Saturday, December 5, 2009

ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್
ನಲ್ಲಿ ಗೊಣ್ಣೆ ಒರೆಸೋ ಹುಡುಗ
ಮಾರುವ ತಾಜಾ ತಾಜಾ ಹಣ್ಣುಗಳು
ನಮ್ಮ ಆಟೋ ಹತ್ತಿಯಾನೆಂದು
ಕಾತರಿಸುವ ಕಣ್ಣುಗಳು

ನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲ
ರೋಡು ತುಂಬಾ ಟಾರು
ದಾರಿಯುದ್ದಕೂ ಬಾರು
ಕೊಳಕು ಮೈಯ ಹುಡುಗ
ಹಣ್ಣು ಮಾರುವುದಿಲ್ಲ

ಊರಿಗಿಳಿದೊಡನೇ ಕೈ ಕುಲುಕಿ
ದಾರಿ ತುಂಬಾ ನಗು ಚೆಲ್ಲಿ
ಉಡಿ ತುಂಬಾ ಮಾತು ತುಂಬಿ
ಮನದೊಂದಿಷ್ಟು ಲಗೇಜು ಇಳಿಸುವವರು

ನನ್ನೂರಲ್ಲೀಗ ಡಿಶ್ ಟೀವಿ
ಮಾತೆಲ್ಲಿ ಕಳೆದುಹೋದವು
ಕಾತರಿಸಿವೆ ಕಿವಿ
ಉಡಿ ಖಾಲಿ, ಗುಡಿ ಖಾಲಿ
ಊರ ಮುಂದಿನ ಕಟ್ಟೆ ಖಾಲಿ

ಮನೆ ತಲುಪುವ ಮುನ್ನ
ನಡೆದ ಹಾದಿಯ ಮೇಲೆ
ಸಾಲು ಮರದ ತಂಪು
ಭತ್ತ, ಬೇವಿನ ಕಂಪು

ನನ್ನೂರಲ್ಲೀಗ ಆಮ್ಲಜನಕದ ಕೊರತೆ
ಕೊಳೆತು ಗಬ್ಬೆದ್ದು ನಾರುವ ಜನತೆ
ಊರ ತುಂಬಾ ವಾಹನ
ಮುಗಿಲು ತಬ್ಬಿದ ಕಟ್ಟಡಗಳ ಮೇಲೆ
ಮೆರೆದಿದ್ದ ವಾಮನ

ನನ್ನೂರಲ್ಲೀಗ ನನ್ನ ಮನೆಯಿಲ್ಲ
ಕರೆದು ಕರೆದೊಯ್ಯಲು ಊರಲ್ಲಿ ಯಾರಿಲ್ಲ
ನಡೆದ ಹಾದಿಯ ಮೇಲೆ ಹೆಜ್ಜೆ ಗುರುತಿಲ್ಲ
ಸುಪ್ತ ಮನದೊಳಗೊಂದು ತಪ್ತ ಕನಸು
ಸಪ್ತವರ್ಣದ ಮೀನು ಮಿಂಚಿ ಮರೆಯಾಗಿದ್ದು
ಇನ್ನೂ ಅರಿವಾಗಿಲ್ಲ

19 comments:

  1. wah!! ತುಂಬಾ ತುಂಬಾ ಚೆನ್ನಾಗಿದೆ. ನೀವು ಇದುವರೆಗೆ ಬರೆದಿರೋದೆಲ್ಲಕ್ಕಿಂತ different ಆಗಿದೆ..
    ನಿಮ್ಮವ,
    ರಾಘು.

    ReplyDelete
  2. ಎಲ್ಲದಕ್ಕೂ ಆಧುನಿಕತೆಯ ಮುಖವಾಡ.. ನಮಗೆ ಅಂದು ಆಪ್ತವಾಗಿದ್ದ ನೈಜತೆ ಮಾಯವಾಗಿದೆ.. ಮಾತು, ನಗು, ಭಾವನೆ ಎಲ್ಲವೂ ಕೃತಕ..
    ಕವಿತೆ ಇಷ್ಟವಾಯ್ತು...

    ReplyDelete
  3. ಕಾಲ ತಂದ ಬದಲಾವಣೆ; ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು.
    ಕವನ ಗಾಢವಾಗಿದೆ.

    ReplyDelete
  4. ಆನಂದ್ ಸರ್,
    ತುಂಬಾ ಸಕತ್ತಾಗಿದೆ....
    ಮಾನವ ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾ,
    ತನ್ನದಲ್ಲದ್ದಕ್ಕೆ ಒಗ್ಗಿಕೊಳ್ಳುತ್ತಾ ,
    ತನ್ನತನ ಮರೆಯುತ್ತಾ,
    ಜಗವನ್ನ ಹಾಳುಗೆದುವುತ್ತಿದ್ದಾನಾ......
    ಗೊತ್ತಾಗುತ್ತಿಲ್ಲ...... ನಿಮ್ಮ ಕವನ ತುಂಬಾ ಅರ್ಥ ಕೊಡುತ್ತಾ ಇದೆ......

    ReplyDelete
  5. ಆನ೦ದ ಅವರೇ
    ಕವನ ಚೆನ್ನಾಗಿದೆ.
    ವಾಮನನನ್ನು ಹೊಗೆಯೆ೦ಬ ವಿಲನ್ ಗೆ ಹೋಲಿಸಿದ್ದೀರ ... ?

    ReplyDelete
  6. ಕವಿತೆ ಚೆನ್ನಾಗಿದೆ ಆನಂದ್ ಅವರೆ. ಹಳ್ಳಿಗಳೀಗ ಹಳ್ಳಿಗಳಾಗಿ ಉಳಿದಿಲ್ಲ. ಬದಲಾವಣೆ ಅನಿವಾರ್ಯವಾದರೂ ಸೂಕ್ಷ್ಮ ಮನಸ್ಸಿಗೆ ನೋವಾಗುವುದಂತೂ ಸತ್ಯ.

    ReplyDelete
  7. ರಾಘು,
    ಬದಲಾವಣೆಯನ್ನು ಗುರುತಿಸಿದ್ದೀರ !
    ಇತ್ತೀಚಿಗೆ ಕಾಯ್ಕಿಣಿಯವರ ಒಂದಿಷ್ಟು ಸಂಕಲನಗಳನ್ನು ಓದ್ತಾ ಇದ್ದೀನಿ. ಅವರಷ್ಟು ಲೀಲಾಜಾಲವಾಗಿ ಆಡುಭಾಷೆಯನ್ನು ಕಾವ್ಯದೊಳಗೆ ಎಳೆದು ತರುವುದು ತುಂಬಾ ಕಷ್ಟ. ಹಾಗಂತ ಅವರ ಶೈಲಿಯನ್ನ ಕಾಪಿ ಮಾಡ್ಲಿಕ್ಕೆ ಹೊರಟಿಲ್ಲ. ಆದರೆ ಆಡುಭಾಷೆ ಮತ್ತು ಕಾವ್ಯಭಾಷೆಯನ್ನು ಸೇರಿಸಿ ಬರೆಯುವ ಒಂದು ಪ್ರಯತ್ನ ಮಾಡ್ತಾ ಇದ್ದೀನಿ. ನೋಡೋಣ ಎಲ್ಲೀತನಕ ಹೋಗ್ಲಿಕ್ಕಾಗುತ್ತೆ ಅಂತ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. :)

    ReplyDelete
  8. ದಿಲೀಪ್,
    ಆಧುನಿಕತೆಯ ಹೆಸರಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುವುದು ಎಷ್ಟು ಸರಿ? ಹಿಂದಿನವರು ತೋರಿಸುವ ಆ ಅಪ್ಯಾಯತೆ ನಾವು ಯಾಕೆ ಕಳೆದುಕೊಳ್ತಿದ್ದೀವಿ...
    ಹೀಗೇ ಪ್ರಶ್ನೆಗಳು ಇನ್ನೂ ಇವೆ, ಆದರೆ ಯಾಕೋ ನನಗೆ ಉತ್ತರಗಳೇ ಸಿಕ್ತಿಲ್ಲ.
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  9. ಸುನಾಥ ಕಾಕಾ,
    ಬದಲಾವಣೆ ಕಾಲದ ನಿಯಮ, ಒಪ್ಪಿಕೊಳ್ಳೋಣ.
    ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಿರಲಿ, ಆದರೆ ನಾವು ಪ್ರತಿಪಾದಿಸುವ ಮೌಲ್ಯಗಳಲ್ಲಿ ಬದಲಾವಣೆ ಬಂದಾಗ ( ಸರಿಯಾದ ದಿಕ್ಕಿನಲ್ಲಿಲ್ಲದ ) ಒಪ್ಪಿಕೊಳ್ಳೋದಕ್ಕೆ ಹಿಂಸೆಯಾಗುತ್ತೆ. ಇದನ್ನೆಲ್ಲಾ ಬರೆಯೋಣ ಅಂತಿದ್ದೆ, ಆದರೆ ಮನವೇಕೋ ಕೈ ತಡೆದಿತ್ತು.
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ದಿನಕರ ಮೊಗೇರ,
    ನನಗೂ ಗೊತ್ತಾಗುತ್ತಿಲ್ಲ ಸರ್. ನಿಮ್ಮನ್ನೆಲ್ಲಾ ಕೇಳೋಣವೆಂದೇ ಇಲ್ಲಿ ಇದನ್ನು ಹಾಕಿದ್ದೀನಿ. ನೋಡೋಣ. ನಡೀತಾ ಇರೋ ದಾರಿ ಇನ್ನೂ ಮುಗಿದಿಲ್ಲ.
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್

    ReplyDelete
  11. ವಿಜಯಶ್ರೀಯವರೆ,
    ಮೂರು ಪಾದದ ಜಾಗ ಕೇಳಿ ಅಂಥಾ ಬಲಿ ಚಕ್ರವರ್ತಿಯನ್ನೇ ಪಾತಾಳಕ್ಕೆ ತಳ್ಳಿಬಿಟ್ಟವನು ವಾಮನ.
    ಅದೇ ರೀತಿ ಮತ್ತಾರೋ ಅದೃಶ್ಯ ವಾಮನ ಮೇಲಿನಿಂದ ನಮ್ಮನ್ನೆಲ್ಲಾ ತುಳೀತಾ ಇದ್ದಾನಾ ಅಂತ ಅನುಮಾನದಲ್ಲಿ ಆ ಪ್ರಯೋಗ ಮಾಡಿದೆ ಅಷ್ಟೇ... :)
    ನಿಮ್ಮ ಮೆಚ್ಚುಗೆಗೆ ನನ್ನಿ.

    ReplyDelete
  12. ಸುಮರವರೆ,
    ನಿಜ, ಅನಿವಾರ್ಯ ಕಾರಣಗಳಿಂದ ಬದಲಾದ ಪರಿಸರಕ್ಕೆ, ಹೊಂದಿಕೊಳ್ಳಲಾಗದೆ ಅದರಲ್ಲೇ ತೊಳಲಾಡುವುದು ಕೆಲವೊಮ್ಮೆ ಯಾತನಾದಾಯಕ.
    ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  13. ಅರಿವಾದರೂ ಏನೂ ಮಾಡಲಾಗದ ಅನಿವಾರ್ಯತೆ ಇನ್ನಷ್ಟು ಚುಚ್ಚುತ್ತದೆ ಅಲ್ಲವೇ? ನಮ್ಮದೇ ತಪ್ಪೋ ಏನೋ? ಎಂಬ ಅಪರಾಧಿ ಪ್ರಜ್ಞೆ ಕೂಡ ಕಾಡುತ್ತದೆ!
    ಕವನ ತುಂಬಾ ಚೆನ್ನಾಗಿದೆ.

    ReplyDelete
  14. ಜ್ಯೋತಿ,
    ಗೊತ್ತಿದ್ದೂ ಅಸಹಾಯಕನಾಗುವುದಕ್ಕಿಂತ, ಗೊತ್ತಿರದ ಅಮಾಯಕನಾಗಿರುವುದು ಮೇಲು. Ignorance is bliss!
    ಕಡೇಪಕ್ಷ ಪಾಪಪ್ರಜ್ಞೆ ಇರಲ್ಲ. :)
    ನಿಮಗೇನನ್ನಿಸುತ್ತದೆ?
    ನನ್ನ ಬ್ಲಾಗ್ ಗೆ ಸ್ವಾಗತ, ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  15. ಗೊತ್ತಾದ ಮೇಲೆ ಅಮಾಯಕನಾಗಿರಲಾಗದು..ತಿಳಿದುಕೊಳ್ಳಲು ಪ್ರಯತ್ನಿಸದಿದ್ದರೆ ಆಲಸಿ ಎನಿಸುತ್ತೇವೆ..
    ಏನು ಮಾಡುವುದು?

    ReplyDelete
  16. ಆನಂದ್ ನೀವು ನನ್ನ ಊರಿಗೆ ಹೋಗಿ ಬಂದಿರೇನೋ ಎನುವಷ್ಟು ಕಣ್ನಿಗೆ ಕಟ್ಟಿತು ನಿಮ್ಮ ಕವನ...ನನ್ನ ಸ್ಕೂಲಿನ ದಿನಗಳಲ್ಲಿ...ಸಂಜೆ ಸ್ಕೂಲಿನ ನಂತರ ನೇರಳೆ ತೋಪಿಗೆ ಅಥವಾ ಮಾವಿನ ತೋಪಿಗೆ ಹೋಗಿ ಚಡ್ಡಿಯೆಲ್ಲಾ ಕೊಳಕುಮಾಡಿಕೊಂಡು ಮನೆಗೆ ಕಳ್ಳಹೆಜ್ಜೆ ಇಡುತ್ತಾ ಒಳನುಗ್ಗುತ್ತಿದ್ದುದು ನೆನಪಷ್ಟೆ..ಮೊನ್ನೆ ಊರಿಗೆ ಹೋದಾಗ..ನೇರಳೆ, ಮಾವಿನ ತೋಪಿರಲಿ ಆ ಜಾಡೇ ಕಾಣುತ್ತಿಲ್ಲ...ಭಜನೆ ಮನೆಯಿದ್ದ ಜಾಗದಲ್ಲಿ ದಾಸರ ಮೊಮ್ಮಗ ಬಾರ್ ನಡೆಸ್ತಿದ್ದಾನೆ....ಬಹಳ ಚನ್ನಾಗಿ ಮೂಡಿದೆ ಭಾವನೆಗಳ ಛಾಪು....ಸೂಪರ್...

    ReplyDelete
  17. @ಶಿವಪ್ರಕಾಶ್
    Thanx!

    @ಆಜಾದ್ ಸರ್,
    ಇಲ್ಲಿ ಬರುವ ಊರು, ಆರ್.ಕೆ.ಲಕ್ಷ್ಮಣರ common man ತರಹ ಯಾರ ಊರಿಗೆ ಬೇಕಾದರೂ ಹೋಲಿಸಬಹುದು.
    ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.

    ReplyDelete
  18. kavana thumba chennagide, balyada nenapayithu.

    ReplyDelete