Thursday, November 19, 2009

ನದೀ ತೀರದಲ್ಲಿ ನೆನಪುಗಳು ಒದ್ದೆ


ಈಕೆ ನದೀ ತೀರದ ಹೆಣ್ಣು
ನಿಂತಲ್ಲೇ ನಿಲ್ಲುವಳಲ್ಲ
ಎಲ್ಲಿಂದ ಬಂದವಳೋ
ಅದೆಲ್ಲಿಗೆ ಹೊರಟಿಹಳೋ
ಇನ್ನೂ ತಿಳಿದಿಲ್ಲ

ನದಿಯೆಂದರೆ ಬರೀ ನೀರಲ್ಲ
ನದಿ ಹೆಣ್ಣು; ಹೆಣ್ಣು ಮಾಯೆ
ಮಾಯೆಯೆಂದೊಡೆ ಸೆಳೆತ
ಈಕೆ ನದಿ, ಮನ ಕದಿಯೋ ಮಾಟಗಾತಿ

ಕಡಲ ಮಗಳಿವಳು
ನೆನಪ ಮರೆತಿಹಳು
ದಾರಿ ಹುಡುಕುತ ಹೊರಟಿಹಳು

ನದಿಯೆಂದರೆ ಧುಮ್ಮಿಕ್ಕುವ ಜಲಪಾತ
ರುದ್ರ ಭಯಂಕರಿ, ಮನ ಸೆಳೆವ ವೈಯ್ಯಾರಿ

ನದಿಯೆಂದರೆ ಉದ್ದನೆ ನೆನಪು, ಮೈಮರೆವ ರಾಗ
ಅಂಕುಡೊಂಕಿನ ಹಾದಿ, ಮೈದೊಳೆವ ಜಾಗ
ಭಯ ಬೀಳಿಸೋ ಪ್ರವಾಹ
ಕ್ಷಣ ಚಿತ್ತ ಕ್ಷಣ ಪಿತ್ಥ

ನದಿಯೊಳಗೂ ಮುಳುಗಿವೆ
ಅಗಣಿತ ಕನಸುಗಳು
ಹೊರಬರದ ನಿಟ್ಟುಸಿರುಗಳು
ಬಯಕೆ, ಬದುಕು, ಕನವರಿಕೆಗಳು

ನದೀ ತೀರದಲ್ಲೇ ನದಿ ನಿಲ್ಲುವುದಿಲ್ಲ
ಇಂದು ಸಿಕ್ಕವಳು ನಿನ್ನೆಯವಳಲ್ಲ
ಕೂಡಿ ನಡೆದರೂ ಜೊತೆ ಉಳಿಯುವುದಿಲ್ಲ
ಬರೀ ನೀರಷ್ಟೇ ಅಲ್ಲ, ಮಾಯೆಯಿವಳು
ಹಾಗೆಂದೇ, ನದಿಯಿವಳು ಕನಸಿನ ಹುಡುಗಿಯಲ್ಲ

9 comments:

  1. ಆನಂದ...
    ಅದ್ಭುತವಾಗಿದೆ ಕವನ...
    ಹೆಣ್ಣು-ನದಿ.. ಹೋಲಿಕೆ, ಕಲ್ಪನೆ ಮತ್ತು ಅದನ್ನ ನೀವು ಸಾಲುಗಳಲ್ಲಿ ಸೆರೆ ಹಿಡಿದ ಪರಿ ಇಷ್ಟವಾಯ್ತು...

    ReplyDelete
  2. ಧನ್ಯವಾದಗಳು ದಿಲೀಪ್...

    ReplyDelete
  3. ಆನಂದ್ ಸರ್,
    ನದಿಯನ್ನು ಬಗೆ ಬಗೆಯಾಗಿ ಕಲ್ಪಿಸಿಕೊಂದಿದ್ದೀರಲ್ಲ...... ಸೂಪರ್..... ಸಕತ್ತಾಗಿದೆ....

    ReplyDelete
  4. ಅಯ್ಯೋ ಕೊಂದ್ಬಿಟ್ಟಿದ್ದೀನೇನ್ರೀ....... :D
    ಅಂದ್ಹಾಗೆ ನನ್ನ ಆನಂದ ಅಂತ ಕರೆದರೆ ಸಾಕು.

    ReplyDelete
  5. ನದಿಯ ವ್ಯಾಖ್ಯಾನ ..ರೂಪ ದರ್ಶನ ಕವನವಾಗಿ ಹರಿದಿರುವುದು..ಅದೂ ಎಲ್ಲ ಸೊಬಗಿನೊಂದಿಗೆ...??!!! ಮುಂದುವರೆಸಿ..ಕೃಷಿ

    ReplyDelete
  6. "ನದೀ ತೀರದಲ್ಲೇ ನದಿ ನಿಲ್ಲುವುದಿಲ್ಲ
    ಇಂದು ಸಿಕ್ಕವಳು ನಿನ್ನೆಯವಳಲ್ಲ
    ಕೂಡಿ ನಡೆದರೂ ಜೊತೆ ಉಳಿಯುವುದಿಲ್ಲ"

    ತುಂಬಾನೇ ಇಷ್ಟವಾಯಿತು.

    ReplyDelete
  7. @ಜಲನಯನ
    ನಿಮ್ಮ ಹಾರೈಕೆಗೆ ಧನ್ಯವಾದಗಳು

    @ಸುಪ್ತವರ್ಣ
    ಮೆಚ್ಚಿದ್ದಕ್ಕೆ ಧನ್ಯವಾದಗಳು

    ReplyDelete