇಲೆ ಹತ್ತಿ
ಆಡಿದ್ದು ನೆನಪಾಗುವುದು.
ಇಲ್ಲಿ ಒಂಟಿ ಮರಗಳಿಲ್ಲ, ಕೊಳ್ಳಿ
ದೆವ್ವಗಳಿಲ್ಲ ಚೌಡಿ ಮಾರಿಗಳಂತೂ
ಹತ್ತಿರಕ್ಕೂ ಸುಳಿಯುವುದಿಲ್ಲ.
ಬೀಸುವ ಗಾಳಿಯ ತುಂಬಾ ಸೋರಿ
ಹೋದ ಕನವರಿಕೆಗಳು ಮೈಗಂಟಿ
ದಂತಾಗಿ ಬೆಚ್ಚಿ ಬೀಳಬೇಕು.

Wednesday, December 29, 2010

ಒಮ್ಮೊಮ್ಮೆ ಹೀಗೂ..




ಮನದಲ್ಲೊಂದು ಮುಸಲಧಾರೆ
ಮುಗಿಲ ತುಂಬೆಲ್ಲಾ ಮಳೆಬಿಲ್ಲು 
ನಾಡೊಳಗೆ ನಲಿವಿನ ನರ್ತನ
ಸಂತೃಪ್ತಿಯೊಂದು ಮಗುವಾದರೆ
ಹೆಸರು ಹುಡುಕುವುದು ಬಲು ಕಷ್ಟ

ಮೆತ್ತನೆ ಹಿಮದ ಮೇಲೆ
ಸುಳಿಗಾಳಿಯ ಚೆಲ್ಲಾಟ.
ಸಂತೋಷ ಗಾಳಿಯಲ್ಲಡಗಿದೆಯೋ
ನೋಡುವ ಕಣ್ಣೊಳಗಿದೆಯೋ
ಗುಪ್ತಗಾಮಿನಿಯಾಗಿ ಮನದಲ್ಲಿದೆಯೋ
ಜೀವಸೆಲೆಯಾಗೆ ಎದೆಯಲ್ಲಿದೆಯೋ

ಮೆದುವಾಗಿ ಹಿತವಾಗಿ
ತೆರೆಯಾಗಿ ಅಲೆ ಬೀಸಲು
ಮೈಮೇಲೆ ಬಿದ್ದದ್ದು ಹಿಮವೋ
ಬಾನಿಂದುದುರಿದ ಬೆಳಕೋ
ಏನೋ ತಿಳಿಯದಾಗಿದೆ

ಬೆಳಗಾಗಿದೆ, ಗರಿ ಮೂಡಿದೆ, ಮಜವಾಗಿದೆ

Friday, September 17, 2010

ಅಪರಾಧಿ ನಾನಲ್ಲ

ಧಾವಂತದಿಂದ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಕಡೆಗೆ ಮೋಹನ ಅಡ್ಡಾಡುತ್ತಿದ್ದ. ಹಣೆಯ ಮೇಲೆ ಬೆವರ ಹನಿಗಳು ಸದ್ದಿಲ್ಲದಂತೆ ಹುಟ್ಟುತ್ತಿದ್ದವು. ಪದೇ ಪದೇ ರಸ್ತೆಯ ಕಡೆಗೆ ನೋಡುತ್ತಿದ್ದ. ಸಣ್ಣ ಶಬ್ದಕ್ಕೂ  ಬೆದರುವಂತಾಗುತ್ತಿತ್ತು. ಆರಡಿ ಎತ್ತರದ ಅಜಾನುಬಾಹು ಹೀಗೆ ಹೆದರುತ್ತಾ ನಿಲ್ಲುವುದು ಬೇರೆಯವರಿಗೆ ತಮಾಷೆಯಾಗಿ ಕಂಡರೂ ಉಸಿರು ಜೋರಾಗಿ ಬಿಡಲೂ ಆಗದಷ್ಟು ಮೋಹನ ಹೆದರಿದ್ದ.

ಜೀವನದಲ್ಲಿ ಮೊಟ್ಟಮೊದಲನೆಯ ಬಾರಿಗೆ ತಪ್ಪು ಮಾಡಿದ್ದ. ಮೇಲಾಗಿ ಸಿಕ್ಕಿ ಬಿದ್ದಿದ್ದ. ಶ್ರಾವಣಿ ನೋಡಿ ಬಿಟ್ಟಿದ್ದಳು. ಅವಳು ಈ ಹೊತ್ತಿನಲ್ಲಿ  ಇಲ್ಲಿಗೇಕೆ ಬಂದಳು ಎನ್ನುವುದು ಮೋಹನನಿಗೆ ತಿಳಿಯದಾಗಿತ್ತು. ಅದೆಷ್ಟು ದಿನಗಳಿಂದ ಈ‌ಯೋಜನೆ ರೂಪಿಸಿದ್ದ ಅವನು. ಹೀಗೆ ಸಿಕ್ಕಿ ಬೀಳುವುದರಲ್ಲಿ ಅರ್ಥವೇ ಇಲ್ಲ. ಛೇ, ಈಗೇನು ಮಾಡುವುದು?‌ಇಷ್ಟು ಹೊತ್ತಿನಲ್ಲಿ ಶ್ರಾವಣಿ‌ ಮನೆಗೆ ಹೋಗಿರಬಹುದಾ? ಅವಳ ಅಪ್ಪ-ಅಮ್ಮಂಗೆ ಹೇಳಿಬಿಟ್ಟಿರ‍್ತಾಳಾ? ಊಹೂಂ, ಇಲ್ಲ. ಅವಳ ಅಪ್ಪ ಅಮ್ಮ ಹೊರಗೆ ಹೋಗುವುದನ್ನ ಆಗಲೇ‌ ನೋಡಿದ್ದ. ಹಾಗಾದ್ರೆ, ಮನೆಗೆ ಹೋಗಿ ಶ್ರಾವಣಿ‌  ಹತ್ತಿರ ಮಾತಾಡ್ಲಾ? ಪ್ಚ, ಅಷ್ಟು ಚಿಕ್ಕ ಹುಡುಗಿಗೆ ಏನು ಅರ್ಥ ಆಗುತ್ತೆ? ಇವತ್ತಲ್ಲಾ‌ ನಾಳೆ ಯಾರಿಗಾದ್ರೂ ಹೇಳಿಯೇ ಬಿಡ್ತಾಳೆ. ಬೇಡ, ಬೇಡ. ಏನಾದ್ರೂ‌ ಮಾಡಲೇಬೇಕು. ಅದೂ ಅವಳ ಅಪ್ಪ ಅಮ್ಮ ಮನೆಗೆ ಬರೋದ್ರೊಳಗೇ ಆಗಬೇಕು. ಆದ್ರೆ ಏನು ಮಾಡಬೇಕು ? ಅಯ್ಯೋ, ಜೋರಾಗಿ ಉಸಿರು ಬಿಟ್ಟ. ಮೋಹನ ಎತ್ತಿ ಬೆಳೆಸಿದ ಹುಡುಗಿ ಶ್ರಾವಣಿ‌ . ಇನ್ನೂ ಹೈಸ್ಕೂಲಿಗೆ ಹೋಗ್ತ್ತಿದ್ದಾಳೆ. ಅವಳನ್ನು ಕಂಡರೆ ಮೋಹನನಿಗೆ ಏನೋ ಪ್ರೀತಿ, ಮಮತೆ. ಆದರೆ ಈಗ ಎದುರಿಗಿರುವುದು ತನ್ನ ಜೀವನದ ಪ್ರಶ್ನೆ. ವಿಷಯ ಹೊರಗೆ ಬಂದರೆ ಜೀವನ ಪೂರ್ತಿ ಜೈಲಿನಲ್ಲಿರಬೇಕು. ಮರ್ಯಾದೆಯಂತೂ ಹರಾಜಾಗಿ ಹೋಗುತ್ತದೆ. ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ.
ಛೇ, ಶ್ರಾವಣಿ‌  ಅಲ್ಲಿಗೆ ಬರದೇ ಹೋಗಿದ್ರೆ ಎಲ್ಲಾ ಸರಿ ಹೋಗುತ್ತಿತ್ತು.
ಈಗ್ಲೂ ಸರಿ ಹೋಗುತ್ತೆ, ಶ್ರಾವಣೀನೇ ಇಲ್ಲ ಎಂದರೆ. ಮನದಲ್ಲಿ ಯಾವುದೋ‌ ದನಿ ಹೇಳಿದಂತಾಯಿತು.
ಛೇ, ಛೇ, ಅದೆಲ್ಲಾ ಆಗಲ್ಲ.
ಮತ್ತೆ ನೀನು ಜೈಲಿಗೆ ಹೋಗ್ತೀಯಾ?
ಹ್ಮ್...
ಮೋಹನನೀಗ ಕಸಿವಿಸಿ ಶುರುವಾಗಿತ್ತು. ತನ್ನ ಜೀವನವೋ, ಇಲ್ಲಾ ತಾನು ಎತ್ತಿ ಆಡಿಸಿದ ಜೀವವೋ?
ಈಗ್ಲೇ ಹೋದ್ರೆ ಯಾರಿಗೂ ಗೊತ್ತಾಗಲ್ಲ. ಅವಳ ಮನೇಲೂ ಯಾರೂ ಇಲ್ಲ. ಚಿಕ್ಕ ಹುಡುಗಿ. ಲೆಕ್ಕವೇ ಅಲ್ಲ. ಒಳಗಿನ ದನಿ ಹೇಳುತ್ತಲೇ ಇತ್ತು.
ಆದ್ರೆ, ಪಾಪ. ಏನೂ ಗೊತ್ತಿಲ್ಲದ ಹುಡುಗಿ. ಇನ್ನೂ ಬಾಳಿ ಬದುಕಬೇಕಾದವಳು.
ಹಾಗಂತ ನಿನ್ನ ಜೀವನ ಬಲಿ ಕೊಡ್ತೀಯಾ? ಅವಳು ಯಾರ ಹತ್ರನಾದ್ರೂ ಬಾಯಿ ಬಿಟ್ರೆ ಕಥೆ ಮುಗಿಯಿತು. ಏನೇ ಮಾಡಿದರೂ ಇನ್ನು ಹತ್ತು ನಿಮಿಷದ ಒಳಗೆ ಮಾಡಿ ಮುಗಿಸಬೇಕು. ಬೇಗ, ಬೇಗ.. ಹೊರಡು. ದನಿ ಒತ್ತಾಯ ಪಡಿಸಿತು.

ಕೊನೆಗೂ ಮೋಹನನಿಗೆ ಅವನ ಜೀವನವೇ ಮುಖ್ಯವಾಯಿತು. ದುರ್ದಾನ ತೆಗೆದುಕೊಂಡವನಂತೆ ಶ್ರಾವಣಿಯ  ಮನೆ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನ ಮನವಾಗಲೇ  ಕೆಲಸ ಹೇಗೆ  ಮುಗಿಸಬೇಕೆಂದು ಯೋಚಿಸತೊಡಗಿತ್ತು.

*******

ಬರೆಯುತ್ತಿದ್ದ ಕಥೆ ಅರ್ಧಕ್ಕೇ ನಿಲ್ಲಿಸಿ ಮಹರ್ಷಿ ಆಕಳಿಸಿದ. ತುಂಬ ಹೊತ್ತಿನಿಂದ ಬರೆಯುತ್ತಿದ್ದುದರಿಂದ ಮೈ ಕೈ ಎಲ್ಲಾ ಹಿಡಿದಂತಾಗಿತ್ತು. ಕುರ್ಚಿಗೆ ಹಾಗೇ ಒರಗಿ ಮೈ ಮುರಿದ. ಅವನ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯಾಗಿತ್ತದು.
ಮಹರ್ಷಿಯ ಕಥೆಗಳೆಲ್ಲಾ ಸುಖಾಂತ್ಯವಾಗುತ್ತವೆ. ಅವನ ಕಥೆಗಳು  ಒಂದು ಕಮರ್ಷಿಯಲ್ ಸಿನಿಮಾ ನೋಡಿದ ಹಾಗಿರುತ್ತದೆಯೇ ಹೊರತು ನಿಜ ಜೀವನಕ್ಕೆ ಹತ್ತಿರವಾಗಿರುವುದಿಲ್ಲ. ಮತ್ತೆ ಮತ್ತೆ ಕಾಡುವುದಿಲ್ಲ ಎಂಬಿತ್ಯಾದಿ ಯಾರೋ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದ್ದರು. ಮಹರ್ಷಿಗೆ ಅದನ್ನು ಒಪ್ಪಲಾಗಿರಲಿಲ್ಲ. ಪತ್ರಿಕೆಗಾಗಲೀ, ಮತ್ತಿನ್ನಾರಿಗಾದರೂ‌ ಏನೂ‌ ಹೇಳದಿದ್ದರೂ ತಾನೊಂದು ಹೊಸ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದ್ದ. ಅವನ ಹೊಸ ಕಥೆಯಲ್ಲಿನ ಕೇಂದ್ರ ಪಾತ್ರ ಮೋಹನನ್ನು ತುಂಬಾ ಸಜ್ಜನನಂತೆ ಚಿತ್ರಿಸಿ, ಅಂತ್ಯದಲ್ಲಿ ಕೊಲೆಗಾರನನ್ನಾಗಿಸಿ ಓದುಗನನ್ನು ದಿಗ್ಭ್ರಮೆಗೊಳಿಸುವ ಉಪಾಯ ಮಾಡಿದ್ದ. ವೈಯಕ್ತಿಕವಾಗಿ ಅವನಿಗಿದು ತೀರಾ ವ್ಯತಿರಿಕ್ತ ನಿರ್ಧಾರ. ಕಥೆ ಓದಿದ ಮೇಲೆ ಓದುಗನಿಗೊಂದು ಭರವಸೆ ಸಿಗಬೇಕೇ ಹೊರತು ಮತ್ತಷ್ಟು ಸಂಕಟಕ್ಕೀಡು ಮಾಡಬಾರದೆಂಬುದು ಅವನ ಅಭಿಪ್ರಾಯ. ಈ‌ ಬಾರಿ ಯಾರೋ  ಅವನನ್ನು ಟೀಕಿಸಿದರೆಂದು  ಬಲವಂತಪೂರ್ವಕವಾಗಿ  ತನ್ನ ಶೈಲಿ ಬದಲಿಸಲು ಪ್ರಯತ್ನ ಪಡುತ್ತಿದ್ದ.

ಮಹರ್ಷಿ ಬರೆಯುತ್ತಿದ್ದ ಕಥೆ ಅದಾಗಲೇ ಮುಗಿಯುವ ಹಂತಕ್ಕೆ ಬಂದಿತ್ತು. ಮೋಹನನಿಂದ ಶ್ರಾವಣಿಯ ಕೊಲೆ ಮಾಡಿಸಿದ ತಕ್ಷಣಕ್ಕೆ ಮುಗಿದು ಹೋದಂತೇ ಲೆಕ್ಕ. ಕೊಲೆ ಮಾಡಿಸಲು ಯಾವ ಮಾರ್ಗ ಹಿಡಿಯುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ, ಟಕ್ ಟಕ್ ಟಕ್ ಎಂದು ಯಾರೋ ಬಾಗಿಲು ಬಡಿದರು.

ಮಹರ್ಷಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಯಾರೋ ಮಧ್ಯ ವಯಸ್ಕ. ಸಾಕಷ್ಟು ಎತ್ತರವಾಗಿದ್ದ. ಎಲ್ಲೋ ನೋಡಿದ್ದೀನಿ ಎಂದು ಮಹರ್ಷಿಗೆ ಅನ್ನಿಸಿದರೂ ತಕ್ಷಣಕ್ಕೆ ಗೊತ್ತಾಗಲಿಲ್ಲ.

ಮಹೀ, ನೀನು ಮಾಡುತ್ತಿರುವುದು ಸರಿಯಲ್ಲ.. ಬಂದಾತ ಹೇಳಿದ.

ಮಹರ್ಷಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೇವಲ ಅವನ ಆಪ್ತೇಷ್ಟರಷ್ಟೇ ಅವನನ್ನು ಮಹೀ ಎಂದು ಕರೆಯುತ್ತಿದ್ದುದು. ಬಂದಾತನ ಗುರುತು ನೆನಪಾಗುತ್ತಿಲ್ಲ. ಮೇಲಾಗಿ, ತಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದೇ ಅವನಿಗೆ ಹೊಳೆಯಲಿಲ್ಲ.

ಏ..ಏನು ಮಾಡ್ತಿರೋದು ಸರಿಯಲ್ಲ? ನೀವ್ಯಾರು ಗೊತ್ತಾಗಲಿಲ್ಲ. ನಿಧಾನವಾಗಿ ಹೇಳಿದ.

ಯಾಕೆ ಮಹೀ, ಏನಾಯಿತು. ಗುರುತು ಸಿಗಲಿಲ್ವ?‌ನಾನು ಮೋಹನ.

ಬಾಗಿಲನ್ನು ಹಿಡಿದಿರಲಿಲ್ಲವೆಂದರೆ ಮಹರ್ಷಿ ಅಲ್ಲೇ ಬಿದ್ದುಬಿಡುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ನಿಶ್ಶಕ್ತಿ ಆವರಿಸಿಕೊಂಡಿತು. ಬಂದಾತನನ್ನು ಈಗ ಗುರುತು ಹಿಡಿದ.
ಮೋಹನ, ಮೋಹನ ಅಂದ್ರೆ... ಮಹರ್ಷಿ ತೊದಲಿದ.

ಹೌದು ಅದೇ ಮೋಹನ. ನಾನು ಕೊಲೆಗಾರ ಅಲ್ಲ ಮಹೀ. ದಯವಿಟ್ಟು ನನ್ನಿಂದ ಆ ಕೆಲಸ ಮಾಡಿಸಬೇಡ.

ಮಹರ್ಷಿಗೆ ತಲೆ ತಿರುಗುವುದೊಂದು ಬಾಕಿ. ಏನು ಹೇಳಬೇಕೆಂಬುದು ತಿಳಿಯದೆ ಅವನನ್ನು ಒಳಗೆ ಕರೆದು ಕೂರಿಸಿದ.

ನೀನು, ನೀ...ನೀವು ಇಲ್ಲಿಗೆ ಹೇಗೆ ಬಂದ್ರಿ? ಕೇಳಿದ

ನೀನು ಎಂದೇ ಹೇಳು. ಬೇರೆ ಏನು ಕರೆದರೂ ಅಸಹಜವಾಗಿರುತ್ತದೆ. ಮುಖ್ಯವಾಗಿ ನೀನೀಗ ಕೇಳಬೇಕಾಗಿರುವುದು ನಾನು ಹೇಗೆ ಬಂದೆ ಎನ್ನುವುದಲ್ಲ. ಯಾಕೆ ಬಂದೆ ಎನ್ನುವುದು. ಹೇಗೆ ಎನ್ನುವುದು ಸದ್ಯಕ್ಕೆ ಬೇಕಾಗಿಲ್ಲ. ಮೋಹನ ಹೇಳಿದ.

ಹಾಂ, ಹೌದು. ಯಾಕೆ ಬಂದೆ. ಮಹರ್ಷಿಗೆ ಇನ್ನೂ ಗೊಂದಲ.

ನಾನು ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು.

ಅಂದರೆ?

ಕೊಲೆ ಮಾಡುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಮಹೀ. ಅದೂ ನಾನು ಎತ್ತಿ ಆಡಿಸಿದ ಮಗುವನ್ನು? ನಿನಗೆ ಆ ರೀತಿ ಯೋಚಿಸಲು ಮನಸ್ಸಾದರೂ‌ ಹೇಗೆ ಬಂತು? ಆ ಕೆಲಸ ನನ್ನಿಂದ ಸಾಧ್ಯವಿಲ್ಲ. ಅವನ ಧ್ವನಿ ಭಾರವಾಗಿತ್ತು.

ಮಹರ್ಷಿಗೆ ಅವನ ದು:ಖ ನೋಡಿ ಸ್ವಲ್ಪ ಎಚ್ಚೆತ್ತಂತಾಯಿತು.
ನೀನೇನು ಹೇಳಬೇಕು ಅಂತಿದ್ದೀಯಾ? ಕೇಳಿದ.

ನೀನು ಬರೆಯುತ್ತಿರುವ ಕಥೆಯಲ್ಲಿ ಕೊಲೆ ಮಾಡಿಸಬೇಡ. ನಾನು ಮಾಡಲಾರೆ. ಮೋಹನ ಹೇಳಿದ.

ಇಷ್ಟು ಹೊತ್ತಿಗಾಗಲೇ, ಮಹರ್ಷಿಗೆ ಧೈರ್ಯ ಬಂದಿತ್ತು.
ಅದು ಹೇಗಾಗುತ್ತೆ?‌ಅದು ನನ್ನ ಕಥೆ. ನಾನು ಬರೆಯುತ್ತಿರುವುದು. ನಾನು ಎಣಿಸಿದಂತೆಯೇ ಇರಬೇಕು.

ಅದು ನನ್ನ ಕಥೆ ಕೂಡ ಮಹೀ. ಮೋಹನ ಹೇಳಿದ.

ನೀನು ಕೇವಲ ಪಾತ್ರ. ನೀನಿಲ್ಲಿಗೆ ಬಂದು ಈ ರೀತಿ ಮಾತನಾಡುತ್ತಿರುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಈ‌ ರೀತಿ! ಮಹರ್ಷಿ ಹೇಳುತ್ತಲೇ ಹೋದ.

ಇದು ನನ್ನ ವ್ಯಕ್ತಿತ್ವದ ಅಳಿವು ಉಳಿವಿನ ಪ್ರಶ್ನೆ ಮಹೀ. ನಾನು ಬರಲೇ ಬೇಕಿತ್ತು. ನಾಳೆ ಬೇರೆ ಯಾರಾದರೂ ನಿನ್ನ ಕಥೆ ಹೇಳುವಾಗ ನಿಜ ಹೇಳಲಿ ಎಂದು ನೀನು ಬಯಸುವುದಿಲ್ಲವೇನು? ಇಲ್ಲ ಸಲ್ಲದ ಅಪವಾದ ಮಾಡಿದರೆ, ಇಲ್ಲವೇ ನಿನ್ನ ಸ್ವಭಾವವನ್ನೇ ತಿರುಚಿ ಬರೆದರೆ  ಸುಮ್ಮನಿರುತ್ತೀಯಾ?

ಅದು ಸರಿ, ಆದರೆ ನೀನು ಇಲ್ಲಿ?

ಪದೇ ಪದೇ ಅದನ್ನೇ ಕೇಳಬೇಡ. ಈಗ ನಾನು ಹೇಳುವುದನ್ನು ನೀನು ಮಾಡ್ತೀಯೋ ಇಲ್ಲವೋ  ಅಷ್ಟು ಹೇಳು. ಮೋಹನನ  ಧ್ವನಿ ಗಡುಸಾಗಿತ್ತು.

ಮಹರ್ಷಿಗೆ ಸಿಟ್ಟು ಬಂತು. ಅವನು ಬರೆಯುತ್ತಿರುವ, ಅವನ ಕಥೆಯಲ್ಲಿನ ಪಾತ್ರ ಅವನಿಗೇ ಧಮಕಿ ಹಾಕುವುದನ್ನು ಅವನು ಸಹಿಸದಾದ.
ನೋಡು, ನಾನು ಹೇಳಿದಂತೆ ಮಾಡುವುದಷ್ಟೇ‌ ನಿನ್ನ ಕೆಲಸ. ನನ್ನ ಸೃಷ್ಟಿ ನೀನು. ನನಗೇ‌ ಬುದ್ಧಿ  ಹೇಳುವಷ್ಟು  ನಿನಗೆ ಅಧಿಕಾರವಿಲ್ಲ.

ಬೇಡ ಮಹೀ, ನನ್ನಿಂದ ಆ ಕೊಲೆ ಮಾಡಿಸಬೇಡ.

ನೀನು ಜೋರು ಮಾಡುತ್ತೀಯೋ, ಬೇಡುತ್ತೀಯೋ, ಏನೇ ಮಾಡಿದರೂ ನನ್ನ ಮನಸು ಬದಲಿಸಲಾರೆ. ನನ್ನ ಕಥೆ ಅದು. ನಾನು ಹೇಗೆ ಬರೆಯಬೇಕೆಂದು ನಿರ್ಧರಿಸಿದ್ದೀನೋ ಹಾಗೇ ಬರೆಯುವೆ. ಆ ಕೊಲೆ ಆಗೇ ತೀರಬೇಕು. ಅದೇ ನನ್ನ ನಿರ್ಧಾರ.

ಯಾವುದೇ ಕಾರಣಕ್ಕ್ಕೆ ನೀನು ಮನಸು ಬದಲಿಸಲಾರೆಯೇನು?

ಖಂಡಿತಾ ಸಾಧ್ಯವಿಲ್ಲ.

ಇನ್ನೊಮ್ಮೆ ಯೋಚನೆ ಮಾಡು.

ಪ್ರಶ್ನೆನೇ ಇಲ್ಲ. ಏನು ಹೆದರಿಸ್ತಾ ಇದ್ದೀಯಾ?

ಹಾಗೇ‌ ತಿಳಿದುಕೋ. ಆದರೆ ನಾನು ಆ ಕೊಲೆ ಮಾಡಲಾರೆ.

ನಾನೂ‌ ನೋಡೇ ಬಿಡ್ತೀನಿ.

ಬೇಡ ಮಹೀ.

ಇಲ್ಲಾ ಅಂದ್ರೆ ಏನು ಮಾಡ್ತೀಯಾ? ನಿನ್ನಿಂದ ಏನೂ‌ ಮಾಡ್ಲಿಕ್ಕೆ ಸಾಧ್ಯವಿಲ್ಲ. ನಾನು ಹೇಳಿದಂಗೆ ನೀನು ಕೇಳ್ಬೇಕು. ಈಗ ನೀನು ಇಲ್ಲಿಂದ ಹೊರಡು. ಅದೆಲ್ಲಿಂದ ಬಂದಿದೀಯೋ ಅಲ್ಲಿಗೇ ಹೋಗು. ಮಹರ್ಷಿ ಸಿಟ್ಟಿನಿಂದ ಕೂಗಿದ.

ಮೋಹನ ನಿಟ್ಟುಸಿರುಬಿಟ್ಟ. ಸರಿ ಮಹೀ. ಕೊನೆಗೂ ನನ್ನ ಕೊಲೆಗಾರನನ್ನಾಗಿಸಿ ಬಿಡ್ತೀಯ ಅಂದಾಯ್ತು. ಹಂ, ಆಗ್ಲಿ. ಆದ್ರೆ ಶ್ರಾವಣೀನ ಕೊಲೆ ಮಾಡುವಷ್ಟು  ನೀಚ ನಾನಿನ್ನೂ ಆಗಿಲ್ಲ. ಅದರ ಬದಲಿಗೆ ನಿನ್ನನ್ನೇ ಮುಗಿಸಿದರೆ ಒಂದು ಚಿಕ್ಕ ಹುಡುಗಿಯ ಪ್ರಾಣ ಉಳಿಸಿದ ತೃಪ್ತಿ ನನಗಿರುತ್ತದೆ.
ಮೋಹನ ಮುಂದೆ ಬಂದವನೇ, ಮಹರ್ಷಿಯ ಕತ್ತು ಹಿಸುಕತೊಡಗಿದ. ಮಹರ್ಷಿಯ ಕಣ್ಣು ಕತ್ತಲಾಗುತ್ತಾ ಬಂತು. ದಡಬಡಿಸಿ ಕೈ ಕಾಲು ಆಡಿಸಿದ. ಆಸರೆಗಾಗಿ ತಡಕಾಡಿದ. ಇದ್ದಕ್ಕಿದ್ದಂತೆ  ಬಿಗಿತ ಸಡಿಲಾದಂತಾಯಿತು. ಮಹರ್ಷಿ ಕಣ್ಣು ತೆರೆದ. ಯಾರೂ ಇರಲಿಲ್ಲ. ಅವನು ಬರೆಯುತ್ತಾ ಕುಳಿತಿದ್ದ ಟೇಬಲ್ ಚೆಲ್ಲಾಪಿಲ್ಲಿಯಾಗಿತ್ತು. ಮಹರ್ಷಿ ಇನ್ನೂ ಕುರ್ಚಿಯಲ್ಲಿ ಕುಳಿತಿದ್ದ.

ತಾನು ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗಲಿಕ್ಕೆ ಕೆಲ ಹೊತ್ತು ಬೇಕಾಯಿತು. ಮಹರ್ಷಿ ಇನ್ನೂ‌ ಬೆವರುತ್ತಲೇ ಇದ್ದ. ಮನಸ್ಸನ್ನು ತಹಬದಿಗೆ ತರಲು ಅವನಿಗೆ ಮತ್ತೂ ಸ್ವಲ್ಪ ಹೊತ್ತೇ ಹಿಡಿಯಿತು. ಸ್ವಲ್ಪ ಸಮಾಧಾನವಾದ ಮೇಲೆ, ಕುರ್ಚಿಯಿಂದೆದ್ದು , ಕನಸಲ್ಲಿ ಬೆಚ್ಚಿಬಿದ್ದ ರಭಸಕ್ಕೆ ಹಾರಿ ಹೋಗಿದ್ದ ಹಾಳೆಗಳನ್ನೆಲ್ಲಾ ತಂದು ಮೇಜಿನ ಮೇಲೆ ಜೋಡಿಸಿದ. ಅವನಿಗೆ ತನ್ನ ಮೇಲೇ ನಗು ಬಂತು. ಕಥೆಯೊಳಗಿನ ಪಾತ್ರ ತನ್ನ ಕೊಲೆ ಮಾಡಿದಂತೆ? ಸಣ್ಣಗೆ ನಕ್ಕ. ಸರಿ, ದಣಿವಾರಿದ್ದರಿಂದ ಕಥೆ ಮುಂದುವರೆಸೋಣವೆಂದು  ಮಹರ್ಷಿ ಮತ್ತೆ ಬರೆಯಲು ಕುಳಿತ.

ಆಗ, ಟಕ್ ಟಕ್ ಟಕ್ ಎಂದು ಬಾಗಿಲು ಬಡಿದ ಸದ್ದಾಯಿತು.

Saturday, September 4, 2010

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನಿದ್ದು ಬಿಟ್ಟರೆ (ಆಸ್ಪತ್ರೆಯಲ್ಲಿದ್ದು ಬಂದಂತೆ), ಮತ್ತೆ ಮೊದಲಿನ ವೇಗಕ್ಕೆ ಮರಳಲು ಕೆಲ ಸಮಯ ಬೇಕಾಗುತ್ತದೆ. ಅದು ಮನಸ್ಸಿಗೂ ಅನ್ವಯಿಸುತ್ತದೆ ಅಂತ ಈಗ ಗೊತ್ತಾಗಿದೆ. ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಇಷ್ಟು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ, ಆಫೀಸು-ಮನೆ ಅಂತ ಸುತ್ತಾಡುತ್ತಿದವನು ದಿಢೀರ್ ಆಗಿ ಪುಸ್ತಕ ಪೆನ್ನು ಎತ್ತಿಕೊಂಡರೆ, ಅಯ್ಯೋ ಊಹೂಂ ಏನೂ ಹೊಳೆಯುತ್ತಿಲ್ಲ. ಅರ್ಧ ಬರೆದ ಕತೆಗಳು ನನ್ನೆಡೆಗೆ ದೈನೇಸಿ ನೋಟ ಬೀರುತ್ತಿದ್ದರೆ, ನಾನು ಮುಖ ಮುಚ್ಚಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸುತ್ತಾಡುತ್ತಿದ್ದಾಗ, ಸಿನಿಮಾ ನೋಡುತ್ತಿದ್ದಾಗ ಅಥವಾ ಏನಾದರೂ ಮಾಡುತ್ತಿದ್ದಾಗ ಒಂದಿಷ್ಟು ಯೋಚನೆಗಳು ಮೂಡುತ್ತಿದ್ದವು. ರಾತ್ರಿ ಬರೆಯೋಣವೆಂದು ಕುಳಿತರೆ, ಅಷ್ಟೊತ್ತಿಗಾಗಲೇ ಆ ಭಾವ ತೀವ್ರತೆ ಇರುತ್ತಿರಲಿಲ್ಲ. ಹೀಗೇ ಆದರೆ ಸರಿಯಿಲ್ಲ, ಏನಾದರೂ ಬರೆಯಲೇಬೇಕು ಅಂತ ನಿರ್ಧಾರ ಮಾಡಿ ಕುಳಿತಾಗ ಹೊಳೆದದ್ದೇ ಈ ಲೇಖನ.

ನನಗೆ ಮೊದಲಿನಿಂದಲೂ ಓದುವ ಗೀಳು. ನಾವು ಕೆಲವು ಗೆಳೆಯರು ಸೇರಿಕೊಂಡಾಗ ಬರೀ ಪುಸ್ತಕಗಳ ಬಗ್ಗೆಯೇ ಚರ್ಚೆ ಮಾಡುತ್ತಿರುತ್ತೇವೆ. ಒಂದು ಹೊಸ ಪುಸ್ತಕ, ಇಲ್ಲವೇ ಎಲ್ಲರೂ ಓದಿರುವ ಪುಸ್ತಕಕ್ಕೆ ಒಂದು ಹೊಸ ನೋಟ, ಇತ್ಯಾದಿ ಮಾತನಾಡಲು ತುಂಬ ಖುಶಿಯಾಗುತ್ತೆ. ಅದನ್ನೇ ಇಲ್ಲಿಯೂ ಮಾಡುವ ಪ್ರಯತ್ನ ಮಾಡಿದ್ದೇನೆ. ಒಂದಿಷ್ಟು ಪುಸ್ತಕಗಳನ್ನು ಓದಿದಾಗ ನನಗಾದ ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುವ ಬಯಕೆಯಿದೆ. ಸ್ವಂತವಾಗಿಯಾದರೆ ಏನಾದರೂ ಬರೆಯಬಹುದು. ಆದರೆ, ಪರಿಚಯ? ಉಹುಂ, ನನಗಿನ್ನೂ ಬರುವುದಿಲ್ಲ. ನನ್ನ ಮೊದಲ ಪ್ರಯತ್ನವಿದು. ನಿಮಗಿಷ್ಟವಾದಲ್ಲಿ ಮುಂದಿನದ್ದು ಯೋಚಿಸಿದರಾಯಿತು.


ಧರ್ಮ, ದೇವರು, ಭಕ್ತಿ, ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಮೇಲೆ, ಕಾಲಾಂತರದಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. ಪರ ವಿರೋಧ ಎಂದಿಗೂ ಇದ್ದಿದ್ದೇ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಯೋಚನೆಗಳನ್ನು ಚರ್ಚಿಸುವ ಹಕ್ಕು, ಸ್ವಾತಂತ್ರ್ಯ ಇದ್ದೇ ಇದೆ. ವೈಯಕ್ತಿಕವಾಗಿ ಏನು ಮಾಡಿದರೂ ಚೆನ್ನವೇ. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಲು ಪ್ರಯತ್ನಿಸಿದಾಗಲೇ ತೊಂದರೆ ಶುರುವಾಗುವುದು.

ದೇವರೆಂಬ ಕಲ್ಪನೆ(!), ಮನುಷ್ಯನ ನೆನಪು ಎಲ್ಲಿಯವರೆಗೆ ಹೋಗುವುದೋ ಅಲ್ಲಿಯವರೆಗೆ ಸಾಗುತ್ತದೆ. ದೇವರು ಕಲ್ಪನೆಯೋ, ಸಾಧ್ಯತೆಯೋ ನಾನು ಚರ್ಚಿಸಲು ಹೋಗುವುದಿಲ್ಲ. ಕನ್ನಡದಲ್ಲಿ ಅನೇಕ ಹಿರಿಯರು ಇದೇ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕಾರಂತರ ಮೂಕಜ್ಜಿ ಹೇಳುವ ದೇವರು ಎಷ್ಟು ಆಸಕ್ತಿಕರವಾಗಿದೆಯೋ, ಮೂರ್ತಿರಾಯರ ದೇವರೂ ಸಹ ಅಷ್ಟೇ ಚೆನ್ನಾಗಿದೆ. ಈ ಲೇಖನದ ಉದ್ದೇಶ ದೇವರಲ್ಲ. ಆದರೆ, ದೇವರೆಂಬ ಕಲ್ಪನೆ ಮತ್ತು ನಂಬಿಕೆಗಳ ಸುತ್ತ ಹೆಣೆದಿರುವ ಒಂದು ಪುಸ್ತಕ ಸರಣಿಯೊಂದರ ಪರಿಚಯ ಮಾಡಿಸುವ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ.

ನೀವು ಭೈರಪ್ಪನವರ ಪರ್ವ ಓದಿದ್ದಲ್ಲಿ, ಈ ರೀತಿಯ ಪ್ರಯತ್ನವನ್ನು ಖಂಡಿತಾ ಪ್ರಶಂಸಿಸುತ್ತೀರಿ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು, ಆದರೆ ಅಷ್ಟು ವಿಭಿನ್ನವಾಗಿ ಯೋಚಿಸುವುದು ನಿಜಕ್ಕೂ ಅಭಿನಂದನಾರ್ಹ.

Philip Pullman ಬರೆದಿರುವ "His Dark Materials" - trilogy ಈ‌ ಲೇಖನದ ಉದ್ದೇಶ.

ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಈ ಕಥಾ ಸರಣಿ, ಮೂರು ಪುಸ್ತಕಗಳಲ್ಲಿ , ಅತ್ಯಂತ ವಿವಾದಕ್ಕೀಡಾದ, ಚರ್ಚೆಗೊಳಗಾದ ಕಥೆ ಹೇಳುತ್ತದೆ. ( Northern Lights, Subtle Knife, Amber Spyglass ). ಈ ಸರಣಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ಕಥೆ ಪ್ರಾರಂಭಿಸುವ ಮುನ್ನ ಲೇಖಕ ಈ ಕೆಳಗಿನ ಪದ್ಯ ಉಲ್ಲೇಖಿಸುತ್ತಾನೆ. ಇಲ್ಲಿಂದಲೇ ಸರಣಿಯ ಹೆಸರನ್ನೂ ಎರವಲು ಪಡೆದಿದ್ದಾನೆ. ಮಿಲ್ಟನ್ ನ ಪುಸ್ತಕದ ಪ್ರಭಾವ, ಲೇಖಕನೇ ಒಪ್ಪಿಕೊಂಡಂತೆ, ಗಾಢವಾಗಿದೆ.

Into this wild abyss,
The womb of nature and perhaps her grave,
Of neither sea, nor shore, nor air, nor fire,
But all these in their pregnant causes mixed
Confusedly, and which thus must ever fight,
Unless the almighty maker them ordain
His dark materials to create more worlds,
Into this wild abyss the wary fiend
Stood on the brink of hell and looked a while,
Pondering his voyage...
John Milton: Paradise Lost, Book II

ದೇವರು, ವಿಜ್ಞಾನ ಮತ್ತು ಕಲ್ಪನೆಯನ್ನು ಈ ಸರಣಿಯಲ್ಲಿ ಎಷ್ಟು ಸುಂದರವಾಗಿ ಹೆಣೆಯಲಾಗಿದೆಯೆಂದರೆ, ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸದೆ ಕೆಳಗಿಡಲು ಮನಸ್ಸಾಗುವುದಿಲ್ಲ.ಒಂದು ಅದ್ಭುತ ಕಥೆಯಾಗಿಯೂ, ಧರ್ಮ ವಿರೋಧಿಯಾಗಿಯೂ ಎದ್ದು ನಿಲ್ಲುವುದು ಈ ಪುಸ್ತಕಗಳ ವಿಶೇಷ.

ಕೇವಲ ಕಥೆಯಾಗಿ ಓದುವುದಾದರೆ, ಒಂದು ಅದ್ಭುತ ಲೋಕವನ್ನು ಲೇಖಕ ಬಿಚ್ಚಿಡುತ್ತಾನೆ. ಆ ಲೋಕದಲ್ಲಿ, ಕೇವಲ ರವಿಯಿಲ್ಲ, ಭುವಿಯಿಲ್ಲ. ಬದಲಿಗೆ ಅನೇಕಾನೇಕ ಭುವಿಗಳಿವೆ. ಒಂದು ಸುಂದರ ಸಮಾನಾಂತರ ಜಗತ್ತುಗಳ ಕಲ್ಪನೆಯಿದೆ. ಅಲ್ಲಿ ಒಂದು ವಿಶ್ವದಿಂದ ಮತ್ತೊಂದು ವಿಶ್ವಕ್ಕೆ ಹೋಗಬಹುದು. ನಿಮ್ಮ ಆತ್ಮದ ಜೊತೆ ಮಾತನಾಡಬಹುದು. ಖುದ್ದು ಭಗವಂತನಿಗೇ ಯುದ್ಧಕ್ಕೆ ಆಹ್ವಾನ ನೀಡಬಹುದು!

ತುಂಬ ಕುತೂಹಲಕಾರಿಯಾಗಿ ಬರೆದಿರುವ ಈ ಸರಣಿಯನ್ನು ಸಿನಿಮಾ ಮಾಡುವ ಪ್ರಯತ್ನ ಕೂಡ ನಡೆಯಿತು. Golden Compass ಎನ್ನುವ ಹೆಸರಲ್ಲಿ ಬಿಡುಗಡೆಯಾದ ಚಿತ್ರ, ಈ ಸರಣಿಯಲ್ಲಿ ಮೊದಲ ಭಾಗದ ಕಥೆಯನ್ನು ಮಾತ್ರ ಹೇಳುತ್ತದೆ. ಚಿತ್ರ ಬಿಡುಗಡೆಯಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಒಬ್ಬ ಹನ್ನೆರಡು ವರ್ಷದ ಹುಡುಗಿಯ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ಅನೇಕ ಅನೂಹ್ಯ ಕಲ್ಪನಾ ಪ್ರಯೋಗಗಳಿವೆ. ಮೊದಲಿಗೆ , ಲೇಖಕ, Daemon ಎನ್ನುವ ಹೊಸ ಕಲ್ಪನೆ ತೇಲಿ ಬಿಡುತ್ತಾನೆ. ನಿಮ್ಮ ಆತ್ಮದಿಂದ ಒಂದು ಭಾಗವನ್ನು ತೆಗೆದು ಅದಕ್ಕೊಂದು ರೂಪ ಕೊಟ್ಟರೆ, ಅದು Daemon. ನೀವು ಮತ್ತು ನಿಮ್ಮ Daemon ಒಬ್ಬರನ್ನೊಬ್ಬರು ಬಿಟ್ಟು ದೂರ ಹೋಗಲು ಸಾಧ್ಯವಿಲ್ಲ. Daemonಗಳ ರೂಪ ಕೂಡ ವಿಶಿಷ್ಟ. ಚಿಕ್ಕ ಮಕ್ಕಳ Daemonಗಳು ಯಾವ ವೇಷ ಬೇಕಾದರೂ ಧರಿಸಬಹುದು. ( ಬೆಕ್ಕು, ಗಿಳಿ, ನಾಯಿ ಇತ್ಯಾದಿ ). ದೊಡ್ಡವರ Daemonಗಳು ಒಂದೇ ರೂಪದಲ್ಲಿ ಸ್ಥಿರಗೊಂಡಿರುತ್ತವೆ. Daemonಗಳು ವ್ಯಕ್ತಿಗಳ ಸ್ವಭಾವಕ್ಕ್ಕೆ ತಕ್ಕಂತೆ ಇರುತ್ತವಾದ್ದರಿಂದ, ಸೇವಕರ Daemonಗಳು ಸಾಮಾನ್ಯವಾಗಿ ನಾಯಿಗಳಾಗಿರುತ್ತವೆ. ಸೈನಿಕರಿಗೆ ತೋಳ, ಹುಲಿ Daemonಗಳು. ನೀಚ ಬುದ್ಧಿಯವರಿಗೆ ಹಾವು ಇತ್ಯಾದಿ. ಅದೆಷ್ಟು ವಿಚಿತ್ರ ಈ ಕಲ್ಪನೆ!

ನಂತರ ಲೇಖಕ ಬೇರೆ ಬೇರೆ ವಿಶ್ವಗಳ ಬಗ್ಗೆ ಹೇಳುತ್ತಾನೆ. ವಿಜ್ಞಾನ ಹೇಳುತ್ತಾ ಬಂದಿರುವಂತೆ, ಈ ಬ್ರಹ್ಮಾಂಡದಲ್ಲಿ ನಮ್ಮದಷ್ಟೇ ಅಲ್ಲ, ಅನೇಕ ಭುವಿಗಳಿವೆ. ಅಲ್ಲಿಯೂ ಜೀವ ವಿಕಸನವಾಗಿದೆ. ಇಲ್ಲಿಯವರೆಗೂ ಸರಿ, ಎಲ್ಲರೂ ಒಪ್ಪುವಂಥದ್ದೇ. ಅಲ್ಲಿಂದ ಮುಂದೆ ಲೇಖಕ Quantum Physicsಗೆ ಸಾಗುತ್ತಾನೆ. ಸಮಾನಾಂತರ ಜಗತ್ತು ಬಿಚ್ಚಿಕೊಳ್ಳುತ್ತದೆ. ವಿಚಾರ ಮಾಡಿ, ಎರಡು ವಿಶ್ವಗಳು ಒಟ್ಟೊಟ್ಟಿಗೇ ವಿಕಸನಗೊಳ್ಳುತ್ತವೆ. ಎರಡೂ ಕಡೆ ಒಂದೇ ರೀತಿಯ ಜೀವ ಸಂಕುಲ. ನೀವು ಇಲ್ಲಿ ಇದ್ದಲ್ಲಿ, ಆ ವಿಶ್ವದಲ್ಲಿಯೂ ಇರಬಹುದು. ಆದರೆ ಇಲ್ಲಿ ಆದದ್ದೆಲ್ಲಾ ಅಲ್ಲಿಯೂ ಆಗಬೇಕೆಂದೇನಿಲ್ಲ. ಅವೆರಡೂ ಸಮಾನಾಂತರ ವಿಶ್ವಗಳಷ್ಟೇ (parallel universe).

ಈಗ ಸಮಾನಾಂತರ ಅಥವಾ ಅನೇಕ ವಿಶ್ವಗಳಿದ್ದಲ್ಲಿ, ಒಂದರಿಂದ ಮತ್ತೊಂದಕ್ಕೆ, ಅಥವಾ ಎಲ್ಲಾ ವಿಶ್ವಗಳಿಗೂ ಹೋಗಿ ಬರುವ ಅವಕಾಶವಿಲ್ಲದಿದ್ದಲ್ಲಿ ಕಥೆ ಕುತೂಹಲಕಾರಿಯಾಗಿರುವುದಿಲ್ಲ. ಹಾಗಾಗಿ, ಅದನ್ನು ಸಾಧಿಸಲು ಲೇಖಕ ಚಾಕುವೊಂದನ್ನು ಸೃಷ್ಟಿಸುತ್ತಾನೆ. ಈ ಚಾಕುವಿನ ಅಲಗು ಬರಿಗಣ್ಣಲ್ಲಿ ನೋಡಲಾಗದಷ್ಟು ಹರಿತ. ಅದು ಎಷ್ಟು ಶಕ್ತಿಶಾಲಿಯೆಂದರೆ, ಅದು ಯಾವ ವಸ್ತುವನ್ನು ಬೇಕಾದರೂ ತುಂಡು ಮಾಡೀತು. ಅದನ್ನು ಉಪಯೋಗಿಸಿ ವಿಶ್ವಗಳನ್ನು ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಕೂಡ ಸೀಳಬಹುದು.

ಮನುಷ್ಯ ಮಾತ್ರನಿಗೆ ಈ‌ ಅನೇಕ ವಿಶ್ವಗಳ ಬಗೆಗೆ ಕಲ್ಪನೆ ಬಂದದ್ದಾದರೂ ಹೇಗೆ? ಅವನು ಬೌದ್ಧಿಕವಾಗಿ ಇಷ್ಟು ಬೆಳವಣಿಗೆ ಹೊಂದಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕ ಮತ್ತೊಂದು ಹೊಸ ವಿಚಾರವನ್ನು ಹೇಳುತ್ತಾನೆ. ಅವನ ಪ್ರಕಾರ ಇದಕ್ಕೆಲ್ಲಾ ಕಾರಣ Dust! ಹೌದು Dust ಅಥವಾ ಆಡು ಭಾಷೆಯಲ್ಲಿ ಹೇಳುವುದಾದರೆ , ಧೂಳು ಇದಕ್ಕೆಲ್ಲಾ ಕಾರಣ. ಆದರೆ Dust ಎಂದರೆ ಸಾಧಾರಣ ಧೂಳಿನ ಕಣಗಳಲ್ಲ. ಅವು ಪ್ರಜ್ಞೆ . ಅವೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ. ಭೌತಶಾಸ್ತ್ರ ಹೇಳುವಂತೆ, neutron, proton, electronಗಳ ತರಹ Dust ಕೂಡ ಒಂದು ಪರಮಾಣು ಕಣ. ಈಗ ಈ‌ ಕಣಗಳಿಗೆ ಪ್ರಜ್ಞೆ ಇದ್ದಲ್ಲಿ, ಅವಕ್ಕೆ ತಮ್ಮದೇ ಆದ ಇಚ್ಛೆ ಇದ್ದಲ್ಲಿ, ಉದ್ದೇಶವಿದ್ದಲ್ಲಿ! ಲೇಖಕ ಅವುಗಳಿಗೆ Dust ಅಥವಾ Dark Matter ಎಂದು ಕರೆಯುತ್ತಾನೆ. ಅವುಗಳಿಗೆ ತಮ್ಮದೇ ಆದ ಉದ್ದೇಶವಿದ್ದಿದ್ದರಿಂದ ಅವು ಮನುಷ್ಯನ ಬೆಳವಣಿಗೆಗೆ ಸಹಕರಿಸಿದವು. ಬೇರೆ ಇನ್ಯಾವುದೋ ವಿಶ್ವದಲ್ಲಿ, ಅವುಗಳ ಅನುಕೂಲಕ್ಕೆ ತಕ್ಕಂತೆ ಮತ್ತೆ ಬೇರೆ ಯಾವ ಪ್ರಾಣಿಗೋ ಅವು ಸಹಕರಿಸಿದ್ದಾವು!

ಮಕ್ಕಳೊಂದಿಗೆ Dustನ ನಂಟು ಸ್ವಲ್ಪ ಕಡಿಮೆ. ಹಾಗಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಕಡಿಮೆ. ಅವುಗಳ ವ್ಯಕ್ತಿತ್ವ ಇನ್ನೂ ಪರಿಪೂರ್ಣವಾಗಿ ರೂಪುಗೊಂಡಿಲ್ಲವಾದ್ದರಿಂದ ಮಕ್ಕಳ daemonಗಳಿಗೆ ಒಂದು ಸ್ಥಿರವಾದ ರೂಪವಿಲ್ಲ ! ಹರೆಯಕ್ಕೆ ಬರುತ್ತಿದ್ದಂತೆ, Dustನ ಸಾಂದ್ರತೆ ಹೆಚ್ಚಾಗುವುದರಿಂದ, ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸ್ಪಷ್ಟವಾಗುತ್ತದೆ. Daemonಗಳೂ ಒಂದು ರೂಪದಲ್ಲಿ ಸ್ಥಿರವಾಗುತ್ತವೆ.

ಇಷ್ಟೆಲ್ಲಾ ಅನೂಹ್ಯ ಸಂಗತಿಗಳನ್ನು ಹೇಳುತ್ತಾ ಹೋಗುವ ಲೇಖಕ, ಕಥೆಯನ್ನು ಇನ್ನೂ ಕುತೂಹಲಕಾರಿಯನ್ನಾಗಿಸಲು, ಇಡೀ ಬ್ರಹ್ಮಾಂಡಕ್ಕೇ ಆಪತ್ತನ್ನು ತಂದಿಡುತ್ತಾನೆ, ಚಾಕುವಿನಿಂದ.ವಿಷಯವೇನೆಂದರೆ, ವಿಶ್ವದಿಂದ ವಿಶ್ವಕ್ಕೆ ಹೋಗಲು ಚಾಕುವಿನಿಂದ ಕನ್ನ ಕೊರೆದ ಮೇಲೆ, ಅದನ್ನು ಮುಚ್ಚದಿದ್ದಲ್ಲಿ, Dust ಪಾತಾಳಕ್ಕೆ ಸೋರಿಹೋಗುತ್ತದಂತೆ. ಹಾಗೂ ಪ್ರತಿ ಬಾರಿ ಕನ್ನ ಕೊರೆದಾಗ ಪಾತಾಳದಿಂದ ಒಂದು ದುಷ್ಟ ಕಣದ ಸೃಷ್ಟಿಯಾಗುತ್ತದಂತೆ. ಮತ್ತೆ ಆ ದುಷ್ಟ ಕಣದ ಆಹಾರವೇ ಸಮಸ್ತ ಲೋಕದ ಅಭ್ಯುದಯಕ್ಕೆ ಕಾರಣವಾದ Dust. ಹೀಗಾಗಿ, ಸೋರಿ ಹೋಗುತ್ತಿರುವ Dust ಉಳಿಸುವ ಮತ್ತು ಪಾತಾಳ ಲೋಕದ ದುಷ್ಟ ಕಣಗಳನ್ನು ನಾಶ ಮಾಡುವ ಜವಾಬ್ದಾರಿ, ನಮ್ಮ ಕಥಾನಾಯಕಿ, ಹನ್ನೆರಡು ವರ್ಷದ ಪೋರಿಯ ಮೇಲೆ ಬೀಳುತ್ತದೆ. ಇನ್ನೂ ಮಜವಾದ ಸಂಗತಿಯೆಂದರೆ, ಆಕೆ ತನಗರಿವಿಲ್ಲದಂತೆಯೇ ಈ ಕಾರ್ಯ ಮಾಡಿ ಮುಗಿಸಬೇಕು. ಆಕೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಆಕೆಗೆ ಏನು ಮಾಡಬೇಕೆಂದು ಹೇಳಿದರೆ, ಭವಿಷ್ಯವೇ ಬದಲಾಗಬಹುದು. ಹೀಗಾಗಿ, ವಿಷಯ ಗೊತ್ತಿದ್ದವರು ಆಕೆಗೆ ಏನೂ ಹೇಳುವಂತಿಲ್ಲ, ಆದರೆ ಆಕೆಗೆ ಖುದ್ದು ವಿಷಯವೇ ಗೊತ್ತಿಲ್ಲ. In her ignorance lies the fate of the world!

ಸರಣಿಯ ಮೂರನೆಯ ಪುಸ್ತಕದಲ್ಲಿ, ಲೇಖಕ, ಅತ್ಯಂತ ಚರ್ಚೆಗೊಳಗಾದ ಭಗವಂತನ ಕುರಿತಾದ ತನ್ನ ಕಲ್ಪನೆಯನ್ನು ಹಂಚಿಕೊಳ್ಳುತ್ತಾನೆ. ಅವನ ಪ್ರಕಾರ, ಅನೇಕಾನೇಕ ವಿಶ್ವಗಳಿದ್ದಂತೆ, ನಮ್ಮ ಭೂಮಿಯಿದ್ದಂತೆ, ಸ್ವರ್ಗ (heaven) ಕೂಡ ಒಂದು ಲೋಕ. ಅಲ್ಲಿ ದೇವತೆಗಳು (Angel) ಇರುತ್ತಾರೆ. ಅದಕ್ಕೆ ಸರಿಯಾಗಿ ನರಕ ಸಹ ಮತ್ತೊಂದು ಲೋಕ. ಲೇಖಕ ಅದನ್ನು ಸತ್ತವರ ಲೋಕವೆಂದು ಕರೆಯುತ್ತಾನೆ.

ಲೇಖಕ ಹೇಳುವಂತೆ, ಜೀವ ವಿಕಸನದ ಪ್ರಕ್ರಿಯೆಯಲ್ಲಿ, ಭಗವಂತ (Authority) ಮೊದಲಿಗೆ ಜನಿಸಿದ. ಆ ನಂತರ ಹುಟ್ಟಿದವರಿಗೆ ಅವನೇ ಅವರನ್ನೆಲ್ಲ ಸೃಷ್ಟಿಸಿದ್ದೆಂದು ಸುಳ್ಳು ಹೇಳಿದ. ದೇವ, ದೇವತೆಗಳೆಂದರೆ, ಜೀವ ವೈವಿಧ್ಯತೆಯಲ್ಲಿ ಒಂದು ಬಗೆ. ಮನುಷ್ಯ, ಪ್ರಾಣಿ, ಪಕ್ಷಿಗಳಂತೆ ದೇವತೆಗಳೂ ಒಂದು ಬಗೆಯ ಜೀವಿ. Angels are one of those creatures which have evolved in some world, and Authority is just another angel. But he happens to be the first one to evolve.

ದೇವತೆಗಳಿಗೆ ದೇಹವಿಲ್ಲ. ಅವರ ಶರೀರ ಸಂಪೂರ್ಣವಾಗಿ Dustನಿಂದ ಕೂಡಿದೆ. ಕೇವಲ ಕಣಗಳಿಂದ ಮಾಡಲ್ಪಟ್ಟಿರುವುದರಿಂದ ಅವರಿಗೆ ದೇಹವಿಲ್ಲ. ಹಾಗಾಗಿ, ದೈಹಿಕವಾಗಿ ಅವರು ಮಾನವರಿಗಿಂತ ದುರ್ಬಲರು. ಅವರಲ್ಲಿ ಕೆಲವರು ದೇವತೆಗಳಾಗಿಯೇ ಜನಿಸುತ್ತಾರೆ. ಇನ್ನು ಕೆಲವು ಮಾನವರು ದೇವತೆಗಳ ಸಹಾಯದಿಂದ ಸತ್ತ ಮೇಲೆ ದೇವತೆಗಳಾಗುತ್ತಾರೆ.

ಇನ್ನು ಸಾವು! ಸಾವಿನ ಕಲ್ಪನೆ ಕೂಡ ಸೊಗಸಾಗಿದೆ. ಸಾವು ಸದಾ ನಮ್ಮೊಡನೆಯೇ ಇರುತ್ತದಂತೆ. ಪ್ರತಿಯೊಬ್ಬರಿಗೂ ಅವರದೇ ಆದ ಸಾವು ಇರುತ್ತದೆ. ಆದರೆ, ಸಾವನ್ನು ನೋಡಲು ಸಾಮಾನ್ಯವಾಗಿ ಯಾರೂ ಇಷ್ಟ ಪಡದ ಕಾರಣ, ಅದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುತ್ತದೆ. ಸಾವಿನೊಂದಿಗೆ ಮನಸಾರೆ ಸ್ನೇಹ ಬಯಸಿದಲ್ಲಿ, ಸಾವಿನ ಸಾಂಗತ್ಯದಲ್ಲಿಯೇ ಬದುಕಬಹುದು. ಕೊನೆಗೆ , ಸಮಯ ಬಂದಾಗ ಸತ್ತವರ ಲೋಕಕ್ಕೆ ಕರೆದೊಯ್ಯಲು ಸಾವು ಸಹಾಯ ಮಾಡುತ್ತದೆ. ಕೇವಲ ಸಾವಿಗೆ ಮಾತ್ರ ಅಲ್ಲಿಗೆ ಹೋಗುವ ದಾರಿ ತಿಳಿದಿರುತ್ತದೆ. ಅಲ್ಲಿಗೆ ಕರೆದೊಯ್ದು ಬಿಟ್ಟ ಮೇಲೆ ಅದರ ಕರ್ತವ್ಯ ಮುಗಿಯುತ್ತದೆ.

ಕಥೆಯ ಕೊನೆಯ ಭಾಗ ರೋಚಕವಾಗಿದೆ. ಭಗವಂತನಿಗೀಗ ವಯಸ್ಸಾಗಿದೆ. ಈಗ ಆತ ಹೊರಗೆಲ್ಲೂ ಬರುವುದಿಲ್ಲ. ಆತನಿಗೊಬ್ಬ ಸೇನಾಧಿಕಾರಿಯಿದ್ದಾನೆ. ಭಗವಂತನಿಗೀಗ ವಯಸ್ಸಾಗಿರುವುದರಿಂದ ಸೇನಾಧಿಕಾರಿಯೇ ಎಲ್ಲ ಕಾರ್ಯಕಲಾಪಗಳನ್ನು ನೋಡಿಕೊಳ್ಳುತ್ತಾನೆ. ಬ್ರಹ್ಮಾಂಡದಲ್ಲಿನ ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳು ಅತ್ಯಂತ ಸ್ವತಂತ್ರರಾಗಿದ್ದಾರೆಂದು ಭಗವಂತನಿಗೆ ಅನಿಸಿದೆ. ಅವನು ಮತ್ತೆ ಸೇನಾಧಿಕಾರಿ ಸೇರಿ ಈ ಬಗ್ಗೆ ಮೊದಲೇ ವಿಚಾರ ಮಾಡಿದ್ದರಿಂದ, ಸೇನಾಧಿಕಾರಿ ಎಲ್ಲ ವಿಶ್ವಗಳ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ ಮಾನವನೊಬ್ಬ ಸಿಡಿದೇಳುತ್ತಾನೆ. ಬ್ರಹ್ಮಾಂಡದೆಲ್ಲೆಡೆಯಿಂದ ಅವನಿಗೆ ಸಹಾಯ ಹರಿದು ಬರುತ್ತದೆ. ಈ ದೇವ-ಮಾನವ ಯುದ್ಧವನ್ನು ಪುಸ್ತಕದಲ್ಲಿ ಓದುವುದೇ ಒಂದು ಮುದ.

ಕಥೆಯ ಕೊನೆಯ ಹಂತದಲ್ಲಿ ಲೇಖಕ Butterfly Effect ಎಂಬ ಮತ್ತೊಂದು ಭೌತಶಾಸ್ತ್ರದ ಎಳೆಯೊಂದನ್ನು ತಂದು ಮುಕ್ತಾಯಗೊಳಿಸುತ್ತಾನೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಯಾವುದೇ ಅತಿ ಚಿಕ್ಕ ಘಟನೆ ಕಾಲಾಂತರದಲ್ಲಿ ಅತ್ಯಂತ ದೊಡ್ಡ ಘಟನೆಗೆ ಕಾರಣವಾಗುತ್ತದೆ. ಈ ಸಿದ್ಧಾಂತ ಎಷ್ಟು ವಿಚಿತ್ರವಾದ ವಿಷಯಗಳನ್ನು ಹೇಳುತ್ತದೆಯೆಂದರೆ, ಬೆಂಗಳೂರಲ್ಲಿ ಇವತ್ತು ಚಿಟ್ಟೆಯೊಂದು ರೆಕ್ಕೆ ಬಡಿದರೆ ಮುಂದೆ ಯಾವತ್ತೋ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವೇಳುತ್ತದೆಯಂತೆ!

ಕಥಾನಾಯಕಿ, ಕಥೆ ಮುಗಿಯುವ ಹಂತಕ್ಕೆ ಬಂದಾಗ ಹರೆಯಕ್ಕೆ ಬರುತ್ತಾಳೆ. ಗೆಳೆಯನೊಂದಿಗೆ ಪ್ರೇಮಾಂಕುರವಾಗುವುದರೊಂದಿಗೆ (Original sin ?) ಜಗತ್ತಿಗೆ ಬಂದಿದ್ದ ಗಂಡಾಂತರ ತೊಲಗುತ್ತದೆ. ಯಾವುದೇ ನದಿಯ ಹರಿವನ್ನು ಬದಲಿಸಲು, ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಒಂದೇ ಒಂದು ಚಿಕ್ಕ ಕಲ್ಲನ್ನಿಟ್ಟರೆ ಸಾಕೋ, ಅದೇ ರೀತಿ, ಕಥಾನಾಯಕಿಯ ಪ್ರೇಮಪ್ರಸಂಗ ಬ್ರಹ್ಮಾಂಡದ ಚಲನೆಯನ್ನೇ ಬದಲಿಸುತ್ತದೆ.


ಕೊ: ಇದೇ ಲೇಖಕನ ಇನ್ನೊಂದು ಕೃತಿ "Good Man Jesus and the Scoundrel Christ" ಇತ್ತೀಚಿಗೆ ಬಿಡುಗಡೆಯಾಗಿದೆ. ಒಂದು ಅಧ್ಯಾಯ ಇಲ್ಲಿದೆ.