ಈ ಸರಣಿಯಲ್ಲಿ ಬಂದ ಮೊದಲ ಕಥೆಯನ್ನು ಬರೆದಷ್ಟೇ ಆಸ್ಥೆಯಿಂದ ಇದನ್ನೂ ಕನ್ನಡಕ್ಕೆ ತಂದಿದ್ದೇನೆ.
ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದರೆ ಸಿಗುವ ಸಂತೋಷವೇ ಬೇರೆ. ಅದೇ ಕಾರಣಕ್ಕೆ ಸ್ವಲ್ಪ ದೊಡ್ಡದಾದರೂ ಒಂದೇ ಕಂತಿನಲ್ಲಿ ಇದನ್ನು ನಿಮ್ಮ ಮುಂದಿಡುತ್ತಿದ್ದೀನಿ. ಓದುವ ಖುಶಿ ನಿಮ್ಮದಾಗಲಿ. ನಿಮಗನ್ನಿಸಿದ್ದನ್ನು ತಿಳಿಸಿದರೆ ನನಗೂ ಖುಶಿಯಾಗುತ್ತೆ. :)
----------------------------------------------------------------------
ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.
ಊರು ಶುರುವಾಗ್ತಾ ಇದ್ದ ಹಾಗೇ ಅರಳಿಮರ ಇತ್ತು. ಕಟ್ಟೆ ಕೂಡ ಇತ್ತು. ಅಲೆಮಾರಿಗೆ ಯಾವ ಹಂಗು, ಅಲ್ಲೇ ಕುಳಿತ. ಹಾಗೇ ಮುಂಜಾನೆಯ ಸೊಬಗನ್ನು ಸವಿಯಲು ಶುರು ಮಾಡಿದ.
ಕುಳಿತಲ್ಲಿಂದಲೇ ತಲೆ ಮೇಲಕ್ಕೆತ್ತಿದ. ಎದುರಿಗೇ ಅದೆಷ್ಟೂ ಎತ್ತರಕ್ಕೆ ಪರ್ವತವೊಂದು ಹಬ್ಬಿತ್ತು. ದಟ್ಟವಾಗಿ ಬೆಳೆದ ಮರಗಳು. ಹೆಸರೇ ಗೊತ್ತಿಲ್ಲದ ಪಕ್ಷಿಗಳು. ಮರದಿಂದ ಮರಕ್ಕೆ ಹಾರಿ ಕೂತ್ಕೊಳ್ತಿದ್ದ ಬೆಳ್ಳಕ್ಕಿಗಳು. ತುಂಬಾ ಸೊಗಸಾಗಿದೆ ಅಂತ ಯೋಚಿಸುವಷ್ಟರಲ್ಲೇ ಇದ್ದಕ್ಕಿದ್ದಂತೆ ಮಂಗಗಳು ಅಸಾಧ್ಯ ದನಿಯಲ್ಲಿ ಕೂಗತೊಡಗಿದವು.
ಅಚ್ಯುತನಿಗೆ ರಸಭಂಗವಾಗಿ ಆ ದಿಕ್ಕಿನೆಡೆಗೇ ನೋಡಿದ. ಸ್ವಲ್ಪ ಹೊತ್ತಿಗೆ ಮುಂಚೆ ನೋಡಿದ ಜಾಗದಲ್ಲಿ ಆಗಲೇ ಒಂದು ಕಮಾನು ಎದ್ದಿತ್ತು. ಗುಡ್ಡ ತಾನಾಗಿ ಮೇಲೆದ್ದಿದೆಯೇನೋ ಅನ್ನೋ ಹಾಗೆ ಭೂಮಿ ತುಸು ಮೇಲೆದ್ದು ಗುಡ್ಡದ ತುದಿಯಲ್ಲಿ ಒಂದು ತೂತಾಗಿತ್ತು.
ಅದನ್ನೇ ನೋಡ್ತಾ ಕುಳಿತುಬಿಟ್ಟ.
ಸ್ವಲ್ಪ ಹೊತ್ತಿನ ನಂತರ ಅದು ದಿಢೀರ್ ಅಂತ ಮಾಯವಾಗ್ಬಿಟ್ತು. ಅವನಿಗೆ ಅಚ್ಚರಿಯಾಯ್ತು, ಆದರೆ ಇಂಥದ್ದನ್ನೆಲ್ಲಾ ತುಂಬಾ ನೋಡಿದ್ದನಾದ್ದರಿಂದ ಭಯಪಡಲಿಲ್ಲ.
ಅವನಿಗೆ ಬುದ್ಧಿ ತಿಳಿದಾಗಿನಿಂದಲೂ ಅವನು ಅಘೋರಿಗಳ ಗುಂಪೊಂದರಲ್ಲಿ ಇದ್ದ. ಅವರು ಹೇಳಿದ ಪ್ರಕಾರ, ಅವನು ಕೇವಲ ಮೂರು ದಿನದ ಕೂಸಿದ್ದಾಗ ಅವರು ಅವನನ್ನು ಎತ್ತಿಕೊಂಡು ಬಂದಿದ್ದರು. ತಾರುಣ್ಯಕ್ಕೆ ಬರುವವರೆಗೂ ಅವರ ಜೊತೆ ಇದ್ದ ಅವನು ಸಾಕಷ್ಟು ತಂತ್ರವಿದ್ಯೆಯನ್ನು ಕಲಿತಿದ್ದ. ಒಂದು ದಿನ ಆ ಬದುಕು ಬೇಸರವಾಗಿ ಹಿಮಾಲಯಕ್ಕೆ ನಡೆದಿದ್ದ. ವರ್ಷಗಳ ಕಾಲ ಹಿಮಾಲಯದಲ್ಲಿ ಅಲೆದವನು ಪೂರ್ತಿಯಾಗಿ ಬದಲಾಗಿದ್ದ. ಅವನೀಗ ಅಘೋರಿಯಾಗಿರಲಿಲ್ಲ, ಸನ್ಯಾಸಿಯಾಗಿರಲಿಲ್ಲ, ಬದಲಾಗಿ ಅವನೀಗ ಅವನೇ ಆಗಿದ್ದ. ಬದುಕನ್ನು ಅಮಿತ ಅಚ್ಚರಿಯಿಂದ ನೋಡುತ್ತಲೇ ಅದರ ಹಂಗು ತೊರೆದವನಾಗಿದ್ದ. ಅವನಿಗಾಗಲೇ ಸಾಧುವೊಬ್ಬನ ಮುಖಲಕ್ಷಣ ದೊರಕಿತ್ತು. ಕಣ್ಣುಗಳು ತಾವರೆ ಕೊಳದಂತೆ ಪ್ರಶಾಂತ. ಎದುರಿಗೆ ಬಂದವರ್ಯಾರೂ ಒಮ್ಮೆ ನಮಸ್ಕಾರ ಮಾಡದೆ ಮುಂದೆ ಹೋಗುತ್ತಿರಲಿಲ್ಲ.
ಆ ಕಮಾನು ನೋಡಿದ ನಂತರ ಅಚ್ಯುತ ಅಲ್ಲಿಂದ ಎದ್ದು ಊರೆಡೆಗೆ ನಡೆದ.
ಊರು ಮುಟ್ತಿದ್ದ ಹಾಗೇ ಚಿಕ್ಕ ಮಕ್ಕಳ ಗುಂಪೊಂದು ಆಟ ಆಡ್ತಿದ್ದುದು ಕಾಣಿಸ್ತು. ಅವರ ಬಳಿ ನಡೆದವನು ಒಬ್ಬ ಚಿಕ್ಕ ಹುಡುಗನನ್ನು ಕರೆದು ಈ ಊರ ಹೆಸರೇನಪ್ಪಾ ಅಂತ ಕೇಳಿದ.
-ಕಲ್ಲಡ್ಕ! ಅಂತ ಹೇಳಿದುದೇ ಒಮ್ಮೆ ವಿನಾಕಾರಣ ಹ್ಹಿ ಹ್ಹಿ ಹ್ಹಿ ಅಂತ ನಕ್ಕು ಆ ಮಗು ಓಡಿಬಿಟ್ಟಿತ್ತು. ಉಳಿದ ಮಕ್ಕಳೂ ಅದರ ಹಿಂದೇನೇ ಓಡಿದವು.
ಚಿಕ್ಕ ಮಕ್ಕಳಿಗೆ ಏನೇನಕ್ಕೆ ಸಂತೋಷವಾಗುತ್ತೋ ಅಂತ ಯೋಚಿಸುತ್ತಾ ಮುಂದೆ ನಡೆದ. ಸ್ವಲ್ಪ ದೂರ ಹೋಗ್ತಿದ್ದ ಹಾಗೆಯೇ ಒಂದು ದೊಡ್ಡ ಮನೆ ಕಾಣಿಸಿತು.
ಸೀದಾ ಅಲ್ಲಿಗೇ ನಡೆದ. ಅಲ್ಲಿಯಾಗಲೇ ಒಂದು ಜನರ ಗುಂಪು ಕುಳಿತು ಏನೋ ಚರ್ಚೆ ಮಾಡುತ್ತಿತ್ತು. ದನಿ ಸ್ವಲ್ಪ ಎತ್ತರವಾಗಿಯೇ ಇತ್ತು.
ಈಗ ಗುಡ್ಡದಯ್ಯನ ತಾವಕ್ಕೆ ಹ್ಯಾಂಗ್ ಹ್ವಾಗಾದು?
ಹುಡಕ್ಕಂಡು ಹ್ವಾದೋರ ಗತಿ ಹಿಂಗಾಗ್ತೈತಲ್ಲಾ...
ಬಿಳೀ ಧೋತರ, ಉತ್ತರೀಯದಲ್ಲಿದ್ದ ಅಚ್ಯುತನನ್ನು ನೋಡಿ ಅವರೆಲ್ಲಾ ತಮ್ಮ ಮಾತು ನಿಲ್ಲಿಸಿದರು.
ನಮಸ್ಕಾರ, ಕುಡಿಯೋದಕ್ಕೆ ಸ್ವಲ್ಪ ನೀರು ಸಿಗುತ್ತಾ? ಅಚ್ಯುತ ಕೇಳಿದ.
ಬನ್ನಿ ಸ್ವಾಮಿ ಕುಳಿತುಕೊಳ್ಳಿ - ಮುಖ್ಯಸ್ಥನ ರೀತಿ ಕಾಣ್ತಿದ್ದ ಒಬ್ಬನು ಕಟ್ಟೆಯಿಂದೆದ್ದು ಕರೆದ.
ಅಚ್ಯುತ ಅಲ್ಲಿಗೆ ಹೋಗಿ ಕುಳಿತ. ಒಳಗಿನಿಂದ ಹಾಲು ಹಣ್ಣು ಬಂದವು.
ಹಣ್ಣು ತಿನ್ನುತ್ತ ಜನರನ್ನ ಗಮನಿಸತೊಡಗಿದ. ಎಲ್ಲರ ಮುಖಗಳೂ ಮ್ಲಾನವಾಗಿದ್ದವು.
ಏನೋ ಕಷ್ಟದಲ್ಲಿರೋ ಹಾಗಿದೆ? ಅಚ್ಯುತ ಕೇಳಿದ.
ಮುಖ್ಯಸ್ಥನಂತಿದ್ದವನು ಮುಂದೆ ಬಂದ.
ಸ್ವಾಮೀ, ನಿಮ್ಮಂಥೋರು ಈ ಹೊತ್ನಾಗೆ ಇಲ್ಲಿಗೆ ಬಂದಿದ್ದು ನಮ್ಮ ಪುಣ್ಯ. ನೀವಾಗಿ ಕೇಳಿದ್ರಿಂದ ಹೇಳ್ತೀವ್ನಿ. ನಮಗೆ ಸಹಾಯ ಮಾಡ್ತೀರಾ?
ಅಂಗಲಾಚುವ ದನಿಯಲ್ಲಿ ಅವನು ಮಾತಾಡ್ತಿದ್ದ.
ಅಚ್ಯುತ ತಲೆಯಲ್ಲಾಡಿಸಿದ. ’ವಿಷಯ ಹೇಳಿ’
ಮುಖ್ಯಸ್ಥನ ದನಿಗೆ ಜೀವ ಬಂತು.
ಈ ಗುಡ್ಡದ ಕಾಡೊಳಗೆಲ್ಲೋ ಗುಡ್ಡದಯ್ಯನೋರು ಅವ್ರೆ. ಅವ್ರನ್ನ ಹುಡಿಕ್ಕೊಡ್ತೀರಾ?
ಗುಡ್ಡದಯ್ಯ ಎಂದರೆ ಒಬ್ಬ ವ್ಯಕ್ತಿ ಎಂದು ಅಚ್ಯುತನಿಗೆ ತಿಳಿಯಿತು.
ಮುಖ್ಯಸ್ಥ ಮಾತು ಮುಂದುವರೆಸಿದ.
ನಮ್ಮಪ್ಪ, ಅಜ್ಜನ ಕಾಲ್ದಿಂದೂವೆ ಈ ಗುಡ್ದಾಗೆ ದೇವ್ರೈತೆ ಸ್ವಾಮಿ. ನಮ್ಮ ಅಯ್ಯನೋರಿಗೆ ಮಾತ್ರ ದೇವ್ರು ಹೇಳಾದು ಗೊತ್ತಾಕತಿ ಸ್ವಾಮಿ.
ನಾವು ಮರ ಕಡೀಬೇಕಂತ ಹೊಂಟ್ರೂ, ಶಿಕಾರಿಗೆ ಹ್ವಾದ್ರೂ ಅವರನ್ನ ಕೇಳೇ ಹೋಗಾದು. ಈ ಗುಡ್ದಾಗೆ ಬಾಳ್ ವಿಚಿತ್ರ ಆಕತಿ. ಇವತ್ತು ಮರ ಕಡುದ್ರೆ ನಾಳೀಕಾಗಲೇ ಬೆಳೆದ್ ಬಿಟ್ತಾವೆ. ಶಿಕಾರಿಗ್ವಾದಾಗ ಎಂತೆಂತವೋ ಪ್ರಾಣಿ ಸಿಕ್ತಾವೆ. ನೋಡಾಕ್ ಒಳ್ಳೆ ನರಿ ಇದ್ದಂಗಿರ್ತಾವೆ, ಆದ್ರೆ ಮಕ ಮಾತ್ರ ಮಂಗ್ಯಾಂದ್ ಇದ್ದಂಗಿರ್ತತಿ. ಅಂಗಾಗಿ, ನಾವು ಗುಡ್ಡಕ್ ಹೋಗಾಗ್ಮುಂಚೆ ಅಯ್ಯನೋರ್ನ ಕೇಳೇ ಹೋಗಾದು.
ಆದ್ರೆ ಈಗ ಒಂದ್ ತಿಂಗಳಿಂದ ಅಯ್ಯನೋರು ಊರಾಗ್ ಕಾಣ್ತಿಲ್ಲ. ಅವ್ರು ಮೊದ್ಲೂ ಹಿಂಗೇ ಗುಡ್ಡದ್ವಳಗೆ ಹೋಗಿ ಕುಂತ್ಕಂಬಿಡೋರು. ಆದ್ರೆ ಈ ಸಲ ಮಾತ್ರಾ ಬಾಳ ದಿನ ಆದ್ರೂ ವಾಪಸ್ ಬಂದಿಲ್ಲ. ನಮಗೇನ್ಮಾಡ್ಬುಕಂತನೇ ಗೊತ್ತಾಗ್ವಲ್ದು. ಅವ್ರನ್ನ ಹುಡುಕಾಕೆ ಅಂತ ಜನ ಕಳ್ಸಿದ್ವಿ. ಹೋದೋರು ಹೆಂಗೆಂಗೋ ಮಾಡಿ ಸ್ವಲ್ಪ ದಿನಕ್ಕೆ ವಾಪಸ್ ಬಂದ್ರು. ಪೂರ್ತಿ ಸುಸ್ತಾಗಿದ್ರು. ಬಂದೋರಿಗೆ ಜ್ವರ ಹಿಡ್ಕಂಡಿದ್ದು ಜೀವ ಹೋಗತಂಕ ಬಿಡ್ಲಿಲ್ಲ. ಒಬ್ರೂ ಉಳೀಲಿಲ್ಲ ಸ್ವಾಮಿ. ನಮ್ಗೆ ಏನೂ ಗೊತ್ತಾಗ್ವಲ್ದು ಸ್ವಾಮಿ.
ಅಚ್ಯುತ ಸ್ವಲ್ಪ ಹೊತ್ತು ಯೋಚನೆ ಮಾಡಿ, ’ಆಯ್ತು ನೋಡೋಣ, ಏನಂದ್ರಿ ಅವರ ಹೆಸರು?’ ಎಂದು ಕೇಳಿದ.
ಮಲ್ಲಿಕಾರ್ಜುನಯ್ಯನೋರು ಅಂತ, ನಾವೆಲ್ಲಾ ಗುಡ್ಡದಯ್ಯ ಅಂತ ಕರೀತೀವಿ.
ಅಚ್ಯುತ ಒಬ್ಬನೇ ಗುಡ್ಡಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟ.
ಗುಡ್ಡದ ಬಳಿ ಹೋಗ್ತಿದ್ದ ಹಾಗೆಯೇ, ಅಲ್ಲಿ ಯಾವುದೋ ಅದೃಶ್ಯ ಶಕ್ತಿ ಇಡೀ ಗುಡ್ಡವನ್ನೇ ಹಿಡಿದಿಟ್ಟಿದೆಯೇನೋ ಅನ್ನುವಂತೆ ಭಾಸವಾಯಿತು. ನೆಲದಿಂದ ಉದ್ಭವವಾಗಿ, ಎಲೆ ಎಲೆಯನ್ನೂ ಮುಟ್ಟಿ, ಅವನ್ನು ಸುತ್ತಿ ಉಸಿರುಗಟ್ಟಿಸುವಂತೆ ತಬ್ಬಿ ಹಿಡಿದಿದೆಯೇನೋ ಅನ್ನುವಂತಿತ್ತು. ಆ ಗುಡ್ಡವೊಂದು ಶಕ್ತಿ ಚೇತನದ ತಾಣ, ಅಲ್ಲೊಂದು ಜೀವಸೆಲೆ ಹರಿಯುತ್ತಿದೆಯೆಂದು ಅವನಿಗೆ ತಿಳಿಯಿತು.
ಅಷ್ಟು ದಟ್ಟ ಕಾಡನ್ನು ಹೊಂದಿರುವ ಯಾವುದೇ ಗುಡ್ಡವಾದರೂ ತನ್ನದೇ ಆದ ಒಂದು ನಿಲುವು ಹೊಂದಿರುತ್ತೆ. ಈ ಶಕ್ತಿ ತಾಣ ಈ ಗುಡ್ಡಕ್ಕೆ ಒಂದು ಅಲೌಕಿಕ ಕಳೆ ತಂದು ಕೊಟ್ಟಿತ್ತು.
ಅಚ್ಯುತ ಯೋಚಿಸುತ್ತಿದ್ದ.
ಶಕ್ತಿ ಚೇತನವಿದೆ ಎಂದರೆ ಅದನ್ನು ನಿಯಂತ್ರಿಸಲು ಯಾವುದಾದರೂ ಮತ್ತೊಂದು ಶಕ್ತಿ ಇದೆ ಎಂದಾಯ್ತು. ಬಹುಶಃ ಈ ಗುಡ್ಡದಯ್ಯನಿಗೆ ಅದರ ಬಗ್ಗೆ ತಿಳಿದಿರಬೇಕು. ಊರ ಜನ ತುಂಬ ಪ್ರೀತಿಸ್ತಾರೆ ಇವನನ್ನ. ಯಾವ ರೀತಿಯ ವ್ಯಕ್ತಿ ಇರಬಹುದು ಈ ಗುಡ್ಡದಯ್ಯ?
ಹಾಗೇ ಯೋಚಿಸುತ್ತಾ ಮುಂದೆ ಹೋಗುತ್ತಿರಬೇಕಾದರೆ, ಅವನಿಗೆ ದಾರಿಯಲ್ಲಿ ಯಾರೋ ಬಿದ್ದಿರುವುದು ಕಾಣಿಸಿತು. ದಡಬಡಿಸಿ ಹತ್ತಿರ ಹೋಗಿ ನೋಡಿದರೆ ಯಾರೋ ಚಿಕ್ಕ ಹುಡುಗ. ಸುಮಾರು ಹನ್ನೆರಡು-ಹದಿಮೂರು ವರ್ಷವಿರಬಹುದೇನೋ.
ಮುಖಕ್ಕೆ ನೀರು ಚಿಮುಕಿಸಿ ಅವನನ್ನೆಬ್ಬಿಸಿದ.
ಪಾಪ, ಸುಸ್ತಾಗಿ ಎಚ್ಚರತಪ್ಪಿ ಬಿದ್ದಿದ್ದ ಅವನು. ನೀರು ಕುಡಿದು ಸ್ವಲ್ಪ ಸಮಾಧಾನವಾದವನಂತೆ ಕಂಡ ಮೇಲೆ ಅವನನ್ನು ಕೇಳಿದ.
ಊರಿಂದ ತಪ್ಪಿಸಿಕೊಂಡು ಬಂದೆಯಾ? ಇಲ್ಲೇನು ಮಾಡ್ತಿದ್ದೀಯ?
ನಾನು ಅಯ್ಯನೋರ ಶಿಷ್ಯ. ಅವರನ್ನ ಹುಡುಕ್ಕಂತ ಇಂಗ್ಬಂದೆ.
ಅಚ್ಯುತನಿಗೆ ಆಶ್ಚರ್ಯವಾಯಿತು. ಈ ಗುಡ್ಡದಯ್ಯನಿಗೆ ಶಿಷ್ಯ ಬೇರೆ ಇದ್ದಾನಾ?
ನೋಡು, ಇಲ್ಲೇ ಕುಳಿತಿರು, ನಾನು ನಿಮ್ಮ ಅಯ್ಯನೋರನ್ನ ಹುಡುಕುತ್ತೀನಿ. ಎಂದ.
ನಾಲ್ಕು ಹೆಜ್ಜೆ ಮುಂದೆ ಬಂದವನು, ಸ್ವಲ್ಪ ಹುಲ್ಲಿರೋ ಜಾಗದಲ್ಲಿ ಪದ್ಮಾಸನ ಹಾಕಿ ಕುಳಿತ.
ಹುಡುಗ ಬೆರಗುಗಣ್ಣಿಂದ ನೋಡ್ತಾ ಇದ್ದ. ’ಏನು ಮಾಡ್ತಿದ್ದೀರ?’ ಕೇಳಿದ.
ನಿಮ್ಮ ಅಯ್ಯನೋರನ್ನ ಹುಡುಕ್ತಾ ಇದ್ದೀನಿ. ನಮಗೆಲ್ಲಾ ನರ ಇರ್ತಾವಲ್ಲಾ, ಹಾಗೇ ಗುಡ್ಡಕ್ಕೂ ನರಗಳಿರ್ತಾವೆ. ಎಲ್ಲಾ ಕಡೇನೂ ಹಬ್ಬಿರ್ತಾವೆ. ಕಣ್ಣಿಗೆ ಕಾಣೋಲ್ಲ. ಪ್ರತಿ ಗಿಡ, ಮರ, ಎಲೆ, ಹಣ್ಣು, ಹೂವನ್ನು ಕೂಡ ಅವು ತಮ್ಮಿಷ್ಟದಂತೆಯೇ ಬೆಳೆಸುತ್ತಾವೆ. ಅವಕ್ಕೆ ಅಷ್ಟು ಶಕ್ತಿಯಿರುತ್ತದೆ. ಈ ಜಾಗದಲ್ಲಿ ಹುಲ್ಲಿದೆ ಅಂದರೆ ಅವಕ್ಕೆ ಈ ಜಾಗದಲ್ಲಿ ಬೇರೆ ಏನು ಬೆಳೆಯುವುದೂ ಇಷ್ಟ ಇಲ್ಲ ಅಂತ ಅರ್ಥ. ಎಲ್ಲಾ ಕಡೆ ಹಬ್ಬಿರುತ್ತಾವೆ ಅಂತ ಅಂದೆನಲ್ಲ, ಈಗ ಅವುಗಳ ಜಾಡು ಹಿಡಿದು ನಿಮ್ಮ ಅಯ್ಯನೋರು ಎಲ್ಲಿದಾರೆ ಅಂತ ನೋಡೋಣ.
ಹುಡುಗ, ಕಣ್ಣು ಬಿಟ್ಟುಕೊಂಡು ನೋಡ್ತಾ ಇದ್ದ.
ಅಚ್ಯುತ, ಹಾಗೇ ಕುಳಿತವನು, ಸ್ವಲ್ಪ ತಡಕಾಡಿ ಒಂದು ಕಡೆ ಅಂಗೈಯೂರಿದ. ಅವನು ಹೇಳಿದ ಹಾಗೇ, ಆ ಗುಡ್ಡದ ಧಮನಿಗಳು ಅವನನ್ನು ತಬ್ಬಿ ಹಿಡಿದವು. ನೋಡುವವರಿಗೆ ಅವನನ್ನು ಯಾರೋ ಅದೃಶ್ಯ ಬಳ್ಳಿಗಳಿಂದ ಕಟ್ಟಿದ್ದಾರೇನೋ ಅನ್ನುವಂತಿತ್ತು. ಅಚ್ಯುತ ಮಾತ್ರ ಸಮಾಧಾನವಾಗಿಯೇ ಕುಳಿತಿದ್ದ. ಅವುಗಳಿಗೆ ಪೂರ್ತಿಯಾಗಿ ಶರಣಾಗಿದ್ದ. ಆ ಗುಡ್ಡದಲ್ಲೊಂದಾಗಿ ಬಿಟ್ಟಿದ್ದ. ಅವನಿಗೆ ಅಲ್ಲಿನ ಪ್ರತಿ ಚಲನೆಯೂ ಗೊತ್ತಾಗುತ್ತಿತ್ತು. ಪ್ರತಿ ಎಲೆ ಮಿಸುಗುವುದನ್ನೂ ಗುರುತಿಸಬಲ್ಲವನಾಗಿದ್ದ. ಪ್ರತಿ ಹೂವು, ಕಾಯಿ.. ಎಲ್ಲಾ... ಅವನಿಗೀಗ ಇಡೀ ಗುಡ್ಡದ ಜೀವ ಬಡಿತದ ಅರಿವಾಗತೊಡಗಿತ್ತು.
ಆ ಜೀವಸೆಲೆಯ ಕೇಂದ್ರಸ್ಥಾನವೆಲ್ಲಿದೆ ಅಂತ ಅರಸತೊಡಗಿದ. ಇಲ್ಲಿಲ್ಲ... ಅಲ್ಲಿಲ್ಲ... ಓ ಬಹುಶಃ ಅಲ್ಲಿದೆ ಎಂದು ನೋಡುವಷ್ಟರಲ್ಲಿ ಆ ಅದೃಶ್ಯ ಬಳ್ಳಿಗಳು ಅವನನ್ನು ಬಿಟ್ಟು ಬಿಟ್ಟವು. ತಮ್ಮನ್ನು ನಿಯಂತ್ರಿಸುವವನನ್ನು ಬಿಗಿದಪ್ಪುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಅವಕ್ಕನ್ನಿಸಿರಬೇಕು.
ಯಾವ ದಿಕ್ಕಿನಲ್ಲಿ ಶಕ್ತಿಕೇಂದ್ರವಿದೆಯೆಂದು ಅವನಿಗನ್ನಿಸಿತ್ತೋ ಆ ದಿಕ್ಕಿನೆಡೆಗೆ ಹೊರಟ.
ನಡಿ ಹೋಗೋಣ, ಅಚ್ಯುತ ಆ ಹುಡುಗನಿಗೆ ಹೇಳಿದ.
ಹೂಂ, ಮುಂದೆ ಉಸುರಿಲ್ಲ.
ಏನು ನಿನ್ನ ಹೆಸರು?
ಶಿವು, ಮತ್ತೆ ಮಾತಿಲ್ಲ. ಆ ಹುಡುಗನಿಗೆ ಸ್ವಲ್ಪ ಭಯವಾದಂತಿತ್ತು.
ನಡೆಯುತ್ತಾ ಇಬ್ಬರೂ ಗುಡ್ಡದ ಮೇಲೆ ಬಂದರು. ಹಾಗೇ ಅತ್ತ ಇತ್ತ ನೋಡ್ತಿರಬೇಕಾದರೆ, ಒಂದು ಘಂಟೆಯ ಶಬ್ದ ಕೇಳಿಸಿತು. ಅಚ್ಯುತ ಥಟ್ಟಂತ ಆ ದಿಕ್ಕಿನೆಡೆಗೆ ನೋಡಿದ. ಶಿವು ಕೂಡಾ ಆ ಕಡೆಗೆ ತಿರುಗಿದ್ದನ್ನ ಗಮನಿಸಿದ.
ಅಷ್ಟೇ, ಮತ್ತೆ ಸದ್ದಿಲ್ಲ.
ಬಹುಶ: ಇಲ್ಲೇ ಎಲ್ಲೋ ಇರಬೇಕು. ಅಚ್ಯುತ ಹೇಳಿದ.
ಶಿವು, ಆಗಲೇ ಅಲ್ಲಿದ್ದ ಬಂಡೆಗೆ ಒರಗಿಕೊಂಡು ಕೆಳಗೆ ಬಗ್ಗಿ ನೋಡ್ತಾ ಇದ್ದ.
ಅಲ್ಲಿ, ಅಲ್ಲಿ! ಎಂದು ಕೈ ತೋರಿಸಿದ.
ಅವನು ತೋರಿಸಿದ ಕಡೆ ಒಂದು ಗುಡಿಸಲಿತ್ತು.
ಅವರಿಬ್ಬರೂ ಆ ಕಡೆಗೇ ನಡೆದರು.
ಗುಡಿಸಲ ಹತ್ತಿರ ಬರುತ್ತಿದ್ದಂತೆಯೇ ಅಲ್ಲಿ ಯಾರೋ ವಾಸವಾಗಿದ್ದಾರೆಂದು ತಿಳಿಯುವಷ್ಟು ಗುರುತುಗಳಿದ್ದವು. ಒಳಗಡೆ ಹೋದರು.
ಒಳಗಡೆ ಅಯ್ಯನೋರು ಇದ್ದರು.
ಬಿಳೀ ಗಡ್ಡ, ನೀಳ ದೇಹ. ಸ್ವಚ್ಛ ಬಟ್ಟೆ. ವಯಸ್ಸಾಗಿತ್ತು. ಯಾರೇ ನೋಡಿದರೂ ಗೌರವ ಮೂಡಿಸುವಂಥಾ ವ್ಯಕ್ತಿತ್ವ. ಅಚ್ಯುತನಿಗೆ ಹಿಮಾಲಯದಲ್ಲಿ ಅಲೆಯುವ ಸಮಯದಲ್ಲಿ ಭೇಟಿಯಾದ ಸಾಧುಗಳ ನೆನಪಾಯಿತು.
ಶಿವು ಆಗಲೇ ಅವರ ಜೊತೆ ಮಾತು ಆರಂಭಿಸಿಬಿಟ್ಟಿದ್ದ.
ಸರಿ ಸರಿ, ನೀವು ಆಯ ತಪ್ಪಿ ಬಿದ್ಬಿಟ್ರಿ. ಆಮೇಲೆ? ಶಿವು ಕೇಳಿದ.
ಬಿದ್ದ ಕೂಡಲೇ ಕಾಲು ಉಳುಕಿಬಿಟ್ಟಿತು. ಅಸಾಧ್ಯ ನೋವು. ಬಹುಶ: ಮೂಳೆ ಮುರಿದಿರಬೇಕು. ಅಡ್ಡಾಡಲಿಕ್ಕಂತೂ ವಿಪರೀತ ಕಷ್ಟವಾಗ್ತಿತ್ತು. ಹೇಗೋ ಏನೋ ಮಾಡಿ, ಇಲ್ಲೀವರೆಗೂ ಬಂದೆ. ಹತ್ತಿರದಲ್ಲಿರೋ ಮರಗಳ ಹಣ್ಣು ತಿಂದು ಬದುಕಿದ್ದೀನಿ. ಹತ್ತಿರದಲ್ಲೇ ನೀರಿನ ಝರಿಯೊಂದಿರೋದರಿಂದ ನೀರಿಗೂ ಏನೂ ಬರ ಇರಲಿಲ್ಲ.
ಹಾಗೇ ಹೇಳ್ತಾ ಅಚ್ಯುತನ ಕಡೆಗೆ ತಿರುಗಿದರು.
ನನ್ನಿಂದಾಗಿ ನಿಮಗೆ ತೊಂದರೆ ಆಯ್ತು. ಸುಮ್ನೆ ಹೀಗೆ ಕಾಡಲ್ಲಿ ಬರೋ ಹಾಗಾಯ್ತು. ಇನ್ನೊಂದೆರಡು ದಿನ ಆಗಿದ್ರೆ ನಾನೇ ಬರ್ತಾ ಇದ್ದೆ. ಹಳ್ಳೀ ಜನ ಸಣ್ಣದಕ್ಕೆಲ್ಲಾ ಗಾಬರಿ ಬೀಳ್ತಾರೆ.
ನನ್ನ ಹೆಸರು ಮಲ್ಲಿಕಾರ್ಜುನ ಅಂತ, ನಿಮ್ಮ ಪರಿಚಯ ಆಗ್ಲಿಲ್ಲ.
ಅಲ್ಲೀತನಕ ತನ್ನ ಹೆಸರೇ ಹೇಳಿಕೊಳ್ಳದೇ ಇದ್ದದು ಅಚ್ಯುತನಿಗೆ ನೆನಪಾಯ್ತು.
ನನಗೆ ಗೊತ್ತು, ಊರ ಜನ ನಿಮ್ಮ ಬಗ್ಗೆ ಎಲ್ಲಾ ಹೇಳಿದಾರೆ. ನನ್ನ ಹೆಸರು ಅಚ್ಯುತ.
ಇಬ್ಬರೂ ಮತ್ತೊಮ್ಮೆ ಒಬ್ಬರಿಗೊಬ್ಬರು ನಮಸ್ಕಾರ ತಿಳಿಸಿದರು.
ಅಯ್ಯನೋರು ಮಾತು ಮುಂದುವರೆಸಿದರು.
ಇಷ್ಟು ಚಿಕ್ಕ ಪೆಟ್ಟಿಗೆಲ್ಲಾ ಹೀಗೆ ದಿನಗಟ್ಟಲೆ ಕೂರಬೇಕಾಯ್ತಲ್ಲಾ ಅಂತ ಬೇಜಾರಾಗ್ತಿದೆ. ಹೀಗೆ ಸುಮ್ಮನೆ ಕೂತು ಅಭ್ಯಾಸನೇ ಇಲ್ಲ. ಈ ಕಾಡಿನ ಮೂಲೆ ಮೂಲೆನೂ ನನಗೆ ಗೊತ್ತು. ಆದ್ರೂನೂ ಬೀಳಬೇಕಾಗಿ ಬಂತಲ್ಲ, ಹ್ಮ್ ವಯಸ್ಸಾಯ್ತು ನೋಡಿ. ಇನ್ನಾಗಲ್ಲ ಸಾಕು ಮಾಡ್ಬಿಟ್ತೀನಿ.
ಶಿವು ಅಷ್ಟೊತ್ತಿಗಾಗಲೇ ಅಯ್ಯನೋರ ತೊಡೆ ಮೇಲೆ ತಲೆಯಿಟ್ಟು ನಿದ್ದೆ ಮಾಡಿದ್ದ.
ಏನು ಸಾಕು ಮಾಡ್ತೀರ? ಗುಡ್ಡದ ಶಕ್ತಿಯನ್ನು ನಿಯಂತ್ರಿಸೋದನ್ನಾ? ಅಚ್ಯುತ ಕೇಳಿದ.
ಇಷ್ಟು ವಿಚಿತ್ರಗಳೆಲ್ಲಾ ಆಗೋದಕ್ಕೆ ನೀವೇ ಕಾರಣ ಅಲ್ವಾ? ನೀವು ಬಿದ್ದು ಕಾಲು ಮುರಿದುಕೊಂಡ್ರಿ, ಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ, ನಿಜ ತಾನೇ?
ಅಯ್ಯನೋರು ಸುಮ್ಮನೆ ಮುಗುಳ್ನಕ್ಕರು.
ನೀವು ಇಲ್ಲೀ ತನಕ ಅನಾಯಾಸವಾಗಿ ಬಂದಾಗಲೇ ಅಂದ್ಕೊಂಡೆ ನೀವು ಸಾಮಾನ್ಯರಲ್ಲ ಅಂತ. ನಿಮ್ಮಷ್ಟಕ್ಕೆ ನೀವೇ ಬಹಳಷ್ಟು ವಿಷಯ ತಿಳಿದುಕೊಂಡಿದ್ದೀರಿ. ಹೌದು ನಿಜ, ನನ್ನ ಅನಾರೋಗ್ಯದ ಕಾರಣ ನನಗೆ ಅದನ್ನ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತಿತ್ತು. ಆದರೆ, ಬಹುಶಃ ನಾಳೆಯಿಂದ ಎಲ್ಲಾ ಸರಿಹೋಗುತ್ತೆ ಅಂದ್ಕೋತೀನಿ. ಈ ಕಾಲು ನೋವು ಅದಕ್ಕೆಲ್ಲಾ ಅಡ್ಡಿ ಮಾಡಲಾರದು. ನಾಳೆಯಿಂದ ಈ ಗುಡ್ಡ ಮತ್ತೆ ಮೊದಲಿನಂತೆ ಸಹಜ ಸ್ಥಿತಿಗೆ ಮರಳುತ್ತದೆ.
ಇದು ಸಾಮಾನ್ಯದ ವಿಷಯವಲ್ಲ. ನೀವು ನಿಯಂತ್ರಿಸುತ್ತಿರೋದು ಯಾವುದೋ ಒಂದು ವಾಮಾಚಾರದ ಕ್ಷುದ್ರಶಕ್ತಿಯಲ್ಲ. ಈ ಗುಡ್ಡದ ಆತ್ಮ ಅದು. ಒಬ್ಬ ಮನುಷ್ಯನಾಗಿ ಅದನ್ನು ನಿಯಂತ್ರಿಸೋದು ಅತ್ಯಂತ ಕಷ್ಟದ ಕೆಲಸ. ಬಯಸೀ ಬಯಸೀ ಈ ಕಷ್ಟದ ಕೆಲಸ ಹೆಗಲಮೇಲೆ ಹಾಕಿಕೊಂಡಿದ್ದೀರಲ್ಲಾ, ನೀವು ಈ ರೀತಿ ಮಾಡ್ಲಿಕ್ಕೆ ವಿಶೇಷವಾದ ಕಾರಣವೇನಾದರೂ ಇದೆಯೇ? ಅಚ್ಯುತ ಕೇಳಿದ.
ನೀವೀಗಾಗಲೇ ಗುರುತಿಸಿದಂತೆ ಈ ಗುಡ್ಡವೊಂದು ಶಕ್ತಿತಾಣ. ಈ ಮುಂಚೆ ಇಲ್ಲಿ, ಈ ಹಳ್ಳಿ ಜನ ಏನು ದೇವರು ಅಂತ ಕರೀತಾರೋ, ಆ ದೇವರು ಅಥವಾ ಆ ಶಕ್ತಿ ಒಂದು ಪ್ರಾಣಿರೂಪದಲ್ಲಿ ಅಡ್ಡಾಡಿಕೊಂಡಿತ್ತು. ಜನ, ಗೊತ್ತಿಲ್ಲದೆ ಅದನ್ನು ಕೊಂದು ಹಾಕಿದರು.
ನಾನಾವಾಗ ಮಂತ್ರ ತಂತ್ರ ಕಲ್ತ್ಕೊಂಡು ಅಲ್ಲಿ ಇಲ್ಲಿ ಅಂತ ಅಡ್ಡಾಡ್ತಾ ಇದ್ದೆ. ಈ ಹಳ್ಳಿಜನ ಕಷ್ಟದಲ್ಲಿರೋದನ್ನ ನೋಡಿ, ನನ್ನ ಹೆಂಡತಿ ಜೊತೆ ಈ ಗುಡ್ಡಕ್ಕೆ ಬಂದೆ. ಈ ಜಾಗದಲ್ಲಿದ್ದ ಶಕ್ತಿಯನ್ನು ನನ್ನ ಮೇಲೆ ಆವಾಹಿಸಿಕೊಂಡು ನಾನೇ ದೇವರಾದೆ. ಆದರೆ ನನ್ನ ದುರಾದೃಷ್ಟ, ಬಂದ ಕೆಲವೇ ದಿನಗಳಲ್ಲಿ ನನ್ನ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ತೀರಿ ಹೋದಳು. ಅಯ್ಯನೋರು ನಿಟ್ಟುಸಿರು ಬಿಟ್ಟರು.
ಹಾಗಾದ್ರೆ , ನಿಮ್ಮ ನಂತರ ಮುಂದಿನ ದೇವರು ಈ ಹುಡುಗನಾ? ಮಲಗಿದ್ದ ಶಿವು ಕಡೆ ಕೈ ತೋರಿಸಿ ಅಚ್ಯತ ಕೇಳಿದ.
ಈಗಾಗಲೇ ಅವನಿಗೆ ಸಾಕಷ್ಟು ಗುಡ್ಡದ, ಕಾಡಿನ ಪರಿಚಯವಾದಂತಿದೆ.
ಹೌದು. ಅಯ್ಯನೋರು ಉತ್ತರಿಸಿದರು.
ಅವರು ಯಾವುದಕ್ಕೆ ಹೌದೆಂದರು ಎಂದು ಅಚ್ಯುತನಿಗೆ ತಿಳಿಯಲಿಲ್ಲ. ಕೇಳಬೇಕೆನ್ನಿಸುವಷ್ಟರಲ್ಲಿ ಅವರು ಮಾತು ಮುಂದುವರೆಸಿದರು.
ಶಿವು ಈ ಗುಡ್ಡದಲ್ಲೇ ಬೆಳೆದಿದ್ದು.
ನೀವು ಈ ಹಳ್ಳೀಲಿ ಹುಟ್ಟೋ ಮಕ್ಕಳನ್ನು ಗಮನಿಸಿದ್ದೀರಾ? ಈ ಗುಡ್ಡದಿಂದ ಹರಿಯೋ ನೀರಲ್ಲೂ ಶಕ್ತಿ ಇದೆ. ಊರ ಜನ ಅದನ್ನೇ ಎಲ್ಲದಕ್ಕೂ ಉಪಯೋಗಿಸ್ತಾರೆ. ಬೆಕ್ಕು ಮರಿ ಹಾಕಿದಂತೆ ಇಲ್ಲಿ ಮಕ್ಕಳು ಹುಟ್ತಾವೆ. ಎರಡು, ಮೂರು, ನಾಲ್ಕು... ಒಂದ್ಸಲವಂತ್ರೂ ಒಬ್ಳು ಆರು ಮಕ್ಕಳನ್ನು ಹೆತ್ತಿದ್ಳು.
ಹಳ್ಳಿಜನ ಸಾಕೋದಿಕ್ಕಾಗಲ್ಲಾ ಅಂತ ಮಕ್ಕಳನ್ನು ತಂದು ಕಾಡೊಳಗೆ ಬಿಟ್ಟು ಹೋಗ್ತಾರೆ.
ಈ ಮಗು ಮಾತ್ರ ಯಾವ ಕಾಡುಪ್ರಾಣಿಯ ಕಣ್ಣಿಗೂ ಬಿದ್ದಿರಲಿಲ್ಲ. ನಾನು ಎತ್ತಿಕೊಂಡು ಬಂದೆ ಸಾಕಿದೆ. ಆದರೆ, ಇದರ ಜೊತೆ ಹುಟ್ಟಿದ್ದ ಮಗು, ಊರಲ್ಲಿತ್ತಲ್ಲ, ಅದಕ್ಕೆ ಆಯಸ್ಸು ಜಾಸ್ತಿ ಇರಲಿಲ್ಲ. ಸತ್ತ್ಹೋಗ್ಬಿಟ್ತು ಅದು. ಇನ್ನೊಂದು ಮಗು ಉಳಿದಿರೋದು ಅದರ ಅಪ್ಪ ಅಮ್ಮಂಗೆ ಗೊತ್ತಾಗಿ ಅವರು ಬಂದು ಇದನ್ನ ಕರೆದುಕೊಂಡು ಹೋಗುವವರೆಗೂ ಇದು ಇಲ್ಲೇ ಬೆಳೆದಿತ್ತು.
ಎಷ್ಟು ಸ್ವಾರ್ಥಿ ಜನಗಳು. ಅಚ್ಯುತ ತನ್ನ ಅಸಮಾಧಾನ ಹೊರ ಹಾಕಿದ.
ಈ ಪ್ರಪಂಚದಲ್ಲಿ ಇನ್ನೂ ಏನೇನು ವಿಚಿತ್ರಗಳಿದ್ದಾವೋ? ಅಯ್ಯನೋರು ಮೇಲೆ ನೋಡ್ತಾ ಮಾತಾಡ್ತಿದ್ದರು. ಆ ಭಗವಂತ ಹ್ಯಾಗೆ ಆಡಿಸ್ತಾನೋ, ಎಲ್ಲರೂ ಹಾಗೇ ಆಡ್ತಾರೆ.
ಈಗ ನೋಡಿ, ನೀವು ಊರೂರು ತಿರುಗುತ್ತೀರ ಅಂತ ಹೇಳಿದ್ರಿ. ನನಗೂ ಹಾಗೇ ಅಲೀಬೇಕು ಅಂತ ತುಂಬಾ ಆಸೆ. ಆದರೆ ವಿಚಿತ್ರ ನೋಡಿ, ನಾನು ಈ ಗುಡ್ಡದಲ್ಲಿ ಬಂಧಿ. ಇಲ್ಲಿಂದ ಹೊರಗೆ ಹೋಗ್ಲಿಕ್ಕೆ ಆಗಲ್ಲ. ಹೋಗ್ಲಿ ಬಿಡಿ, ಒಳ್ಳೇದಕ್ಕೋ, ಕೆಟ್ಟದಕ್ಕೋ ನನ್ನ ಕೊನೇ ಉಸಿರು ಈ ಗುಡ್ಡದ ಗಾಳಿ ಜೊತೆ ತೇಲಿ ಹೋಗುತ್ತೆ.
ಅಷ್ಟು ಹೊತ್ತಿಗೆ ಮಲಗಿದ್ದ ಶಿವು ಎದ್ದು ಕುಳಿತ.
ಅಚ್ಯುತನಿಗೆ ಶಿವು ಎದುರಿಗೆ ಆ ಸಂಭಾಷಣೆ ಮುಂದುವರೆಸಲು ಇಷ್ಟವಾಗಲಿಲ್ಲ. ಎದ್ದು ನಿಂತ.
ನೋಡಿ ನಾನು ಊರಿಗೆ ಹೋಗಿ ನಿಮ್ಮ ಬಗ್ಗೆ ಜನಕ್ಕೆ ಹೇಳ್ತೀನಿ. ತುಂಬಾ ಗಾಬರಿಯಾಗಿದ್ದಾರೆ ಅವರು. ನೀವು ಸಿಕ್ಕಿರೋದು ಗೊತ್ತಾದರೆ ಸಮಾಧಾನವಾಗುತ್ತೆ ಅವರಿಗೆ. ಅಚ್ಯುತ ಹೇಳಿದ.
ನಾನೂ ಬರ್ತೀನಿ. ಶಿವು ಹೇಳಿದ.
ಅಯ್ಯನೋರು ಆಗಲಿ ಎಂದು ಒಪ್ಪಿಗೆ ಕೊಟ್ಟರು.
ಅಚ್ಯುತ, ಶಿವು ಪುನಃ ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರು. ಇನ್ನೇನು ಗುಡ್ಡ ಇಳಿಯಬೇಕು ಅನ್ನುವಾಗ ಮತ್ತೆ ಘಂಟೆ ಶಬ್ದ ಕೇಳಿಸಿತು.
ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ಏನೂ ಮಾತಾಡಲಿಲ್ಲ.
ಊರೊಳಗೆ ಬರ್ತಿದ್ದಂತೆಯೇ, ಜನ ಸೇರೋದಕ್ಕೆ ಶುರುಮಾಡಿದರು.
ಏನಾಯ್ತು ಸ್ವಾಮೀ, ಅಯ್ಯನೋರು ಸಿಕ್ಕಿದ್ರಾ? ಪುನಃ ಆ ಮುಖ್ಯಸ್ಥ ಮುಂದೆ ಬಂದು ಕೇಳಿದ.
ಅಚ್ಯುತ ಚುಟುಕಾಗಿ ಅಯ್ಯನೋರ ಕಾಲಿನ ಬಗ್ಗೆ, ಅವರ ಬಗ್ಗೆ ತಿಳಿಸಿದ. ಅವರಿಗೆ ಹೇಳತೀರದ ಸಂತಸ, ಅವರ ಗುಡ್ಡದಯ್ಯ ಸಿಕ್ಕಿದ್ದರು.
ಮಾರನೇ ದಿನ, ಯಾರು ಏನು ಮಾಡಬೇಕೆಂದು ಆಗಲೇ ಅವರು ಚರ್ಚೆ ಶುರು ಮಾಡಿದ್ದರು.
ಅಚ್ಯುತ ಆ ರಾತ್ರಿ ಆ ಹಳ್ಳಿಯಲ್ಲಿಯೇ ಉಳಿದ.
ಮಲಗಿದವನಿಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಎಚ್ಚರವಾಯ್ತು. ಆ ನೀರವ ರಾತ್ರಿಯಲ್ಲಿ ಘಂಟಾನಾದ ಸ್ಪಷ್ಟವಾಗಿಯೇ ಕೇಳುತ್ತಿತ್ತು.
ಅಚ್ಯುತ, ಎದ್ದು ಆ ಶಬ್ದದ ಜಾಡನ್ನಿಡಿದು ಗುಡ್ಡದೆಡೆಗೆ ಹೊರಟ. ಗುಡ್ಡದ ಬುಡದಲ್ಲಿ ಯಾರೋ ನಿಂತಂತಿತ್ತು. ಹತ್ತಿರ ಹೋಗಿ ನೋಡಿದರೆ ಶಿವು!
ಏನಿದು ಶಬ್ದ? ಇಲ್ಲಿ ಯಾವುದೂ ಗುಡಿ ಇಲ್ಲ. ಊರಲ್ಲಿ ಬೇರೆ ಯಾರಿಗೂ ಈ ಶಬ್ದ ಕೇಳಿಸೋಲ್ಲ.
ಅಚ್ಯುತ ಏನಾದರೂ ಕೇಳುವುದಕ್ಕೆ ಮುಂಚೆಯೇ ಶಿವು ಕೇಳಿದ್ದ.
ನಾನು ಕೂಡ ಅದನ್ನು ಕಂಡು ಹಿಡಿಯಬೇಕೆಂದೇ ಬಂದಿದ್ದು. ಈ ಶಬ್ದ ಯಾವಾಗಿನಿಂದ ಕೇಳ್ತಾ ಇದೆ ನಿನಗೆ? ಅಚ್ಯುತ ಕೇಳಿದ.
ಈಗ್ಗೆ ಸ್ವಲ್ಪ ದಿನಗಳ ಕೆಳಗೆ ಶುರುವಾಗಿದ್ದು. ಇವತ್ಯಾಕೋ ಸ್ವಲ್ಪ ಜೋರಾಗೇ ಕೇಳಿ ಬಂತು. ಅದಕ್ಕೇ ಇಲ್ಲಿಗೆ ಬಂದೆ. ಶಿವು ಉತ್ತರಿಸಿದ.
ಅಚ್ಯುತ ಯೋಚನೆ ಮಾಡ್ತಿದ್ದ. ಇದು ಗಾಳಿಯ ಕೆಲಸವಲ್ಲವೇ ಅಲ್ಲ. ರಾತ್ರಿ ಹೊತ್ತು ಬೀಸುವ ಗಾಳಿ ಒಂದೊಂದ್ಸಲ ವಿಚಿತ್ರವಾದ ಸದ್ದುಗಳನ್ನು ಮಾಡುತ್ತದಾದರೂ ಈ ರೀತಿ ಸಾಧ್ಯವಿಲ್ಲ. ಬಹುಶಃ ಅಯ್ಯನೋರೇನಾದ್ರೂ ಅದನ್ನ... ಅವನಿಗೆ ಗಾಬರಿಯಾಯಿತು.
ಶಿವು ಕಡೆಗೆ ತಿರುಗಿ ಕೇಳಿದ.
ನಿಂಗೊಂದು ಪ್ರಶ್ನೆ ಕೇಳ್ತೀನಿ. ಸುಳ್ಳು ಹೇಳಬಾರದು. ಈ ಗುಡ್ಡದ ದೇವರಾಗೋದು ಹೇಗೆ ಅಂತ ಕಲ್ತಿದ್ದೀಯಾ?
ಗುಡ್ಡದ ದೇವ್ರು? ಶಿವು ಕೇಳಿದ. ಅವನಿಗೇನೂ ಅರ್ಥ ಆಗಿರಲಿಲ್ಲ.
ಗುಡ್ಡದ ದೇವ್ರಾಗೋದು ಹೇಗೆ ಅಂತ ಗೊತ್ತಿದೆಯಾ? ಅಚ್ಯುತ ಮತ್ತೆ ಕೇಳಿದ.
ಒಂದು ಶಕ್ತಿಯನ್ನು ಆವಾಹಿಸಿಕೊಂಡು ನಿಯಂತ್ರಿಸಿದರೆ ಈ ಗುಡ್ಡದಲ್ಲಿ ನಡೆಯುವುದೆಲ್ಲಾ ನಿನ್ನ ಹಿಡಿತದಲ್ಲಿರುತ್ತದೆ. ಶಕ್ತಿಯನ್ನು ಆವಾಹಿಸಿದಾಗ ಇಡೀ ಗುಡ್ಡದ ಚಲನವಲನ ನಿನಗೆ ಗೊತ್ತಾಗುತ್ತೆ. ಒಂದು ಚಿಕ್ಕ ಹುಲ್ಲುಕಡ್ಡಿ ಅಲ್ಲಾಡಿದ್ದೂ ನಿನಗೆ ತಿಳಿಯುತ್ತೆ. ಆ ಭಾವಸಮುದ್ರದ ಹೊಡೆತ ನಿನಗೆ ತಡೆದುಕೊಳ್ಳಬಲ್ಲೆಯಾದರೆ ನೀನು ಈ ಗುಡ್ಡದ ದೇವರಾದಂತೆಯೇ. ಈಗ ಹೇಳು, ನಿನಗಿದು ಗೊತ್ತೇ?
ಪಾಪ, ಚಿಕ್ಕ ಹುಡುಗ ಶಿವು. ಅವನಿಗೇನೂ ಅರ್ಥವಾಗಿರಲಿಲ್ಲ.
ಇಲ್ಲ, ನನಗೇನೂ ಇದರ ಬಗ್ಗೆ ಗೊತ್ತಿಲ್ಲ. ಅವನುತ್ತರಿಸಿದ್ದ.
ಹೌದಾ ಸರಿ ಬಿಡು. ಕೆಲವೊಮ್ಮೆ ಮರಕ್ಕೆ ಗಾಳಿ ಬಡಿದಾಗ, ಘಂಟೆಯ ಶಬ್ದ ಬರುತ್ತೆ. ನೀನದರ ಬಗ್ಗೆ ಯೋಚಿಸಬೇಡ. ಮನೆಗೆ ಹೋಗು. ಅಚ್ಯುತ ಹೇಳಿದ.
ನೀವೆಲ್ಲಿಗೆ ಹೋಗ್ತಾ ಇದ್ದೀರಾ? ಶಿವು ಕೇಳಿದ.
ಏನಿಲ್ಲ, ರಾತ್ರಿ ಗುಡ್ಡದಲ್ಲಿ ಅಡ್ಡಾಡಿಕೊಂಡು ಬರಲಿಕ್ಕೆ ಚೆನ್ನಾಗಿರುತ್ತೆ. ಒಂದ್ಸಲ ಹೋಗಿ ಬರ್ತೀನಿ. ಅಚ್ಯುತ ಪೂರ್ತಿ ವಿಷಯ ಹೇಳಲಿಲ್ಲ.
ಅಚ್ಯುತ ಮುಂದೆ ಹೊರಟ. ಅಷ್ಟೊತ್ತಿಗಾಗಲೇ ಗುಡ್ಡ ಮತ್ತೆ ಶಾಂತವಾಗಿತ್ತು.
ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು ಅಲ್ಲ. ಅಚ್ಯುತ ಯೋಚಿಸುತ್ತಿದ್ದ.
ಆಗ ಮತ್ತೆ ಘಂಟೆ ಶಬ್ದ ಕೇಳಿಸಿತು.
ಎಲ್ಲಿಂದ ಬಂತು ಅಂತ ಗಮನವಿಟ್ಟು ಕೇಳಿದಾಗ ಗುಡ್ಡದ ತುದಿಯಿಂದ ಬಂದದ್ದೆಂದು ತಿಳಿಯಿತು. ಓಡುತ್ತಲೇ ಗುಡ್ಡ ಹತ್ತತೊಡಗಿದ.
ಆ ಗುಡ್ಡದ ತುದಿಯಲ್ಲಿ ಅಯ್ಯನೋರು ಕುಳಿತಿದ್ದರು.
ಅವರನ್ನ ಅಲ್ಲಿ ನೋಡಿದ ತಕ್ಷಣ ಅಚ್ಯುತನಿಗೆ ತಾನು ಎಣಿಸಿದಂತೆಯೇ ಆಗುತ್ತಿದೆ ಎಂದೆನಿಸಿತು.
ನಿಮ್ಮ ಕಾಲು ಮುರಿದೇ ಇರಲಿಲ್ಲ. ನಿಮ್ಮನ್ನ ಜನ ಹುಡುಕಬಾರದೂಂತ ಇಲ್ಲಿಗೆ ಬಂದಿದ್ರಿ ಅಲ್ವಾ? ಅಚ್ಯುತ ಏದುಸಿರು ಬಿಡುತ್ತಲೇ ಕೇಳಿದ.
ಏನು ಹೇಳ್ತಾ ಇದ್ದೀರಿ? ಅಯ್ಯನೋರು ಕೇಳಿದರು.
ನನಗೆ ಘಂಟೆ ಶಬ್ದ ಕೇಳಿಸ್ತು. ನೀವೀಗ ಕುಚಿನಿಕೆಯನ್ನು ಕರೀತಾ ಇದ್ದೀರಿ ಅಲ್ವಾ? ಇಪ್ಪತ್ತೊಂದು ದಿನಗಳ ಕಾಲ ನಡೆಸೋ ಪ್ರಯೋಗ ಅದು. ಪ್ರಯೋಗ ಮುಗಿಯುತ್ತಾ ಬಂದ ಹಾಗೇ ಘಂಟೆ ಶಬ್ದ ಜೋರಾಗಿ ಕೇಳುತ್ತೆ. ಆದರೆ ಎಲ್ಲರಿಗೂ ಆ ಶಬ್ದ ಕೇಳೋಲ್ಲ. ನೀವೀಗ ಕುಚಿನಿಕೆಯನ್ನು ಕರೆದು, ನಿಮ್ಮನ್ನ ನೀವೇ ಬಲಿಕೊಟ್ಟು, ಅದರ ಕೈಗೆ ಈ ಗುಡ್ಡ ಬಿಟ್ಟು ಹೋಗಬೇಕು ಅಂತ ತೀರ್ಮಾನ ಮಾಡಿದ್ದೀರಿ ಅಲ್ವಾ? ಯಾಕೆ? ಅಚ್ಯುತ ಒಂದೇ ಉಸಿರಿನಲ್ಲಿ ಪ್ರಶ್ನಿಸಿದ.
ಅಯ್ಯನೋರು ಒಮ್ಮೆ ಜೋರಾಗಿ ಉಸಿರು ಬಿಟ್ಟರು.
ಈ ಮುಂಚೆ ಇಲ್ಲಿ ಇದ್ದ ಕುಚಿನಿಕೆ ಒಂದು ಸುಂದರವಾದ ಜಿಂಕೆಯ ರೂಪದಲ್ಲಿತ್ತು. ಅದರ ಕೋಡೇ ಸುಮಾರು ಎರಡು ಅಡಿ ಎತ್ತರವಿತ್ತು. ಅದು ಓಡ್ತಿದ್ರೆ ನೋಡ್ತಾನೇ ಇರಬೇಕು ಅಂತ ಅನ್ನಿಸೋದು. ಅಷ್ಟು ಸುಂದರವಾದ ಬೇರೆ ಕುಚಿನಿಕೆಯನ್ನು ನಾನು ನೋಡಿಲ್ಲ. ಆದ್ರೆ ನಾನು ಪಾಪಿ, ತಪ್ಪು ಮಾಡಿಬಿಟ್ಟೆ.
ಅಚ್ಯುತ ಅವರ ಮಾತನ್ನು ಅರ್ಧದಲ್ಲಿಯೇ ತಡೆದ.
ಆ ವಿಷಯ ಆಮೇಲೆ ಹೇಳಿ. ಮೊದಲು ಇಲ್ಲಿಗೊಂದು ದಿಗ್ಬಂಧನ ಹಾಕಬೇಕು. ಅಂದವನೇ ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತಮ್ಮಿಬ್ಬರ ಸುತ್ತಲೂ ಒಂದು ಗೆರೆ ಹಾಕುತ್ತಾ ಮಂತ್ರ ಹೇಳತೊಡಗಿದ.
ಅಯ್ಯನೋರು ಮಾತು ಮುಂದುವರೆಸಿದರು.
ಇದರಿಂದೇನೂ ಆಗುವುದಿಲ್ಲ. ಅವಳಾಗಲೇ ಈ ಗುಡ್ಡಕ್ಕೆ ಬಂದಾಗಿದೆ. ಮೇಲಾಗಿ ಅವಳ ಶಕ್ತಿಯ ಮುಂದೆ ಇದೆಲ್ಲಾ ಏನೂ ಅಲ್ಲ. ಅವಳು, ಈ ಗುಡ್ಡಕ್ಕೆ ದೇವರಾಗಿರಬೇಕು, ನನ್ನಂತವನು ಅಲ್ಲ. ಆಮೇಲೆ ಇನ್ನೊಂದು, ನಾನು ಶಿವುಗೆ ಹೇಳಿಕೊಟ್ಟದ್ದು ನನಗೆ ತಿಳಿದ ಅಲ್ಪ ಸ್ವಲ್ಪ ವಿದ್ಯೆ ಹೊರತು ಅವನನ್ನು ನನ್ನ ನಂತರ ಇಲ್ಲಿ ಕೂರಿಸ್ಬೇಕು ಅಂತ ನನಗ್ಯಾವತ್ತೂ ಅನ್ನಿಸಿಲ್ಲ.
ನೀವು ಹೀಗೆ ಬಿಟ್ಟು ಹೋದರೆ ಊರವರ ಗತಿ ಏನು? ನಿಮ್ಮನ್ನು ಪೂಜೆ ಮಾಡ್ತಾರೆ ಅವರು. ನೀವು ಬೇಕು ಆ ಜನಕ್ಕೆ. ನೀವು ಈ ರೀತಿ ಹೋಗ್ಲಿಕ್ಕೆ ನಾನು ಬಿಡಲ್ಲ. ಅಚ್ಯುತ ಹೇಳ್ತಾನೇ ಹೋದ.
ದೂರ ಹೋಗು? ಅಯ್ಯನೋರ ದನಿ ಗಡುಸಾಗಿತ್ತು.
ಇದ್ದಕ್ಕಿದ್ದಂತೆ ಯಾವುದೋ ಅದೃಶ್ಯ ಶಕ್ತಿ ಅವನನ್ನು ಕೆಳಗೆ ನೂಕಿತು. ನಿಂತಿದ್ದ ಬಂಡೆಯಿಂದ ಕೆಳಗೆ ಬಿದ್ದ ಅವನು ಮೇಲೆ ನೋಡಿದ.
ಅಯ್ಯನೋರು ತಮ್ಮೆರಡೂ ಕೈಗಳನ್ನು ಮೇಲೆತ್ತಿ ನಿಂತಿದ್ದರು. ಮುಖ ಪ್ರಶಾಂತವಾಗಿತ್ತು. ಕಣ್ಣುಗಳು ಮುಚ್ಚಿದ್ದವು. ಅದೆಲ್ಲಿತ್ತೋ ಏನೋ ವಿಪರೀತ ರಭಸವಾಗಿ ಗಾಳಿ ಬೀಸತೊಡಗಿತು. ಯಾವುದೋ ಬೆಳಕು ಹತ್ತಿರಕ್ಕೆ ಬರುತ್ತಿದೆಯೇನೋ ಅಂತ ಅನ್ನಿಸಿತು.
ಆ ಬೆಳಕು ಹತ್ತಿರಕ್ಕೆ ಬಂದ ಹಾಗೇ ಕಣ್ಣು ಬಿಡಲಿಕ್ಕಾಗದಷ್ಟು ಪ್ರಕಾಶಮಾನವಾಗಿತ್ತು.
ಅದರಲ್ಲೇ ಕಷ್ಟಪಟ್ಟು ಅಯ್ಯನೋರ ಕಡೆಗೆ ನೋಡಿದ. ಅವರು ಆ ಬೆಳಕಲ್ಲಿ ನೆಂದು ಹೋಗಿದ್ದರು. ಅವರೇ ಒಂದು ದೀಪವೇನೋ ಅನ್ನುವಂತೆ ಹೊಳೆಯುತ್ತಾ ಇದ್ದರು. ನೋಡ್ತಾ ಇದ್ದ ಹಾಗೇ ಅವರು ಆ ಬೆಳಕಿನಲ್ಲಿ ಕರಗಿ ಹೋದರು.
ಅಚ್ಯುತ ಅಲ್ಲಿ ನಿಂತಿದ್ದವನು ಎಚ್ಚರ ತಪ್ಪಿ ಬಿದ್ದ.
ಅರೆ ಪ್ರಜ್ಞಾವಸ್ಥೆಯಲ್ಲಿದ್ದವನಿಗೆ ಒಂದು ಕನಸು ಕಂಡಿತು.
ಒಂದು ಮನೆ, ತುಂಬಾ ಜನರಿದ್ದಾರೆ. ಅಯ್ಯನೋರು ಕೂಡಾ ಇದ್ದರು. ಆದರೆ ಈಗಿನಂತೆ ವಯಸ್ಸಾಗಿರಲಿಲ್ಲ.
ಯಾರೋ ಕೇಳಿದರು.
ನೀವ್ಯಾಕೆ ನಮ್ಮಲ್ಲೇ ಉಳೀಬಾರ್ದು? ಪಾರುತೀನ ಮದುವೆಯಾಗಿ ಇಲ್ಲೇ ಉಳಿದುಬಿಡಬಹುದಲ್ವಾ?
ಇಲ್ಲ. ಅಲೆದಾಟ ಅನ್ನೋದು ನನಗೆ ಚಿಕ್ಕಂದಿನಿಂದ ಅಂಟಿದ ರೋಗ. ಒಂದೇ ಕಡೆ ನೆಲೆ ನಿಲ್ಲೋದು ಈ ಜೀವಕ್ಕೆ ಒಗ್ಗೋಲ್ಲ. ಅಯ್ಯನೋರು ಹೇಳಿದರು.
ನಿಜಕ್ಕೂ ಆಗಲ್ವಾ? ಪಾರುತೀಗೆ ಈ ಊರು ಅಂದ್ರೆ ತುಂಬಾ ಇಷ್ಟ. ಮತ್ತೊಬ್ಬಾಕೆ ಯಾರೋ ಕೇಳಿದರು. ಬಹುಶಃ ಪಾರುತಿ ತಾಯಿ ಇರಬೇಕು.
ಒಂದು ದಾರಿ ಇದೆ. ಗುಡ್ಡದಲ್ಲಿರೋ ಕುಚಿನಿಕೆಯನ್ನು ಬದಿಗೆ ಸರಿಸಿ, ನಾನೇ ಅಲ್ಲಿ ಉಳಿದುಬಿಡುವುದು. ಆಗ ನನ್ನ ಪ್ರಯೋಗಕ್ಕೂ ಅಡ್ಡಿ ಇರೋದಿಲ್ಲ. ನಿಮ್ಮ ಮಗಳೂ ಊರಲ್ಲಿದ್ದ ಹಾಗಾಗುತ್ತೆ. ಅಯ್ಯನೋರು ಜೋರಾಗಿ ನಕ್ಕರು.
ಉಳಿದವರೂ ನಕ್ಕರು. ಕುಚಿನಿಕೆ ಅಂದರೆ ಏನೆಂದು ಅವರಿಗೆ ಗೊತ್ತಿಲ್ಲ, ಆದರೆ ಗುಡ್ಡದಲ್ಲಿ ದೇವರಿದೆ ಅಂತ ಅವರಿಗೆ ಗೊತ್ತಿತ್ತು.
ಛೇ, ಛೇ, ಹಾಗೆಲ್ಲಾ ತಮಾಷೆಗೂ ಹೇಳುವುದು ತಪ್ಪು. ಕುಚಿನಿಕೆಯನ್ನು ಸರಿಸುವುದು? ಛೇ, ಅಯ್ಯನೋರಿಗೆ ಬೇಜಾರಾಗಿತ್ತು. ಉಳಿದವರೂ ಸುಮ್ಮನಾದರು.
ಮತ್ತೊಂದು ದೃಶ್ಯ.
ಅಯ್ಯನೋರ ಪೆಟ್ಟಿಗೆ ಮುಚ್ಚಳ ತೆರೆದಿದೆ. ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಯ್ಯನೋರ ಮುಖದಲ್ಲಿ ಗಾಬರಿ.
ಎಂಥಾ ಅನಾಹುತ ಆಗ್ಹೋಯ್ತು. ಅಯ್ಯೋ ಅಷ್ಟು ಅಮೂಲ್ಯವಾದದ್ದನ್ನು ಹೀಗ್ಯಾಕೆ ಬೇಜವಾಬ್ದಾರಿಯಿಂದ ಇಟ್ಟಿದ್ದೆ?
ಬಾಗಿಲು ಬಡಿದ ಸದ್ದು. ಅಯ್ಯನೋರು ತಡಬಡಿಸಿ ಎದ್ದು ಬಾಗಿಲು ತೆರೆದರು. ಹೊರಗಡೆ ಪಾರುತಿ ನಿಂತಿದ್ದಳು. ಮೈಯೆಲ್ಲಾ ರಕ್ತ. ಮುಖದಲ್ಲಿ ಕ್ಷುದ್ರಕಳೆ. ಕೈ ನೋಡ್ತಾರೆ, ಜಿಂಕೆ ತಲೆಯೊಂದನ್ನ ಹಿಡಿದಿದ್ದಳು.
ನಾನು ಸರಿಸಿಬಿಟ್ಟೆ. ನೀವು ಬಯಸಿದಂತೆ, ಈ ಗುಡ್ಡ ಇನ್ಮೇಲೆ ನಿಮ್ದೇ! ಅಲ್ಲಿ ಈಗ ಯಾರೂ ಇಲ್ಲ. ಈಗ ಇಲ್ಲೇ ಉಳಿದ್ಬಿಡಿ, ದಯವಿಟ್ಟು...
ಹಾಗೆ ಹೇಳ್ತಾನೇ ಅವಳು ಕುಸಿದಳು.
ಅಚ್ಯುತನಿಗೆ ಎಚ್ಚರವಾಯ್ತು. ಅವನು ಆ ಗುಡ್ಡದಲ್ಲಿದ್ದ ಅಯ್ಯನೋರ ಗುಡಿಸಲಲ್ಲಿದ್ದ. ಎದುರಿಗೆ ಶಿವು ಕುಳಿತಿದ್ದ.
ಏನಾಯ್ತು? ಅಚ್ಯುತ ಕೇಳಿದ.
ಮೊನ್ನೆ ರಾತ್ರಿ ನೀವು ಕೂಗಿದ್ದನ್ನ ನಾನು ಕೇಳ್ಸ್ಕಂಡೆ. ಗುಡ್ಡ ಹತ್ತಿ ಮೇಲ್ಬಂದು ನೋಡಿದ್ರೆ ನೀವು ಎಚ್ಚರ ತಪ್ಪಿ ಬಿದ್ದಿದ್ರಿ. ಬೆಳಗ್ಗೆ ತನಕ ಕುಂತೆ, ನೀವು ಎದ್ದೇಳ್ಲಿಲ್ಲ. ಊರಿಂದ ಆಳು ಕರ್ಕಂಡ್ ಬಂದು ನಿಮ್ಮನ್ನ ಇಲ್ಲಿ ಮಲಗ್ಸೀವ್ನಿ. ಅಯ್ಯನೋರು ಎಲ್ಲಿ? ಶಿವು ಕೇಳಿದ.
ತಾನು ಎರಡು ದಿನದಿಂದ ಮಲಗಿದ್ದೀನಿ ಎಂದು ಅಚ್ಯುತನಿಗೆ ತಿಳಿಯಿತು.
ಅವರಿನ್ನಿಲ್ಲ, ಕುಚಿನಿಕೆ ಅವರನ್ನ ಆಪೋಶನ ತಗೊಂಡಳು. ಊರಲ್ಲಿ ಜನ ಏನಂತಾರೆ? ಅಚ್ಯುತ ಕೇಳಿದ.
ಶಿವು ಮುಖದಲ್ಲಿ ಸಮಾಧಾನ, ಸಂಕಟ ಎರಡೂ ಒಟ್ಟಿಗೇ ಗೋಚರಿಸಿದವು.
ಊರಲ್ಲಿ ಯಾರ್ಗೂ ಅವರ ನೆಪ್ಪಿಲ್ಲ. ಅಯ್ಯನೋರು ಅಂದ್ರೆ ಯಾರು ಅಂತಾರೆ. ನಿಮ್ಗೊಬ್ರಿಗೇ ಅವ್ರ ನೆನ್ಪಿರೋದು. ಶಿವು ಹೇಳಿದ.
ಅಚ್ಯುತನಿಗೆ ಆಶ್ಚರ್ಯವಾಯಿತು. ಕುಚಿನಿಕೆ ಅಯ್ಯನೋರನ್ನಷ್ಟೇ ಅಲ್ಲ, ಅವರ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಳು. ಆ ರಾತ್ರಿ ಗುಡ್ಡದಲ್ಲಿದ್ದುದರಿಂದ ತನಗೂ, ಶಿವುಗೂ ಅವರ ನೆನಪಿದೆ ಎಂದು ನಂತರ ಹೊಳೆಯಿತು.
ಆ ದಿನ, ಸಂಜೆ ಹೊತ್ತಿಗೆ ಅಚ್ಯುತ ಪೂರ್ತಿಯಾಗಿ ಸುಧಾರಿಸಿಕೊಂಡಿದ್ದ. ಶಿವುಗೆ ವಿದಾಯ ಹೇಳಿ ಮತ್ತೊಂದು ಸಲ ಕೊನೆಯದಾಗಿ ಗುಡ್ಡ ನೋಡಲು ಹೊರಟ.
ಗುಡ್ಡ ಹತ್ತುತ್ತಾ ರಾತ್ರಿಯಾಯಿತು. ಹುಣ್ಣಿಮೆಯಲ್ಲಿ ಆ ಗುಡ್ಡ ಮತ್ತಷ್ಟು ಸುಂದರವಾಗಿ ಕಾಣ್ತಿತ್ತು. ಯಾರೋ ಹಾಲಿನ ಪಾತ್ರೆ ಚೆಲ್ಲಿದ್ದಾರೇನೋ ಅನ್ನುವಂತೆ ಬೆಳದಿಂಗಳು ಬಿದ್ದಿತ್ತು. ಆ ಪರ್ವತ ನೆಮ್ಮದಿಯಾಗಿ ನಿದ್ರಿಸುತ್ತಿದೆ ಎಂದು ಅವನಿಗೆ ಅನ್ನಿಸಿತು.
ಅಚ್ಯುತನಿಗೆ ಆ ರಾತ್ರಿ ಮತ್ತೆ ನೆನಪಾಯಿತು.
ಬೇರೆ ಯಾವುದಾದ್ರೂ ಒಂದು ದಾರಿಯಿರಬೇಕು - ಇವನ ಧ್ವನಿ.
ಇಲ್ಲ, ಇದೊಂದೇ ದಾರಿ ಉಳಿದಿರುವುದು - ಅಯ್ಯನೋರ ದನಿ.
ಅಚ್ಯುತ ತಾನು ಕಂಡದ್ದು ಕನಸಲ್ಲ, ಅಯ್ಯನೋರೇ ಸ್ವತಃ ಯಾರಿಗೂ ಹೇಳದ ತಮ್ಮ ಕಥೆ ಹೇಳಿದ್ದೆಂದು ನಂಬಿದ್ದ.
ಅಚ್ಯುತ ಆಗಲೇ ಗುಡ್ಡದ ತುದಿ ತಲುಪಿದ್ದ. ಮತ್ತದೇ ಬಂಡೆಯ ಬಳಿ, ತಲೆಯೆತ್ತಿ ನೋಡಿದ. ಆಗ ಅದು ಕಾಣಿಸಿತು!
ಆ ಬಂಡೆಯ ಮೇಲೆ ನಂಬಲಸಾಧ್ಯವಾಗುವಷ್ಟು ಎತ್ತರಕ್ಕೆ ಸುರುಳಿಯಾಗಿ ಸುತ್ತಿಕೊಂಡು ಅಜಗರವೊಂದು ಕುಳಿತಿತ್ತು. ಇವನನ್ನೇ ದಿಟ್ಟಿಸಿ ನೋಡುತ್ತಿತ್ತು.
ಒಬ್ಬ ವ್ಯಕ್ತಿಯ ಆತ್ಮವನ್ನರಿಯುವುದು ಎಷ್ಟು ವಿಸ್ಮಯಕಾರಿ ಸಂಗತಿ ಅಲ್ಲವೇ ಕುಚಿನಿಕೆ? ಅಚ್ಯುತ ಕೇಳಿದ.
ಇವನನ್ನೇ ದಿಟ್ಟಿಸಿ ನೋಡುತ್ತಿದ್ದ ಅಜಗರ, ಸುರುಳಿಯಾಗಿ ಸುತ್ತಿದ್ದ ತನ್ನ ದೇಹದ ಮೇಲೆ ತಲೆಯನ್ನಿಟ್ಟು, ಕಣ್ಣು ಮುಚ್ಚಿ, ಒಮ್ಮೆ ಜೋರಾಗಿ ಭುಸುಗುಟ್ಟಿತು.
ಅದು ನಿಟ್ಟುಸಿರು ಬಿಟ್ಟಿತೋ, ಹೌದೆಂದಿತೋ ಅಚ್ಯುತನಿಗೆ ಗೊತ್ತಾಗಲಿಲ್ಲ.
ಅವನು ಅದನ್ನೇ ನೋಡುತ್ತಾ ಕುಳಿತ.
ವಿಭಿನ್ನ ರೀತಿಯ ಕಥೆ.. ಇಷ್ಟವಾಯಿತು, ನೀವು ಕಥೆ ಒಂದೇ ಸಂಚಿಕೆಯಲ್ಲಾಕ್ಕಿದ್ದು ಒಳ್ಳೆಯದಾಯಿತು ಕಂತುಗಳಿಗಿಂತ ಈ ಕಥೆ ಹೀಗೆ ಸರಿ ಎನಿಸಿತು... ಪ್ರಪಂಚದಲ್ಲಿ ಎಷ್ಟೋ ವಿಸ್ಮಯಕಾರಿಗಳು ನೆಡೆಯುತ್ತವೆ.
ReplyDeleteಮತ್ತೆ ಒಳ್ಳೆ ಕಥೆಗಳ ನಿರೀಕ್ಷೆಯಲ್ಲಿ
ವಂದನೆಗಳು
Anand
ReplyDeletekathe thumba chennagide. Saragavagi odisikondu hogute. Mai jummannisuvantha vivarangegalu.
ಕಥೆ ನಿಮಗಿಷ್ಟವಾಗಿದ್ದು ತಿಳಿದು ಖುಶಿಯಾಯ್ತು. ಮತ್ತೊಮ್ಮೆ ಎಂದಾದರೂ ಮನಸಾದಲ್ಲಿ, ಇನ್ನೊಂದಿಷ್ಟು ಕಥೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡುವೆ.
ReplyDeleteಆನಂದ....
ReplyDeleteವಿಸ್ಮಯ, ರೋಚಕತೆ.. ಕುತೂಹಲ ಹುಟ್ಟಿಸುವ ಕಥೆ ಬಹಳ ಇಷ್ಟವಾಯಿತು..
ಒಂದೆ ಗುಟುಕಿಗೆ ಓದಿ ಮುಗಿಸಿದೆ...
ನಿಮ್ಮ ಬರವಣಿಗೆಯೂ ಇದಕ್ಕೆ ಕಾರಣ...
ಚಂದದ ಕಥೆಗೆ ಅಭಿನಂದನೆಗಳು..
ನಿಜಕ್ಕೂ ರೋಚಕ ಕಥೆ..ತುಂಬಾ ಚೆನ್ನಾಗಿದೆ.. :)
ReplyDeleteಆನ೦ದ.
ReplyDeleteನಿರೂಪಣೆ ಅತ್ಯ೦ತ ಸು೦ದರವಾಗಿದೆ.
ಕನ್ನಡಕ್ಕೆ ತ೦ದದ್ದು ಅನಿಸಲಿಲ್ಲ.
ಕನ್ನಡದ್ದೆ ಅನಿಸಿತು.
ಪ್ರಯತ್ನ ಸದಾ ಜಾರಿಯಲ್ಲಿರಲಿ.
ಪ್ರಕಾಶ್ ಸರ್,
ReplyDeleteಕಥೆ ಮತ್ತು ಬರವಣಿಗೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಹಿಮ (snow !),
ಸ್ವಾಗತ, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
ವಿಜಯಶ್ರೀ,
ಕಥೆ ಕನ್ನಡದ್ದೇ ಅನಿಸಿದರೆ, ನಾನು ಪಟ್ಟ ಶ್ರಮ ಹುಸಿ ಹೋಗಲಿಲ್ಲ.
ಖಂಡಿತ, ಮುಂದೆಂದಾದರೂ ಮತ್ತಷ್ಟು ಕಥೆಗಳನ್ನು ತರುವ ಪ್ರಯತ್ನ ಮಾಡುವೆ.
ಕೂತೂಹಲಕಾರಿ ಕಥೆ.. ಹಿಡಿಸಿತು...
ReplyDeleteಧನ್ಯವಾದಗಳು...ಬರೆಯುತ್ತಿರಿ.
ಮನಮುಕ್ತಾ,
ReplyDeleteನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
HEy, keep it up.. chennagide kathe.......
ReplyDeleteThanx Arun!
ReplyDeleteAnand,
ReplyDeleteI am Anand, hahha,
nimma kate ivattu odide, Eno gunigittu adralli, anuvaada andiddeeddiri, ellinda anta spashta Aaglilla, idenu adhyaatmaana, Eneno gondala anisitu, nivfyaake idanna anuvaadisidiri antalu aniside, helteera . . . yaavadakku nimma barvanige olle khushi koduvanthadu