Sunday, January 3, 2010

ಕಡಲ ತೀರದ ಪ್ರತಿಮೆಗಳು





ಕಡಲ ತಡಿಯಲ್ಲಿ
ಹಾಲು ಬೆಳದಿಂಗಳು
ಉಕ್ಕುವ ತೆರೆ, ಚೆಲ್ಲಿದ ನೊರೆ
ಬೆಕ್ಕಸ ಬೆರಗಾದ ಕಂಗಳು

ಮನದೊಳವಿತಿದ್ದ ಬಾಲ್ಯ
ಮೆಲ್ಲನೆ ಹೊರಬಿದ್ದು
ಎವೆಯಿಕ್ಕುವಷ್ಟರಲ್ಲಿ
ಉಸುಕಲ್ಲಿ ಉರುಳಾಡಿ
ಅಲೆಯಲ್ಲಿ ಹೊರಳಾಡಿ
ಗಹಗಹಿಸಿ ನಕ್ಕಿತು

ಸ್ವಚ್ಛ ಹುಣ್ಣಿಮೆಯಲ್ಲಿ
ಹುಚ್ಚು ಅಲೆಗಳ ಮೇಲೆ
ತೇಲಿತ್ತು ಮನಸು
ದೂರದಲಿ ಹೊರಟಿದ್ದ
ನಾವೆಯ ಮೇಲೆ ನೆಟ್ಟಿತ್ತು ಕನಸು

ನೀರವ ತೀರದಲಿ
ಬೀಸುವ ಗಾಳಿಯಲಿ
ಅಲೆದಾಡಿದ ಭಾವನೆಗಳ ನಡುವೆ
ಕಾಲನ ಗಡಿಯಾರದಲ್ಲೊಂದು
ಮುಳ್ಳು ಮೆಲ್ಲನೆ ಮುಂದೆ ಸರಿದಿತ್ತು





ವೈಧವ್ಯದ ವಾಸನೆಯೋ ಏನೋ
ಬಿಳೀ ಬಟ್ಟೆ ಹೊದ್ದು, ಅಲ್ಲಲ್ಲಿ ಕೆದರಿ
ಬೋರಲು ಬಿದ್ದ ತೀರ

ವಾರಿಧಿಯ ಕಳವಳ
ದಡಕಪ್ಪಳಿಸಿ ನೊರೆ ನೊರೆ ವೇದನೆ
ಹೆಜ್ಜೆ ಗುರುತುಳಿಸದಷ್ಟು ಆಕ್ರೋಶ
ತೀರದ ತುಂಬಾ

ಬೀಸಿದ ಚಳಿಗಾಳಿಯಲಿ
ತಣ್ಣನೆಯ ಕ್ರೌರ್ಯ
ಯಾರ ಮೇಲಿನ ಸಿಟ್ಟು
ಹೊಟ್ಟೆಯಲ್ಲಡಗಿದೆಯೋ

ದೂರ ದೂರಕೂ ಬರಿಯೇ ನೀರು
ಅಲ್ಲೆಲ್ಲೋ ಜಾರಿಬಿದ್ದ ಮುಗಿಲು
ದಡದಿಂದ ದಡಕ್ಕೆ ಅದೆಷ್ಟು ಯೋಜನ
ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ

12 comments:

  1. ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ .. ಕವನದ ಈ ಆಯಾಮ ತುಂಬಾ ಹಿಡಿಸಿತು.

    ReplyDelete
  2. ಕಡಲ ತೀರದ ಪ್ರತಿಮೆಗಳು....
    ನಿಜ ಕಡಲ ತಡಿಯಲ್ಲಿ ಪ್ರತಿಮೆಗಳೆ...ನಾವೆಲ್ಲಾ.
    ಅರ್ಥವಾಗದ ಭಾವ..ಒಮ್ಮೆ ಹಾಗೆ..ಮತ್ತೊಮ್ಮೆ ಹೀಗೆ.
    ಒಮ್ಮೆ ಬಾಲ್ಯ ..ಮಗದೊಮ್ಮೆ ವ್ರುದ್ಧಾಪ್ಯ..
    ಚೆ೦ದದ ಕವಿತೆ..

    ReplyDelete
  3. ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೆ ಯಾನ ಭಾಳ ಕಾಡುವ ಸಾಲು....

    ReplyDelete
  4. ಕಡಲ ತೀರಕ್ಕೆ ಹೋಗಿ ಚೆ೦ದದೊ೦ದು ಕವಿತೆ ಆರಿಸಿ ತ೦ದಿದ್ದೀರಲ್ಲಾ...
    ಚೆನ್ನಾಗಿದೆ ಕವಿತೆ...

    ReplyDelete
  5. ಚೆ೦ದದ ಕವಿತೆ....
    "ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ....."
    ಚೆನ್ನಾಗಿದೆ ಸಾಲುಗಳು....

    ReplyDelete
  6. ಕವನ ತುಂಬಾ ಚನ್ನಾಗಿದೆ...

    ReplyDelete
  7. wow!!! super kavana tumba istavaayitu

    ReplyDelete
  8. ಬೀಸಿದ ಚಳಿಗಾಳಿಯಲಿ
    ತಣ್ಣನೆಯ ಕ್ರೌರ್ಯ
    ಯಾರ ಮೇಲಿನ ಸಿಟ್ಟು
    ಹೊಟ್ಟೆಯಲ್ಲಡಗಿದೆಯೋ
    ಸಾಲುಗಳು ತುಂಬಾ ಹಿಡಿಸಿದವು,
    ಒಳ್ಳೆಯ ಕವನ

    ReplyDelete
  9. ಮೊದಲ ಭಾಗದ ಉಲ್ಲಾಸದ ಭಾವನೆಗಳು, ಎರಡನೆಯ ಭಾಗದಲ್ಲಿ ಮಾರ್ಪಾಡಾಗುವ ಬಗೆ ಸೊಗಸಾಗಿದೆ. ಪ್ರತಿಮೆಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದೀರಿ. ಅಭಿನಂದನೆಗಳು.

    ReplyDelete
  10. ಸ್ವಚ್ಛ ಹುಣ್ಣಿಮೆಯಲ್ಲಿ
    ಹುಚ್ಚು ಅಲೆಗಳ ಮೇಲೆ
    ತೇಲಿತ್ತು ಮನಸು
    ದೂರದಲಿ ಹೊರಟಿದ್ದ
    ನಾವೆಯ ಮೇಲೆ ನೆಟ್ಟಿತ್ತು ಕನಸು...
    ಆನಂದ್ ಸರ್,
    ಅಲೆಯ ಮೇಲೆ ತೇಲಿಸಿಕೊಂಡು ದಡಕ್ಕೆ ಬಂದ ಹಾಗಿತ್ತು ಕವನ...... ಚೆನ್ನಾಗಿದೆ...... ಮೇಲಿನ ಸಾಲುಗಳಂತೂ ಸೂಪರ್.....

    ReplyDelete
  11. ಆನಂದ್ ತುಂಬಾ ಗಹನತೆಯ ಭಾವವ್ಯಕ್ತತೆ ಸರಳವಾದರೂ ಆಳಕ್ಕೆ ಕೊಂಡೊಯ್ಯುವ ಪದಬಳಕೆ...ಬಹಳ ಹಿಡಿಸಿದವು ಅದರಲ್ಲೂ ನಿಮ್ಮ ಈ ಸಾಲುಗಳು.........

    ಮನದೊಳವಿತಿದ್ದ ಬಾಲ್ಯ
    ಮೆಲ್ಲನೆ ಹೊರಬಿದ್ದು
    ಎವೆಯಿಕ್ಕುವಷ್ಟರಲ್ಲಿ
    ಉಸುಕಲ್ಲಿ ಉರುಳಾಡಿ
    ಅಲೆಯಲ್ಲಿ ಹೊರಳಾಡಿ
    ಗಹಗಹಿಸಿ ನಕ್ಕಿತು

    ReplyDelete
  12. ಕವನ ಮೆಚ್ಚಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.

    ReplyDelete