Sunday, November 29, 2009

ಅತ್ತ ಇತ್ತಗಳ ನಡುವೆ




ಹಸಿರು ನೋಡಿದ ಮೇಲೆ
ನೀಲಿ ನಭದ ಕೆಳಗೆ
ಪಟಪಟನೆ ಬಡಿದ ರೆಕ್ಕೆ...
ಹುಚ್ಚೀ,
ಕವಿತೆ ಬರೆವುದು ಹಾಗಲ್ಲ

ಕೈಯಲ್ಲಿ ಪೆನ್ನು
ಸ್ವಚ್ಛ ಬಿಳಿ ಹಾಳೆ
ಶಬ್ದ ಸ್ಖಲಿಸಿದಾಕ್ಷಣ
ಕವಿತೆ ಹುಟ್ಟುವುದಿಲ್ಲ

ಸಾಲಲ್ಲೊಂದು ಮಿಂಚು
ತಾಕಿದರೆ ಸಾಕು ಎದೆಯಂಚು
ಅಲ್ಲಲ್ಲಿ ಇಣುಕುವ ಪದ
ಗಳಿಗಿರಲಿ ನೆನಪಿನ
ಒನಪು ವೈಯಾರ

ಅಲ್ಲಲ್ಲಿ ನಿಂತು, ಕೆಲವೊಮ್ಮೆ ಓಡಿ
ನುಗ್ಗಿ, ಮುನ್ನುಗ್ಗಿ ಭೋರ್ಗರೆವ
ಭಾವನೆಗಳ ಹರಿವಿರಲಿ
ಶಾಂತ ಸರಸ್ಸಿನ ಗಾಂಭೀರ್ಯ ನೆನಪಿರಲಿ

ಎಷ್ಟೆಲ್ಲಾ ಬರೆದ ಮೇಲೂ
ಕವಿತೆ ಕವಿಯ ಸ್ವತ್ತಲ್ಲ
ನಿನ್ನೆ ಬರೆದ ಕವಿತೆ
ನಾಳೆಗಿರುವುದಿಲ್ಲ




ಶಬ್ದ, ಪ್ರತಿಶಬ್ದ
ಬಿಂಬ, ಪ್ರತಿಬಿಂಬ
ಚಿನ್ಹೆ, ಪ್ರಶ್ನೆಗಳ ಮಧ್ಯೆ
ಕಳೆದು ಹೋದೀಯ ಎಚ್ಚರ
ಗೆಳತೀ,
ಬದುಕೆಂಬುದು ಕವಿತೆ ಬರೆದಂತಲ್ಲ

Thursday, November 26, 2009

ಗಮ್ಯ

ಆತ ಬಸ್ಸಿನಲ್ಲಿ ಹೊರಟಿದ್ದ. ಹೋಗಲೇನೂ ಗೊತ್ತು ಗುರಿಯಿರಲಿಲ್ಲ. ಆತ ತೀರ್ಮಾನಿಸಿಬಿಟ್ಟಿದ್ದ. ಬದುಕೆಂಬುದು ಕೊನೆಗಾಣದ ಪ್ರಯಾಣ. ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತದೆ. ಆದರೆ ಚಲಿಸುತ್ತಲೇ ಇರಬೇಕು. ಚಲಿಸದೇ ಇರುವುದು ನೆನಪುಗಳು ಮಾತ್ರ. ನೆನಪಾದರೂ ಎಲ್ಲಿಯವರೆಗೆ ಇದ್ದಾವು. ಹೊಸ ನೆನಪು ಬರುವವರೆಗೆ, ಹಳೆಯದೆಲ್ಲಾ ಮರೆವವರೆಗೆ. ಮುಂದೆ? ಮತ್ತೆ ಹೊಸದೊಂದು ಬದುಕು, ಹೊಸದೊಂದು ಪ್ರಯಾಣ.

ಆತನಿಗಾಗಲೇ ಇಳಿವಯಸ್ಸು. ನೋಡಲು ಕೂಡ ಹಾಗೇ ಕಾಣ್ತಿದ್ದ. ತಲೆಯಲ್ಲಿ ಅಲ್ಲಲ್ಲಿ ಕಾಣ್ತಿದ್ದ ಬೆಳ್ಳಿಕೂದಲು. ಕಣ್ಣಿಗಿನ್ನೂ ಮುಪ್ಪು ಬಂದಿರಲಿಲ್ಲ. ಆದರೆ ಆರೋಗ್ಯವಂತನೆಂದು ಮಾತ್ರ ಯಾರು ಬೇಕಾದರೂ ಹೇಳಬಹುದಿತ್ತು.

ಈಗತಾನೇ ವೃದ್ಧಾಶ್ರಮದಿಂದ ಹೊರ ಬಂದಿದ್ದ. ಎಷ್ಟೆಲ್ಲಾ ಕಷ್ಟಪಟ್ಟು ಏನು ಮಾಡಿದರೇನು, ಎಲ್ಲಾ ಮಕ್ಕಳು ವಿದೇಶೀ ಪ್ರಿಯರು. ಹಾರಿಬಿಟ್ಟಿದ್ದರು. ಮಕ್ಕಳು ಕೂಡ ಹಕ್ಕಿಮರಿಗಳಂತಲ್ಲವೇನು? ಆತ ಯೋಚಿಸುತ್ತಿದ್ದ.

ದೊಡ್ಡವಾಗುವ ತನಕ ಅವಕ್ಕೆ ಉಪಚಾರ ಮಾಡಬೇಕು. ಊಟ ತಿನ್ನಿಸಬೇಕು. ಹಾರುವುದ ಕಲಿಸಬೇಕು. ಬಿದ್ದರೂ ಮೇಲೇಳುವುದನ್ನು ತಿಳಿಸಬೇಕು. ಅಷ್ಟೇ ಅಲ್ಲವೇ ನಮ್ಮ ಕೆಲಸ. ಮೈ ಬೆಳೆಯುತ್ತಿದ್ದಂತೆಯೇ, ರೆಕ್ಕೆ ಬಲಿಯುತ್ತಿದ್ದಂತೆಯೇ ಹಾರಿಬಿಡುತ್ತವೆ. ಇಡೀ ನೀಲಿ ಆಗಸ ಅವುಗಳದ್ದಲ್ಲವೇ, ಹುಡುಕಲು ಏನೆಲ್ಲಾ ಇರುತ್ತದೆ. ಕಡೇವರೆಗೂ ಗೂಡಿನಲ್ಲಿಯೇ ಬಿದ್ದಿರಲು ಸಾಧ್ಯವೇ? ಹಾರಿ ಬಿಡುತ್ತವೆ ಎಂದು ಹಾರುವುದನ್ನೇ ಹೇಳಿಕೊಡದಿರಲಾದೀತೇ?

ಅವನ ಮಕ್ಕಳೂ ಅಷ್ಟೇ. ರೆಕ್ಕೆ ಬಲಿವ ತನಕ ಆತನ ಜೊತೆಗಿದ್ದರು. ಮುಂದೆ ಬೆಳೆದ ನಂತರ ದೇಶ ಸುತ್ತಲು ಹೊರಟು ಹೋದರು. ಅವನಿಗೇನೂ ಕೊರತೆಯಿರಲಿಲ್ಲ. ಅಥವಾ ಅವರು ಹಾಗೆ ಭಾವಿಸಿದ್ದರು.

ಅವನ ಕಷ್ಟ ಅವನಿಗೇ ಗೊತ್ತು. ಆ ಇಳಿವಯಸ್ಸಿನಲ್ಲಿ ಸಂಗಾತಿಯಿರಲಿಲ್ಲ. ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯರಿರಲಿಲ್ಲ.

ಮಕ್ಕಳೆಲ್ಲಾ ಮಾತಾಡಿಕೊಂಡು ಆತನನ್ನು ವೃದ್ಧಾಶ್ರಮವೊಂದಕ್ಕೆ ಸೇರಿಸಿದ್ದರು. ಪ್ರತಿ ತಿಂಗಳೂ ಹಣ ಕಳಿಸುತ್ತೀವಿ. ತೊಂದರೆಯಿಲ್ಲವಲ್ಲ? ಎಲ್ಲರೂ ಕೇಳಿದ್ದರು.

ನನ್ನನ್ನು ನಾನು ನೋಡಿಕೊಳ್ಳಬಲ್ಲೆ. ಪ್ರತಿ ಉತ್ತರಿಸಿದ್ದ.

ಮರಿಗಳು ಹಾರಿದ್ದವು. ವೃದ್ಧಾಶ್ರಮ ಬೇಸರವಾಗತೊಡಗಿತು. ಬಿಟ್ಟು ಹೊರಬಂದ. ಕೈಯಲ್ಲಿ ಕಾಸಿತ್ತು. ಮುಂದೆ ಹೋಗಲು ಗುರಿಯಿರಲಿಲ್ಲ. ವೃದ್ಧಾಶ್ರಮದ ಹೊರಗೇ ಬಸ್ ಸ್ಟಾಪಿತ್ತು. ಹೋಗ್ತಿದ್ದ ಹಾಗೇ ಬಸ್ ಬಂದಿತ್ತು. ಹತ್ತಿ ಕುಳಿತಿದ್ದ. ಬದುಕು ಚಲಿಸುತ್ತದೆ. ಆದರೆ ಬದುಕಿನ ಚುಕ್ಕಾಣಿ ನಾವು ಹಿಡಿದಿರಬೇಕು. ಬದುಕು ನಮ್ಮನ್ನು ಹಿಡಿದಿರಬಾರದು. ಯೋಚಿಸುತ್ತಾ ಕುಳಿತಿದ್ದ.

ಅಷ್ಟರಲ್ಲಿ ಮುಂದಿನ ಸ್ಟಾಪ್ ಬಂದಿತ್ತು. ಕಂಡಕ್ಟರ್ ಇನ್ನೂ ಟಿಕೆಟ್ ಕೇಳಲು ಶುರು ಮಾಡಿರಲಿಲ್ಲ. ಸಿಟಿ ದಾಟಿದ ಮೇಲೇನೇ ಅವನು ಕೇಳಲು ಶುರು ಮಾಡೋದು. ಜನ ಹತ್ತುತ್ತಿದ್ದರು.

ಅವನಿಗೆ ಆಶ್ಚರ್ಯವಾಯಿತು. ಎಲ್ಲರೂ ಚಲಿಸುತ್ತಿದ್ದಾರೆ. ಎಲ್ಲರೂ ಬದುಕುತ್ತಿದ್ದಾರೆ. ಎಲ್ಲರಿಗೂ ಒಂದು ಗಮ್ಯವಿದೆ. ಆದರೆ ಎಲ್ಲಿಯವರೆಗೆ? ಒಮ್ಮೆಯಾದರೂ ಗಮ್ಯವಿಲ್ಲದೆ ಪ್ರಯಾಣ ಮಾಡಿದ್ದಾರಾ ಅವರು? ಬದುಕನ್ನ ಅದರ ಪಾಡಿಗೆ ಬಿಟ್ಟಿದ್ದಾರಾ? ನಿಜ ತಿಳಿಯದ ಜನ.
ಅವನಿಗಿನ್ನೂ ತನ್ನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ.

ಅಮ್ಮಾ ಇಲ್ಲಿ ಬಾ, ಅಜ್ಜನ ಪಕ್ಕ ಜಾಗ ಖಾಲಿ ಇದೆ.

ಮಗುವೊಂದು ಕೂಗತೊಡಗಿದಾಗಲೇ ಆತ ತನ್ನ ಯೋಚನೆಯನ್ನೆಲ್ಲಾ ತುಂಡರಿಸಿದ್ದು. ಗಮನವಿಟ್ಟು ನೋಡಿದ. ಮಗುವೊಂದು ತನ್ನ ತಾಯಿಗಿಂತ ಮುಂಚೆ ಬಸ್ಸನ್ನು ಹತ್ತಿ ಸೀಟಿಗಾಗಿ ತನ್ನ ತಾಯಿಯನ್ನು ಕರೆಯುತ್ತಿತ್ತು. ಆತನಿಗೆ ಕರು ಅಂಬಾ ಎಂದಂತೆ ಅನಿಸಿತು. ಮುಂದೆ ಇದೇ ದೊಡ್ಡದಾದಾಗ ತಾಯಿಯ ನೆನೆವುದೇ ಎಂದು ಯೋಚಿಸಿ ಅವನಿಗೆ ಖೇದವಾಯಿತು.

ಹೂಂ ಅಜ್ಜನ ಪಕ್ಕ ಕೂತ್ಕೋ ಕಂದಾ. ಅಮ್ಮ ಮಗುವನ್ನ ಅವನ ಪಕ್ಕಕ್ಕೆ ಕೂರಿಸಿ ತಾನು ಕೊನೆಯಲ್ಲಿ ಕೂತಳು.

ಅವನು ಅವಳ ಕಡೆಗೊಮ್ಮೆ ಮಗುವಿನ ಕಡೆಗೊಮ್ಮೆ ನೋಡಿದ. ಆಕೆಗೆ ಸುಮಾರು ಮೂವತ್ತಿರಬಹುದು. ಮಗುವಿಗೆ ಮೂರೂವರೆ-ನಾಲ್ಕಿರಬಹುದೆಂದು ಲೆಕ್ಕ ಹಾಕಿದ.

ಕಿಟಕಿಯ ಕಡೆ ತಲೆ ಮಾಡಿ ಓಡುವ ಮರಗಳನ್ನೇ ನೋಡುತ್ತಾ ಕುಳಿತ. ನಾನೂ ಒಂದು ಮರವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಪ್ರಯಾಣ ಎಂದೂ ಮಾಡಬೇಕಾಗಿರಲಿಲ್ಲ. ಬದುಕು ಚಲಿಸುತ್ತಿರಲಿಲ್ಲ. ಯಾವುದರ ಚಿಂತೆಯೂ ಇರುತ್ತಿರಲಿಲ್ಲ. ಪ್ರತಿ ವಸಂತಕ್ಕೊಮ್ಮೆ ಹೊಸ ಹಕ್ಕಿಗಳು ಬರುತ್ತಿದ್ದವು. ಮರಿಹಕ್ಕಿಗಳ ಗದ್ದಲ ದಿನವೆಲ್ಲಾ ಇರುತ್ತಿತ್ತು. ಬೇಸರದ ಮಾತೇ ಇಲ್ಲ. ಪ್ರತಿ ವಸಂತಕ್ಕೊಮ್ಮೆ ಹೊಸ ಗದ್ದಲ. ಏನು ಸಂತೋಷವಿರುತ್ತಿತ್ತು ಎಂದು ನಿಟ್ಟುಸಿರುಬಿಟ್ಟ. ಮುಂದಿನ ಜನ್ಮದಲ್ಲಾದರೂ ಮರವಾಗಬೇಕು.

ಪಕ್ಕಕ್ಕೊಮ್ಮೆ ನೋಡಿದ. ಮಗು ತಾಯ ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಮಾಡಿತ್ತು.

ಒಂದು ಕಾಲದಲ್ಲಿ ತನ್ನ ಮಕ್ಕಳೂ ಹೀಗೇ ಇದ್ದರಲ್ಲವೇ, ಹೀಗೇ ಮಲಗಿದ್ದರಲ್ಲವೇ ತನ್ನ ತೊಡೆಯ ಮೇಲೆ? ಆತನ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಏನೋ ಧೂಳು ಬಿದ್ದವನಂತೆ ನಟಿಸಿ ಕಣ್ಣೀರ‍ನ್ನ ಒರೆಸಿಕೊಂಡ.

ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬಸ್ಸನ್ನು ಊಟಕ್ಕೆಂದು ನಿಲ್ಲಿಸಲಾಯಿತು. ಊರ ಹೊರಗೆ ಯಾವುದೋ ಢಾಬಾ. ಎಲ್ಲಾ ಹೊಂದಾಣಿಕೆ. ಆತನೆಂದುಕೊಂಡ.

ಬದುಕು ಹೊಂದಿಕೊಳ್ಳುತ್ತಾ ತನ್ನ ಅಸಲಿಯತ್ತನ್ನೇ ಕಳೆದುಕೊಳ್ಳುತ್ತದೆ. ಹೌದು ತಾನೀಗ ಹೊಂದಿಕೊಂಡಿಲ್ಲವೇ. ತನ್ನ ಅಸಲಿಯತ್ತನ್ನೆಲ್ಲಾ ಬಿಟ್ಟು ಮುಂದೆ ಹೊರಟಿಲ್ಲವೇ? ಅರೆ, ಹೊರಟಿದ್ದೇನೆ. ಆದರೆ ಎಲ್ಲಿಗೆ? ಎಲ್ಲಿಗೆಂದೇ ಗೊತ್ತಿಲ್ಲವಲ್ಲ. ಕಂಡಕ್ಟರ್ ಕೇಳಿದ್ದಕ್ಕೆ ಕೊನೇ ಸ್ಟಾಪೆಂದಿದ್ದ. ಕಂಡಕ್ಟರ್ ಇವನನ್ನೊಂಥರಾ ನೋಡಿ ಮರು ಮಾತಾಡದೆ ಟಿಕೆಟ್ ಕೊಟ್ಟಿದ್ದ. ಅವನಿಗೇನೋ ಅನುಮಾನ ಬಂದಂತಿತ್ತು.

ಊಟಕ್ಕೆಂದು ಎಲ್ಲರೂ ಇಳಿದು ಹೋದರು. ಯಾಕೆ ಊಟವಿಲ್ಲವಿಂದರೆ ಜೀವನ ಸಾಧ್ಯವಿಲ್ಲವೇನು. ತನ್ನನ್ನೇ ಪ್ರಶ್ನಿಸಿಕೊಂಡ ಅವನು ಅಲ್ಲಿಯೇ ಕುಳಿತ.

ಅವನ ಪಕ್ಕಕ್ಕೆ ಕುಳಿತಿದ್ದ ತಾಯಿ ಮಗು ಕೂಡ ಅಲ್ಲಿಯೇ ಉಳಿದಿದ್ದರು. ತಾಯಿ ಬ್ಯಾಗಿಂದ್ಯಾವುದೋ ಬಾಕ್ಸ್ ತೆಗೆದಳು. ಮಗು ಆಗಲೇ ಎದ್ದು ಕುಳಿತಿತ್ತು. ಅವರು ಊಟ ತಂದಿದ್ದರು. ತಾಯಿ ಬಾಕ್ಸಿನ ಮುಚ್ಚಳದಲ್ಲಿ ಸ್ವಲ್ಪ ಮೊಸರನ್ನ ಹಾಕಿ ಮಗುವಿಗೆ ಕೊಟ್ಟಳು. ಇವನು ಅವರ ಕಡೇನೇ ನೋಡುತ್ತಿದ್ದ. ಮಗುವಿಗೆ ಏನನ್ನಿಸಿತೋ ಏನೋ ’ಊಟ ಮಾಡಲ್ವ ತಾತ?’ ಕೇಳೇ ಬಿಟ್ಟಿತ್ತು.

ಏನೋ ಯೋಚನೆ ಮಾಡುತ್ತಿದ್ದವನಿಗೆ ದಿಢೀರನೇ ಈ ಪ್ರಶ್ನೆ ಅರ್ಥವಾಗಲಿಲ್ಲ. ತಿಳಿದ ನಂತರ ಎದೆಯೊತ್ತಿಬಂದಂತಾಯಿತು.

ಇಲ್ಲಾ ಪುಟ್ಟಾ, ನಂಗೆ ಹಸಿವಿಲ್ಲ. ಅದಕ್ಕೆ ಉತ್ತರಿಸಿದ್ದ.

ತಗೋ ಒಂದು ತುತ್ತು ತಿನ್ನು. ಮಗು ತನ್ನ ಪುಟ್ಟ ಕೈ ಚಾಚಿತ್ತು.

ಅವನಿಂದ ಇನ್ನು ತಡೆದುಕೊಳ್ಳಲಾಗಲಿಲ್ಲ. ಕಣ್ಣೀರು ತಾನೇ ತಾನಾಗಿ ಹರಿಯತೊಡಗಿತು.

ತನ್ನ ಮಕ್ಕಳಿಗೆ ತಾನು ಹೀಗೇ ಅಲ್ಲವೇ ಊಟ ಮಾಡಿಸುತ್ತಿದ್ದುದು. ಅವರಿಗೆ ನೆನಪಲ್ಲುಳಿಯಿತೇನು?

ತಾಯಿ ಗಾಬರಿಯಾದಳು. ಏಯ್ ಏನ್ ಹೇಳಿದ್ಯೋ? ಮಗುವಿಗೆ ಗದರ ಹೋದಳು.

ಏನಿಲ್ಲ ಬಿಡಮ್ಮಾ, ಇಂಥಾ ಒಂದು ಪ್ರೀತಿ ಮಾತು ಕೇಳಿ ಅದ್ಯಾವ ಕಾಲವಾಗಿತ್ತೋ.

ಅವನಿಗೆ ಕೊರಳಸೆರೆಯುಬ್ಬಿ ಬಂದಿತ್ತು. ತಾ ಕಂದಾ ತಿನ್ನಿಸು. ಅವನು ಆ ಮಾಡಿದ. ಆ ಪುಟ್ಟ ಕೈಯಲ್ಲಿ ಅದು ನಾಲ್ಕು ಕಾಳನ್ನ ಅವನ ಬಾಯಿಗೆ ಹಾಕಿತು. ಅವನ ಕಣ್ಣಲ್ಲಿ ಅಮೃತ ಕುಡಿದಷ್ಟು ಸಂತಸ ಎದ್ದು ಕಾಣುತ್ತಿತ್ತು.

ಸಮಾಧಾನ ಮಾಡಿಕೊಂಡು ಎದ್ದು ಬಸ್ಸಿಳಿದು ಹೋದ. ಮತ್ತೆ ಹತ್ತಿದಾಗ ಅವನ ಕೈತುಂಬಾ ಬಿಸ್ಕೆಟ್, ಹಣ್ಣು ಮತ್ತೆ ಚಾಕ್ ಲೇಟ್ ಗಳು. ಮಗುವಿನ ಕೈಗೆ ಕೊಟ್ಟ. ತಾಯಿಗದು ಅರ್ಥವಾಗಿತ್ತು. ಆಕೆಯೇನೂ ಹೇಳಲಿಲ್ಲ. ಬಸ್ಸು ಮತ್ತೆ ಹೊರಟಿತು. ಮಗುವಿಗಾಗಲೇ ಅವನು ಫ್ರೆಂಡ್ ಆಗಿಬಿಟ್ಟಿದ್ದ.

ಎಲ್ಲಿಗ್ಹೋಗ್ಬೇಕು ತಾತಾ? ಮುದ್ದಾಗಿ ಪ್ರಶ್ನಿಸಿತು.

ಗೊತ್ತಿಲ್ಲ ಕಣಪ್ಪಾ.

ನಂಜೊತೆಗೆ ಬರ್ತೀಯಾ?

ಹೂಂ ಕಂದಾ. ಮರುಮಾತಿಲ್ಲದೆ ಒಪ್ಪಿಗೆಯಿತ್ತಿದ್ದ.

ಅವನಿಗೇ ಆಶ್ಚರ್ಯವಾಗಿತ್ತು ತನ್ನ ಉತ್ತರ ಕೇಳಿ. ಬದುಕು ಎಲ್ಲಿಂದೆಲ್ಲಿಗೆ ಕರೆದೊಯ್ಯುತ್ತದಲ್ಲಾ? ಅವನು ತನ್ನಲ್ಲೇ ಪ್ರಶ್ನಿಸಿಕೊಂಡ.

ಮಗುವಿನ ಮನೆಯೆದುರೇ ಮನೆಯೊಂದ ಬಾಡಿಗೆ ಹಿಡಿದ. ಅವನ ಬದುಕಿಗೆ ಮತ್ತೊಂದು ಗಮ್ಯ ಗೋಚರಿಸಿತ್ತು. ಮತ್ತೊಂದು ಮರಿಹಕ್ಕಿಗೆ ಹಾರುವುದ ಹೇಳಿಕೊಡಲು ಸಿದ್ಧನಾಗಿದ್ದ.

ಅವನೀಗ ಪ್ರತೀ ದಿನವೂ ಆ ಮಗುವಿನ ಜೋಡಿ ಸಂಜೆ ತಿರುಗಲು ಹೋಗುವುದು ಸಾಮಾನ್ಯವಾಗಿತ್ತು.


...............................................................................

"ಸುಮಾರು ಆರು ವರ್ಷಗಳ ಕೆಳಗೆ ನಾನು ಬರೆದ ಕಥೆಯಿದು. ಕೆಲಸದ ಮೇಲೆ ದೂರದೇಶಕ್ಕೆ ಹೋದ ಗೆಳೆಯನೊಬ್ಬ ಅಲ್ಲೇ ನೆಲೆಸುವ ಬಗ್ಗೆ ಹೇಳಿದಾಗ ಇದ್ಯಾಕೋ ನೆನಪಾಯಿತು."

Wednesday, November 25, 2009

ಆಕ್ರಂದನ



ಪೇಟೆ ಬೀದಿಗಳಲ್ಲಿ
ಊರ ಸಂತೆಯಲಿ
ಕಳೆದುಹೋದ ಕವಿತೆಯ
ಕೂಗು ಯಾರಿಗೂ ಕೇಳುತ್ತಿಲ್ಲ

ಯಾರಿಗೆ ಹುಟ್ಟಿದ್ದು?
ಕದ್ದು ತಂದ ಸಾಲಿಗೋ
ಜೀವ ತುಂಬಿದ ಶಬ್ದಕ್ಕೋ
ಕವಿತೆಗೆ ಹೆಸರೇ ನೆನಪಿಲ್ಲ

ಸಂತೆ ಮಧ್ಯದಲಿ ನಿಂತು
ಹರಾಜಿಗಿದೆ ಕವಿತೆ
ಮೂಸುವವರೂ ಗತಿಯಿಲ್ಲ

ಗಲ್ಲಿ ಗಲ್ಲಿ ತಿರುಗಿದರೂ
ಎಲ್ಲ ಮನೆಗಳಿಗೂ ಬಣ್ಣ ಒಂದೇ
ಬಾಗಿಲ ಗುರುತೇ ಸಿಕ್ಕುತ್ತಿಲ್ಲ

ನೀರಿಲ್ಲದೇ, ಬಾಳಿಲ್ಲದೇ
ಸುಡುಗಾಡಲ್ಲುರುಳಿದೆ ಕವಿತೆ
ಜವರಾಯನಿಗೆ ಬಿಡುವಿಲ್ಲ

Sunday, November 22, 2009

ನಿನ್ನೆದೆಯ ಘಮ ನನ್ನೊಳಗುಳಿದಿಹುದು



ಊರ ಬನದ ತುಂಬೆಲ್ಲಾ ನಿನ್ನದೇ ಗಾನ
ನೀ ಬಂದೆಯೆಂದು ಓಡಿದರೆ - ನನಗೆಲ್ಲೋ ಭ್ರಮೆ!
ನನ್ನೆದೆಯ ಕೊಳದೊಳಗುಳಿದಿತ್ತು ನೀ ಬಿಸುಟ ಕೊಳಲು
ನಿನ್ನ ಮುರಳಿಯ ಸದ್ದಿಲ್ಲ ಮೋಹನ

ಗಿರಿಯ ಕೆಳಗಿನ ತೊರೆಯಲ್ಲಿ ಮಿಂದಾಗ
ನಿನ್ನ ನೆನಪು, ಅದೆಲ್ಲಿ ಕದ್ದು ಕುಳಿತಿಹೆಯೋ!
ನಾನೀಗ ಆ ತೊರೆಯ ತೊರೆದಿಹೆನು ಕೃಷ್ಣ

ನಿನ್ನೆದೆಯ ಘಮ ನನ್ನೊಳಗುಳಿದಿತ್ತು
ನನ್ನುಸಿರು ತಾಕಲಿಲ್ಲವೆ ನಿನಗೆ?
ಸೆರೆಯುಬ್ಬಿ ಕಣ್ಣುತುಂಬಿ
ಬಿಕ್ಕಳಿಸಿದ ಮಾತು ನಿನಗೆ ಕೇಳಲಿಲ್ಲ
ನೀ ಹತ್ತಿ ಹೊರಟ ರಥದ ಮೋಡ
ಮನದೊಳಗಿನ್ನೂ ಮರೆಯಾಗಿಲ್ಲ

ನೀನೀಗ ರಾಜನಂತೆ? ಇನ್ನೆಲ್ಲಿಯ ಬಿಡುವು
ಮನೆಯಂಗಳದಲಿ, ಬಿದ್ದ ಬೆಳದಿಂಗಳಲ್ಲಿ
ನಾ ಒಂಟಿ ಜೀವ
ನಿನ್ನೊಡೆ ನರ್ತಿಸಿ ದಿನಗಳಾದವು ಗೆಳೆಯಾ

ಇನ್ನೆರಡು ದಿನದಲ್ಲಿ ಬರುವೆನೆಂದು ಹೇಳಿದ್ದೆ
ಆ ಎರಡು, ಇನ್ನೆರಡು, ಮತ್ತಿನ್ನೆಷ್ಟು
ದಿನ ಕಳೆದಿಹುದೋ ತಿಳಿದಿಲ್ಲ
ಈ ಯುದ್ಧ, ಈ ಗೆಲುವು
ನನಗ್ಯಾವುದೂ ಬೇಕಿಲ್ಲ
ನಾಳೆ ಮುಂಜಾನೆಗೆ ವೇಣುಗಾನ ಕೇಳೀತೇ?

ನಿನಗೀಗ ಹದಿನಾರು ಸಾವಿರ ಹೆಂಡಿರಂತೆ!
ಈ ರಾಧೆಗೆ ಬರುವೆನೆಂದು ಕೊಟ್ಟ ಮಾತು
ನೆನಪುಳಿದಿದೆಯೇನೋ.....

Friday, November 20, 2009

ಬಟ್ಟಲುಗಣ್ಣಲ್ಲಿ ಚಂದ್ರಬಿಂಬ

ನಟ್ಟಿರುಳು ಕನಸಿನಲಿ
ಚಂದಿರನು ಕಂಡಿಲ್ಲ

ತಾರೆಗಳು ದಿಗಿಲು
ಪ್ರಿಯಕರನ ಸುಳಿವಿಲ್ಲ

ಸುರಗಾನದ ಅಲೆಯಿಲ್ಲ
ರಸೆಯೊಳಗೆ ಕಳೆಯಿಲ್ಲ
ಚಂದಿರನು ಸಿಕ್ಕಿಲ್ಲ

ಊರೆಲ್ಲಾ ಹುಡುಕಾಡಿ
ಬಾಂದಳವ ತಡಕಾಡಿ
ಇವಳ ಬಳಿ ಬರಲು

ತುಸು ನಾಚಿ, ಬಳಿ ಸರಿದು
ಬಟ್ಟಲುಗಣ್ಣಿನ ಹುಡುಗಿ
ಬೊಗಸೆ ನೀರಲ್ಲಿ ಚಂದ್ರನ ತೋರಿಸಿದಳು

Thursday, November 19, 2009

ನದೀ ತೀರದಲ್ಲಿ ನೆನಪುಗಳು ಒದ್ದೆ


ಈಕೆ ನದೀ ತೀರದ ಹೆಣ್ಣು
ನಿಂತಲ್ಲೇ ನಿಲ್ಲುವಳಲ್ಲ
ಎಲ್ಲಿಂದ ಬಂದವಳೋ
ಅದೆಲ್ಲಿಗೆ ಹೊರಟಿಹಳೋ
ಇನ್ನೂ ತಿಳಿದಿಲ್ಲ

ನದಿಯೆಂದರೆ ಬರೀ ನೀರಲ್ಲ
ನದಿ ಹೆಣ್ಣು; ಹೆಣ್ಣು ಮಾಯೆ
ಮಾಯೆಯೆಂದೊಡೆ ಸೆಳೆತ
ಈಕೆ ನದಿ, ಮನ ಕದಿಯೋ ಮಾಟಗಾತಿ

ಕಡಲ ಮಗಳಿವಳು
ನೆನಪ ಮರೆತಿಹಳು
ದಾರಿ ಹುಡುಕುತ ಹೊರಟಿಹಳು

ನದಿಯೆಂದರೆ ಧುಮ್ಮಿಕ್ಕುವ ಜಲಪಾತ
ರುದ್ರ ಭಯಂಕರಿ, ಮನ ಸೆಳೆವ ವೈಯ್ಯಾರಿ

ನದಿಯೆಂದರೆ ಉದ್ದನೆ ನೆನಪು, ಮೈಮರೆವ ರಾಗ
ಅಂಕುಡೊಂಕಿನ ಹಾದಿ, ಮೈದೊಳೆವ ಜಾಗ
ಭಯ ಬೀಳಿಸೋ ಪ್ರವಾಹ
ಕ್ಷಣ ಚಿತ್ತ ಕ್ಷಣ ಪಿತ್ಥ

ನದಿಯೊಳಗೂ ಮುಳುಗಿವೆ
ಅಗಣಿತ ಕನಸುಗಳು
ಹೊರಬರದ ನಿಟ್ಟುಸಿರುಗಳು
ಬಯಕೆ, ಬದುಕು, ಕನವರಿಕೆಗಳು

ನದೀ ತೀರದಲ್ಲೇ ನದಿ ನಿಲ್ಲುವುದಿಲ್ಲ
ಇಂದು ಸಿಕ್ಕವಳು ನಿನ್ನೆಯವಳಲ್ಲ
ಕೂಡಿ ನಡೆದರೂ ಜೊತೆ ಉಳಿಯುವುದಿಲ್ಲ
ಬರೀ ನೀರಷ್ಟೇ ಅಲ್ಲ, ಮಾಯೆಯಿವಳು
ಹಾಗೆಂದೇ, ನದಿಯಿವಳು ಕನಸಿನ ಹುಡುಗಿಯಲ್ಲ

Wednesday, November 18, 2009

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?

ಇದು ಹದುಳ ಇದು ಕುಶಲ
ಇದು ಕಳಶ ಕುಂಭಗಳ ಮಂಗಳ ಮೇಳ

ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.
’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ ಸಮಾಧಾನವಾಗಲಿಲ್ಲ. ಅದೃಷ್ಟವಶಾತ್ ಆ ಸಂಕಲನದ ಮುನ್ನುಡಿಯಲ್ಲಿ ಇದೇ ಕವಿತೆಯ ವಿಷಯ ಬರೋದರಿಂದ ಮತ್ತು ಹದುಳದ ಬಗ್ಗೆ ವಿವರಿಸಿರೋದರಿಂದ ಅರ್ಥ ಆಯ್ತು.

ನನ್ನಂತಹ ಪಾಮರರಿಗೆ ಅರ್ಥ ಆಗಲೀಂತ ಮುನ್ನುಡಿಯಿಂದ ಕೆಳಗಿನದನ್ನು ಯಥಾವತ್ತಾಗಿ ಕದ್ದಿದ್ದೀನಿ.

"’ಹದುಳ’ ಅನ್ನುವ ಪದ ಬಸವಣ್ಣನಲ್ಲಿ ಬರುತ್ತದೆ. ಅಲ್ಲಿ ಅವನು ಅದನ್ನು ವ್ಯಂಗ್ಯಕ್ಕೆ ಬಳಸುತ್ತಾನೆ. ’ಹದುಳ’ ಎಂದರೆ ಕುಂತ ನೆಲ ಕುಳಿ ಬೀಳುವುದಿಲ್ಲ ಎಂದು ಕಟಕಿಯಾಡುತ್ತಾನೆ. ಹದುಳ ಎಂಬುದು ಕೇವಲ ಶಬ್ದವಲ್ಲ. ಬಸವಣ್ಣನಲ್ಲಿ ಅದು ವ್ಯಕ್ತಿಯ ಗೌರವವನ್ನು ಎತ್ತಿ ಹಿಡಿಯುವಂಥದು, ವ್ಯಕ್ತಿಯೊಬ್ಬನ ಮನಸ್ಸಿನ ಆರೋಗ್ಯವನ್ನೂ ಸೂಚಿಸುವಂಥದು. ಇಷ್ಟು ಗಹನವಾದ ಅರ್ಥವುಳ್ಳ ’ಹದುಳ’ ಈ ಕವಿತೆಯಲ್ಲೂ ಬಳಕೆಯಾಗಿದೆ. ಆದರೆ ಇಲ್ಲಿ ಅದು ಸಂಭ್ರಮಕ್ಕೆ ಬಳಕೆಯಾಗಿದೆ. ಅದನ್ನು ಹೇಳುವ ರೀತಿಯೇ ಸಂಭ್ರಮದಂತಿದೆ. ಕವಿತೆಯ ಸಂಭ್ರಮ ಅದು."

ನಾನು ಬರೆಯ ಹೊರಟಿದ್ದು ಹದುಳದ ಬಗ್ಗೆಯಾಗಲೀ, ಕವಿತೆಯ ಬಗ್ಗೆ ಅಲ್ಲ. ಅದರ ಬಗ್ಗೆ ಇನ್ನೊಮ್ಮೆ ವಿಶದವಾಗಿ ಬರೆದೇನು. ಆದರೆ ಈ ಕವಿತೆಯನ್ನೋದಬೇಕಾದರೆ ಹೀಗೇ ಒಂದು ಯೋಚನೆ ಬಂತು.

ನಮಗೆ ಕನ್ನಡ ಎಷ್ಟು ಬರುತ್ತೆ? ದಿನಕ್ಕೆ ಮೂರು ಹೊತ್ತೂ (ನನ್ನಂತಹ ಕೆಲವರನ್ನು ಹೊರತು ಪಡಿಸಿ :( ) ಕನ್ನಡ ಮಾತಾಡುವ ನಾವು, ಅದೆಷ್ಟು ರೀತಿಯ ಪದ ಪ್ರಯೋಗ ಮಾಡ್ತೀವಿ? ಹೊಸದೇನೂ ಇಲ್ವಲ್ಲಾ? ತಿರುಗಾ ಮುರುಗಾ ( ಮುರುಗಾ ಅಂದ್ರೆ ತಮಿಳಾ? ಹೊಸ ಪ್ರಯೋಗ! ತಮಿಳ್ಗನ್ನಡ. ಹೇ ವಿಠ್ಠಲಾ :) ) ಅವೇ ಶಬ್ದಗಳನ್ನ ಬಳಸೀ ಬಳಸೀ ಹಿಂಡಿ ಹಿಪ್ಪೆ ಮಾಡ್ಬಿಟ್ತೀವಿ. ತೀರ ಕಾವ್ಯಮಯವಾಗಿ ಮಾತಾಡ್ಬೇಕೂಂತ ಇಲ್ಲ. ಅಲ್ಲೊಂದು ಇಲ್ಲೊಂದು ಹಾಗೇ ಒಂದೊಂದು ಶಬ್ದ ಬಳಸ್ತಾ ಹೋದ್ರೆ ಕೇಳ್ಲಿಕ್ಕೂ ಚೆನ್ನಾಗಿರುತ್ತೆ.

ಊರಲ್ಲಿ ಹಿರಿಯರು, ಅಜ್ಜ ಅಜ್ಜಿಯರು ಮಾತಾಡುವಾಗ ಇದ್ದಕ್ಕಿದ್ದಂತೆ, ಅವರಿಗರಿವಿಲ್ಲದಂತೇ ಒಂದೊಂದು ಶಬ್ದ ಉಪಯೋಗಿಸಿಬಿಡ್ತಾರೆ. ಅದು ಅವರಿಗೆ ಅಭ್ಯಾಸ. ಅವರು ಬೆಳೆದು ಬಂದ ವಾತಾವರಣದಲ್ಲಿ ಆ ರೀತಿಯ ಪದ ಪ್ರಯೋಗಗಳು ತೀರ ಸಹಜವಾಗಿ ಬಂದು ಬಿಡುತ್ತವೆ. ಅವರು ಏನಾದರೂ ಹೇಳಿದಾಗ ಅದು ತಕ್ಷಣ ಅರ್ಥವಾಗುತ್ತದೆ. ( ಅಡ್ಡಾದಿಡ್ಡಿ ಮಾತ್ನಾಡಿ, ’ಅರೇ ಯಾರ್, ಭಾವ್ನಾವೋಂಕೊ ಸಮಝೋ’ - ಊಹೂಂ ಬೇಕಿಲ್ಲ. )

ಬರೆಯೋವಾಗ ತುಂಬ ಜನ ಹೊಸಬರು ಸಾಧ್ಯವಾದಷ್ಟು ಹೊಸ ಶಬ್ದಗಳನ್ನು ಬಳಸ್ತಾರಾದರೂ, ನಾನು ಗಮನಿಸಿದ ಮಟ್ಟಿಗೆ ( ಅಲ್ಪ ಜ್ಞಾನಂ ಮಹಾ ಪಾಪಂ! ) ಬರೀ ಗಾಳಿ, ಮರ, ಕಡಲು, ಆಗಸ ಅಂತ ಸಹಜಗನ್ನಡದಲ್ಲೇ ಬರೀತಾರೆ. ಖಂಡಿತ ತಪ್ಪಲ್ಲ, ಅದರ ಆಚೆಗೂ ಒಂದ್ಸಲ ಅಡ್ಡಾಡಿ ಬನ್ನಿ.

ಕಂಗ್ಲೀಷಿನಲ್ಲಿ ಬರೆಯೋದರ ಬಗ್ಗೇನೂ ನನ್ನ ತಕರಾರೇನಿಲ್ಲ. ಅವರಿಗ್ಯಾವುದು ಇಷ್ಟನೋ ಹಾಗೇ ಬರೀಲಿ. ಆದರೆ ಬರೆಯೋ ಒಂದೆರಡು ಕನ್ನಡ ಶಬ್ದನಾದ್ರೂ ಕೇಳೋಕೆ ಇಂಪಾಗಿರಲಿ. ಏನಂತೀರ?

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಟ್ಟು |
ಒಪ್ಪಿರ‍್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||

Monday, November 16, 2009

ಭವ ಬಂಧನದೊಳೂ ಸಿಲುಕಿ...




ಮರೆಯಾಗಿವೆ ಕಣ್ಣೊಳಗಿನ ಕನಸುಗಳು
ಮನದ ತಳದ ಕೊಳದಲ್ಲಿ ಅಲೆಗಳಿಲ್ಲ

ಬಿಡುವಿರದ ಬದುಕಲ್ಲಿ ಮೌನಕ್ಕೆ ಬೆಲೆಯಿಲ್ಲ
ಕದವಿಕ್ಕಿದೆ ಎದೆಯೊಡಲು, ಓಲೈಸೆ ವಿಧಿಯಿಲ್ಲ

ಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿ
ಕನಿಷ್ಠ ಕಾಣುತ್ತಿಲ್ಲ ಮಾರೀಚನ ಜಿಂಕೆ - ದಣಿದ ಮನದಲ್ಲಿ

ಕದವಿಕ್ಕಿದ ಕೋಣೆಯಲಿ ಉಸಿರುಗಟ್ಟಿದೆ ಬದುಕು
ಹೊರಟಿಹೆನು ಹಸಿರ ಹುಡುಕಿ
ಬೆಳಕು ಕಂಡೀತೇ ಅಲ್ಲಿ - ಈಗಾದರೂ?





ನಡೆದ ದಾರಿಯ ಮೇಲೆ ನೇಸರನ ಕಂದೀಲು
ಅವನಿಯ ತಾಕೆ, ಕಂಡಿತ್ತು ನೆರಳು!

ಅಲ್ಲೊಂದು ಇಲ್ಲೊಂದು ಬಯಕೆಯಾ ಝರಿ
ಗರಿಗೆದರಿ ನರ್ತಿಸಿದ ನವಿಲು, ಅದ್ಯಾವ ಪರಿ

ಮನದ ಮುಗಿಲಲ್ಲಿ ಕುಂಭದ್ರೋಣ
ಮೂಡಿರುವ ಮಳೆಬಿಲ್ಲಿಗೆ ಅದೆಷ್ಟು ಬಣ್ಣ!

ನಿಂತು ನೋಡಿದರೆ ಚೆಲ್ಲಿತ್ತು ಮೋಡ
ನೀಲಿ ಅಂಗಳದ ತುಂಬಾ - ಮಗುವೊಂದು ಬರೆದಂತೆ ಚಿತ್ರ

ಸವೆದ ದಾರಿಯ ತುಂಬಾ ನೆನಪುಗಳ ಅಂಬಾರಿ
ಗರಿ ಬಿಚ್ಚಿ ನಲಿದಿದ್ದವು, ಅವಕಿಂದು ಯುಗಾದಿ

ಇಳಿಸಂಜೆ ಹೊತ್ತಿನಲಿ ತಂಗಾಳಿ ಬೀಸಿರಲು
ಗಿರಿತುದಿಯಲಿ ಮೈಯೊಡ್ಡಿದ ಮನ ಆರ್ದ್ರ

ಈಗ,
ಬಂದಿಳಿದೆಹೆನು ಮತ್ತದೇ ಕೋಣೆಯಲಿ, ಮತ್ಯಾಕೋ ತವಕ
ಆ ಸಂಜೆಯ ಮತ್ತಲ್ಲಿ ಇನ್ನೆಷ್ಟು ದಿವಸ ಸವೆಸಬಲ್ಲೆ ಬದುಕ?

Friday, November 13, 2009

ಅವಳ ನೆನೆವಾಗ ಕೋಲ್ಮಿಂಚು ಕುಣಿದಿತ್ತು

ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿವಾಗ
ಹುಣ್ಣಿಮೆಯ ಹೂಬಾಣ ಎಲ್ಲೆಲ್ಲೂ ಬಿದ್ದಾಗ
ಚೆಲುವಾಂಗ ಚಂದಿರ ಖಿಲ್ಲೆಂದು ನಕ್ಕಾಗ
ನನ್ನೆದೆಯ ಸ್ಫೂರ್ತಿಯೇ ನಾ ನೆನೆವೆ ನಿನ್ನಾಗ

ಮುಗಿಲೆತ್ತರದಲಿ ಮೇಘ ಸಿಟ್ಟಾದಾಗ
ಊರ ಬಯಲಲಿ ಕೋಲ್ಮಿಂಚು ಕುಣಿವಾಗ
ಮುಗಿಲಹನಿ ಮುತ್ತಾಗಿ ಸುರಿವಾಗ
ನನ್ನೆದೆಯ ಗೀತೆಯೇ ನಾ ನೆನೆವೆ ನಿನ್ನಾಗ

ಬಾನಂಚಿನಲಿ ನೇಸರ ಕೆಂಪಾದಾಗ
ಜೋಡಿಹಕ್ಕಿಗಳು ಬಾನಲ್ಲಿ ನಲಿವಾಗ
ತಂಗಾಳಿ ನನಗೆಂದೇ ಬೀಸಿದಾಗ
ನನ್ನೆದೆಯ ಒರತೆಯೇ ನಾ ನೆನೆವೆ ನಿನ್ನಾಗ

ಈ ಹೃದಯ ಪ್ರತಿಬಾರಿ ಬಡಿವಾಗ
ಧಮನಿ ಧಮನಿಯಲೂ ಪ್ರೀತಿ ಹರಿವಾಗ
ನಿನ್ನ ಹೆಸರೊಂದೇ ಉಸಿರಾದಾಗ
ನನ್ನೆದೆಯ ಕನಸೇ ನಾ ನೆನೆವೆ ನಿನ್ನಾಗ

Wednesday, November 11, 2009

ಭಾವ ತರಂಗಿಣಿ

ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕು
ತರುಗೆಲೆಯೊಂದು ಹಾರಿತ್ತು
ಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆ
ಅಲೆಯೊಂದು ಬೆದರಿತ್ತು

ಅದುರಿದಾ ಕೊಳದಲ್ಲಿ
ಚಂದಿರನು ಬೆಚ್ಚಿದ್ದ
ಮೆಲ್ಲನೆ ಹೊರಳಾಡಿ
ಮತ್ತದೋ ಮಲಗಿದ್ದ

ಆ ದೃಶ್ಯಕ್ಕೆ ಬೆರಗಾದೆ
ಕತ್ತಲಿಗೆ ಮರುಳಾದೆ

ಆ ಕೊಳದ ಬಳಿ
ಆ ಬಿದಿರು ಮೆಳೆ
ನನ್ನ ಭಾವವನ್ನೊಮ್ಮೆ ತೂಗಾಡಿತು

Tuesday, November 10, 2009

ಮಳೆ ಬಂದಾಗ ಮಳೆಬಿಲ್ಲೂ ಇರಲಿ

ಯುಕಿ ಉರುಶಿಬಾರ ಬರೆದಿರುವ ಮುಶಿಶಿ ಅನ್ನೋ ಜಪಾನೀ ಅನಿಮೇಶನ್ ಸರಣಿಯೊಂದರ ಕತೆಯನ್ನ ಸಾಧ್ಯವಾದಷ್ಟು ಕನ್ನಡೀಕರಿಸಿದ್ದೇನೆ.
ಮೂಲ ಕತೆ ಹೋಗೋ ಜಾಡೇ ಬೇರೆ ಆದರೂ, ನಮ್ಮ ನೆಲಕ್ಕೆ ಹೊಂದಿಸೋ ಪ್ರಯಾಸ ಪಟ್ಟಿದ್ದೀನಿ.

ಒಪ್ಪಿಸಿಕೊಳ್ಳಿ

-------





ಮಳೆ ಚೆನ್ನಾಗಿ ಸುರೀತಾ ಇತ್ತು. ಸಂಜೆ ಬೇರೆ ಆಗಿತ್ತು. ಕೆಲಸಕ್ಕೆ ಅಂತ ಹೊರಗೆ ಬಂದವರು, ಮನೆಗೆ ಹೋಗೋಕಾಗ್ದೆ, ಎಲ್ರೂ ಮರದ ಕೆಳಗೆ ಕುಳಿತಿದ್ವಿ. ಹಾಳೂ ಮೂಳೂ ಅಂತ ಮಾತಾಡ್ತಾ ಇರಬೇಕಾದ್ರೆ ಯಾರೋ ಒಬ್ಬ, ಜಾಸ್ತಿ ವಯಸ್ಸಾಗಿರಲಿಲ್ಲ, ಸುಮಾರು ಹತ್ರತ್ರ ಮೂವತ್ತಿರಬಹುದೇನೋ, ಆ ಮಳೇಲೇ ನಡಕೊಂಡು ಬರ‍್ತಾ ಇದ್ದ. ಬೆನ್ನಿಗೇನೋ ಕಟ್ಟಿಕೊಂಡಂಗಿತ್ತು. ಮಳೇಲಿ ಏನೂ ಕಾಣ್ತಿರಲಿಲ್ಲ.

ನಾವೆಲ್ಲಾ ಕುಳಿತಿದ್ದು ನೋಡಿ, ನಾವು ಕೂತಿದ್ದ ಕಡೆಗೇ ಬಂದ.
ಅವನು ಒಂದು ಹಂಡೆ ಹೊತ್ತುಕೊಂಡು ಬಂದಿದ್ದ.

ಮಳೇಲಿ ಬೇಜಾರಾಗಿ ಕುಳಿತಿದ್ದೋರಿಗೆ ಏನೋ ಚಿಕ್ಕ ಸಂತೋಷ, ಕುತೂಹಲ, ಇವನನ್ನ ಮಾತಾಡಿಸ್ತಾ ಸಮಯ ಹಾಳು ಮಾಡಬೌದು ಅಂತ.

’ಏನಪ್ಪಾ ಹಂಡೆ ಚೆನ್ನಾಗಿದೆ, ಮಾರ‍್ತೀಯಾ?’ ನಾನು ಕೇಳಿದೆ.

’ಊಹೂಂ, ಇಲ್ಲ. ಇದನ್ನ ಮಾರೋಕೆ ತಂದಿಲ್ಲ.’ ಹೇಳಿದ.

ಮತ್ಯಾಕಪ್ಪಾ, ಇಷ್ಟು ದೊಡ್ಡ ಹಂಡೆ ಹೊತ್ಕೊಂಡು ಈ ಮಳೇಲಿ ಹೀಗೆ ಅಲೀತಾ ಇದ್ದೀಯಾ? ಯಾರೋ ಕೇಳಿದ್ರು.

ಅವನು ಎರಡು ನಿಮಿಷ ಮಾತಾಡಲಿಲ್ಲ.

ಇದರಲ್ಲಿ ಕಾಮನಬಿಲ್ಲನ್ನು ಹಿಡಿದು ಊರಿಗೆ ತಗೊಂಡ್ಹೋಗೋಣ ಅಂತಿದ್ದೀನಿ ಅಂದು ನಕ್ಕ.

ಎಲ್ರೂ ನಕ್ರು. ಜನಕ್ಕೆ ಹೊಸ ಹುರುಪು ಬಂದಿತ್ತು. ಧೋ ಅಂತ ಸುರಿಯೋ ಮಳೇಲಿ ಹುಚ್ಚುಚ್ಚಾಗಿ ಮಾತಾಡೋನು ಸಿಕ್ಕಿದ್ದ.

ಆಯ್ತು ಕಣಪ್ಪ, ಹಂಗೇ ಅಂತ ಇಟ್ಕಳಣ. ಅದನ್ಯಾಕಪ್ಪಾ ನೀನು ಹಿಡೀಬೇಕು?

ಅವನಿಗೂ ಒಬ್ಬನೇ ಅಡ್ಡಾಡಿ ಬೇಜಾರಾಗಿತ್ತೇನೋ, ನೀಟಾಗಿ ಕೂತ್ಕೊಂಡು ಮಾತು ಶುರೂ ಮಾಡ್ದ.

ನಂದು ಘಟ್ಟದ ಕೆಳಗಡೆ ಒಂದೂರು, ಮನೇಲಿ ನಾಲ್ಕು ಜನ ಇದ್ದೀವಿ. ಅಪ್ಪ, ಅಮ್ಮ, ಅಣ್ಣ ಮತ್ತು ನಾನು.
ಅಪ್ಪ ಮೊದಲೆಲ್ಲಾ ಸೇತುವೆ ಕಟ್ತಾ ಇದ್ರು. ನಮ್ಮ ಮನೆತನದ ಕೆಲಸ ಅದು. ಇತ್ತೀಚಿಗೆ ಏನೂ ಮಾಡ್ತಿಲ್ಲ. ಊರೋರೆಲ್ಲಾ ಅವ್ರಿಗೆ ಹುಚ್ಚು ಅಂತಾರೆ.
ನಾನು ಚಿಕ್ಕೋನಿದ್ದಾಗಿಂದನೂ ಜನ ಅವರಿಗೆ ಅಣಕಿಸ್ತಾನೇ ಇದ್ರು.
ಅವರಿಗೆ ಮಳೆ ಕಂಡ್ರೆ ಅದೇನೂ ಪ್ರೀತಿ. ಒಂಥರಾ ಖುಷಿ. ಮಳೆ ಬರ್ತಿದ್ದ ಹಾಗೇನೇ ಹೊರಗೆ ಓಡ್ಹೋಗ್ ಬಿಡೋರು. ಅದೆಲ್ಲಿಗೆ ಹೋಗ್ತಿದ್ರೋ ಅವ್ರಿಗೇ ಗೊತ್ತಾಗ್ತಾ ಇರಲಿಲ್ಲ. ಮಳೆ ಎಲ್ಲಾ ನಿಂತ ಮೇಲೆ ಎಲ್ಲಾದ್ರೂ ಒಂದ್ಕಡೆ ಕೆಸರುಗುಂಡೀಲಿ ಅರ್ದಮರ್ದ ಹೂತ್ಹೋಗಿರೋರು. ನೋಡ್ದೋರು ಯಾರಾದ್ರೂ ಕರ‍್ಕೊಂಡು ಬಂದು ಮನೇಗಿ ಬಿಡೋರು. ಒಂದೊಂದ್ಸಲ ತಾವಾಗೇ ಮನೆಗೆ ಬರೋರು. ಮೈತುಂಬಾ ಕೊಚ್ಚೆ, ಗಾಯ. ಅವರಿಗೆ ಅದ್ಯಾವ್ದ್ರ ಪರಿವೇನೇ ಇರ್ತಿರ‍್ಲಿಲ್ಲ. ಆದ್ರೆ ತುಂಬಾ ದುಃಖದಲ್ಲಿರ್ತಿದ್ರು.

’ಈ ಸಲನೂ ಸಿಗ್ಲಿಲ್ಲ.’

ಪ್ರತೀಸಲ ವಾಪಸ್ ಬಂದಾಗಲೂ ಅದನ್ನೇ ಹೇಳ್ತಿದ್ರು. ನಾನು ಏನಪ್ಪಾ ಅಂದ್ರೆ ಅಮ್ಮ ಗದರಿಸಿ ಓಡಿಸಿಬಿಡೋಳು.

ಅಪ್ಪ ಈ ರೀತಿ ಆದ್ರಲ್ಲಾ ಅಂತ ಅನ್ನೋದಕ್ಕಿಂತನೂ, ಅದೇನೂಂತ ಗೊತ್ತಾಗ್ಲಿಲ್ವಲ್ಲಾ ಅಂತ ಬೇಜಾರಾಗೋದು.

ಒಂದಿನ ಅಪ್ಪ ನನ್ನನ್ನ ಊರ ಹೊರಗಡೆ ತೋಪಲ್ಲಿ ಅಡ್ಡಾಡಿಸ್ತಾ ಇದ್ರು. ಅವತ್ತು ಒಳ್ಳೆ ಬಿಸಿಲಿತ್ತು. ಅವತ್ತೂ ಅಪ್ಪಂಗೆ ಬೇಜಾರಾಗಿತ್ತು.

ಯಾಕಪ್ಪಾ ಬೇಜಾರಾಗಿದೀಯ? ಅಂತ ಕೇಳ್ದೆ.

ಏನಿಲ್ಲ ಬಿಡಪ್ಪ. ನನ್ನ ದುಃಖ ನಂಗೆ. ಅಂದ್ರು.

ನಾನು ಬಿಡಲಿಲ್ಲ. ಹೇಳಪ್ಪಾ ಏನಾಯ್ತು?

ಇಂಥಾ ಬಿಸಲಲ್ಲಿ, ಮಳೆ ಬೀಳ್ಬೇಕು ಕಣೋ. ಆಗ ನೋಡು ನಿಜವಾದ ಸಂತೋಷ.

ಮಳೆ ಬಂದ್ರೆ ಏನಾಗುತ್ತೆ? ನಂಗೇನೂ ಗೊತ್ತಾಗಿರಲಿಲ್ಲ.

ಕಾಮನಬಿಲ್ಲು ಬರುತ್ತೆ ಕಣೋ!
ಅಪ್ಪನ ದನಿಯಲ್ಲಿ ಏನೋ ಒಂಥರಾ ಖುಷಿಯಿತ್ತು.

ಅದನ್ನೇ ಏನಪ್ಪಾ ನೀನು ಪ್ರತೀ ಸಲ ಹುಡಕ್ಕೊಂಡು ಹೋಗೋದು ?

ಅಪ್ಪ ಒಂದ್ನಿಮಿಷ ಸುಮ್ನಿದ್ರು.
ಹೌದು ಮಗನೇ. ಆದ್ರೆ ಅಮ್ಮಂಗೆ ಹೇಳ್ಬೇಡ. ನಾನು ಯಾರಿಗಾದ್ರೂ ಹೇಳಿದ್ರೆ ಅವಳಿಗೆ ತುಂಬಾ ಸಿಟ್ಟು ಬರುತ್ತೆ. ನಂಗೆ ಬುದ್ಧಿ ಸರಿಯಿಲ್ಲ ಅಂತ ಅಣಕಿಸ್ತಾರೆ ಅಂತ ಬೈತಾಳೆ.

ನಂಗೆ ಕುತೂಹಲ ಹೆಚ್ಚಾಗ್ತಾ ಇತ್ತು. ಕಾಮನಬಿಲ್ಲು ಕಂಡ್ರೆ ಏನಾಗುತ್ತಪ್ಪಾ?

ಅಪ್ಪನ ಜೊತೆಗೆ ಯಾರೂ ಜಾಸ್ತಿ ಮಾತಾಡ್ತಾ ಇರ್ಲಿಲ್ಲ. ಕಾಮನಬಿಲ್ಲಿನ ಬಗ್ಗೆ ಕೇಳಿದ್ದು ಅವರಿಗೆ ಒಳ್ಳೇ ಹುರುಪು ಬೇರೆ ಕೊಟ್ಟಂಗಾಗಿತ್ತು.

ನೀವೆಲ್ಲಾ ಅದನ್ನ ದೂರದಿಂದ ನೋಡಿದ್ದೀರ. ನಾನು ಅದನ್ನು ಹತ್ತಿರದಿಂದ ನೋಡಿದ್ದೀನಿ. ಅದನ್ನ ಮುಟ್ಟಿದೀನಿ ಗೊತ್ತಾ. ಆ ಸಂತೋಷ ನಿಮಗೆಲ್ಲಾ ಗೊತ್ತಾಗಲ್ಲ.

ಅಷ್ಟೊತ್ತೆಗಾಗಲೇ ನಾವಿಬ್ರೂ ಎದರಾ ಬದರಾ ಕುಳಿತಿದ್ವಿ. ಅಪ್ಪನ ಮುಖದಲ್ಲಿ ಗೆಲುವು. ಕಣ್ಣುಗಳು, ಅವ್ರು ಈಗ್ಲೇ ಅದನ್ನ ನೋಡ್ತಾ ಇದ್ದಾರೇನೋ ಅನ್ನೋ ಹಾಗೆ ಹೊಳೀತಾ ಇದ್ವು.
ಅಪ್ಪನ ಮಾತಿನ್ನೂ ಮುಗಿದಿರಲಿಲ್ಲ.

ಆಗ ನೀನಿನ್ನೂ ಹುಟ್ಟಿರಲಿಲ್ಲ. ನಾನು ಒಂದ್ಸಲ ಶಿಕಾರಿಗೆ ಅಂತ ಕಾಡಿಗೆ ಹೋಗಿದ್ದೆ. ರಾತ್ರಿ ಮರದ್ಮೇಲೇ ನಿದ್ದೆ ಮಾಡ್ಬಿಟ್ಟಿದ್ದೆ. ಬೆಳಗ್ಗೆ ಎದ್ದು ಹಾಗೇ ಅಡ್ಡಾಡ್ತಾ ವಾಪಸ್ ಹೊರಟಿದ್ದಾಗ ಇದ್ದಕ್ಕಿದ್ದಂತೆ ಮಳೆ ಸುರಿಯೋಕೆ ಶುರು ಮಾಡ್ತು. ನಾನು ಮತ್ತೂ ಸ್ವಲ್ಪ ಹೊತ್ತು ಕಾಡೊಳಗೇ ಉಳ್ಕೊಂಡೆ. ಮಳೆ ನಿಲ್ಲಲ್ಲ ಅಂತ ಅನಿಸಿದಾಗ, ಮಳೇಲೇ ನೆಂದ್ಕೊಳ್ತ ಮನೆಗೆ ಹೊರಟೆ. ಸ್ವಲ್ಪ ದೂರ ಹೋಗಿರ‍್ಲಿಲ್ಲ, ಅವಾಗ ಕಾಣ್ತು ನೋಡು ಕಾಮನಬಿಲ್ಲು!

ನನಗೆ ಮೊದಲು ಅದೇನೂ ಅಂತಾನೇ ಗೊತ್ತಾಗಿರ‍್ಲಿಲ್ಲ. ಒಂಥರಾ ಬೆಳಕು. ಅದೇನು ಮಜಾ ಅಂತೀಯಾ. ನಾನು ಮಳೇಲೇ ನೆನೆಯುತ್ತಾ ಅದರೊಳಗೆ ಹೋಗ್ಬಂದೆ. ಅಷ್ಟೇ ಮತ್ತೆ ನನಗೆ ಅದು ಅಲ್ಲಿ ಕಾಣ್ಲಿಲ್ಲ.

ಮನೆಗೆ ಬಂದು ನಿಮ್ಮಮ್ಮಂಗೆ ಹೇಳ್ದೆ. ಅವ್ಳು ನಂಬ್ಲಿಲ್ಲ. ಅವಳನ್ನ ಕರ‍್ಕೊಂಡು ಅದು ಕಂಡಿದ್ದ ಜಾಗಕ್ಕೆ ಕರೆದೊಯ್ದೆ. ಆದ್ರೆ ಅಲ್ಲಿ ಅದು ಕಂಡಿತ್ತು ಅಂತ ‍ತೋರಿಸೋಕೆ ಏನೂ ಇರಲಿಲ್ಲ.


ಒಂದಿನ ದೂರದಲ್ಲಿ ಕಾಣ್ತು. ನಾನು ಅದರ ಕಡೆಗೇನೇ ಓಡತೊಡಗಿದೆ. ಇನ್ನೂ ಸ್ವಲ್ಪ ದೂರ ಇದೆ ಅನ್ನೋವಷ್ಟರಲ್ಲಿ ಮಾಯವಾಗ್ಬಿಟ್ತು. ಅಷ್ಟೇ ನೋಡು ಅವತ್ತಿಂದ ಅದು ನನಗೆ ಕಂಡಿಲ್ಲ.

ಇದನ್ನೆಲ್ಲಾ ನಿಂಗೆ ಹೇಳ್ದೆ ಅಂತ ಅಮ್ಮನಿಗೆ ಹೇಳ್ಬಿಡಬೇಡ ಮತ್ತೆ.

ನಾನು, ಇಲ್ಲ ಹೇಳಲ್ಲ ಅಂತ ಮಾತು ಕೊಟ್ಟೆ.

ಅಪ್ಪ, ನಾನು ದೊಡ್ಡೋನಾಗೋವರೆಗೂ ಮಳೆ ಬಂದಾಗ ಹೊರಗೆ ಓಡ್ತಾನೇ ಇದ್ರು. ವಯಸ್ಸಾಗ್ತಾ ಬಂದ ಹಾಗೆ ನಾವೆಲ್ಲಾ ಅವರನ್ನ ಹಿಡಿದು ಒಳಗೆ ಕೂರಿಸ್ತಾ ಇದ್ವಿ.

ಈಗ ಅವರು ಪೂರ್ತಿ ಹಾಸಿಗೆ ಹಿಡ್ದಿದಾರೆ. ಅವ್ರ ಕೊನೇ ಆಸೆ ಮತ್ತೆ ಕಾಮನಬಿಲ್ಲನ್ನು ನೋಡೋದು. ಅದನ್ನ ಮುಟ್ಟೋದು.
ಅವರಿಗೋಸ್ಕರ ನಾನೀಗ ಆ ಕಾಮನಬಿಲ್ಲನ್ನ ಹಿಡಿಯೋಕೆ ಹೊರಟಿದ್ದೀನಿ.

ಹಾಗಾದ್ರೆ ನೀನು ಬರಿಗೈಯಲ್ಲಿ ಕಾಮನಬಿಲ್ಲನ್ನ ಹೊರಟಿದ್ದೀಯಾ ಅನ್ನು. - ಗುಂಪಲ್ಲಿ ಯಾರೋ ಕೇಳಿದ್ರು.

ಅದು ಸಿಗೋ ತನಕ ನನಗೆ ಗೊತ್ತಿಲ್ಲ. ಅಂತ ಅವನಂದ.

ಕತೆ ಚೆನ್ನಾಗಿತ್ತು. ಆದ್ರೆ ಕೊನೆ ಇನ್ನೂ ಸ್ವಲ್ಪ ಚೆನ್ನಾಗಿರಬೇಕಿತ್ತು. ಇನ್ನೊಬ್ರು ಯಾರೋ ಹೇಳಿದ್ರು.

ಇವನು ಸುಮ್ಮನೆ ನಕ್ಕ.

ಅಷ್ಟೊತ್ತಿಗೆ ಮಳೆ ನಿಂತಿತ್ತು. ಎಲ್ರೂ ಮನೆಗೆ ಹೋದ್ರು. ನಾನು ಅವನು ಇಬ್ರೇ ಉಳಿದ್ವಿ. ಅವನೂ ಎದ್ದು ನಿಂತ.

ಕಾಮನಬಿಲ್ಲು ಹಿಡಿಯೋದಾದ್ರೆ, ಈ ಕಡೆ ಗುಡ್ಡದ ಕಡೆ ಹೋಗು. ಒಂದೇ ಸಮನೆ ಮಳೆ ಸುರೀತಾ ಇರುತ್ತೆ. ಸಿಕ್ರೂ ಸಿಗಬೌದು. ನಾನು ಹೇಳಿದೆ.
ನನಗೇಕೋ ಅವನ ಕತೆ ನಿಜ ಅಂತ ಅನ್ನಿಸಿತ್ತು.

ನಾನೂ ನಿಂಜೊತೆ ಬರ್ತೀನಿ. ಎದ್ದು ನಿಂತೆ.

ಇದು ನಿಜ ಅಂತ ನಿನಗ್ಯಾಕೆ ಅನ್ನಿಸ್ತು? ಮತ್ತೆ ನೀನ್ಯಾಕೆ ನನ್ನ ಜೊತೆಗೆ ಬರ್ತೀಯ? ಅವನು ಕೇಳಿದ.

ಏನಿಲ್ಲ, ಇನ್ನೊಂದು ಹದಿನೈದು ದಿನ ನನಗೇನೂ ಕೆಲಸ ಇಲ್ಲ. ಪ್ರತೀ ವರ್ಷ ಮೇಳಕ್ಕೆ ಹೋಗ್ತಿದ್ದೆ. ಈ ವರ್ಷ ನಿಂಜೊತೆಗೆ ಬರ್ತೀನಿ. ಅಷ್ಟೊರಳಗೆ ನೀನು ಮನಸು ಬದಲಾಯಿಸಿ ಹಂಡೆ ಮಾರಿದ್ರೆ, ಅದೂ ಒಂದು ರೀತಿ ಲಾಭನೇ ಅಲ್ವಾ?

ಎರಡು ನಿಮಿಷ ಅವನು ಸುಮ್ಮನಿದ್ದ. ಮನೇಲಿ ಹೇಳಲ್ವಾ ಅಂತ ಕೇಳಿದ.

ತೊಂದ್ರೆ ಇಲ್ಲ. ಅವರಿಗೆ ಅಭ್ಯಾಸ ಆಗಿದೆ. ಮನೆಗೆ ಹೋಗ್ಲಿಲ್ಲ ಅಂದ್ರೆ ಮೇಳಕ್ಕೆ ಹೋಗಿದಾನೆ ಅಂತ ತಿಳ್ಕೋತಾರೆ.

ಅವನು ನಕ್ಕ. ಅದೊಂಥರಾ ಮತ್ತೊಬ್ಬ ಹುಚ್ಚ ಸಿಕ್ಕ ಬಿಡು ಅನ್ನೋ ಹಾಗಿತ್ತು.

ನಾವಿಬ್ರೂ ಅವತ್ತು ರಾತ್ರಿ ಗುಡ್ಡದಲ್ಲಿಯೇ ಉಳಿದೆವು.

ನೀನು ಹೀಗೆ ಎಷ್ಟು ದಿವಸದಿಂದ ಅಲೀತಾ ಇದ್ದೀಯಾ? ಅಂತ ಕೇಳಿದೆ.

ಸ್ವಲ್ಪ ಹೊತ್ತು ಸುಮ್ಮನಿದ್ದು ’ನಾಲ್ಕು ವರ್ಷ’ ಅಂದ.

ನಿಜ ಹೇಳು, ಹೀಗ್ಯಾಕೆ ಅಲೀತಾ ಇದ್ದೀಯ? ಯಾರದ್ರೂ ಪ್ರೀತಿಪಾತ್ರರನ್ನ ಹೀಗೆ ಸಾಯೋ ಸ್ಥಿತೀಲಿ ಬಿಟ್ಟು ನಾಲ್ಕು ವರ್ಷ ಯರೂ ಅಡ್ಡಾಡಲ್ಲ. ನಿಮ್ಮಪ್ಪನಿಗೋಸ್ಕರ ಕಾಮನಬಿಲ್ಲು ತರ್ತೀನಿ ಅನ್ನೋದು ನಿಜಾನಾ? ನಾನು ಕೇಳಿದೆ.

ನಾನು ಒಂದೊಂದು ಪ್ರಶ್ನೆ ಕೇಳ್ದಾಗಲೂ ಅವನು ಯೋಚನೆ ಮಾಡ್ತಿದ್ದ. ಈ ಸಲ ಸ್ವಲ್ಪ ಜಾಸ್ತೀನೇ ಸುಮ್ಮನಿದ್ದ.

ಹೌದು ನಿಜ. ಆದರೆ ಅದೊಂದೇ ಕಾರಣ ಅಲ್ಲ. ಅವನು ಹಾಗೇ ಆಕಾಶ ನೋಡ್ತ ಮಾತಾಡ್ತಿದ್ದ.

ನಾನು ಸುಮ್ಮನೆ ಅವನನ್ನು ನೋಡ್ತಾ ಕುಳಿತಿದ್ದೆ.

ಅವನು ನನ್ನ ಕಡೆ ನೋಡಲೂ ಇಲ್ಲ. ಮಾತು ಮುಂದುವರೆಸಿದ.

ನಾನಿನ್ನೂ ನನ್ನ ಹೆಸರು ಹೇಳಿಲ್ಲ ಅಲ್ವಾ? ನನ್ಹೆಸರು ಇಂದ್ರ ಧನುಷ್. ನನ್ನ ಕಡೆ ನೋಡ್ದ.

ಅವನ ಹೆಸರು ಕೇಳಿಲ್ಲ ಅಂತ ಅನ್ನೋದು ಆಗ ನನಗೆ ನೆನಪಾಯ್ತು.

ಅವನು ಮಾತು ಮುಂದುವರೆಸಿದ.

ವಿಚಿತ್ರವಾಗಿದೆ ಅಂತ ಅನ್ಸುತ್ತಾ?
ನನಗೂ ಹಾಗೇ ಅನ್ನಿಸುತ್ತಿತ್ತು. ಊರ ಜನಕ್ಕೂ!
ನಮ್ಮ ಹಳ್ಳೀಲಿ ಈ ರೀತಿ ಯಾರದ್ದೂ ಹೆಸರಿರಲಿಲ್ಲ.

ಅಪ್ಪನ್ನ ಕೇಳಿದ್ದಕ್ಕೆ ’ನಾನು ನೋಡಿರೋ ಅತ್ಯಂತ ಸುಂದರವಾದ ವಸ್ತು ಹೆಸರನ್ನ ನಿನಗಿಟ್ಟಿದ್ದೀನಿ.’ ಅಂತ ಹೇಳಿದ್ರು.

ಊರ ಜನ ನನ್ನ ಹೆಸರಿಡ್ಕೊಂಡು ತುಂಬಾ ಕಾಡ್ತಿದ್ರು. ಹೋಗ್ಲಿ ಬಿಡು. ನಾನು ಹೇಳ್ಲಿಕ್ಕೆ ಹೊರಟಿದ್ದು ಅದನ್ನಲ್ಲ.

ನಾನು ಅವಾಗ ಹೇಳಿದ ಹಾಗೆ, ಅಪ್ಪ ಸೇತುವೆ ಕಟ್ತಾ ಇದ್ರು. ಅಣ್ಣಾನು ಸಹ ಅಪ್ಪನ ದಾರೀಲೇ ಸೇತುವೆ ಕಟ್ಟೋದನ್ನ ಕಲಿತ. ನನಗೆ ಆ ಥರದ್ದೇನೂ ಬರ್ತಿರಲಿಲ್ಲ. ಒಬ್ಬ ಕೂಲಿಯವನ ಕೆಲಸ ಅಷ್ಟೇ ನನ್ನಿಂದ ಮಾಡಲು ಆಗ್ತಾ ಇದ್ದದ್ದು.

ಎಲ್ಲೆಲ್ಲಿ ಸೇತುವೆ ಕಟ್ಟಿ ಬಂದ್ರೂ, ನಮ್ಮೂರಿನ ಸೇತುವೆ ಮಾತ್ರ ನಮಗೆ ಸವಾಲಾಗಿತ್ತು. ಎಷ್ಟೇ ಬಲವಾಗಿ ಕಟ್ಟಿದ್ರೂ, ಮಳೆಗಾಲದಲ್ಲಿ ಸೇತುವೆ ಮುರಿದು ಬೀಳ್ತಿತ್ತು.

ಪ್ರತೀ ಸಲ ಬಿದ್ದಾಗಲೂ, ಅಣ್ಣ ಒಂದು ಹೊಸ ಯೋಜನೆ ರೂಪಿಸ್ತಿದ್ದ. ಈ ಸಲ ಕಟ್ಟೇ ಕಟ್ತೀನಿ ಅಂತ ಹೊರಡ್ತಿದ್ದ. ಊರ ಜನ ಅವನನ್ನ ಹೊಗಳೋರು. ನನಗೇನೂ ಬರ್ತಿರಲಿಲ್ವಲ್ಲಾ ನನ್ನ ಕಂಡ್ರೆ ಅವರೆಗೆ ಅಷ್ಟಕ್ಕಷ್ಟೇ. ಮೇಲಾಗಿ ನನ್ಹೆಸ್ರು ಬೇರೆ ವಿಚಿತ್ರವಾಗಿತ್ತು. ನನಗೆ ಅಣಕಿಸೋರು.
ನನಗೆ ಮೊದ್ ಮೊದ್ಲು ಬೇಜಾರಾಗ್ತಿರಲಿಲ್ಲ. ಆದ್ರೆ ಆಮೇಲಾಮೇಲೆ ಅದನ್ನೆಲ್ಲಾ ತಡಕೊಳ್ಳಿಕ್ಕಾಗ್ತಾ ಇರ್ಲಿಲ್ಲ. ಹೊರಗೆ ಹೋಗೋದನ್ನ ನಿಲ್ಲಿಸಿ ಬಿಟ್ಟೆ.

ಮನೇಲಿ ಅಪ್ಪ ಮಲಗಿರ್ತಾ ಇದ್ರಲ್ಲ, ಅವರ ಜೊತೆಗೇನೇ ಇರ್ತಿದ್ದೆ.

ಅವಾಗೆಲ್ಲ ನನಗವರು ಕಾಮನಬಿಲ್ಲಿನ ಕಥೆ ಹೇಳ್ತಿದ್ರು.

ಹಾಗೇ ತುಂಬಾ ದಿನ ಕಳೆದು ಬಿಟ್ಟೆ. ಒಂದಿನ ರಾತ್ರಿ ಅವರು ನನ್ನನ್ನ ಕರೆದರು. ಹತ್ತಿರ ಹೋದ ಮೇಲೆ ಒಂದು ಚೀಟಿ ಕೊಟ್ಟರು.

ಏನಪ್ಪಾ ಇದು? ಅಂತ ಕೇಳಿದೆ.

ನಿನಗೆ ನಿನ್ನ ಹೆಸರು ಇಷ್ಟ ಇಲ್ಲ ಅಲ್ವಾ? ನಾನು ನೋಡಿದ ತುಂಬಾ ಸುಂದರವಾದ ವಸ್ತು ಅದು. ಅದನ್ನೇ ನಿನಗೆ ಹೆಸರಾಗಿ ಇಟ್ಟಿದ್ದೆ. ತಗೋ ಈ ಚೀಟಿಯಲ್ಲಿ ನಿನಗೆ ಬೇರೆ ಹೆಸರು ಯೋಚನೆ ಮಾಡಿ ಬರ‍್ದಿದ್ದೀನಿ. ನಿನ್ನ ಹೆಸರು ಬದಲಿಸಿಕೋ. ಅಪ್ಪ ಹೇಳಿದ್ರು.

ನನಗೆ ತುಂಬಾ ಬೇಜಾರಾಯಿತು. ಅಪ್ಪಂಗೂ ನನ್ನ ಬಗ್ಗೆ ಗೊತ್ತಾಗಿ ಹೋಯ್ತಲ್ಲ. ಹಾಗೇ ಯೋಚನೆ ಮಾಡ್ತಾ ಹೋದೆ. ನಾನೇನು ಮಾಡ್ತಿದ್ದೀನಿ? ಯಾಕೆ ಹೀಗಿದ್ದೀನಿ? ನನಗೇ ಒಂಥರಾ ಅನಿಸೋಕೆ ಶುರುವಾಯ್ತು.

ನಾನು ಆ ಚೀಟಿ ಓದಲಿಲ್ಲ. ಇಲ್ಲ ಕಣಪ್ಪಾ, ನನಗೇನೂ ಬೇಜಾರಿಲ್ಲ. ನಾನು ಹೆಸರು ಬದಲಿಸೋದಿಲ್ಲ. ನಾನು ಒಂದಿನ ಒಳ್ಳೇ ಸೇತುವೆ ಕಟ್ತೀನಿ. ಏನೇನೋ ಬಡಬಡಿಸಿದೆ.

ಆ ರಾತ್ರಿ ನಾನು ಮನೆ ಬಿಟ್ಟು ಬಂದೆ.
ಅವತ್ತಿಂದಾ ಹೀಗೆ ಅಲೀತಾ ಇದ್ದೀನಿ.

ಅವನು ಮಾತು ಮುಗಿಸಿದ.

ನಿನಗ್ಯಾವತ್ತೂ ನೀನೊಂದು ಮುಖವಾಡ ಹಾಕ್ಕೊಂಡಿದೀಯ ಅಂತ ಅನ್ಸಲ್ವಾ? ನಿನಗೆ ಸೇತುವೆ ಕಟ್ಟೋಕೆ ಬರಲ್ಲ. ನಿನ್ನ ಹೆಸರು ವಿಚಿತ್ರವಾಗಿದೆ ಅಂತ ಜನ ನಗ್ತಾರೆ ಅನ್ನೋ ಕಾರಣಕ್ಕೆ ಮನೆ ಬಿಟ್ಟು ಬಂದೆ. ಸರಿ. ಆದ್ರೆ ಬೇರೆ ಯಾವ್ದಾದ್ರೂ ಊರಲ್ಲಿ ನೆಲೆಯೂರಬಹುದಿತ್ತಲ್ವಾ? ಬೇರೆ ಯಾವ್ದಾದ್ರೂ ಕೆಲ್ಸ ಮಾಡ್ತ ಜೀವನ ಮಾಡಬಹುದಿತ್ತು. ಇಲ್ಲ, ನೀನು ನಿನ್ನ ದುಃಖಾನ ದೊಡ್ಡದು ಮಾಡ್ಕೊಳ್ಳಿಕ್ಕೇ ಅಂತ ಈ ಕಾಮನಬಿಲ್ಲನ್ನ ಹುಡಕ್ಕೊಂಡು ಹೊರಟಿದ್ದೀಯ. ಇದರಲ್ಲಿ ನಿನ್ನ ಪಾಲೆಷ್ಟು, ನಿಮ್ಮಪ್ಪನ ಪಾಲೆಷ್ಟು? - ನನಗೆ ಗೊತ್ತಿಲ್ಲದ ಹಾಗೇನೇ ನಾನು ಕೇಳ್ಬಿಟ್ಟಿದ್ದೆ. ಕೇಳಬಾರದಿತ್ತೇನೋ ಅಂತ ಕೇಳಿದ ಮೇಲೆ ಅನ್ನಿಸಿತು.

ಒಮ್ಮೆ ಜೋರಾಗಿ ಉಸಿರು ಬಿಟ್ಟ.
ನಿಜ, ನಾನು ತುಂಬಾ ಸಲ ನನ್ನನ್ನಾನೇ ಕೇಳ್ಕೊಳ್ಳೋ ಪ್ರಶ್ನೆ ಅದು. ಮನೆ ಬಿಟ್ಟು ಬಂದ ತಕ್ಷಣ ಏನು ಮಾಡ್ಲಿ ಅಂತ ಗೊತ್ತಾಗ್ಲಿಲ್ಲ. ಅಪ್ಪ ಆ ರೀತಿ ಮಾತಾಡಿದ್ದು ನೋಡಿ, ನನ್ನ ಬಗ್ಗೆ ನಂಗೇ ಮರುಕ ಹುಟ್ಟಿ, ಒಂಥರಾ ಭಾವೋದ್ವೇಗಕ್ಕೆ ಒಳಗಾಗಿ, ಹೊರಗೆ ಬಂದ್ಬಿಟ್ಟಿದ್ದೆ. ಆದ್ರೆ ಮುಂದೆ ಏನು ಮಾಡ್ಬೇಕು ಅಂತ ಯೋಚನೆ ಮಾಡಿರ್ಲಿಲ್ಲ. ಅಲೀತಾ ಅಲೀತಾ ಬೆಳಗಾಗೋದೊರಳಗೆ ಕಾಡು ಮಧ್ಯಕ್ಕೆ ಬಂದು ಬಿಟ್ಟಿದ್ದೆ. ಬೆಳಗ್ಗೆ ಸೂರ್ಯ ಹುಟ್ತಾ ಇದ್ದ ಹಾಗೇ ಮಳೆ ಶುರುವಾಯ್ತು. ನನಗೆ ಅಪ್ಪನ ನೆನಪಾಯ್ತು. ಅಪ್ಪನ ಕಾಮನಬಿಲ್ಲಿನ ನೆನಪಾಯ್ತು. ನನಗೆ ಕೂಡ ಕಾಮನಬಿಲ್ಲು ಅಂದ್ರೆ ಪ್ರೀತಿ. ಒಂಥರಾ ಸೆಳೆತ. ಹೊರಗೆಲ್ಲಾ ಓಡ್ಹೋಗದೇ ಇದ್ರೂ ಮಳೆ ಬಂದ್ರೆ ನಂಗೂ ಖುಷಿಯಾಗ್ತಿತ್ತು. ಆಗ ಮಳೆ ಆಗ್ತಾ ಇದ್ದ ಹಾಗೇ, ಅಪ್ಪನ ಕನಸನ್ನ ಪರೀಕ್ಷೆ ಮಾಡೇ ಬಿಡೋಣ. ಅದು ನಿಜಕ್ಕೂ ಅವರು ಹೇಳಿದ ಹಾಗೇ ಇರುತ್ತೋ ಇಲ್ವೋ ಅಂತ ಒಮ್ಮೆ ನೋಡೇ ಬಿಡೋಣ. ಅಪ್ಪನ್ನ ಹುಚ್ಚ ಅಂದೋರನ್ನ, ನನ್ಹೆಸ್ರನ್ನ ಆಡ್ಕೊಂಡು ನಕ್ಕೋರಿಗೆ ನಿಜ ತೋರಿಸೇ ಬಿಡೋಣ ಅಂತ ತೀರ್ಮಾನ ಮಾಡ್ದೆ. ಆದ್ರೆ ಈ ನಾಕು ವರ್ಷಗಳಲ್ಲಿ ಸಾಕಷ್ಟು ಮಳೆ ನೋಡಿದ್ದೀನಿ. ತುಂಬಾ ಸಲ ಕಾಮನಬಿಲ್ಲನ್ನ ನೋಡಿದ್ದೀನಿ. ಆದ್ರೆ, ಅಪ್ಪ ಹೇಳಿದ ರೀತಿ, ಅಷ್ಟು ಹತ್ತಿರದಲ್ಲಿ ಯಾವ್ದೂ ಕಂಡಿಲ್ಲ. ಇತ್ತೀಚೆಗೆ ಯಾಕೋ ನಂಗೂ ಕೂಡ ಈ ಯಾತ್ರೆ ಮುಗೀತಾ ಬಂದಿದೆಯೇನೋ ಅಂತ ಅನ್ನಿಸ್ತಿದೆ. ತುಂಬಾ ದಿನ ಈ ರೀತಿ ನಾನು ಅಲೀಲಾರೆ. ಆದ್ರೆ ಈ ಹೊತ್ತಿಗೂ ಅಪ್ಪ ಹೇಳಿದ್ದು ಸುಳ್ಳು ಅಂತ ನನಗನ್ನಿಸ್ತಿಲ್ಲ.

ಆವಿಬ್ರೂ ಆಮೇಲೆ ಆ ರಾತ್ರಿ ಏನೂ ಮಾತಾಡ್ಲಿಲ್ಲ. ಹಾಗೇ ಮಲಗಿ ನಿದ್ದೆ ಹೋಗಿಬಿಟ್ಟಿದ್ದೆವು.

ಬೆಳಗ್ಗೆ ಎದ್ದಾಗ ಸ್ವಚ್ಛ ಆಕಾಶ. ಒಂದೇ ಒಂದು ಮೋಡ ಕಾಣ್ತಿರ‍್ಲಿಲ್ಲ. ದೂರ ದೂರಕ್ಕೂ ಹಸಿರೇ ಹಸಿರು. ಬೆಳ್ಳಂ ಬೆಳಗ್ಗೆ ಕಾಡಲ್ಲಿ ಮುಂಜಾನೆ ಗಾಳಿ ಕುಡಿಯೋದೇ ಒಂದು ಸುಖ. ನಾವಿಬ್ರೂ ಗುಡ್ಡದ ತುದೀಲಿ ಇದ್ದದ್ರಿಂದ ದೃಶ್ಯ ಇನ್ನೂ ಮನಮೋಹಕವಾಗಿತ್ತು. ಬೆಳ್ಳಕ್ಕಿಗಳು ಹಾರಿ ಹೋಗೋದು, ತಲೆ ಮೇಲೆ ಯಾರಾದ್ರೂ ಮೊಟಕಿದ್ರೇನೋ ಅನ್ನೊ ಹಾಗೆ ಯಾವ್ಯಾವ್ದೋ ಹಕ್ಕಿಗಳು ಕೂಗೋದು. ಹಿತವಾದ ಬಿಸಿಲು. ನಾನಂತೂ ಸುಮ್ನೆ ಹಾಗೇ ಎದ್ದು ಕುಳಿತು ಬಿಟ್ಟಿದ್ದೆ.


ಹೂಂ, ಎಚ್ಚರವಾಯ್ತೇನು. ಅವನು ಕೇಳಿದ.
ನಾನು ಮುಗುಳ್ನಕ್ಕೆ. ಆ ಬೆಳಗ್ಗೆ ನಂಗೊಂಥರಾ ಖುಷಿ ಕೊಟ್ಟಿತ್ತು.

ಎಲ್ಲಿಗೆ ಹೋಗೋಣ?
ಹಿಂದಿನ ದಿನ, ಗುಡ್ಡದಲ್ಲಿ ಮಳೆ ಆಗುತ್ತೆ ಅಂತ ನಾನೇ ಹೇಳಿದ್ದು ಮರೆತು ಹೋಗಿತ್ತು.
ಮಳೆ ಎಲ್ಲಿ ಆಗುತ್ತೆ ಅಂತ ಹೇಗೆ ಹೇಳೋದು? ನಾನು ಮತ್ತೆ ಕೇಳಿದೆ.

ಈ ನಾಲ್ಕು ವರ್ಷಗಳಲ್ಲಿ ಏನಾಗ್ಲಿಲ್ಲ ಅಂದ್ರೂ, ಅದೊಂದು ಮಾತ್ರ ಕಲ್ತಿದ್ದೀನಿ. ಒಂದು ಹಂತಕ್ಕೆ ಎಲ್ಲಿ ಮಳೆ ಆಗುತ್ತೆ ಅಂತ ಹೇಳಬಲ್ಲೆ. ನಡಿ ಆ ತಪ್ಪಲಿನ ಕಡೆ ಹೋಗೋಣ. ನಾಳೆ ಹೊತ್ತಿಗೆ ಮಳೆ ಆಗುತ್ತೆ.
ಅವನು ಗುಡ್ಡ ಇಳಿಯತೊಡಗಿದ.

ನಾನೂ, ಅವನೂ ಆ ತಪ್ಪಲು ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಕಾಡೊಳಗೆ ಎಷ್ಟು ಮೈಲಿ ನಡೆದಿದ್ದೆವೊ? ಅವನಿಗೆ ಕಾಡು ಚೆನ್ನಾಗಿ ಪರಿಚಯವಾಗಿತ್ತು. ಯಾವ ಹಣ್ಣು ತಿನ್ನಬೇಕು, ಏನು ಎಲ್ಲ ಅಂತಾ ಹೇಳ್ತಾ ಹೋಗ್ತಾ ಇದ್ದ.

ಇನ್ನೂ ಸ್ವಲ್ಪ ಹೊತ್ತಿಗೆ ಮಳೆಯಾಗುತ್ತೆ ನೋಡು ಅಂತ ಹೇಳಿದ.

ನಿಂಗೆ ಅದ್ಹೇಗೆ ಗೊತ್ತಾಗುತ್ತೆ? ನಾನು ಕೇಳಿದೆ.

ನಾಲ್ಕು ವರ್ಷ ನನ್ಹಾಗೇ ಅಲಿ. ನೀನೂ ಹೇಳ್ತೀಯಾ. ಇಬ್ಬರೂ ನಕ್ಕೆವು.

ಅವನು ಹೇಳಿದ ಹಾಗೆ, ಸ್ವಲ್ಪ ಹೊತ್ತಿನಲ್ಲಿಯೆ ಮಳೆ ಶುರುವಾಯ್ತು.

ಆ ರಾತ್ರಿ ಪೂರ್ತಿ ಮಳೆ ಬರ್ತಾನೇ ಇತ್ತು.

ಬೆಳಗ್ಗೆ ಎದ್ದು ಮಳೆಯೊಳಗೇ ನಡೀತಾ ಹೋದ್ವಿ. ಮಳೆ ಬರುವಾಗ ಕಾಡು ಅಷ್ಟು ಚೆನ್ನಾಗಿ ಕಾಣುತ್ತೆ ಅಂತ ನನಗವತ್ತೇ ಗೊತ್ತಾಗಿದ್ದು.

ಸ್ವಲ್ಪ ದೂರ ಹೋಗ್ತಿದ್ದ ಹಾಗೇ, ದೂರದಲ್ಲಿ ಬೆಳಕು ಕಂಡಂಗಾಯ್ತು. ಮೊದಲು ಅವನೇ ನೋಡಿದ್ದು.

ಹೇಯ್! ಅಲ್ಲಿ ಅಲ್ಲಿ. ಅಂತ ಹೇಳಿದವನೇ ಓಡತೊಡಗಿದ. ನಾನೂ ಅವನ ಹಿಂದೇನೇ ಓಡಿದೆ.

ಅಲ್ಲಿಗೆ ಹೋಗ್ತಿದ್ದ ಹಾಗೇನೇ ನಾವಿಬ್ರೂ ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ವಿ.

ಎಷ್ಟು ಎತ್ತರಕ್ಕೆ ನೋಡಿದ್ರೂ ಅಷ್ಟು ಎತ್ತರಕ್ಕೆ ಬೆಳಕು. ನಾವು ಅಷ್ಟು ಹತ್ತಿರ ಇದ್ದರೂ ಬಿಸಿ ತಟ್ಟಲಿಲ್ಲ ಅಂತ ಆಮೇಲೆ ನೆನಪಾಯ್ತು. ಅದು ಕಾಮನಬಿಲ್ಲೋ ಏನೋ ಅಂತ ನನಗೆ ಗೊತ್ತಾಗಲಿಲ್ಲ. ಆದ್ರೆ ಅದರಷ್ಟು ಸುಂದರವಾದ ದೃಶ್ಯವನ್ನು ನಾನಂತ್ರೂ ನೋಡಿರಲಿಲ್ಲ. ಒಂದೊಂದು ಬೆಳಕಿನ ಕಣವೂ ಕ್ಷಣ ಕ್ಷಣಕ್ಕೆ ಬಣ್ಣ ಬದಲಾಯಿಸುತಿತ್ತು. ಅದೆಷ್ಟು ಬಣ್ಣಗಳು, ಅದೇನು ವೇಗ, ಅದೇನು ದೃಶ್ಯ.

ನಾವಿಬ್ರೂ ಮಂಡಿಯೂರಿ ಕುಳಿತುಬಿಟ್ವಿ. ಅವನ ಕಣ್ಣಲ್ಲಾಗಲೇ ಕಣ್ಣೀರು.

ಅವನು ಎದ್ದು ಬೆಳಕಿನೆಡೆಗೆ ನಡೆಯತೊಡಗಿದ. ಕೈ ಮುಂದೆ ಚಾಚಿದ್ದ. ಒಂಥರಾ ಯಾರನ್ನೋ ಕರೆಯುತ್ತಾ ಹೋಗ್ತಾರಲ್ಲ, ಹಾಗೆ.
ನಾನ್ ಫಟ್ ಅಂತ ಎದ್ದು, ಓಡ್ಹೋಗಿ ಅವನನ್ನ ಹಿಡಿದು ಕೆಳಗೆ ಕೂರ‍್ಸಿದೆ.

ನಮಗದೆಷ್ಟು ವಿಚಿತ್ರವಾಗಿ ಆ ಜಾಗದಲ್ಲಿ ಆ ಬೆಳಕು ಕಂಡಿತ್ತೋ, ಅಷ್ಟೇ ವಿಚಿತ್ರವಾಗಿ ಅದು ಅಲ್ಲಿಂದ ಮಾಯವಾಗಿ ಬಿಡ್ತು. ನನಗಂತೂ ಅದು ಕಾಮನಬಿಲ್ಲು ಅಂತ ಒಪ್ಪಲಿಕ್ಕೆ ಆಗಲಿಲ್ಲ. ಆದ್ರೆ ಅದಕ್ಕಿಂತಾ ಅದು ಮನೋಹರವಾಗಿತ್ತು.

ಸ್ವಲ್ಪ ಹೊತ್ತಾದ ಮೇಲೂ ನಮಗೆ ಆ ಗುಂಗಿನಿಂದ ಹೊರ ಬರಲು ಆಗಿರ‍್ಲಿಲ್ಲ. ಹಾಗೇ ಮಲಗಿ ಬಿಟ್ವಿ. ಹಾಗೇ ಮಲಗಿ ಬಿಟ್ವಿ. ಒಂದೆರಡು ಗಂಟೆ ಬಿಟ್ಟು ಎದ್ವಿ.

ಅವನ ಮುಖದ ಮೇಲೆ ಪ್ರಶಾಂತತೆ ನೆಲೆಸಿತ್ತು. ಅವನ ಕಣ್ಣುಗಳು ಈಗ ಏನನ್ನೂ ಹುಡುಕುತ್ತಿರಲಿಲ್ಲ.

ಈಗ ಮನಸ್ಸು ಹಗುರವಾಗಿದೆ. ಆದ್ರೆ ಎಲ್ಲಾ ಖಾಲಿಯಾದ ಮೇಲೆ ಇದ್ದಕ್ಕಿದ್ದಂತೇ ಒಂದು ತೂತಾದಂತಾಗಿದೆ.
ಬಹುಶಃ ನನ್ನ ಗುರಿ ಇದೇ ಇತ್ತೇನೋ. ಅವನು ಹೇಳ್ತಾನೇ ಹೋದ.

ಮುಂದೇನು ಮಾಡ್ತೀಯಾ? ಕೇಳ್ದೆ.

ಗೊತ್ತಿಲ್ಲ. ಅವನುತ್ತರಿಸಿದ್ದ.

ಆ ಸಂಜೆ ನಾವು ಒಬ್ಬರಿಗೊಬ್ಬರು ವಿದಾಯ ಹೇಳಿದ್ವಿ. ಅವನು ಮುಂದೆ ಎಲ್ಲಿಗೆ ಹೋದ್ನೋ ಗೊತ್ತಾಗಲಿಲ್ಲ.

ಮತ್ತೊಂದು ಮಳೆಗಾಲ ಕಳೆಯೋ ಹೊತ್ತಿಗೆ, ಒಂದು ಸುದ್ದಿ ಅಲೆದಾಡತೊಡಗಿತ್ತು.

ಘಟ್ಟದ ಕೆಳಗೆ ಯಾರೋ ಅದ್ಭುತವಾದ ಸೇತುವೆ ಕಟ್ಟಿದಾನಂತೆ. ಎಂಥಾ ಪ್ರವಾಹಕ್ಕೂ ಅದು ಬೀಳೋಲ್ಲ ಅಂತ ಜನ ಹೊಗಳ್ತಾ ಇದ್ರು.

ನನಗೆ ಅವನು ನೆನಪಾದ.

Sunday, November 8, 2009

ಅಲೆಮಾರಿ



ಬರೆಯಬೇಕೆಂದಾಗ ಬರೆಯಬಿಡದೆ
ಹಾಡಬೇಕೆಂದಾಗ ದನಿ ನಿಲ್ಲಿಸಿ
ಅಳಬೇಕೆಂದರೂ ಅಳಬಿಡದ
ಮನಸಾವರಿಸುವ ಭಾವ ಅಲೆಮಾರಿ


ಕಣ್ಣರಳಿಸಿದ ಹುಡುಗಿಯ
ಕಣ್ಣು ತಪ್ಪಿಸಿದ, ಅವಳೆಡೆಗೆ
ನೋಡಲಾಗದೆ ನೋಡುವ
ನೋಟ ಅಲೆಮಾರಿ


ನಿಂತಲ್ಲಿ ನಿಲ್ಲಲಾಗದೆ
ಕೂತಲ್ಲಿ ಕೂರಲಾಗದೆ
ಎಲ್ಲೆಲ್ಲೋ ಸುತ್ತುವ
ಮನಸು ಅಲೆಮಾರಿ


ಬೇಡುವವರ ಬಳಿ ಸುಳಿಯದ,
ಗೊತ್ತಿಲ್ಲದೇ ಹೋಗಿ ಮನೆಯ
ಮುಚ್ಚಿದ ಕದ ತಟ್ಟುವ
ಸಾವು ಅಲೆಮಾರಿ

ನೆನಪಾದಳು ಹುಡುಗಿ


ಮುಂಜಾನೆಯ ಚಳಿಯಲ್ಲಿ
ಹಕ್ಕಿಗಳ ಚಿಲಿಪಿಲಿಯಲ್ಲಿ
ಬಾನಲ್ಲೊಂದು ಬೆಳ್ಳಿರೇಖೆಯಾಗಿ
ನೆನಪಾಗುವವಳು ಅವಳು

ಅಪರಾಹ್ನದ ಬೇಸರಿಕೆಯಲ್ಲಿ
ನಿಡುಸುಯ್ಯುವ ನಿಟ್ಟಿಸುರಿನಲ್ಲಿ
ತಡೆಯಲಾಗದ ಬಿಸಿಲ ನಡುವೆ
ನೆನಪಾಗುವವಳು ಅವಳು

ಅದ್ಯಾವುದೋ ಸಂಜೆಗತ್ತಲಿನಲಿ
ಹುಚ್ಚು ತಿರುಗಾಟದ ನಡುವೆ
ಹಳೆಯದ್ಯಾವುದೋ ದುಃಖ ತಂದು
ನೆನಪಾಗುವವಳು ಅವಳು

ಮಧ್ಯರಾತ್ರಿಯ ನಿಶೀಥದಲ್ಲಿ
ಒಂಟಿತನದ ನೀರವತೆಯಲ್ಲಿ
ಮನದಲ್ಲೊಂದು ಕವಿತೆಯಾಗಿ
ನೆನಪಾಗುವವಳು ಅವಳು