Wednesday, January 6, 2010

ಅವನಿರಬೇಕಿತ್ತು ಇಂದು

ಕುಣಿದು ಕುಪ್ಪಳಿಸುವಾಗ
ಹುಚ್ಚೆದ್ದು ನಗುವಾಗ
ಊರೂರು ಅಲೆಯುವಾಗ
ಅವನೆಲ್ಲೋ ನಕ್ಕಂತೆ ಭಾಸ

ಬೀಸಿ ಬಂದ ಗಾಳಿ
ತಂದು ಸವರಿದ್ದು ಅವನುಸಿರಾ
ಇಲ್ಲವೇ ಅವನ ನೆನಪಾ

ಥಿಯೇಟರಿನೆದುರು ನಿಂತು
ಟಿಕೇಟು ನೀ ತೆಗೆಸು
ಎಂದು ಜಗಳವಾಡುತ್ತಿರುವಾಗ
ಅವನಿದ್ದಿದ್ದರೆ ಅವನಿಗೊಂದು
ತೆಗೆಸಬೇಕಿತ್ತಲ್ಲವೇ ಎಂಬ ನೆನಪು
ರಿಟರ್ನ್ ಟಿಕೆಟ್ ತೆಗೆಸದೇ
ಊರಿಗೆ ಹೊರಟು ಹೋದ ಪಾಪಿ

ಪ್ರತೀ ಹುಟ್ಟುಹಬ್ಬಕ್ಕೆ
ಒದೆ ತಿನ್ನುವಾಗಲೂ ನೆನಪಾಗುತ್ತಾನೆ
ಅವನಿಗೆ ಕೊಡಬೇಕಾದವು ಇನ್ನೂ ಹಾಗೇ ಉಳಿದಿವೆ
ಎದುರಿಗೆ ಸಿಕ್ಕರೆ ಎಲ್ಲರದೂ ಸೇರಿಸಿ
ಬಾಕಿ ತೀರಿಸುತ್ತೇನೆ
ಪಾರ್ಟಿ ಕೊಡಲು ಹೆದರಿ ಓಡಿಹೋದನೇನೋ

ಒಬ್ಬೊಬ್ಬರದೇ ಮದುವೆಯಾದಾಗ
ಸದ್ದಿಲ್ಲದೇ ಹಿಂಡು ಖಾಲಿಯಾದಾಗ
ಮರೆಯಲ್ಲಿ ನಿಂತು ನಗುತ್ತಿರುತ್ತಾನೇನೋ
ಅವನಿಷ್ಟು ಬೇಗ ಮದುವೆಯಾಗುತ್ತಿದ್ದನೇ?
ಊಹೂಂ, ಇರಲಿಕ್ಕಿಲ್ಲ

ಕನಸುಗಳೆಷ್ಟಿದ್ದವು
ಹಂಚಿಕೊಳ್ಳಲು, ಪೂರೈಸಲು
ಜೊತೆನಿಂತು ಬೆನ್ನಿಗೆ ಗುದ್ದಲು
ನಾವಿರಲಿಲ್ಲವೇ
ಅದಾರು ಸಿಕ್ಕಿಹರು ನಿನಗಲ್ಲಿ
ಇರಲಿ ಬಿಡು,
ಅಲ್ಲಿಗೆ ಬಂದಾಗ ಗುರುತು ಹಿಡಿದು ನೆನೆಸು

ಅವನ ಬಗ್ಗೆ ಒಂದು ಕವನ
ಬರೆದಿದ್ದು ತಿಳಿದರೆ ಬಿದ್ದು ಬಿದ್ದು ನಕ್ಕಾನು
ಅಪಹಾಸ್ಯ ಮಾಡಲಿಕ್ಕಾದರೂ ಅವನಿರಬೇಕಿತ್ತು

14 comments:

  1. ವಸ್ತುವನ್ನು ಕಳೆದುಕೊಂಡಾಗಲೇ ಬೆಲೆ ತಿಳಿಯುವುದು. ಆ ನಿಟ್ಟಿನಲ್ಲಿ ಕವನ ಚೆನ್ನಾಗಿದೆ. ವಂದನೆಗಳು

    ReplyDelete
  2. ಆನಂದ್ ಸರ್,
    ಕಣ್ಣಲ್ಲಿ ನೀರು ಬಂತು..... ನಂಗೂ ಒಬ್ಬ ಫ್ರೆಂಡ್ ಇದ್ದ, ನಾಗರಾಜ್..... ಹೇಳದೆ ಕೇಳದೆ, ತಿರುಗಿ ಬಾರದ ಲೋಕಕ್ಕೆ ಹೊರತು ಹೋದ..... ಅವನ ನೆನೆಪು ತರಿಸಿತು..... ಆ ನನ್ನ ಗೆಳೆಯನಿಗೂ ನನ್ನ ಶ್ರದ್ದಾಂಜಲಿ ಈ ಕವನ ಮೂಲಕ.....

    ReplyDelete
  3. ತುಂಬಾ ಚೆನ್ನಾಗಿದೆ.. ಪ್ರತಿಯೊಂದು ಸಾಲೂ ಚೆನ್ನಾಗಿದೆ.. ಓದಿ ದುಃಖವಾಯಿತು...

    ReplyDelete
  4. ರಿಟರ್ನ್ ಟಿಕೆಟ್ ತೆಗೆಸದೆ ಹೋದ..ಎ೦ತಹಾ ಸಾಲುಗಳು..
    ಇಡೀ ಕವನದಲ್ಲಿ ಭಾವುಕತೆ ತು೦ಬಿ ಕೊ೦ಡಿದೆ.
    ಕವನ ಓದಿ ಮನಸ್ಸು ಭಾರವಾಯಿತು.
    ಕವನ ಬರೆದ ರೀತಿ ಇಷ್ಟವಾಯ್ತು.

    ReplyDelete
  5. ಭಾವ ತು೦ಬಿದ ಕವನ.....
    ಬಹಳ ಚೆನ್ನಾಗಿದೆ.....

    ReplyDelete
  6. ಅವನಿದ್ದಿದ್ದರೆ...ಇಷ್ಟು ನೆನಸಲಾಗುತ್ತಿತ್ತೆ....
    ಬಾರದ ಜೀವ.... ನೆನಸಲಷ್ಟೆ ಭಾವ...

    ಭಾವತು೦ಬಿದ ಕವಿತೆ..

    ReplyDelete
  7. ಅವನ ನೆನಪು ಮಾಡುವ ಕವನ ತುಂಬಾ ಚೆನ್ನಾಗಿದೆ
    ಹಳೆಯ ನೆನಪುಗಳೇ ಹಾಗೆ
    ಬಿದ್ದು ಬಿದ್ದು ಕಾಡುತ್ತವೆ ಅಲ್ಲವೇ?

    ReplyDelete
  8. ಕವನ ಬೆಳೆಯುತ್ತಾ ಹೋದ ಹಾಗೆ ಮನಸು ಭಾರವಾಗುತ್ತಾ ಹೋಗುತ್ತದೆ.

    ReplyDelete
  9. ಆನಂದ ಗೆಳೆಯ ಜೊತೆಗಿಲ್ಲ ನೆನಪು ಕಾಡಿಸಿ ನಿಮ್ಮಿಂದ ನವಿರು ಭಾವ ಹೊರಡಿಸಿದೆ. ಕವಿತೆಚೆನ್ನಾಗಿದೆ...

    ReplyDelete
  10. ಉಕ್ಕಿ ಬರುವ ಭಾವನೆಗಳನ್ನು ಕವನದ ಚೌಕಟ್ಟು ಸಮರ್ಥವಾಗಿ ನಿಯಂತ್ರಿಸಿದೆ.
    ಅಭಿನಂದನೆಗಳು.

    ReplyDelete
  11. ನಿಜಕ್ಕೂ ಚೆನ್ನಾಗಿದೆ ಕವನ ..ಗೆಳೆತನವನ್ನು ಚೆನ್ನಾಗಿ ಬಣ್ಣಿಸಿರುವಿರಿ...

    ReplyDelete
  12. ಮನಸ್ಸಿಗೆ ಹತ್ತಿರವಾದ ಕವನ...ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete