Sunday, November 22, 2009

ನಿನ್ನೆದೆಯ ಘಮ ನನ್ನೊಳಗುಳಿದಿಹುದು



ಊರ ಬನದ ತುಂಬೆಲ್ಲಾ ನಿನ್ನದೇ ಗಾನ
ನೀ ಬಂದೆಯೆಂದು ಓಡಿದರೆ - ನನಗೆಲ್ಲೋ ಭ್ರಮೆ!
ನನ್ನೆದೆಯ ಕೊಳದೊಳಗುಳಿದಿತ್ತು ನೀ ಬಿಸುಟ ಕೊಳಲು
ನಿನ್ನ ಮುರಳಿಯ ಸದ್ದಿಲ್ಲ ಮೋಹನ

ಗಿರಿಯ ಕೆಳಗಿನ ತೊರೆಯಲ್ಲಿ ಮಿಂದಾಗ
ನಿನ್ನ ನೆನಪು, ಅದೆಲ್ಲಿ ಕದ್ದು ಕುಳಿತಿಹೆಯೋ!
ನಾನೀಗ ಆ ತೊರೆಯ ತೊರೆದಿಹೆನು ಕೃಷ್ಣ

ನಿನ್ನೆದೆಯ ಘಮ ನನ್ನೊಳಗುಳಿದಿತ್ತು
ನನ್ನುಸಿರು ತಾಕಲಿಲ್ಲವೆ ನಿನಗೆ?
ಸೆರೆಯುಬ್ಬಿ ಕಣ್ಣುತುಂಬಿ
ಬಿಕ್ಕಳಿಸಿದ ಮಾತು ನಿನಗೆ ಕೇಳಲಿಲ್ಲ
ನೀ ಹತ್ತಿ ಹೊರಟ ರಥದ ಮೋಡ
ಮನದೊಳಗಿನ್ನೂ ಮರೆಯಾಗಿಲ್ಲ

ನೀನೀಗ ರಾಜನಂತೆ? ಇನ್ನೆಲ್ಲಿಯ ಬಿಡುವು
ಮನೆಯಂಗಳದಲಿ, ಬಿದ್ದ ಬೆಳದಿಂಗಳಲ್ಲಿ
ನಾ ಒಂಟಿ ಜೀವ
ನಿನ್ನೊಡೆ ನರ್ತಿಸಿ ದಿನಗಳಾದವು ಗೆಳೆಯಾ

ಇನ್ನೆರಡು ದಿನದಲ್ಲಿ ಬರುವೆನೆಂದು ಹೇಳಿದ್ದೆ
ಆ ಎರಡು, ಇನ್ನೆರಡು, ಮತ್ತಿನ್ನೆಷ್ಟು
ದಿನ ಕಳೆದಿಹುದೋ ತಿಳಿದಿಲ್ಲ
ಈ ಯುದ್ಧ, ಈ ಗೆಲುವು
ನನಗ್ಯಾವುದೂ ಬೇಕಿಲ್ಲ
ನಾಳೆ ಮುಂಜಾನೆಗೆ ವೇಣುಗಾನ ಕೇಳೀತೇ?

ನಿನಗೀಗ ಹದಿನಾರು ಸಾವಿರ ಹೆಂಡಿರಂತೆ!
ಈ ರಾಧೆಗೆ ಬರುವೆನೆಂದು ಕೊಟ್ಟ ಮಾತು
ನೆನಪುಳಿದಿದೆಯೇನೋ.....

3 comments:

  1. ಆನಂದ,
    ಚೆನ್ನಾಗಿದೆ.. ಸುಂದರ ಕವನ...ಒಬ್ಬರು ಇನ್ನೊಬ್ಬರಿಗೆ ಮನ್ನಸ್ಸಿನ ಮಾತನ್ನ ಹೇಳೋ ರೀತಿ ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  2. ನಿಮ್ಮ ಕವಿತೆ ಹೃದಯವನ್ನು ತಟ್ಟುತ್ತದೆ. ಕೊನೆಯಲ್ಲಿ ಒ೦ತರಾ ಬೇಜಾರಾಯಿತು.

    ReplyDelete
  3. @ರಾಘು ಮತ್ತು ವಿಜಯಶ್ರೀ
    ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು

    ReplyDelete