ನಾಳೆ ಬೆಳಗಾದರೆ ಎದ್ದು ರೆಡಿಯಾಗಿ ಆಫೀಸಿಗೆ ಹೋಗಬೇಕು. ಈ ರಾತ್ರಿ ಯಾಕೋ ಊರಿನ ನೆನಪು ಸ್ವಲ್ಪ ಹೆಚ್ಚಾಗೇ ಕಾಡುತ್ತಿದೆ. ಮಲಗಿದರೆ ಮುಗಿಯಿತು. ನಾಳೆಯಿಂದ ಮತ್ತೆ ಅದೇ ಕೆಲಸ, ಅದೇ ಜೀವನ. ಸ್ವಲ್ಪ ಬೇಜಾರಾದರೂ ಸರಿ, ಊರಿನ ನೆನಪಿರಲಿ ಎಂದು ಹಾಗೇ ಎದ್ದು ಕುಳಿತಿದ್ದೀನಿ. ಈ ಹೊತ್ತಲ್ಲಿ ಅಲ್ಲಿ ಹೇಗಿದ್ದೀತು ಅಂತ ಯೋಚಿಸುತ್ತಾ ಅಲ್ಲಿಗೇ ನಿಧಾನವಾಗಿ ಹೋಗುತ್ತಿದ್ದೇನೆ. ಬೀದಿ ನಾಯಿಗಳ ಕೂಗು ಮತ್ತೆ ನನ್ನನ್ನು ಇಲ್ಲಿಗೇ ಕರೆ ತರುತ್ತಿದೆ.
ಊರಿಂದ ಹೊರಬಿದ್ದು ವರ್ಷಗಳೇ ಆದರೂ ದಿನದಿಂದ ದಿನಕ್ಕೆ ಅಲ್ಲಿನ ನೆನಪು, ಸೆಳೆತ ಹೆಚ್ಚಾಗುತ್ತಲೇ ಇದೆ. ನಾನಿರುವ ಜಾಗಕ್ಕೇ ನನ್ನವರು ಬಂದರೂ ಅವರು ಪರಕೀಯ ಮತ್ತೆ ನಾನೂ. ನಾನು ಅಲ್ಲಿಗೇ ಹೋಗಬೇಕು ಮತ್ತೆ ನನ್ನೂರು ನನ್ನ ಜನ ಹಾಗೇ ಇರಬೇಕು. ಸ್ವಾರ್ಥ ನಂದು. ಆದರೆ ಅದಾವುದೂ ಆಗುವ ಮಾತಲ್ಲ. ನಾನಲ್ಲಿಗೆ ಹೋಗುವುದಿಲ್ಲ. ಹೋದರೂ ಎರಡು ದಿನದಅತಿಥಿ. ವಾಪಸ್ ಊರಿಗೆ ಯಾವಾಗ ಹೋಗ್ತೀರಾ? ಅಲ್ಲಿಗೆ ಹೋದಾಗ ಜನ ಕೇಳ್ತಾರೆ. ನನ್ನಾಗಲೇ ಅವರು ತಮ್ಮ ಊರಿಂದ ಆಚೆ ಅಟ್ಟಿಬಿಟ್ಟಿದ್ದಾರೆ. ಆ ಮಟ್ಟಿಗೆ ನಾನು ನನ್ನ ಊರಲ್ಲಿ ಪರಕೀಯ. ಆದರೂ ನಾನಲ್ಲಿಗೆ ಹೋಗಬೇಕು.
ಊರಿಗೆ ಬಂದಾಗಲೂ ನೀನು ಪುಸ್ತಕ ಓದ್ತೀಯಾ, ಬಿಟ್ಟರೆ ಮಲಗ್ತೀಯಾ ಅಂತ ಅಮ್ಮ ಬೈತಾಳೆ. ಆದರೆ ಪ್ರತೀ ಸಲ ಊರಿಗೆ ಹೋದಾಗ ಮಲಗಲಿಕ್ಕೆ ಹಾಸಿಗೆ ಸಿದ್ಧ ಮಾಡ್ತಾಳೆ. ಎದ್ದ ಕೂಡಲೇ ತಿಂಡಿ. ತಿಂಡಿ ತಿನ್ನುತ್ತಲೇ ಆ ದಿನದ ಪೇಪರ್ ಓದುವುದು. ಮುಗಿದ ಮೇಲೆ ಟೀಪಾಯ್ ಕೆಳಗೆ ಬಗ್ಗಿ ನೋಡಿದರೆ ನಾನು ಓದಿರದ ಪುಸ್ತಕಗಳನ್ನೆಲ್ಲಾ ಒಂದೆಡೆ ಜೋಡಿಸಿ ಇಟ್ಟಿರುತ್ತಾಳೆ. ನಾನು ಯಾವುದಾದರೂ ಒಂದು ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ಅವಳು ಕಾಫಿ ತಂದು ಕೊಡುತ್ತಾಳೆ. ಕಾಫಿ ಕುಡಿದು ಮಂಚದ ಮೇಲೆ ಅಮ್ಮನ ತೊಡೆ ಮೇಲೆ ತಲೆಯಿಟ್ಟು ಮಲಗಿ ಹಾಗೇ ಪುಸ್ತಕ ಓದ್ತಿರಬೇಕಾದ್ರೆ, ಅಮ್ಮ ಹಿತವಾಗಿ ತಲೆ ಒತ್ತುತ್ತಾ ಮೆಲ್ಲನೆಯ ದನಿಯಲ್ಲಿ ಮತ್ತೆ ಬೈತಿರುತ್ತಾಳೆ. ನೀನು ಊರಿಗೆ ಬಂದರೆ ಬರೀ ಮಲಗ್ತೀಯಾ, ಇಲ್ಲ ಓದ್ತೀಯಾ.. ಈ ಚಂದಕ್ಕೆ ಯಾಕೆ ಬರಬೇಕು...
ಇನ್ನು ಅಪ್ಪನ ಕಥೆ ಬೇರೆ. ನಾನು ಬರ್ತೀನಿ ಅಂದ್ರೆ ಸಾಕು. ಮಧ್ಯರಾತ್ರಿಯಿಂದಲೇ ಆಗಾಗ ಎದ್ದು ಗಡಿಯಾರ ನೋಡಿ ಇನ್ನೊಂದ್ ಸ್ವಲ್ಪ ಹೊತ್ತಿಗೆ ಬರ್ತಾನೆ ಅಂತ ಹೇಳ್ತಿರ್ತಾರೆ.
ನಂಗೆ ತಲೆ ಚಿಟ್ ಹಿಡಿದು ಹೋಗುತ್ತೆ ಮಾರಾಯ, ನೀನು ಹೇಳದಂಗೇ ಊರಿಗೆ ಬಾ ಅಂತ ಅಮ್ಮ ಹೇಳ್ತಿರ್ತಾಳೆ. ಆದ್ರೂ ಪ್ರತೀ ಸಲ ಅವರಿಗೆ ಸುದ್ದಿ ಮುಟ್ಟಿರುತ್ತದೆ. ಅಮ್ಮನೇ ಹೇಳಿರ್ತಾಳೆ.
ನಾನು ಬಸ್ಸಿಂದ ಊರಲ್ಲಿ ಇಳಿಯುವ ಹೊತ್ತಿಗೆ ಕೈಯಲ್ಲೊಂದು ಸಿಗರೇಟ್ ಹಿಡ್ಕೊಂಡು ಬಸ್ ಸ್ಟ್ಯಾಂಡ್ ನ ಉದ್ದಕ್ಕೂ ಅಪ್ಪ ನಡೆದಾಡ್ತಿರುತ್ತಾರೆ.
ಈ ಹೊತ್ತಲ್ಲಿ ಯಾಕೆ ಬಂದ್ಯಪ್ಪಾ ಅಂತ ಕೇಳಿದ್ರೆ ಸುಮ್ನೆ ಬಾರಲೇ ಅಂತ ಬೈದು ಮನೆಗೆ ಕರೆದೊಯ್ತಾರೆ.
ಮನೆಗೆ ಹೋದ ಮೇಲೆ ಯಥಾಪ್ರಕಾರ ನಾನು ಮಲಗ್ತೀನಿ. ಒಂದು ಗಂಟೆ ಸುಮ್ನಿರ್ತಾರೆ ಅಷ್ಟೇ. ಆಮೇಲೆ ಪ್ರತೀ ಅರ್ಧ ಗಂಟೆಗೊಂದ್ಸಲ 'ಎದ್ದೇಳೋ ಪಾಪು, ಕಂದಾ ಎದ್ದೇಳೋ, ಎದ್ದೇಳೋ ಹೈವಾನ್' ಅಂತ ಬಗೆಬಗೆಯಾಗಿ ಎಬ್ಬಿಸಲು ಪ್ರಯತ್ನ ಪಡುತ್ತಿರುತ್ತಾರೆ.
ಅಷ್ಟರಲ್ಲಿ ಅಮ್ಮ ಬಂದು 'ಅಯ್ಯೋ, ಸ್ವಲ್ಪ ಸುಮ್ನಿರಬಾರ‍್ದಾ, ಅಷ್ಟು ದೂರದಿಂದ ಬಂದಿದ್ದಾನೆ. ಪಾಪ, ಮಲಗಲಿಕ್ಕೆ ಬಿಟ್ಟರೆ ಗಂಟೇನು ಹೋಗುತ್ತೆ?' ಅಂತ ಅಪ್ಪನಿಗೆ ದಬಾಯಿಸುತ್ತಿರುತ್ತಾಳೆ.
ಸ್ವಲ್ಪ ಬೆಳಗಾಯ್ತು ಅನ್ನೋ ಹೊತ್ತಿಗೆ ಊರಲ್ಲಿ ಮುಲ್ಲಾ, ಬೀರಪ್ಪ, ಕಾಳಮ್ಮ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಜೋರಾಗಿ ಪ್ರಾರ್ಥನೆ ಶುರು ಮಾಡ್ತಾರೆ. ಅವರ ಆರ್ಭಟ ಎಲ್ಲಾ ಮುಗಿದ ಮೇಲೆ ಅಮ್ಮ ನನಗಿಷ್ಟವಾದ ಭಾವಗೀತೆಗಳನ್ನೋ, ಹಾಡುಗಳನ್ನೋ ಮೆಲ್ಲನೆಯ ದನಿಯಲ್ಲಿ ಪ್ಲೇಯರ್ ಗೆ ಹಾಕುತ್ತಾಳೆ.
ಅಷ್ಟರಲ್ಲಿ ಅಪ್ಪ, ಹೂಂ, ಇನ್ನೂ ಎದ್ದಿಲ್ವೇನೇ ಇವನು ಅಂತ ನಮ್ಮಿಬ್ಬರನ್ನೂ ಕೇಳುತ್ತಾ ಮತ್ತೆ ನನ್ನೆಬ್ಬಿಸಲು ಪ್ರಯತ್ನ ಪಡ್ತಾರೆ. ನಾನು ಮಿಸುಕಾಡೋಲ್ಲ.
ಕಂದಾ, ನಾನೂ ನಿನ್ನ ಜೊತೆಗೆ ಮಲಗ್ತೀನಿ ಕಣೋ ಅಂತ ಆ ಸಣ್ಣ ಮಂಚದ ಮೇಲೆ ನನ್ನನ್ನು ಮೂಲೆಗೆ ದಬ್ಬಿ ತಮ್ಮ ದೈತ್ಯ ದೇಹವನ್ನು ಎತ್ತಿ ಹಾಕಿ ಮಲಗ್ತಾರೆ. ಪುಣ್ಯಾತ್ಮ , ರಾತ್ರಿಯಿಡೀ ಗಡಿಯಾರ ನೋಡೋದೇ ಆಗಿರುತ್ತೆ. ಮಲಗಿದ ಎರಡೇ ನಿಮಿಷಕ್ಕೆ ಗೊರಕೆ ಶುರು ಮಾಡ್ತಾರೆ. ಆ ಸಣ್ಣ ಜಾಗದಲ್ಲಿ ಉಸಿರುಗಟ್ಟಿ, ಗೊರಕೆಯ ಹಿಂಸೆಗೆ ನಾನು ತಡೀಲಾರದೆ ಏಳ್ತೀನಿ. ಅಪ್ಪನಿಗೆ ಚೆನ್ನಾಗಿ ನಿದ್ದೆ, ಗೊರಕೆ ನಡೆದೇ ಇರುತ್ತೆ.
ನಾನು ಕಾಫಿ ಕುಡಿಯುತ್ತಾ ಅಮ್ಮನ ಜೊತೆಗೆ ಮಾತು ಶುರು ಮಾಡ್ತೀನಿ. ಸ್ವಲ್ಪ ಹೊತ್ತಿಗೆ ಯಾವಾಗ್ಲೋ ಎದ್ದು ನಂಗೂ ಸ್ವಲ್ಪ ಕಾಫಿ ಕೊಡೇ ಅಂತ ಅಪ್ಪ ಒಳಗೆ ಬರ್ತಾರೆ.
ಏನು ಮಗನೇ, ಏನು ಸಮಾಚಾರ. ಆಗಿರೋದು ನೋಡಲೇ, ನಾಯಿಗೆ ಹೊಡೆಯೋ ಕೋಲು ತರ ಇದ್ದೀಯಾ. ಸರಿಯಾಗೆ ತಿನ್ನೋ ಮಗನೇ ಅಂತ ಶುರು ಮಾಡ್ತಾರೆ.
ಇನ್ನು ಊರಿಗೆ ತಂಗೀನೂ ಬಂದಿದ್ರೆ ಮುಗಿದೇ ಹೋಯಿತು.
ಮನೆಗೆ ಹೋಗ್ತಿದ್ದ ಹಾಗೆಯೇ ಅಪ್ಪ ನನ್ನ ಮೇಲೆ ತೋರಿಸೋ ವರಸೆಯನ್ನೆಲ್ಲಾ ನಾನು ಅವಳ ಮೇಲೆ ಪ್ರಯೋಗಿಸ್ತೀನಿ. ಮಲಗಿದ್ದೋಳನ್ನ ಬಲವಂತವಾಗಿ ಹೊಡೆದೂ, ತಟ್ಟಿ ಎಬ್ಬಿಸ್ತೀನಿ.
ಅಣ್ಣಾ, ಪ್ಲೀಸ್ ಸುಮ್ನೆರೋ. ಅಮ್ಮಾ ನೋಡಮ್ಮಾ, ಸುಮ್ನಿರೋಕೆ ಹೇಳಮ್ಮಾ ಅಂತ ಅವಳು ಕೂಗಿ, ಅಮ್ಮ ಬಂದು ಏಯ್ ಸುಮ್ನೆರಬಾರ್ದೇನೋ, ಪಾಪದ್ದು ಅದನ್ಯಾಕೆ ಹಿಂಸೆ ಮಾಡ್ತೀಯಾ ಅಂತ ಬೈದ ಮೇಲೆ, ಕೊನೇ ಸಲ ಅಂತ ಅವಳಿಗೆ ಒದ್ದು 'ಹೂಂ ಬಿದ್ಕೋ' ಎಂದು ಹೇಳಿ, ಏನೋ ಸಾಧಿಸಿದೋನ ತರಹ ನನ್ನ ಹಾಸಿಗೆಯ ಕಡೆಗೆ ಮಲಗಲು ನಡೆಯುತ್ತೇನೆ.
ನಾನು ಊರಿಗೆ ಹೋದಾಗ, ಸಾಮಾನ್ಯವಾಗಿ ಅಪ್ಪ ಆಫೀಸಿಗೆ ರಜೆ ಹಾಕಿರುತ್ತಾರೆ.
ಮಧ್ಯಾಹ್ನದವರೆಗೂ ಅಪ್ಪ ಸುಮ್ನಿರ್ತಾರೆ. ಆಮೇಲೆ ಬರ್ತೀಯೇನಲೆ ಹೊಲದ ಕಡೆ ಹೋಗ್ಬರಣಾ ಅಂತ ಕೇಳ್ತಾರೆ.
ನಾನು, ನಡಿ ಅಂತ ಹೊರಡ್ತೀನಿ.
ಊಟದ ಟೈಮಿಗೆ ಸರಿಯಾಗಿ ಹೊರಡ್ತೀರ. ಈಗೇನೂ ಬೇಡ. ಆಮೇಲೆ ಹೋಗಿ. ನೀನು ಹಿಂದುಗಡೆಗೆ ಹೋಗೋದಿದ್ರೆ ಹೋಗಿ, ಸ್ನಾನ ಮಾಡ್ಕೊಂಡ್ ಬಾ. ಬ್ರಹ್ಮ ಶೌಚ ನಿಂದು . ಗಂಟೆಗಟ್ಟಲೆ ಮಾಡ್ತೀಯಾ.. ಅಮ್ಮ ಒಳಗಡೆಯಿಂದ ಇಬ್ಬರಿಗೂ ಬೈಯಲು ಶುರು ಮಾಡ್ತಾಳೆ.
ಅಪ್ಪ - ಆಯ್ತು ಬಿಡವ್ವ ನೀನು ಹೇಳಿದಂಗೇ ಆಗಲಿ.
ಅಮ್ಮ - ಅವ್ವ ಗಿವ್ವ ಅಂದ್ರೆ ಸುಮ್ನಿರಲ್ಲ.
ಅಪ್ಪ ನನ್ಕಡೆ ನೋಡಿ, ನೋಡಲೇ ಹೆಂಗೆ ದಬಾಯಿಸ್ತಾಳೆ ನಿಮ್ಮಮ್ಮ.
ನಾನು- ಹೌದು ಮತ್ತೆ ಸರಿಯಾಗೇ ಹೇಳ್ತಾಳೆ. ನನ್ನ ತಂಗಿಯೂ ದನಿಗೂಡಿಸುತ್ತಾಳೆ.
ಅಪ್ಪ- ನೀವಿಬ್ರೂ ಬಂದಿದ್ದೀರಲ್ಲಾ, ಅವಳಿಗೆ ಎರಡು ಕೊಂಬು ಬಂದ್ಬಿಟ್ಟಿದ್ದಾವೆ. ಮನೆ ಯಜಮಾನ ನಾನು. ಮೂರು ಕಾಸಿನ ಬೆಲೆ ಇಲ್ಲ ನನಗೆ.
ಮುಂದೆ ಮಾತಾಡ್ಲಿಕ್ಕೆ ಹೊಳೀದೇ ಸಿಗರೇಟ್ ಹಚ್ಕೊಂಡ್ ಹೊರಗಡೆ ಹೋಗ್ತಾರೆ.
ಊಟ ಆದ ಮೇಲೆ ತಂಗಿಯಿಂದ ಹಾಡು ಹೇಳಿಸೋ ಕಾರ್ಯಕ್ರಮ.
ಅವಳು ಕಷ್ಟಪಟ್ಟು ಕೀರ್ತನೆ ಹಾಡಿದರೆ, ನಾನು ಥೇಟ್ ಶಂಕರಾಭರಣದ ಶಾಸ್ತ್ರಿಗಳ ಸ್ಟೈಲಲ್ಲಿ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳ್ತಿರ್ತೀನಿ. ಅವಳು ಹಾಡ್ತಾನೇ ನನ್ನನ್ನು ಕಣ್ಣಲ್ಲಿ ಸುಟ್ಟು ಹಾಕ್ತಿರ್ತಾಳೆ. ದೀಪಕರಾಗ ನನ್ನ ಮೇಲೇ ಪ್ರಯೋಗ ಮಾಡಿದ ಹಾಗಿರುತ್ತದೆ.
ಅವಳು, ಕೀರ್ತನೆ, ಸ್ವರ, ಗಮಕ ಎಲ್ಲಾ ಹೇಳ್ತಿರಬೇಕಾದ್ರೆ ಸುಮ್ನೆ ಕಣ್ಮುಚ್ಕೊಂಡ್ ಕೇಳ್ತಾ ಇರಬೇಕು. ಎಲ್ಲೋ ಸ್ವರ್ಗದಲ್ಲಿ ತೇಲುತ್ತಾ ಇದ್ದ ಹಾಗಿರುತ್ತೆ. ಹಾಗಂತ ಅವಳಿಗೆ ಹೇಳಬಾರದು. ಆಮೇಲೆ ನಮಗೆಲ್ಲಿ ಬೆಲೆ ಇರುತ್ತೆ. ನಾನು ಬೈತಿರಬೇಕು, ಅವಳು ಹಾಡ್ತಿರಬೇಕು ಅಷ್ಟೇ.
ಅವಳೆಲ್ಲಾ ಹಾಡಿ ಮುಗಿಸಿದ ಮೇಲೆ, ನಾನು ಆ ಹಾಡಲ್ಲಿ ಶ್ರುತಿ ತಪ್ಪಿದ್ದೆ, ಇದನ್ನು ಹೇಳಬೇಕಾದರೆ ಉಸಿರು ಜಾಸ್ತಿ ಬಿಡ್ತಿದ್ದೆ ಇತ್ಯಾದಿ ಹೇಳಿ ಇನ್ನೊಂದು ಸಲ ಹಾಡಲು ಹೇಳ್ತೀನಿ.
ಅವಳು, 'ಹೋಗೋ! ಅಷ್ಟೇ. ಇನ್ನು ಹೇಳಲ್ಲ.'
ನಾನು ಕಣೇ, ನಿನ್ನಣ್ಣ ಹೇಳ್ತಿದ್ದೀನಿ, ನೀನೀಗ ಹಾಡ್ಬೇಕು ಅಷ್ಟೇ.
'ಹೋಗಲೋ' ಎಂದು ಅವಳು ಏಳ್ತಾಳೆ.
ನಾನು ಏಳೋದಿಕ್ಕೆ ಬಿಡೋದಿಲ್ಲ. ಕೈ ತಿರುಚಿ ಹೊಡೆದು, 'ಹೇಳ್ತೀಯಾ, ಇಲ್ವಾ?'
ಅಪ್ಪಾ, ನೋಡಪ್ಪಾ ಹೆಂಗೆ ಹೊಡೀತಾನೆ?
ಯಾವನೋ ಅವನು ನನ್ನ ಮಗಳನ್ನ ಹೊಡೆಯೋದು, ಎಷ್ಟೋ ಧೈರ್ಯ ನಿಂಗೆ? ಹೆಂಗೆ ಹೊಡೆದ್ಯೋ?
ನಾನು ಅಪ್ಪನಿಗೆ ಕಾಣುವ ಹಾಗೆ ಅವಳಿಗೆ ಮತ್ತೆ ಹೊಡೀತೀನಿ, ಅವಳು ಮತ್ತೆ ಕೂಗಿಕೊಳ್ತಾಳೆ.
ನೋಡು, ನಾನು ಸುಮ್ನಿರಲ್ಲ. ಇನ್ನೊಂದ್ಸಲ ಹೊಡೆದ್ರೆ ಅಷ್ಟೇ? ಅಪ್ಪ ಹೇಳ್ತಾರೆ.
ನಾನು ಮತ್ತೆ ಹೊಡೀತೀನಿ.
ಅಷ್ಟೊತ್ತಿಗಾಗಲೇ ಅವಳಿಗೆ ನಮ್ಮಿಬ್ಬರ ಉದ್ದೇಶ ಅರ್ಥ ಆಗಿರುತ್ತೆ. ಅಮ್ಮನ್ನ ಕರೀತಾಳೆ. 'ನೋಡಮ್ಮಾ'
ಸುಮ್ನಿರ‍್ರೋ, ಅವಳನ್ಯಾಕೆ ಗೋಳು ಹುಯ್ಕೋತೀರಾ? ಕುಸುಮ ಕೋಮಲೆ ಅವಳು. ಅಮ್ಮನ ಉವಾಚ.
ನಾನು ಸುಮ್ಮನೆ ಬಿಡ್ತೀನಿ. ಅಮ್ಮ ಕಿಚಾಯಿಸಿದ್ರೂ ಅವಳ ಹತ್ರಾನೇಹೋಗಿ. 'ನೋಡಮ್ಮಾ ಹೆಂಗೆ ಹೊಡೆದ, ಕೈ ಕೆಂಪಗಾಗಿದೆ'
ಅಯ್ಯೋ ಕಂದಾ, ಎಣ್ಣೆ ತಂದು ಹಚ್ಚಲೇನೇ?
ಹೋಗೇ, ಅಂತ ಬೈಯುತ್ತಾ, ಅವಳು ಅಮ್ಮನ ತೊಡೆ ಮೇಲೆ ಮಲಗುತ್ತಾಳೆ.
ಅಷ್ಟರಲ್ಲಿ, ಅಪ್ಪ ನನ್ನ ಕಡೆ ನೋಡುತ್ತಾ ಅಮ್ಮನಿಗೆ ಕಾಫಿ ಮಾಡಲು ಹೇಳು ಎಂದು ಕಣ್ಸನ್ನೆ ಮಾಡ್ತಿರುತ್ತಾರೆ. ನಾನು ಇಲ್ಲ ಎಂದು ಹೇಳ್ತೀನಿ. ಸ್ವಲ್ಪ ಹೊತ್ತು ನಮ್ಮ ದೃಷ್ಟಿ ಯುದ್ಧ ನಡೆದ ಮೇಲೆ ಅಪ್ಪ ಎದ್ದು ಹೇಳ್ತಾರೆ. 'ನಾನೇ ಕಾಫಿ ಮಾಡ್ತೀನಿ. ನಿಂಗೂ ಬೇಕೇನೋ? '
ಅಮ್ಮಂಗೆ ಅರ್ಥ ಆಗುತ್ತೆ.
ಊಟ ಆಗಿ ಇನ್ನೂ ಸ್ವಲ್ಪ ಹೊತ್ತಾಗಿಲ್ಲಪ್ಪ. ಆಗಲೇ ಕಾಫಿ. ಅದೆಷ್ಟು ಕುಡೀತೀರೋ? ಎದ್ದು ಅಡಿಗೆ ಮನೆಗೆ ಹೋಗ್ತಾ ನನ್ನ ಕಡೆಗೆ ತಿರುಗಿ 'ನಿಂಗೂ ಬೇಕೇನೋ'
ನಾನು ಮಳ್ಳನ ತರಹ, 'ಸ್ವಲ್ಪ ಕೊಡು'
ಕಾಫಿ ಕುಡಿದು ನಾವಿಬ್ರೂ ಅಪ್ಪ ಮಗ ಹೊಲಕ್ಕೆ ಹೊರಡ್ತೀವಿ.
ಬೈಕ್ ಹತ್ತಿ ಹೋಗ್ತಿರಬೇಕಾದ್ರೆ ಊರಿನ ಎಲ್ಲಾ ಸುದ್ದಿಗಳೂ ಒಂದ್ಸಲ ಬಂದು ಹೋಗ್ತಾವೆ. ಹೊಲಕ್ಕೆ ಹೋದ ಮೇಲೆ, ಪೂರ್ತಿಯಾಗಿ ಅಲ್ಲಿಯದೇ ವಿಷಯ. ಅಪ್ಪ ಹೇಳ್ತಾನೇ ಹೋಗ್ತಾರೆ.
ಇದೇ ಕೊನೆ ಬೆಳೆ, ಮುಂದಿನ ಸಲಕ್ಕೆ ಬಾಳೆ ತೆಗಿಸಿಬಿಡ್ತೀನಿ. ಅಡಿಕೆಗೆ ಬೆಳೆಯೋದಿಕ್ಕೆ ಅನುಕೂಲವಾಗುತ್ತೆ.
ಇನ್ನೂ ಮೂರು ವರ್ಷ ಬೇಕಲ್ವೇನಪ್ಪಾ?
ಹೌದು ಮಗನೇ, ಕಾಯಬೇಕು. ನಿನ್ನ ಆಫೀಸಿನ ವಿಷಯ ಹೇಳಪ್ಪಾ, ಏನಾಯ್ತು. ಮೊನ್ನೆ ಅವಾರ್ಡ್ ಕೊಟ್ರಲ್ಲ, ಆಮೇಲೆ ದುಡ್ಡೇನಾದ್ರೂ ಜಾಸ್ತಿ ಮಾಡಿದ್ರಾ?
ಇಲ್ಲ ಕಣಪ್ಪಾ, ಅದು ಹಾಗಲ್ಲ.
ಏಯ್, ಬಿಡೋ ಅದೇನು ಕಂಪನೀನೋ, ಅಷ್ಟು ವರ್ಷದಿಂದ ಕೆಲಸ ಮಾಡ್ತಿದ್ದೀಯಾ. ಒಂದು ಅವಾರ್ಡ್ ಕೊಟ್ಟು ಹಂಗೇ ಬಿಟ್ತಾರೇನೋ? ನಿನ್ನ ಮ್ಯಾನೇಜರ್ ಫೋನ್ ನಂಬರ್ ಕೊಡು. ನಾನು ಮಾತಾಡ್ತೀನಿ.
ನೀನು ಸುಮ್ನಿರಪ್ಪಾ. ಚೆನ್ನಾಗಿ ಕೆಲಸ ಮಾಡ್ತೀವಿ ಅಂತ ಗುರುತಿಸ್ತಾರಲ್ಲಾ, ಅಷ್ಟು ಸಾಕು.
ಹೀಗೇ ಮಾತಾಡ್ತಾ, ಹೊಲಕ್ಕೆ ಒಂದು ಸುತ್ತು ಬಂದಿರುತ್ತೀವಿ. ಸಂಜೆ ಆಗ್ತಾ ಬಂದಿರುತ್ತೆ, ಮನೆಗೆ ಹೊರಡ್ತೀವಿ.
ಸಂಜೆಯಿಂದ ಮನೆಯಲ್ಲೇ ಇರೋದರಿಂದ, ಸ್ವಲ್ಪ ಅನಾನುಕೂಲ. ಅಪ್ಪ ಅಮ್ಮ ಯಾವಾಗ ಬೇಕಾದರೂ ನನ್ನ ಮದುವೆಯ ವಿಷಯ ಎತ್ತುತ್ತಾರೆ.
ನೋಡು ನಿನ್ನ ವಾರಿಗೆಯವರೆಲ್ಲಾ ಮದುವೆಯಾಗ್ತಿದ್ದಾರೆ. ನಿಂಗೇನು ಧಾಡಿ. ಇಬ್ಬರಲ್ಲಿ ಯಾರು ಮಾತಾಡಿದರೂ ಒಂದೇ ಧ್ವನಿ.
ಅದು, ಹಂಗಲ್ಲ. ಇಷ್ಟು ಬೇಗ ಯಾಕೆ ಅಂತ.
ನೋಡಪ್ಪಾ, ನಿನ್ನ ಕೈಲಿ ಸಾಕೋದಿಕ್ಕಾಗಲ್ಲಾ ಅಂತ ಹಾಗೆ ಹೇಳ್ತೀಯಾ ಅನ್ನೋದಾದ್ರೆ, ಸೊಸೇನಾ, ನಾವು ಸಾಕ್ತೀವಿ. ನಿನ್ನ ಕೈಲಿ ಯಾವಾಗಾಗುತ್ತೋ ಅವಾಗ ಬಂದು ಕರೆದುಕೊಂಡು ಹೋಗು.
ನನಗೆ ಈ ವರಸೆಗಳೆಲ್ಲಾ ಚೆನ್ನಾಗಿ ಗೊತ್ತಿರೋದರಿಂದ. ಹೊಲದಿಂದ ವಾಪಸ್ ಬರುವಾಗಲೇ ರಾತ್ರಿ ಸೆಕೆಂಡ್ ಶೋ ಸಿನಿಮಾಗೆ ಹೋಗಲು ಯಾರನ್ನಾದರೂ ಒಪ್ಪಿಸಿ ಬಂದಿರ್ತೀನಿ. ಅವರು ಬಂದು ನನ್ನ ಹೆಸರು ಕೂಗಿದರೂಂದರೆ ತಕ್ಷಣಕ್ಕೆ ಮನೆಯಿಂದ ಠಣ್ ಅಂತ ನೆಗೆದು ಸಿನಿಮಾಗೆ ಓಡಿ ಬಿಡ್ತೀನಿ.
ಮರುದಿನ ಮತ್ತೆ ಎಲ್ಲಾ ಯಥಾಪ್ರಕಾರ...
ಕಣ್ಣು ಮುಚ್ಚಿ ತೆಗೆಯುವುದರೊಳಗೆ ರಜೆ ಮುಗಿದು ವಾಪಸ್ ಹೊರಡೋ ಸಮಯ ಬಂದಿರುತ್ತೆ. ಎಲ್ಲರೂ ಬಸ್ ಸ್ಟ್ಯಾಂಡ್ ಗೆ ಬರುತ್ತಾರೆ.
ನೀನು ಇನ್ನೂ ಬಂದಿಲ್ಲಾ ಅಂದರೆ, ನಾಳೆ ಬರ್ತೀಯಾ, ಇವತ್ತು ಬರ್ತೀಯಾ ಅಂತ ಆಸೆಯಿಂದ ಕಾಯ್ತಿರ್ತೀವಿ. ಬಂದ ಮೇಲೆ ಸಂಕಟ ಆಗುತ್ತೆ ಕಣೋ. ನಾಳೆ ಈ ಹೊತ್ತಿಗೆ ನೀನು ಆಗಲೇ ಹೊರಟು ಹೋಗ್ತೀಯಾ ಅಂತ ಬೇಜಾರಾಗುತ್ತಿರುತ್ತೆ. ನೀನು ಇಲ್ಲದಿದ್ದಾದ ಇಲ್ಲಾ ಅನ್ನೋ ಸಂಕಟ, ಇದ್ದಾಗ ಹೊರಟು ಹೋಗ್ತೀಯಾ ಅನ್ನೋ ಸಂಕಟ. ಇಲ್ಲೇ ಯಾವುದಾದ್ರೂ ಕೆಲಸ ಮಾಡ್ಕೊಂಡ್ ಇರಬಾರ್ದೇನೋ?
ನಾನು ಮಾತಾಡೋಲ್ಲ. ಬಸ್ ಬಂದ ತಕ್ಷಣ ಅವರಿಗೆಲ್ಲಾ ಟಾಟಾಮಾಡಿ ಹೊರಟು ಬಿಡ್ತೀನಿ.
ಈ ರಾತ್ರಿ ಅದೆಲ್ಲಾ ಮತ್ತೆ ಮತ್ತೆ ನೆನಪಾಗ್ತಿದೆ. ಬೇರನ್ನೆಲ್ಲೋ ಬಿಟ್ಟು ಬಳ್ಳಿ ಮತ್ತೆಲ್ಲೋ ಹಬ್ಬಲು ಯತ್ನಿಸಿದಂತೆ ನಾನೆಲ್ಲೋ ಒಂದು ಕಡೆ ನನ್ನವರೆಲ್ಲೋ ಒಂದು ಕಡೆ.
ಈ ರಾತ್ರಿ ಲೇಟಾಗಿ ಮಲಗಿದೆನೆಂದು ಗೊತ್ತಾದರೆ, ಫೋನಲ್ಲಿ ಉಪದೇಶ 'ಹಾಗೆ ಮಾಡ್ಬೇಡ್ವೋ, ಮೊದಲೇ ಕಂಪ್ಯೂಟರ್ ಕೆಲಸ. ಮನೆಗೆ ಬಂದಮೇಲೂ ಅದನ್ನೇ ಮಾಡ್ತೀಯಾ, ಕಣ್ಣಿಗೆ ಸ್ವಲ್ಪ ರೆಸ್ಟ್ ಕೊಡೋ. ಆಮೇಲೆ ದಪ್ಪ ಕನ್ನಡಕ ಹಾಕ್ಕೋ ಬೇಕಾಗುತ್ತೆ. ಮದುವೆಯಾಗೋದಕ್ಕೆ ಹುಡುಗಿಯರು ಒಪ್ಪಲ್ವೋ'
ಸುಲಲಿತ ಬರೆಹ.. ನಮ್ಮೂರೆಂದು ಭಾವಿಸಿದ ಊರನ್ನು ಬಿಟ್ಟು ನಮ್ಮದಲ್ಲದ ಊರಲ್ಲಿ ಬದುಕುವ ಎಲ್ಲರ ಇಬ್ಬಗೆಯ ಸಂಕಟದ, ಇಂದಿನ ಅನಿವಾರ್ಯತೆಗೆ ಒಡ್ಡಿಕೊಂಡಿರುವವರ ಅನಿಸಿಕೆಯಾಗಿದೆ....ಯಾವುದಕ್ಕೂ... ಅಪ್ಪ, ಅಮ್ಮ ಹೇಳಿದ ಹಾಗೆ ಮದುವೆಯಾಗಿಬಿಡಿ.
ReplyDeleteಆನಂದ ಆಪ್ತವಾದ ಬರಹ ತಲೆಬರಹಾನೇ ಸೆಲೆಯುತ್ತದೆ ನಿಮ್ಮಂತವರನ್ನು ನೋಡಿ ಹೊಟ್ಟೆಕಿಚ್ಚು ಯಾಕಂದ್ರ ನಾ ಊರಿಗೆ ಹೋದರೆ
ReplyDeleteಅಲ್ಲಿ ಯಾರೂ ಇಲ್ಲ ಅವ್ವ ಅಪ್ಪ ಆಗಲೆ ಯಾತ್ರೆ ಮುಗಿಸಿಕೊಂಡಿದ್ದಾರೆ ಇನ್ನು ತಂಗಿ ಮೊದಲೇ ಇಲ್ಲ ಊರಿಗೆ ಹೋದರೂ ಲಾಜ್ ವಾಸ...!
ಆನ೦ದ್,
ReplyDeleteತು೦ಬಾ ಚೆನ್ನಾಗಿದೆ ನಿಮ್ಮ ಮನೆಯ ರಸಮಯ ವಾತಾವರಣ.ಹೆತ್ತವರ ಮಮತೆ ಹೄದಯಕ್ಕೆ ಎಷ್ಟೊ೦ದು ಹತ್ತಿರ ಅಲ್ಲವೇ?
ಬೇಗನೆ ಅಮ್ಮನಿಗೊ೦ದು ಸೊಸೆ ತನ್ನಿ.
tumba chennagi tiLisiddeeri, maneya nenapu kaaduttale irutte... neevu nimma tangige goLaadisuvudu odi nanage nanna annana nenapayitu.
ReplyDeletenamagu oorina nenapu maadisibittiri.
ಆನ೦ದ..
ReplyDeleteಅಷ್ಟು ಬೇಗ ಯಾಕೆ ಹೊರಟು ಬಿಟ್ಟೆಯಪ್ಪಾ....
ನಾನೂ ಸ್ವಲ್ಪ ಹೊತ್ತು ನನ್ನೂರಲ್ಲಿ ಇದ್ದೆ....
ಹಳೆಯ ನೆನಪು ...
ಮನೆಯವರ ಪ್ರೀತಿ...
ಮನಸೆಲ್ಲಾ ತ೦ಪು....!!!!
Thumba chennagi baredidiya Anand.
ReplyDeleteSuper!!!!
ReplyDeleteನಮ್ಮವರನ್ನು ಬಿಟ್ಟು ಅನಿವಾರ್ಯವಾಗಿ ದೂರಹೋದವರ ಮನಸ್ಸನ್ನು ಚೆನ್ನಾಗಿ ಚಿತ್ರಿಸಿದ್ದೀರಿ
ReplyDeleteಆನ೦ದ್,
ReplyDeleteತು೦ಬಾ ಚೆನ್ನಾಗಿ ಬರೆದಿದ್ದೀರ.....
ಅಮ್ಮನ ಆಸೆಯಂತೆ ಬೇಗನೆ ಮದುವೆ ಸುದ್ದಿ ಕೊಡಿ.....
ಆನಂದ್,
ReplyDeleteನಿಮ್ಮ ಬರಹ ಓದಿದಂತೆ ನನಗೆ ನಮ್ಮ ಮನೆಯ ನೆನಪು ಬಂತು
ಅಮ್ಮನ ಮಡಿಲ ಮೇಲೆ ಮಲಗಿದ್ದು, ಅಣ್ಣ ಅಕ್ಕನ ಜೊತೆ ಆಡಿದ್ದು
ಎಲ್ಲ ನೆನಪು ಮಾಡಿದ್ರೀ
ಒಳ್ಳೆಯ ಬರಹ
ಅಪ್ಪ, ಅಮ್ಮ, ತಂಗಿಯ ಪ್ರೀತಿಯ ಹೊಳೆಯಲ್ಲಿ ತೇಲಿಸಿದ್ದಕ್ಕೆ ಧನ್ಯವಾದಗಳು.
ReplyDeleteಆನಂದರೇ...
ReplyDeleteಕಥೆ ಇರಬೇಕು ಎಂದುಕೊಂಡೆ ....ಓದಿ ಮುಗಿಸಿದ್ದೇ ಗೊತ್ತಾಗಲಿಲ್ಲ....ನನ್ನ ಅನುಭವವೇ ಇದ್ದಂತಿದೆ...ತುಂಬಾ ಚೆನ್ನಾಗಿದೆ ಬರಹ ಆನಂದ್...ಅದೇ... ಬೇಗ ಮದ್ವೆ ಆಗ್ಬಿಡಿ ಅಷ್ಟೆ !
ಸರಳ ಆಪ್ತ ಬರಹ. ಜೀವನಕ್ಕೆ ಬೇಕಾದದ್ದು ಪಡೆಯಲು ಅ೦ತ ಪಟ್ಟಣಕ್ಕೇ ಬರೋರು ಕಳೆದುಕೊ೦ಡದ್ದೇನು? ಪಡೆಯುವದು ಏನು? ಅನ್ನುವದರ ಸ್ವವಿಮರ್ಶೆ ಮನಸ್ಸಿಗೇ ಆಪ್ತವೆನಿಸುತ್ತದೆ.
ReplyDeleteತುಂಬಾ ಸುಂದರವಾದ ಕುಟುಂಬದ ಚಿತ್ರಣವನ್ನು ನೀಡಿದ್ದೀರಿ, ಆನಂದ. ಓದಲು ಖುಶಿಯಾಗುತ್ತದೆ.
ReplyDeleteನೀವ್ಹೇಳೋದು ನಿಜ ನಾರಾಯಣ್ ಸರ್, ಇದು ನನ್ನೊಬ್ಬನ ಸಂಕಟವಲ್ಲ.
ReplyDeleteಆದ್ಸರಿ, ಮದುವೆಯಾಗು ಅಂತ ನೀವು ಕೂಡ ಹೇಳ್ತೀರಲ್ಲಾ, ಈ ಬಡಪಾಯಿಗೆ ಈಗ್ಲೇ ಯಾಕೆ ಶಿಕ್ಷೆ ಸರ್... :)
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು ಉಮೇಶ್ ಸರ್.
ReplyDeleteನಿಜ ಮನಮುಕ್ತಾರವರೆ, ಬೇಜಾರಾದಾಗ ಅಪ್ಪ, ಅಮ್ಮನ ತೊಡೆ ಮೇಲೆ ಮಲಗಿದಾಗ ಸಿಗುವ ಸಮಾಧಾನದ ಮುಂದೆ ಬೇರೇನೂ ಇಲ್ಲ.
ReplyDeleteಹೌದೂ, ನಿಮ್ಮ ಕಡೆ ಯಾರಾದ್ರೂ ಹೆಣ್ಣಿದ್ರೆ ನಮ್ಮನೇಲಿ ತಿಳಿಸಿ. :)
ಅಲ್ರೀ ಯಾಕೆ ಇಷ್ಟು ಬೇಗ ನನ್ನ ಸ್ವಾತಂತ್ರ್ಯ ಕಳೆದುಕೊಳ್ಳಲೀ ಅಂತಾ...
ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು. ಆದರೆ, ಸರಿಯಾದ ಸಮಯ ಬಂದಾಗ ಅದನ್ನು ಹಸ್ತಾಂತರಿಸಲು ಸಿದ್ಧನಿದ್ದೇನೆ... :)
ಮನಸು ಮೇಡಂ,
ReplyDeleteನನ್ನ ತಂಗಿಯನ್ನು ನಾನು ಗೋಳಾಡಿಸಿದ್ದನ್ನಷ್ಟೇ ಓದಿದ್ದೀರಾ. ಅವಳು ನನಗೆ ಕೊಡೋ ಹಿಂಸೆ ನಿಮಗಿನ್ನೂ ಗೊತ್ತಿಲ್ಲ.
ಮೊನ್ನೆ ಊರಿಗೆ ಹೋದಾಗ ಚಿತ್ರನ್ನ ಮಾಡಿ ಬಡಿಸ್ತೀನಿ ಅಂತ ಕುಳಿತಿದ್ಳು. ಹೇಗೋ ಮಾಡಿ ತಪ್ಪಿಸ್ಕೊಂಡೆ. ಜೀವ ಒಂದ್ಸಲ ಹೋಗಿ ಬಂದಂಗಾತು. :)
ವಿಜಯಶ್ರೀಯವರೆ,
ReplyDeleteನನಗೇನೋ ವಾಪಸ್ ಹೊರಡಲು ಮನಸ್ಸಿರಲಿಲ್ಲ. ಆದರೇನು ಮಾಡುವುದು, ಬೇರೆ ವಿಧಿಯಿರಲಿಲ್ಲ. ಹೊರಡಲೇ ಬೇಕಾಯ್ತು.
ಆದರೆ ಮೇಲಿಂದ ಮೇಲೆ ಹೋಗಿ ಬರ್ತಿರ್ತೀನಿ. ನೀವೂ ನೆನಪಲ್ಲಿ ಕಳೆದುಹೋಗಿದ್ದು ತಿಳಿದು ಖುಶಿಯಾಯ್ತು. :)
ನಿಶಾ ಮೇಡಂ, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ReplyDeleteರವಿಕಾಂತ್ ಸರ್,
ReplyDeleteನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ thanx!
ದೀಪಸ್ಮಿತ,
ReplyDeleteನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಅಯ್ಯೋ, ಪ್ರತೀ ಸಲ ಅಮ್ಮನ ಮಾತು ಕೇಳ್ಲಿಕ್ಕೆ ಆಗಲ್ಲ ಮಹೇಶ್ ಸರ್. ಅವಳ ಪ್ರಕಾರ ಈ ತಕ್ಷಣಕ್ಕೆ ಮದುವೆಯಂತೆ, ಮುಂದಿನ ವರ್ಷದ ಹೊತ್ತಿಗೆ ಅವಳು ಅಜ್ಜಿಯಾಗಬೇಕಂತೆ... !
ReplyDeleteಗುರು ಸರ್,
ReplyDeleteನಿಜ ಅಲ್ವಾ, ಚಿಕ್ಕಂದಿನಲ್ಲಿ ಒಟ್ಟಿಗೆ ಆಟ ಆಡಿದ್ದು, ಜಗಳ ಆಡಿದ್ದು ಎಲ್ಲಾ ಈಗ ನೆನೆಸಿಕೊಳ್ಳೋಕೆ ಎಷ್ಟು ಚೆನ್ನಾಗಿರುತ್ತೆ!
ಸುಮಾರವರೆ, ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು.
ReplyDeleteಸುಬ್ರಹ್ಮಣ್ಯ ಸರ್,
ReplyDeleteಎಲ್ಲರ ಮನೆಯಲ್ಲೂ ಈ ರೀತಿಯ ಪ್ರಸಂಗಗಳು ಇದ್ದೇ ಇರುತ್ತವೆ. ಅಪ್ಪ ಅಮ್ಮಂದಿರು ಎಲ್ಲಿದ್ದರೂ ಒಂದೇ ತರಹ ಅಲ್ಲವೇ?
ಈ ಬ್ರಹ್ಮಚಾರಿ ಮೇಲೆ ಹೊಟ್ಟೆಕಿಚ್ಚಾ ಸರ್, ಮದುವೆಯಾಗ್ಲಿಕ್ಕೆ ಹೇಳ್ತಿದ್ದೀರಾ?
ಸೀತಾರಾಮ್ ಸರ್,
ReplyDeleteಏನು ಸಿಕ್ಕಿದೆಯೋ ಗೊತ್ತಿಲ್ಲ, ಆದರೆ ಕಳೆದುಕೊಂಡಿದ್ದೇನು ಅಂತ ಚೆನ್ನಾಗಿ ಅರ್ಥ ಆಗಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸುನಾಥ ಕಾಕಾ,
ReplyDeleteಧನ್ಯವಾದಗಳು :)
ಆನಂದ್ ಸರ್,
ReplyDeleteಅಕ್ಕನ ಸಂಗಡ ಜಗಳ, ಅಮ್ಮ ಕಾಳಜಿ ತುಂಬಿದ ಬೈಗುಳ ಎಲ್ಲಾ ನೆನಪಿಗೆ ತರಿಸಿದಿರಿ...... ತುಂಬಾ ಧನ್ಯವಾದ......... ಅಮ್ಮನ ಅಪೇಕ್ಷೆಯಂತೆ ಬೇಗ ಮದುವೆಯಾಗಿ....
ದಿನಕರ್ ಸರ್,
ReplyDeleteಧನ್ಯವಾದಗಳು. ಯಾಕೋ ಎಲ್ಲರೂ ಒತ್ತಾಯ ಮಾಡ್ತಿದ್ದೀರಾ... ಆಗ್ತೀನಿ ಬಿಡಿ... :)
ಮನ ಮುಟ್ಟಿದ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ.
ReplyDeleteಧನ್ಯವಾದಗಳು ಉಮಾ ಮೇಡಂ
ReplyDeleteತುಂಬಾ ಚೆನ್ನಾಗಿ ಬರ್ದಿದಿರಾ ಆನಂದ್...ನಂಗೂ ಹೀಗೇ ಆಗತ್ತೆ ಊರಿಗೆ ಹೋದಾಗ, ಹೋಗಿ ಬಂದಾಗ..
ReplyDelete