Monday, November 16, 2009

ಭವ ಬಂಧನದೊಳೂ ಸಿಲುಕಿ...




ಮರೆಯಾಗಿವೆ ಕಣ್ಣೊಳಗಿನ ಕನಸುಗಳು
ಮನದ ತಳದ ಕೊಳದಲ್ಲಿ ಅಲೆಗಳಿಲ್ಲ

ಬಿಡುವಿರದ ಬದುಕಲ್ಲಿ ಮೌನಕ್ಕೆ ಬೆಲೆಯಿಲ್ಲ
ಕದವಿಕ್ಕಿದೆ ಎದೆಯೊಡಲು, ಓಲೈಸೆ ವಿಧಿಯಿಲ್ಲ

ಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿ
ಕನಿಷ್ಠ ಕಾಣುತ್ತಿಲ್ಲ ಮಾರೀಚನ ಜಿಂಕೆ - ದಣಿದ ಮನದಲ್ಲಿ

ಕದವಿಕ್ಕಿದ ಕೋಣೆಯಲಿ ಉಸಿರುಗಟ್ಟಿದೆ ಬದುಕು
ಹೊರಟಿಹೆನು ಹಸಿರ ಹುಡುಕಿ
ಬೆಳಕು ಕಂಡೀತೇ ಅಲ್ಲಿ - ಈಗಾದರೂ?





ನಡೆದ ದಾರಿಯ ಮೇಲೆ ನೇಸರನ ಕಂದೀಲು
ಅವನಿಯ ತಾಕೆ, ಕಂಡಿತ್ತು ನೆರಳು!

ಅಲ್ಲೊಂದು ಇಲ್ಲೊಂದು ಬಯಕೆಯಾ ಝರಿ
ಗರಿಗೆದರಿ ನರ್ತಿಸಿದ ನವಿಲು, ಅದ್ಯಾವ ಪರಿ

ಮನದ ಮುಗಿಲಲ್ಲಿ ಕುಂಭದ್ರೋಣ
ಮೂಡಿರುವ ಮಳೆಬಿಲ್ಲಿಗೆ ಅದೆಷ್ಟು ಬಣ್ಣ!

ನಿಂತು ನೋಡಿದರೆ ಚೆಲ್ಲಿತ್ತು ಮೋಡ
ನೀಲಿ ಅಂಗಳದ ತುಂಬಾ - ಮಗುವೊಂದು ಬರೆದಂತೆ ಚಿತ್ರ

ಸವೆದ ದಾರಿಯ ತುಂಬಾ ನೆನಪುಗಳ ಅಂಬಾರಿ
ಗರಿ ಬಿಚ್ಚಿ ನಲಿದಿದ್ದವು, ಅವಕಿಂದು ಯುಗಾದಿ

ಇಳಿಸಂಜೆ ಹೊತ್ತಿನಲಿ ತಂಗಾಳಿ ಬೀಸಿರಲು
ಗಿರಿತುದಿಯಲಿ ಮೈಯೊಡ್ಡಿದ ಮನ ಆರ್ದ್ರ

ಈಗ,
ಬಂದಿಳಿದೆಹೆನು ಮತ್ತದೇ ಕೋಣೆಯಲಿ, ಮತ್ಯಾಕೋ ತವಕ
ಆ ಸಂಜೆಯ ಮತ್ತಲ್ಲಿ ಇನ್ನೆಷ್ಟು ದಿವಸ ಸವೆಸಬಲ್ಲೆ ಬದುಕ?

4 comments:

  1. ಭವ ಬಂಧನದೊಳೂ ಸಿಲುಕಿ..??

    ReplyDelete
  2. ಋಷೀ ಮೂಲ, ನದೀ ಮೂಲ ಹೇಗೆ ಕೇಳಬಾರದು ಅಂತಾರೋ, ಹಾಗೇ ಕೆಲವೊಂದು ವಿಷಯಗಳನ್ನ ಹಾಗೇ ಬಿಟ್ಬಿಡಬೇಕು :)

    ReplyDelete
  3. ಆನಂದ..
    ಭಾವ ಬಂಧನದ ನಿರೂಪಣೆ ಭಾವಪೂರ್ಣವಾಗಿದೆ...

    " ದಾರಿಯ ತುಂಬಾ ನೆನಪುಗಳ ಅಂಬಾರಿ
    ಗರಿ ಬಿಚ್ಚಿ ನಲಿದಿದ್ದವು, ಅವಕಿಂದು ಯುಗಾದಿ"

    "ಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿ
    ಕನಿಷ್ಠ ಕಾಣುತ್ತಿಲ್ಲ ಮಾರೀಚನ ಜಿಂಕೆ - ದಣಿದ ಮನದಲ್ಲಿ
    "

    ಇಂತಹ ಸಾಲುಗಳು ಕವನವನ್ನು ಮತ್ತೆ ಮತ್ತೆ ಓದುವಂತೆ ಮಾಡಿದವು...
    ಹಸಿರು ಹುಡುಕಿ ಹೊರಟಿರೋ ಪಥದಲ್ಲಿ ಬೆಳಕು ಎದುರಾಗಲಿ.. :)

    ReplyDelete
  4. ನಿಮ್ಮ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು

    ReplyDelete