Monday, January 25, 2010

ಕವಿತೆ ಹುಟ್ಟದ ರಾತ್ರಿ

ಕೈಗೆ ಸಿಗದ ಶಬ್ದಗಳು
ಜಾರಿಬಿದ್ದ ಚಿನ್ಹೆಗಳು
ಬರೆ ಬರೆದು ಸವೆದ ಸಾಲುಗಳು
ಮರೆತುಹೋದ ಪದ್ಯಗಳು
ಅಮೂರ್ತ ಭಾವಗಳು
ದಂಡಾಗಿ ಬಂದು
ದಂಡೆಗೆ ಅಪ್ಪಳಿಸಿದಂತೆ.
ಭರ್ಜರಿ ಮೊರೆತ
ಕಿವಿ ತಮಟೆ ತೂತಾಗಿ
ಕಣ್ಣುಗಳು ಕತ್ತಲಾಗಿ
ಕಾಲ ಕೆಳಗಿನ ನೆಲ ಕುಸಿದು
ಆಸರೆಗೆ ತಡಕಾಡಿ
ಆಗಸಕೆ ಕೈ ಎತ್ತಿ
ದನಿ ಇಂಗಿ ಬಾಯ್ತೆರೆದು
ಕವಿತೆ ಹುಟ್ಟದ ರಾತ್ರಿ ಬೆಚ್ಚಿಬಿದ್ದೆ.

Friday, January 22, 2010

दिल तो बच्चा है जी

ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯಂತ ಸರಳ ಸುಂದರ ಹಾಡಿದು. ಥೇಟ್ ರಾಜ್ ಕಪೂರ್ ಕಾಲದ ಗೀತೆಯಂತಿದೆ.

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಇಷ್ಕಿಯಾ' ಚಿತ್ರದ ಗೀತೆಯಿದು. ಚಿತ್ರ ನಿರ್ದೇಶನದ ಜೊತೆಜೊತೆಗೆ ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಗುಲ್ಜಾರ್ ಸಾಹಿತ್ಯವಿದೆ.

ಸಂಗೀತ, ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆಯೋ, ಇಲ್ಲಾ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಿವೆಯೋ ಎನ್ನುವಷ್ಟರ ಮಟ್ಟಿಗೆ ಇದು ಚೆನ್ನಾಗಿ ಬಂದಿದೆ. ರಾಹತ್ ಫತೇ ಅಲಿ ಖಾನ್ ತಮ್ಮ ದ್ವನಿಯಿಂದ ಇದಕ್ಕೆ ಬೇರೆಯದೇ ಮೆರುಗು ನೀಡಿದ್ದಾರೆ.

ವೃದ್ಧನೊಬ್ಬನ ಆಲಾಪದಂತಿರುವ ಈ ಹಾಡಿಗೆ ನಾಸಿರುದ್ದೀನ್ ಷಾ ಹೇಗೆ ಅಭಿನಯಿಸಿರಬೇಡ ಎಂದು ಊಹಿಸುತ್ತಾ ಕುಳಿತಿದ್ದೇನೆ. ಮುಂದಿನವಾರ ಚಿತ್ರ ಬಿಡುಗಡೆಯಾಗಲಿದೆ.

ಇಂತಹ ಒಂದು ಹಾಡನ್ನು ನೀಡಿದ ವಿಶಾಲ್ ಮತ್ತು ಗುಲ್ಜಾರ್ ರಿಗೆ ವಂದನೆಗಳನ್ನು ಸಲ್ಲಿಸುತ್ತಾ ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದೇನೆ.

ಸುಮ್ಮನೆ ಹಾಡು ಕೇಳುತ್ತಾ ಓದುತ್ತಾ ಹೋಗಿ, ಆನಂದವಾದೀತು.



ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं
वल्ला ये धड़कन भड्ने लगी है
चेहरे की रंगत उड़ने लगी है
डर लगता है तनहा सोने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं

किसको पता था पेहलु में रखा
दिल ऐसा बाजी भी होगा
हम तो हमेशा समझते थे कोई
हम जैसा हाजी ही होगा
हाई जोर करें, कितना शोर करें
बेवजा बातों पे ऐंवे गौर करें
दिल सा कोई कमीना नहीं
कोई तो रोके, कोई तो टोके
इस उम्र में अब खाओगे धोखे
डर लगता है इश्क करने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उधासी बैठी है दिल पे
हस्सने से घबरा रहे हैं
सारी जवानी कतरा के काटी
पीरी में टकरा गए हैं
दिल धड़कता है तो ऐसे लगता है वो
आ रहा है यहीं देखता ही न वो
प्रेम की मारें कटार रे
तौबह ये लम्हे कट ते नहीं क्यूँ
आँखों से मेरी हट ते नहीं क्यूँ
डर लगता है मुझसे केहने में जी

दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

Wednesday, January 20, 2010

ಜಾರಿಬಿದ್ದ ನಕ್ಷತ್ರ

ಸುರಿವ ಕತ್ತಲೆಯ ರಾತ್ರಿ
ಮನೆಯ ಮಹಡಿಯ ಮೇಲೆ
ನಿಂತು ನೋಡುತ್ತಿರಲು
ದೈತ್ಯ ಗುಡ್ಡದ ಹಿಂದೆ
ಸ್ತಬ್ಧ ಕಾಡಿನ ನಡುವೆ
ನಕ್ಷತ್ರವೊಂದು ಜಾರಿಬಿತ್ತು

ತಾರೆಗಳ ರಾಜಕುಮಾರಿ
ತಾರಸಿಯಿಂದ ಬಗ್ಗಿ ನೋಡಿ
ಜಾರಿಬಿದ್ದು ಕಾಲುಮುರಿದುಕೊಂಡಿರಲು
ನಾನಲ್ಲಿಗೆ ಹೋಗಿ...
ಛೇ, ಅಪ್ಪ ಹೇಳಿದ ಕಥೆ ಈಗೆಷ್ಟು ಬಾಲಿಶ
ಓದಿ ಕೆಟ್ಟೆನೋ ನಾನು
ಅಬಲೆ ತಾರೆಯ ಕೂಗು
ನನಗಿಂದು ಕೇಳುತ್ತಿಲ್ಲ

ಹರಿವ ತುಂಗೆಯ ಮೇಲೆ
ಬೆರಗುಗಣ್ಣು ತೇಲಿದಂತಾಗಿ
ಮೆಟ್ಟಿಲಿಳಿದು ಮನೆಗೆ
ಬಂದು ಕದವಿಕ್ಕಿದೆ

ಬೀಸಿಬಂದ ಬಾಲ್ಯ
ಬಾಗಿಲಿಗೆ ಬಡಿದು
ಅಂಗಳದಲ್ಲಿ ಬಿದ್ದಿತ್ತು
ನಿನ್ನೆಯೇ ಉತ್ತರಾಯಣ
ಆದರೂ ರಾತ್ರಿಯಿಡೀ ನರಳಿತ್ತು





ಬಾಲ್ಯದ ನೆನಪನ್ನು ಬರೆಯ ಹೊರಟವನು ಮತ್ತೆಲ್ಲಿಗೋ ಹೋಗಿ ನಿಂತೆ. ಬಾಲ್ಯದ ನೆನಪು ಎಷ್ಟು ಮಧುರವೋ ಅದು ಮುಗಿದು ಹೋಯಿತೆಂಬ ಅರಿವು ಅಷ್ಟೇ ಖೇದಕರ. ನಾನಿನ್ನು ಚಿಕ್ಕಮಗುವಲ್ಲ, ಅವುಗಳ ಬೆರಗು, ಆ ಕುತೂಹಲ ನನ್ನಲ್ಲಿನ್ನೂ ಉಳಿದಿಲ್ಲ. ಮತ್ತೇನು ಮಾಡಹೊರಟರೂ ಅಂದಿನ ನೆನಪಿನ ನಕಲಾದೀತಷ್ಟೇ. ನಿಸರ್ಗದ ಸೊಬಗನ್ನು ಸವಿಯಬಲ್ಲೆ, ಆದರೆ ಹೌದಾ ಅಪ್ಪಾ, ಅದು ಹಾಗಾ... ಊಹೂಂ, ಉಳಿದಿಲ್ಲ. ಬದುಕಲು ಅನ್ನ ನೀಡಿದ ವಿದ್ಯೆ ಆ ಚಿಕ್ಕಚಿಕ್ಕ ಸಂತೋಷಗಳನ್ನು ನನ್ನಿಂದ ಕಸಿದಿದೆ.

Monday, January 18, 2010

ಬೇರಿಲ್ಲದ ಊರಲ್ಲಿ

ನಾಳೆ ಬೆಳಗಾದರೆ ಎದ್ದು ರೆಡಿಯಾಗಿ ಆಫೀಸಿಗೆ ಹೋಗಬೇಕು. ಈ ರಾತ್ರಿ ಯಾಕೋ ಊರಿನ ನೆನಪು ಸ್ವಲ್ಪ ಹೆಚ್ಚಾಗೇ‌ ಕಾಡುತ್ತಿದೆ. ಮಲಗಿದರೆ ಮುಗಿಯಿತು. ನಾಳೆಯಿಂದ ಮತ್ತೆ ಅದೇ‌ ಕೆಲಸ, ಅದೇ ಜೀವನ. ಸ್ವಲ್ಪ ಬೇಜಾರಾದರೂ ಸರಿ, ಊರಿನ ನೆನಪಿರಲಿ ಎಂದು ಹಾಗೇ‌ ಎದ್ದು ಕುಳಿತಿದ್ದೀನಿ. ಈ‌ ಹೊತ್ತಲ್ಲಿ ಅಲ್ಲಿ ಹೇಗಿದ್ದೀತು ಅಂತ ಯೋಚಿಸುತ್ತಾ ಅಲ್ಲಿಗೇ ನಿಧಾನವಾಗಿ ಹೋಗುತ್ತಿದ್ದೇನೆ. ಬೀದಿ ನಾಯಿಗಳ ಕೂಗು ಮತ್ತೆ ನನ್ನನ್ನು ಇಲ್ಲಿಗೇ ಕರೆ ತರುತ್ತಿದೆ.

ಊರಿಂದ ಹೊರಬಿದ್ದು ವರ್ಷಗಳೇ ಆದರೂ ದಿನದಿಂದ ದಿನಕ್ಕೆ ಅಲ್ಲಿನ ನೆನಪು, ಸೆಳೆತ ಹೆಚ್ಚಾಗುತ್ತಲೇ ಇದೆ. ನಾನಿರುವ ಜಾಗಕ್ಕೇ‌ ನನ್ನವರು ಬಂದರೂ ಅವರು ಪರಕೀಯ ಮತ್ತೆ ನಾನೂ. ನಾನು ಅಲ್ಲಿಗೇ‌ ಹೋಗಬೇಕು ಮತ್ತೆ ನನ್ನೂರು ನನ್ನ ಜನ ಹಾಗೇ ಇರಬೇಕು. ಸ್ವಾರ್ಥ ನಂದು. ಆದರೆ ಅದಾವುದೂ‌ ಆಗುವ ಮಾತಲ್ಲ. ನಾನಲ್ಲಿಗೆ ಹೋಗುವುದಿಲ್ಲ. ಹೋದರೂ ಎರಡು ದಿನದಅತಿಥಿ. ವಾಪಸ್ ಊರಿಗೆ ಯಾವಾಗ ಹೋಗ್ತೀರಾ?‌ ಅಲ್ಲಿಗೆ ಹೋದಾಗ ಜನ ಕೇಳ್ತಾರೆ. ನನ್ನಾಗಲೇ ಅವರು ತಮ್ಮ ಊರಿಂದ ಆಚೆ ಅಟ್ಟಿಬಿಟ್ಟಿದ್ದಾರೆ. ಆ ಮಟ್ಟಿಗೆ ನಾನು ನನ್ನ ಊರಲ್ಲಿ ಪರಕೀಯ. ಆದರೂ ನಾನಲ್ಲಿಗೆ ಹೋಗಬೇಕು.

ಊರಿಗೆ ಬಂದಾಗಲೂ ನೀನು ಪುಸ್ತಕ ಓದ್ತೀಯಾ, ಬಿಟ್ಟರೆ ಮಲಗ್ತೀಯಾ ಅಂತ ಅಮ್ಮ ಬೈತಾಳೆ. ಆದರೆ ಪ್ರತೀ ಸಲ ಊರಿಗೆ ಹೋದಾಗ ಮಲಗಲಿಕ್ಕೆ ಹಾಸಿಗೆ ಸಿದ್ಧ ಮಾಡ್ತಾಳೆ. ಎದ್ದ ಕೂಡಲೇ‌ ತಿಂಡಿ. ತಿಂಡಿ ತಿನ್ನುತ್ತಲೇ‌ ಆ ದಿನದ ಪೇಪರ್ ಓದುವುದು. ಮುಗಿದ ಮೇಲೆ ಟೀಪಾಯ್ ಕೆಳಗೆ ಬಗ್ಗಿ ನೋಡಿದರೆ ನಾನು ಓದಿರದ ಪುಸ್ತಕಗಳನ್ನೆಲ್ಲಾ ಒಂದೆಡೆ ಜೋಡಿಸಿ ಇಟ್ಟಿರುತ್ತಾಳೆ. ನಾನು ಯಾವುದಾದರೂ ಒಂದು ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ಅವಳು ಕಾಫಿ ತಂದು ಕೊಡುತ್ತಾಳೆ. ಕಾಫಿ ಕುಡಿದು ಮಂಚದ ಮೇಲೆ ಅಮ್ಮನ ತೊಡೆ ಮೇಲೆ ತಲೆಯಿಟ್ಟು ಮಲಗಿ ಹಾಗೇ‌ ಪುಸ್ತಕ ಓದ್ತಿರಬೇಕಾದ್ರೆ, ಅಮ್ಮ ಹಿತವಾಗಿ ತಲೆ ಒತ್ತುತ್ತಾ ಮೆಲ್ಲನೆಯ ದನಿಯಲ್ಲಿ ಮತ್ತೆ ಬೈತಿರುತ್ತಾಳೆ. ನೀನು ಊರಿಗೆ ಬಂದರೆ ಬರೀ ಮಲಗ್ತೀಯಾ, ಇಲ್ಲ ಓದ್ತೀಯಾ.. ಈ ಚಂದಕ್ಕೆ ಯಾಕೆ ಬರಬೇಕು...

ಇನ್ನು ಅಪ್ಪನ ಕಥೆ ಬೇರೆ. ನಾನು ಬರ್ತೀನಿ ಅಂದ್ರೆ ಸಾಕು. ಮಧ್ಯರಾತ್ರಿಯಿಂದಲೇ ಆಗಾಗ ಎದ್ದು ಗಡಿಯಾರ ನೋಡಿ ಇನ್ನೊಂದ್ ಸ್ವಲ್ಪ ಹೊತ್ತಿಗೆ ಬರ್ತಾನೆ ಅಂತ ಹೇಳ್ತಿರ್ತಾರೆ.
ನಂಗೆ ತಲೆ ಚಿಟ್ ಹಿಡಿದು ಹೋಗುತ್ತೆ ಮಾರಾಯ, ನೀನು ಹೇಳದಂಗೇ‌ ಊರಿಗೆ ಬಾ ಅಂತ ಅಮ್ಮ ಹೇಳ್ತಿರ್ತಾಳೆ. ಆದ್ರೂ‌ ಪ್ರತೀ ಸಲ ಅವರಿಗೆ ಸುದ್ದಿ ಮುಟ್ಟಿರುತ್ತದೆ. ಅಮ್ಮನೇ‌ ಹೇಳಿರ್ತಾಳೆ.
ನಾನು ಬಸ್ಸಿಂದ ಊರಲ್ಲಿ ಇಳಿಯುವ ಹೊತ್ತಿಗೆ ಕೈಯಲ್ಲೊಂದು ಸಿಗರೇಟ್ ಹಿಡ್ಕೊಂಡು ಬಸ್ ಸ್ಟ್ಯಾಂಡ್ ನ ಉದ್ದಕ್ಕೂ ಅಪ್ಪ ನಡೆದಾಡ್ತಿರುತ್ತಾರೆ.
ಈ ಹೊತ್ತಲ್ಲಿ ಯಾಕೆ ಬಂದ್ಯಪ್ಪಾ ಅಂತ ಕೇಳಿದ್ರೆ ಸುಮ್ನೆ ಬಾರಲೇ‌ ಅಂತ ಬೈದು ಮನೆಗೆ ಕರೆದೊಯ್ತಾರೆ.
ಮನೆಗೆ ಹೋದ ಮೇಲೆ ಯಥಾಪ್ರಕಾರ ನಾನು ಮಲಗ್ತೀನಿ. ಒಂದು ಗಂಟೆ ಸುಮ್ನಿರ್ತಾರೆ ಅಷ್ಟೇ. ಆಮೇಲೆ ಪ್ರತೀ ಅರ್ಧ ಗಂಟೆಗೊಂದ್ಸಲ 'ಎದ್ದೇಳೋ‌ ಪಾಪು, ಕಂದಾ ಎದ್ದೇಳೋ, ಎದ್ದೇಳೋ‌ ಹೈವಾನ್' ಅಂತ ಬಗೆಬಗೆಯಾಗಿ ಎಬ್ಬಿಸಲು ಪ್ರಯತ್ನ ಪಡುತ್ತಿರುತ್ತಾರೆ.
ಅಷ್ಟರಲ್ಲಿ ಅಮ್ಮ ಬಂದು 'ಅಯ್ಯೋ, ಸ್ವಲ್ಪ ಸುಮ್ನಿರಬಾರ‍್ದಾ, ಅಷ್ಟು ದೂರದಿಂದ ಬಂದಿದ್ದಾನೆ. ಪಾಪ, ಮಲಗಲಿಕ್ಕೆ ಬಿಟ್ಟರೆ ಗಂಟೇನು ಹೋಗುತ್ತೆ?' ಅಂತ ಅಪ್ಪನಿಗೆ ದಬಾಯಿಸುತ್ತಿರುತ್ತಾಳೆ.

ಸ್ವಲ್ಪ ಬೆಳಗಾಯ್ತು ಅನ್ನೋ ಹೊತ್ತಿಗೆ ಊರಲ್ಲಿ ಮುಲ್ಲಾ, ಬೀರಪ್ಪ, ಕಾಳಮ್ಮ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಜೋರಾಗಿ ಪ್ರಾರ್ಥನೆ ಶುರು ಮಾಡ್ತಾರೆ. ಅವರ ಆರ್ಭಟ ಎಲ್ಲಾ ಮುಗಿದ ಮೇಲೆ ಅಮ್ಮ ನನಗಿಷ್ಟವಾದ ಭಾವಗೀತೆಗಳನ್ನೋ, ಹಾಡುಗಳನ್ನೋ ಮೆಲ್ಲನೆಯ ದನಿಯಲ್ಲಿ ಪ್ಲೇಯರ್ ಗೆ ಹಾಕುತ್ತಾಳೆ.

ಅಷ್ಟರಲ್ಲಿ ಅಪ್ಪ, ಹೂಂ, ಇನ್ನೂ‌ ಎದ್ದಿಲ್ವೇನೇ‌ ಇವನು ಅಂತ ನಮ್ಮಿಬ್ಬರನ್ನೂ ಕೇಳುತ್ತಾ ಮತ್ತೆ ನನ್ನೆಬ್ಬಿಸಲು ಪ್ರಯತ್ನ ಪಡ್ತಾರೆ. ನಾನು ಮಿಸುಕಾಡೋಲ್ಲ.
ಕಂದಾ, ನಾನೂ‌ ನಿನ್ನ ಜೊತೆಗೆ ಮಲಗ್ತೀನಿ ಕಣೋ ಅಂತ ಆ ಸಣ್ಣ ಮಂಚದ ಮೇಲೆ ನನ್ನನ್ನು ಮೂಲೆಗೆ ದಬ್ಬಿ ತಮ್ಮ ದೈತ್ಯ ದೇಹವನ್ನು ಎತ್ತಿ ಹಾಕಿ ಮಲಗ್ತಾರೆ. ಪುಣ್ಯಾತ್ಮ , ರಾತ್ರಿಯಿಡೀ ಗಡಿಯಾರ ನೋಡೋದೇ‌ ಆಗಿರುತ್ತೆ. ಮಲಗಿದ ಎರಡೇ‌ ನಿಮಿಷಕ್ಕೆ ಗೊರಕೆ ಶುರು ಮಾಡ್ತಾರೆ. ಆ‌ ಸಣ್ಣ ಜಾಗದಲ್ಲಿ ಉಸಿರುಗಟ್ಟಿ, ಗೊರಕೆಯ ಹಿಂಸೆಗೆ ನಾನು ತಡೀಲಾರದೆ ಏಳ್ತೀನಿ. ಅಪ್ಪನಿಗೆ ಚೆನ್ನಾಗಿ ನಿದ್ದೆ, ಗೊರಕೆ ನಡೆದೇ ಇರುತ್ತೆ.

ನಾನು ಕಾಫಿ ಕುಡಿಯುತ್ತಾ ಅಮ್ಮನ ಜೊತೆಗೆ ಮಾತು ಶುರು ಮಾಡ್ತೀನಿ. ಸ್ವಲ್ಪ ಹೊತ್ತಿಗೆ ಯಾವಾಗ್ಲೋ ಎದ್ದು ನಂಗೂ ಸ್ವಲ್ಪ ಕಾಫಿ ಕೊಡೇ‌ ಅಂತ ಅಪ್ಪ ಒಳಗೆ ಬರ್ತಾರೆ.
ಏನು ಮಗನೇ, ಏನು ಸಮಾಚಾರ. ಆಗಿರೋದು ನೋಡಲೇ, ನಾಯಿಗೆ ಹೊಡೆಯೋ‌ ಕೋಲು ತರ ಇದ್ದೀಯಾ. ಸರಿಯಾಗೆ ತಿನ್ನೋ ಮಗನೇ‌ ಅಂತ ಶುರು ಮಾಡ್ತಾರೆ.

ಇನ್ನು ಊರಿಗೆ ತಂಗೀನೂ ಬಂದಿದ್ರೆ ಮುಗಿದೇ‌ ಹೋಯಿತು.
ಮನೆಗೆ ಹೋಗ್ತಿದ್ದ ಹಾಗೆಯೇ ಅಪ್ಪ ನನ್ನ ಮೇಲೆ ತೋರಿಸೋ‌ ವರಸೆಯನ್ನೆಲ್ಲಾ ನಾನು ಅವಳ ಮೇಲೆ ಪ್ರಯೋಗಿಸ್ತೀನಿ. ಮಲಗಿದ್ದೋಳನ್ನ ಬಲವಂತವಾಗಿ ಹೊಡೆದೂ, ತಟ್ಟಿ ಎಬ್ಬಿಸ್ತೀನಿ.
ಅಣ್ಣಾ, ಪ್ಲೀಸ್ ಸುಮ್ನೆರೋ. ಅಮ್ಮಾ ನೋಡಮ್ಮಾ, ಸುಮ್ನಿರೋಕೆ ಹೇಳಮ್ಮಾ ಅಂತ ಅವಳು ಕೂಗಿ, ಅಮ್ಮ ಬಂದು ಏಯ್ ಸುಮ್ನೆರಬಾರ್ದೇನೋ, ಪಾಪದ್ದು ಅದನ್ಯಾಕೆ ಹಿಂಸೆ ಮಾಡ್ತೀಯಾ ಅಂತ ಬೈದ ಮೇಲೆ, ಕೊನೇ ಸಲ ಅಂತ ಅವಳಿಗೆ ಒದ್ದು 'ಹೂಂ ಬಿದ್ಕೋ' ಎಂದು ಹೇಳಿ, ಏನೋ ಸಾಧಿಸಿದೋನ ತರಹ ನನ್ನ ಹಾಸಿಗೆಯ ಕಡೆಗೆ ಮಲಗಲು ನಡೆಯುತ್ತೇನೆ.

ನಾನು ಊರಿಗೆ ಹೋದಾಗ, ಸಾಮಾನ್ಯವಾಗಿ ಅಪ್ಪ ಆಫೀಸಿಗೆ ರಜೆ ಹಾಕಿರುತ್ತಾರೆ.

ಮಧ್ಯಾಹ್ನದವರೆಗೂ‌ ಅಪ್ಪ ಸುಮ್ನಿರ್ತಾರೆ. ಆಮೇಲೆ ಬರ್ತೀಯೇನಲೆ ಹೊಲದ ಕಡೆ ಹೋಗ್ಬರಣಾ ಅಂತ ಕೇಳ್ತಾರೆ.

ನಾನು, ನಡಿ ಅಂತ ಹೊರಡ್ತೀನಿ.

ಊಟದ ಟೈಮಿಗೆ ಸರಿಯಾಗಿ ಹೊರಡ್ತೀರ. ಈಗೇನೂ ಬೇಡ. ಆಮೇಲೆ ಹೋಗಿ. ನೀನು ಹಿಂದುಗಡೆಗೆ ಹೋಗೋದಿದ್ರೆ ಹೋಗಿ, ಸ್ನಾನ ಮಾಡ್ಕೊಂಡ್ ಬಾ. ಬ್ರಹ್ಮ ಶೌಚ ನಿಂದು . ಗಂಟೆಗಟ್ಟಲೆ ಮಾಡ್ತೀಯಾ.. ಅಮ್ಮ ಒಳಗಡೆಯಿಂದ ಇಬ್ಬರಿಗೂ ಬೈಯಲು ಶುರು ಮಾಡ್ತಾಳೆ.

ಅಪ್ಪ - ಆಯ್ತು ಬಿಡವ್ವ ನೀನು ಹೇಳಿದಂಗೇ‌ ಆಗಲಿ.

ಅಮ್ಮ - ಅವ್ವ ಗಿವ್ವ ಅಂದ್ರೆ ಸುಮ್ನಿರಲ್ಲ.

ಅಪ್ಪ ನನ್ಕಡೆ ನೋಡಿ, ನೋಡಲೇ ಹೆಂಗೆ ದಬಾಯಿಸ್ತಾಳೆ ನಿಮ್ಮಮ್ಮ.

ನಾನು- ಹೌದು ಮತ್ತೆ ಸರಿಯಾಗೇ‌ ಹೇಳ್ತಾಳೆ. ನನ್ನ ತಂಗಿಯೂ ದನಿಗೂಡಿಸುತ್ತಾಳೆ.

ಅಪ್ಪ- ನೀವಿಬ್ರೂ ಬಂದಿದ್ದೀರಲ್ಲಾ, ಅವಳಿಗೆ ಎರಡು ಕೊಂಬು ಬಂದ್ಬಿಟ್ಟಿದ್ದಾವೆ. ಮನೆ ಯಜಮಾನ ನಾನು. ಮೂರು ಕಾಸಿನ ಬೆಲೆ ಇಲ್ಲ ನನಗೆ.

ಮುಂದೆ ಮಾತಾಡ್ಲಿಕ್ಕೆ ಹೊಳೀದೇ‌ ಸಿಗರೇಟ್ ಹಚ್ಕೊಂಡ್ ಹೊರಗಡೆ ಹೋಗ್ತಾರೆ.

ಊಟ ಆದ ಮೇಲೆ ತಂಗಿಯಿಂದ ಹಾಡು ಹೇಳಿಸೋ ಕಾರ್ಯಕ್ರಮ.

ಅವಳು ಕಷ್ಟಪಟ್ಟು ಕೀರ್ತನೆ ಹಾಡಿದರೆ, ನಾನು ಥೇಟ್ ಶಂಕರಾಭರಣದ ಶಾಸ್ತ್ರಿಗಳ ಸ್ಟೈಲಲ್ಲಿ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳ್ತಿರ್ತೀನಿ. ಅವಳು ಹಾಡ್ತಾನೇ‌ ನನ್ನನ್ನು ಕಣ್ಣಲ್ಲಿ ಸುಟ್ಟು ಹಾಕ್ತಿರ್ತಾಳೆ. ದೀಪಕರಾಗ ನನ್ನ ಮೇಲೇ ಪ್ರಯೋಗ ಮಾಡಿದ ಹಾಗಿರುತ್ತದೆ.

ಅವಳು, ಕೀರ್ತನೆ, ಸ್ವರ, ಗಮಕ ಎಲ್ಲಾ ಹೇಳ್ತಿರಬೇಕಾದ್ರೆ ಸುಮ್ನೆ ಕಣ್ಮುಚ್ಕೊಂಡ್ ಕೇಳ್ತಾ ಇರಬೇಕು. ಎಲ್ಲೋ ಸ್ವರ್ಗದಲ್ಲಿ ತೇಲುತ್ತಾ ಇದ್ದ ಹಾಗಿರುತ್ತೆ. ಹಾಗಂತ ಅವಳಿಗೆ ಹೇಳಬಾರದು. ಆಮೇಲೆ ನಮಗೆಲ್ಲಿ ಬೆಲೆ ಇರುತ್ತೆ. ನಾನು ಬೈತಿರಬೇಕು, ಅವಳು ಹಾಡ್ತಿರಬೇಕು ಅಷ್ಟೇ.

ಅವಳೆಲ್ಲಾ ಹಾಡಿ ಮುಗಿಸಿದ ಮೇಲೆ, ನಾನು ಆ ಹಾಡಲ್ಲಿ ಶ್ರುತಿ ತಪ್ಪಿದ್ದೆ, ಇದನ್ನು ಹೇಳಬೇಕಾದರೆ ಉಸಿರು ಜಾಸ್ತಿ ಬಿಡ್ತಿದ್ದೆ ಇತ್ಯಾದಿ ಹೇಳಿ ಇನ್ನೊಂದು ಸಲ ಹಾಡಲು ಹೇಳ್ತೀನಿ.

ಅವಳು, 'ಹೋಗೋ! ಅಷ್ಟೇ. ಇನ್ನು ಹೇಳಲ್ಲ.'

ನಾನು ಕಣೇ, ನಿನ್ನಣ್ಣ ಹೇಳ್ತಿದ್ದೀನಿ, ನೀನೀಗ ಹಾಡ್ಬೇಕು ಅಷ್ಟೇ.

'ಹೋಗಲೋ' ಎಂದು ಅವಳು ಏಳ್ತಾಳೆ.

ನಾನು ಏಳೋದಿಕ್ಕೆ ಬಿಡೋದಿಲ್ಲ. ಕೈ ತಿರುಚಿ ಹೊಡೆದು, 'ಹೇಳ್ತೀಯಾ, ಇಲ್ವಾ?'

ಅಪ್ಪಾ‌, ನೋಡಪ್ಪಾ ಹೆಂಗೆ ಹೊಡೀತಾನೆ?

ಯಾವನೋ ಅವನು ನನ್ನ ಮಗಳನ್ನ ಹೊಡೆಯೋದು, ಎಷ್ಟೋ ಧೈರ್ಯ ನಿಂಗೆ? ಹೆಂಗೆ ಹೊಡೆದ್ಯೋ?

ನಾನು ಅಪ್ಪನಿಗೆ ಕಾಣುವ ಹಾಗೆ ಅವಳಿಗೆ ಮತ್ತೆ ಹೊಡೀತೀನಿ, ಅವಳು ಮತ್ತೆ ಕೂಗಿಕೊಳ್ತಾಳೆ.

ನೋಡು, ನಾನು ಸುಮ್ನಿರಲ್ಲ. ಇನ್ನೊಂದ್ಸಲ ಹೊಡೆದ್ರೆ ಅಷ್ಟೇ? ಅಪ್ಪ ಹೇಳ್ತಾರೆ.

ನಾನು ಮತ್ತೆ ಹೊಡೀತೀನಿ.

ಅಷ್ಟೊತ್ತಿಗಾಗಲೇ ಅವಳಿಗೆ ನಮ್ಮಿಬ್ಬರ ಉದ್ದೇಶ ಅರ್ಥ ಆಗಿರುತ್ತೆ. ಅಮ್ಮನ್ನ ಕರೀತಾಳೆ. 'ನೋಡಮ್ಮಾ'

ಸುಮ್ನಿರ‍್ರೋ, ಅವಳನ್ಯಾಕೆ ಗೋಳು ಹುಯ್ಕೋತೀರಾ? ಕುಸುಮ ಕೋಮಲೆ ಅವಳು. ಅಮ್ಮನ ಉವಾಚ.

ನಾನು ಸುಮ್ಮನೆ ಬಿಡ್ತೀನಿ. ಅಮ್ಮ ಕಿಚಾಯಿಸಿದ್ರೂ ಅವಳ ಹತ್ರಾನೇ‌ಹೋಗಿ. 'ನೋಡಮ್ಮಾ ಹೆಂಗೆ ಹೊಡೆದ, ಕೈ ಕೆಂಪಗಾಗಿದೆ'

ಅಯ್ಯೋ ಕಂದಾ, ಎಣ್ಣೆ ತಂದು ಹಚ್ಚಲೇನೇ?

ಹೋಗೇ, ಅಂತ ಬೈಯುತ್ತಾ, ಅವಳು ಅಮ್ಮನ ತೊಡೆ ಮೇಲೆ ಮಲಗುತ್ತಾಳೆ.

ಅಷ್ಟರಲ್ಲಿ, ಅಪ್ಪ ನನ್ನ ಕಡೆ ನೋಡುತ್ತಾ ಅಮ್ಮನಿಗೆ ಕಾಫಿ ಮಾಡಲು ಹೇಳು ಎಂದು ಕಣ್ಸನ್ನೆ ಮಾಡ್ತಿರುತ್ತಾರೆ. ನಾನು ಇಲ್ಲ ಎಂದು ಹೇಳ್ತೀನಿ. ಸ್ವಲ್ಪ ಹೊತ್ತು ನಮ್ಮ ದೃಷ್ಟಿ ಯುದ್ಧ ನಡೆದ ಮೇಲೆ ಅಪ್ಪ ಎದ್ದು ಹೇಳ್ತಾರೆ. 'ನಾನೇ‌ ಕಾಫಿ ಮಾಡ್ತೀನಿ. ನಿಂಗೂ‌ ಬೇಕೇನೋ? '

ಅಮ್ಮಂಗೆ ಅರ್ಥ ಆಗುತ್ತೆ.

ಊಟ ಆಗಿ ಇನ್ನೂ ಸ್ವಲ್ಪ ಹೊತ್ತಾಗಿಲ್ಲಪ್ಪ. ಆಗಲೇ ಕಾಫಿ. ಅದೆಷ್ಟು ಕುಡೀತೀರೋ? ಎದ್ದು ಅಡಿಗೆ ಮನೆಗೆ ಹೋಗ್ತಾ ನನ್ನ ಕಡೆಗೆ ತಿರುಗಿ 'ನಿಂಗೂ‌ ಬೇಕೇನೋ'

ನಾನು ಮಳ್ಳನ ತರಹ, 'ಸ್ವಲ್ಪ ಕೊಡು'

ಕಾಫಿ ಕುಡಿದು ನಾವಿಬ್ರೂ ಅಪ್ಪ ಮಗ ಹೊಲಕ್ಕೆ ಹೊರಡ್ತೀವಿ.

ಬೈಕ್ ಹತ್ತಿ ಹೋಗ್ತಿರಬೇಕಾದ್ರೆ ಊರಿನ ಎಲ್ಲಾ ಸುದ್ದಿಗಳೂ ಒಂದ್ಸಲ ಬಂದು ಹೋಗ್ತಾವೆ. ಹೊಲಕ್ಕೆ ಹೋದ ಮೇಲೆ, ಪೂರ್ತಿಯಾಗಿ ಅಲ್ಲಿಯದೇ ವಿಷಯ. ಅಪ್ಪ ಹೇಳ್ತಾನೇ ಹೋಗ್ತಾರೆ.

ಇದೇ ಕೊನೆ ಬೆಳೆ, ಮುಂದಿನ ಸಲಕ್ಕೆ ಬಾಳೆ ತೆಗಿಸಿಬಿಡ್ತೀನಿ. ಅಡಿಕೆಗೆ ಬೆಳೆಯೋದಿಕ್ಕೆ ಅನುಕೂಲವಾಗುತ್ತೆ.

ಇನ್ನೂ ಮೂರು ವರ್ಷ ಬೇಕಲ್ವೇನಪ್ಪಾ?

ಹೌದು ಮಗನೇ, ಕಾಯಬೇಕು. ನಿನ್ನ ಆಫೀಸಿನ ವಿಷಯ ಹೇಳಪ್ಪಾ, ಏನಾಯ್ತು. ಮೊನ್ನೆ ಅವಾರ್ಡ್ ಕೊಟ್ರಲ್ಲ, ಆಮೇಲೆ ದುಡ್ಡೇನಾದ್ರೂ ಜಾಸ್ತಿ ಮಾಡಿದ್ರಾ?

ಇಲ್ಲ ಕಣಪ್ಪಾ, ಅದು ಹಾಗಲ್ಲ.

ಏಯ್, ಬಿಡೋ ಅದೇನು ಕಂಪನೀನೋ, ಅಷ್ಟು ವರ್ಷದಿಂದ ಕೆಲಸ ಮಾಡ್ತಿದ್ದೀಯಾ. ಒಂದು ಅವಾರ್ಡ್ ಕೊಟ್ಟು ಹಂಗೇ ಬಿಟ್ತಾರೇನೋ? ನಿನ್ನ ಮ್ಯಾನೇಜರ್ ಫೋನ್ ನಂಬರ್ ಕೊಡು. ನಾನು ಮಾತಾಡ್ತೀನಿ.

ನೀನು ಸುಮ್ನಿರಪ್ಪಾ. ಚೆನ್ನಾಗಿ ಕೆಲಸ ಮಾಡ್ತೀವಿ ಅಂತ ಗುರುತಿಸ್ತಾರಲ್ಲಾ, ಅಷ್ಟು ಸಾಕು.

ಹೀಗೇ ಮಾತಾಡ್ತಾ, ಹೊಲಕ್ಕೆ ಒಂದು ಸುತ್ತು ಬಂದಿರುತ್ತೀವಿ. ಸಂಜೆ ಆಗ್ತಾ ಬಂದಿರುತ್ತೆ, ಮನೆಗೆ ಹೊರಡ್ತೀವಿ.

ಸಂಜೆಯಿಂದ ಮನೆಯಲ್ಲೇ ಇರೋದರಿಂದ, ಸ್ವಲ್ಪ ಅನಾನುಕೂಲ. ಅಪ್ಪ ಅಮ್ಮ ಯಾವಾಗ ಬೇಕಾದರೂ ನನ್ನ ಮದುವೆಯ ವಿಷಯ ಎತ್ತುತ್ತಾರೆ.

ನೋಡು ನಿನ್ನ ವಾರಿಗೆಯವರೆಲ್ಲಾ ಮದುವೆಯಾಗ್ತಿದ್ದಾರೆ. ನಿಂಗೇನು ಧಾಡಿ. ಇಬ್ಬರಲ್ಲಿ ಯಾರು ಮಾತಾಡಿದರೂ‌ ಒಂದೇ ಧ್ವನಿ.

ಅದು, ಹಂಗಲ್ಲ. ಇಷ್ಟು ಬೇಗ ಯಾಕೆ ಅಂತ.

ನೋಡಪ್ಪಾ, ನಿನ್ನ ಕೈಲಿ ಸಾಕೋದಿಕ್ಕಾಗಲ್ಲಾ ಅಂತ ಹಾಗೆ ಹೇಳ್ತೀಯಾ ಅನ್ನೋದಾದ್ರೆ, ಸೊಸೇನಾ, ನಾವು ಸಾಕ್ತೀವಿ. ನಿನ್ನ ಕೈಲಿ ಯಾವಾಗಾಗುತ್ತೋ ಅವಾಗ ಬಂದು ಕರೆದುಕೊಂಡು ಹೋಗು.

ನನಗೆ ಈ ವರಸೆಗಳೆಲ್ಲಾ ಚೆನ್ನಾಗಿ ಗೊತ್ತಿರೋದರಿಂದ. ಹೊಲದಿಂದ ವಾಪಸ್ ಬರುವಾಗಲೇ ರಾತ್ರಿ ಸೆಕೆಂಡ್ ಶೋ‌ ಸಿನಿಮಾಗೆ ಹೋಗಲು ಯಾರನ್ನಾದರೂ ಒಪ್ಪಿಸಿ ಬಂದಿರ್ತೀನಿ. ಅವರು ಬಂದು ನನ್ನ ಹೆಸರು ಕೂಗಿದರೂಂದರೆ ತಕ್ಷಣಕ್ಕೆ ಮನೆಯಿಂದ ಠಣ್ ಅಂತ ನೆಗೆದು ಸಿನಿಮಾಗೆ ಓಡಿ ಬಿಡ್ತೀನಿ.

ಮರುದಿನ ಮತ್ತೆ ಎಲ್ಲಾ ಯಥಾಪ್ರಕಾರ...

ಕಣ್ಣು ಮುಚ್ಚಿ ತೆಗೆಯುವುದರೊಳಗೆ ರಜೆ ಮುಗಿದು ವಾಪಸ್ ಹೊರಡೋ ಸಮಯ ಬಂದಿರುತ್ತೆ. ಎಲ್ಲರೂ ಬಸ್ ಸ್ಟ್ಯಾಂಡ್ ಗೆ ಬರುತ್ತಾರೆ.

ನೀನು ಇನ್ನೂ ಬಂದಿಲ್ಲಾ ಅಂದರೆ, ನಾಳೆ ಬರ್ತೀಯಾ, ಇವತ್ತು ಬರ್ತೀಯಾ ಅಂತ ಆಸೆಯಿಂದ ಕಾಯ್ತಿರ್ತೀವಿ. ಬಂದ ಮೇಲೆ ಸಂಕಟ ಆಗುತ್ತೆ ಕಣೋ. ನಾಳೆ ‌ ಈ ಹೊತ್ತಿಗೆ ನೀನು ಆಗಲೇ ಹೊರಟು ಹೋಗ್ತೀಯಾ ಅಂತ ಬೇಜಾರಾಗುತ್ತಿರುತ್ತೆ. ನೀನು ಇಲ್ಲದಿದ್ದಾದ ಇಲ್ಲಾ ಅನ್ನೋ ಸಂಕಟ, ಇದ್ದಾಗ ಹೊರಟು ಹೋಗ್ತೀಯಾ ಅನ್ನೋ ಸಂಕಟ. ಇಲ್ಲೇ ಯಾವುದಾದ್ರೂ ಕೆಲಸ ಮಾಡ್ಕೊಂಡ್ ಇರಬಾರ್ದೇನೋ?

ನಾನು ಮಾತಾಡೋಲ್ಲ. ಬಸ್ ಬಂದ ತಕ್ಷಣ ಅವರಿಗೆಲ್ಲಾ ಟಾಟಾ‌ಮಾಡಿ ಹೊರಟು ಬಿಡ್ತೀನಿ.

ಈ ರಾತ್ರಿ ಅದೆಲ್ಲಾ ಮತ್ತೆ ಮತ್ತೆ ನೆನಪಾಗ್ತಿದೆ. ಬೇರನ್ನೆಲ್ಲೋ‌ ಬಿಟ್ಟು ಬಳ್ಳಿ ಮತ್ತೆಲ್ಲೋ ಹಬ್ಬಲು ಯತ್ನಿಸಿದಂತೆ ನಾನೆಲ್ಲೋ‌ ಒಂದು ಕಡೆ ನನ್ನವರೆಲ್ಲೋ ಒಂದು ಕಡೆ.

ಈ‌ ರಾತ್ರಿ ಲೇಟಾಗಿ ಮಲಗಿದೆನೆಂದು ಗೊತ್ತಾದರೆ, ಫೋನಲ್ಲಿ ಉಪದೇಶ 'ಹಾಗೆ ಮಾಡ್ಬೇಡ್ವೋ, ಮೊದಲೇ ಕಂಪ್ಯೂಟರ್ ಕೆಲಸ. ಮನೆಗೆ ಬಂದಮೇಲೂ ಅದನ್ನೇ ಮಾಡ್ತೀಯಾ, ಕಣ್ಣಿಗೆ ಸ್ವಲ್ಪ ರೆಸ್ಟ್ ಕೊಡೋ. ಆಮೇಲೆ ದಪ್ಪ ಕನ್ನಡಕ ಹಾಕ್ಕೋ ಬೇಕಾಗುತ್ತೆ. ಮದುವೆಯಾಗೋದಕ್ಕೆ ಹುಡುಗಿಯರು ಒಪ್ಪಲ್ವೋ'

Tuesday, January 12, 2010

ಆಸೆ

ಜಗವೆಲ್ಲಾ ಮಲಗಿರಲು
ಒಲವಿನ ಅಲೆ ಬೀಸುತಿರಲು
ಪ್ರೀತಿಯೇ‌ ಮೈಯಾಗಿ ಹುಟ್ಟುವ
ಮುಂಜಾನೆಯ ಮುತ್ತಿನ ಹುಟ್ಟು
ನೋಡುವ ಆಸೆ

ಒಲವಿನ ಅರಮನೆಯಲ್ಲಿ
ಗಾನಸುಧೆ ಹರಿದಿರಲು
ಅರಿವೇ ಇಲ್ಲದಿರಲು
ಆ ಸಂಗೀತದ ಅಲೆಯಲ್ಲೊಂದು
ಕಂಪನವಾಗುವ ಆಸೆ

ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ‌ ಕವಿತೆಯಾಗಿ
ಜಗವೆಲ್ಲಾ‌ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ

ಹೊಸತೆಲ್ಲವನ್ನೂ‌ ಬಯಸುತಿರಲು
ಯುಗಗಳೆಲ್ಲಾ ಕ್ಷಣಗಳಾಗಿರಲು
ಜಗವೇ‌ ಅಂಗೈಯಲಿರಲು
ಮಾಯಾಮೃಗದ ಬೆನ್ನೇರಿ ಓಡುವ ಆಸೆ

ಹುಡುಗು ಕಣ್ಣಿಗೆ ಎಲ್ಲವೂ‌ ಕೌತುಕವಾಗಿರಲು
ಕಂಡದ್ದರ ಹಿಂದೆ ಕಾಣದ್ದನ್ನು ಹುಡುಕುತಿರಲು
ರಾತ್ರಿ ಬೆಳಕೆಂಬ ಆಟವಾಡುವ
ಸೂರ್ಯನ ಬೆನ್ನತ್ತುವ ಆಸೆ

ಜೀವನದ ಪ್ರತಿ ಪುಟದಲ್ಲೂ
ಹೊಸ ಜಾಗ ಕಂಡಿರಲು
ಹೊಸ ಅಲೆ ಹೊರಟಿರಲು
ಆ ಅಲೆಯ ಜಾಡು ಹಿಡಿದು
ದಿಗಂತದೆಡೆಗೆ ಹೋಗುವ ಆಸೆ

Wednesday, January 6, 2010

ಅವನಿರಬೇಕಿತ್ತು ಇಂದು

ಕುಣಿದು ಕುಪ್ಪಳಿಸುವಾಗ
ಹುಚ್ಚೆದ್ದು ನಗುವಾಗ
ಊರೂರು ಅಲೆಯುವಾಗ
ಅವನೆಲ್ಲೋ ನಕ್ಕಂತೆ ಭಾಸ

ಬೀಸಿ ಬಂದ ಗಾಳಿ
ತಂದು ಸವರಿದ್ದು ಅವನುಸಿರಾ
ಇಲ್ಲವೇ ಅವನ ನೆನಪಾ

ಥಿಯೇಟರಿನೆದುರು ನಿಂತು
ಟಿಕೇಟು ನೀ ತೆಗೆಸು
ಎಂದು ಜಗಳವಾಡುತ್ತಿರುವಾಗ
ಅವನಿದ್ದಿದ್ದರೆ ಅವನಿಗೊಂದು
ತೆಗೆಸಬೇಕಿತ್ತಲ್ಲವೇ ಎಂಬ ನೆನಪು
ರಿಟರ್ನ್ ಟಿಕೆಟ್ ತೆಗೆಸದೇ
ಊರಿಗೆ ಹೊರಟು ಹೋದ ಪಾಪಿ

ಪ್ರತೀ ಹುಟ್ಟುಹಬ್ಬಕ್ಕೆ
ಒದೆ ತಿನ್ನುವಾಗಲೂ ನೆನಪಾಗುತ್ತಾನೆ
ಅವನಿಗೆ ಕೊಡಬೇಕಾದವು ಇನ್ನೂ ಹಾಗೇ ಉಳಿದಿವೆ
ಎದುರಿಗೆ ಸಿಕ್ಕರೆ ಎಲ್ಲರದೂ ಸೇರಿಸಿ
ಬಾಕಿ ತೀರಿಸುತ್ತೇನೆ
ಪಾರ್ಟಿ ಕೊಡಲು ಹೆದರಿ ಓಡಿಹೋದನೇನೋ

ಒಬ್ಬೊಬ್ಬರದೇ ಮದುವೆಯಾದಾಗ
ಸದ್ದಿಲ್ಲದೇ ಹಿಂಡು ಖಾಲಿಯಾದಾಗ
ಮರೆಯಲ್ಲಿ ನಿಂತು ನಗುತ್ತಿರುತ್ತಾನೇನೋ
ಅವನಿಷ್ಟು ಬೇಗ ಮದುವೆಯಾಗುತ್ತಿದ್ದನೇ?
ಊಹೂಂ, ಇರಲಿಕ್ಕಿಲ್ಲ

ಕನಸುಗಳೆಷ್ಟಿದ್ದವು
ಹಂಚಿಕೊಳ್ಳಲು, ಪೂರೈಸಲು
ಜೊತೆನಿಂತು ಬೆನ್ನಿಗೆ ಗುದ್ದಲು
ನಾವಿರಲಿಲ್ಲವೇ
ಅದಾರು ಸಿಕ್ಕಿಹರು ನಿನಗಲ್ಲಿ
ಇರಲಿ ಬಿಡು,
ಅಲ್ಲಿಗೆ ಬಂದಾಗ ಗುರುತು ಹಿಡಿದು ನೆನೆಸು

ಅವನ ಬಗ್ಗೆ ಒಂದು ಕವನ
ಬರೆದಿದ್ದು ತಿಳಿದರೆ ಬಿದ್ದು ಬಿದ್ದು ನಕ್ಕಾನು
ಅಪಹಾಸ್ಯ ಮಾಡಲಿಕ್ಕಾದರೂ ಅವನಿರಬೇಕಿತ್ತು

Sunday, January 3, 2010

ಕಡಲ ತೀರದ ಪ್ರತಿಮೆಗಳು





ಕಡಲ ತಡಿಯಲ್ಲಿ
ಹಾಲು ಬೆಳದಿಂಗಳು
ಉಕ್ಕುವ ತೆರೆ, ಚೆಲ್ಲಿದ ನೊರೆ
ಬೆಕ್ಕಸ ಬೆರಗಾದ ಕಂಗಳು

ಮನದೊಳವಿತಿದ್ದ ಬಾಲ್ಯ
ಮೆಲ್ಲನೆ ಹೊರಬಿದ್ದು
ಎವೆಯಿಕ್ಕುವಷ್ಟರಲ್ಲಿ
ಉಸುಕಲ್ಲಿ ಉರುಳಾಡಿ
ಅಲೆಯಲ್ಲಿ ಹೊರಳಾಡಿ
ಗಹಗಹಿಸಿ ನಕ್ಕಿತು

ಸ್ವಚ್ಛ ಹುಣ್ಣಿಮೆಯಲ್ಲಿ
ಹುಚ್ಚು ಅಲೆಗಳ ಮೇಲೆ
ತೇಲಿತ್ತು ಮನಸು
ದೂರದಲಿ ಹೊರಟಿದ್ದ
ನಾವೆಯ ಮೇಲೆ ನೆಟ್ಟಿತ್ತು ಕನಸು

ನೀರವ ತೀರದಲಿ
ಬೀಸುವ ಗಾಳಿಯಲಿ
ಅಲೆದಾಡಿದ ಭಾವನೆಗಳ ನಡುವೆ
ಕಾಲನ ಗಡಿಯಾರದಲ್ಲೊಂದು
ಮುಳ್ಳು ಮೆಲ್ಲನೆ ಮುಂದೆ ಸರಿದಿತ್ತು





ವೈಧವ್ಯದ ವಾಸನೆಯೋ ಏನೋ
ಬಿಳೀ ಬಟ್ಟೆ ಹೊದ್ದು, ಅಲ್ಲಲ್ಲಿ ಕೆದರಿ
ಬೋರಲು ಬಿದ್ದ ತೀರ

ವಾರಿಧಿಯ ಕಳವಳ
ದಡಕಪ್ಪಳಿಸಿ ನೊರೆ ನೊರೆ ವೇದನೆ
ಹೆಜ್ಜೆ ಗುರುತುಳಿಸದಷ್ಟು ಆಕ್ರೋಶ
ತೀರದ ತುಂಬಾ

ಬೀಸಿದ ಚಳಿಗಾಳಿಯಲಿ
ತಣ್ಣನೆಯ ಕ್ರೌರ್ಯ
ಯಾರ ಮೇಲಿನ ಸಿಟ್ಟು
ಹೊಟ್ಟೆಯಲ್ಲಡಗಿದೆಯೋ

ದೂರ ದೂರಕೂ ಬರಿಯೇ ನೀರು
ಅಲ್ಲೆಲ್ಲೋ ಜಾರಿಬಿದ್ದ ಮುಗಿಲು
ದಡದಿಂದ ದಡಕ್ಕೆ ಅದೆಷ್ಟು ಯೋಜನ
ದಡ ಮುಟ್ಟಿದ ಮಾತ್ರಕ್ಕೆ ಮುಗಿದೀತೇ ಯಾನ