Tuesday, December 1, 2009

ನವಿಲುಗರಿ ಮರಿ ಹಾಕ್ತುಏ ಹಾಗಲ್ವೋ, ಸುಮ್ನೆ ಪುಸ್ತಕದ ಹಾಳೆ ತಿರುಗಿಸ್ತಿರಬೇಕಾದ್ರೆ ಎಲ್ಲೋ ಮಧ್ಯೆ ಕಣ್ಮುಚ್ಚಿ ಇಟ್ಬಿಡಬೇಕು. ಆಮೇಲೆ ಏನಾದ್ರೂ ಒಂದು ಬೇಡ್ಕೊ. ಬೆಳಗ್ಗೆ ತನಕ ಪುಸ್ತಕ ತೆಗೀಬೇಡ. ಬೆಳಗ್ಗೆಗೆ ನವಿಲುಗರಿ ಮರಿ ಹಾಕಿದ್ರೆ ನಾವ್ ಕೇಳ್ಕೊಂಡಿದ್ದು ನಿಜವಾಗುತ್ತಂತೆ.

ನಾನು ನಕ್ಕಿದ್ದೆ. ಹೋಗೇ ಹುಚ್ಚಿ, ಅದ್ಹೇಗೇ ನವಿಲುಗರಿ ಮರಿ ಹಾಕುತ್ತೆ? ನವಿಲೇ ಇರಲ್ಲ ಕಾವು ಕೊಡೋಕೆ?

ಹೌದಲ್ವೇ, ಅವಳೂ ಸ್ವಲ್ಪ ಹೊತ್ತು ಯೋಚನೆ ಮಾಡಿದ್ದಳು. ಏನೂ ಗೊತ್ತಾಗ್ಲಿಲ್ಲ ಅಂತ ಕಾಣುತ್ತೆ. ಏ ಹೋಗೋ ಅದೆಲ್ಲಾ ಆಗುತ್ತೆ. ರಾಗಿಣಿ, ಅವಳ ಪುಸ್ತಕದಲ್ಲಿ ಮರಿ ಹಾಕಿದ್ದನ್ನ ಎಲ್ರಿಗೂ ತೋರಿಸಿದ್ಳು ಮೊನ್ನೆ. ನಾನೂ ನೋಡಿದ್ದೆ. ಅವ್ರಪ್ಪ ಮಾರನೇ ದಿನಾನೇ ಶೆಟ್ರ ಅಂಗಡಿಯಿಂದ ಸರ ಬೇರೆ ಕೊಡ್ಸಿದ್ರು.

ನಾನಾಗ ಎಷ್ಟನೇ ಕ್ಲಾಸೋ ನೆನಪಿಲ್ಲ. ಅವಳೆದುರು ನಕ್ಕಿದ್ರೂ ನಾನೂ ಬಹಳ ದಿವಸ ಪುಸ್ತಕದ ಮಧ್ಯೆ ನವಿಲುಗರಿ ಇಡ್ತಿದ್ದೆ. ನವಿಲುಗರಿ ಮೊಟ್ಟೆ ಇಟ್ಟಿದೆಯಾ ಆಂತ ರಾತ್ರಿ ಎದ್ದು ಪುಸ್ತಕ ಅಲ್ಲಾಡಿಸಿ ಶಬ್ದ ಬರುತ್ತಾ ಅಂತ ಕೇಳ್ತಿದ್ದೆ. ಒಂದಿನಕ್ಕೂ ಅದು ಮರಿ ಹಾಕಲಿಲ್ಲ. ನನ್ಹತ್ರ ಇರೋದು ಗಂಡು ನವಿಲುಗರಿ ಕಣೇ. ಹೆಣ್ಣು ಮಾತ್ರ ಮರಿ ಹಾಕುತ್ತೆ ಅಂತ ಒಂದಿನ ಹೇಳಿದ್ದೆ.

ಗಂಡ್ಯಾವ್ದು, ಹೆಣ್ಯಾವ್ದು ಅಂತ ಗುರುತಿಸೋದು ಹೇಗೆ? ಕೇಳಿದ್ಳು.

ಇಬ್ರೂ ಸ್ವಲ್ಪ ಹೊತ್ತು ಯೊಚಿಸಿ ಗೊತ್ತಾಗ್ದಿದ್ದ ಮೇಲೆ ರಾಗಿಣೀನ ಕೇಳಿದ್ರಾಯ್ತು ಅಂತ ಸುಮ್ಮನಾದ್ವಿ.

ರಾಗಿಣಿಗೆ ಭಾರೀ ಜಂಬ, ಎಷ್ಟ್ ಕೇಳಿದ್ರೂ ಹೇಳ್ಲಿಲ್ಲ.

ಹೈಸ್ಕೂಲಿಗೆ ಬರೋ ಹೊತ್ತಿಗೆ ನನ್ಹತ್ರ ನವಿಲುಗರಿ ಇರಲಿಲ್ಲ. ಅವಳು ಮಾತ್ರ ಅದೊಂದು ದೊಡ್ಡ ಆಸ್ತಿಯೇನೋ ಅನ್ನೋ ಹಾಗೆ, ಕ್ಲಾಸಿಂದ ಕ್ಲಾಸಿಗೆ, ಪುಸ್ತಕದಿಂದ ಪುಸ್ತಕಕ್ಕೆ ದಾಟಿಸ್ತಾನೇ ಬಂದಿದ್ಳು.

ಏ ಇನ್ನೂ ನಂಬ್ತಿಯೇನೇ ಅದನ್ನೆಲ್ಲಾ ಅಂತ ಕೇಳಿದ್ರೆ, ನೀ ಸ್ವಲ್ಪ ಸುಮ್ನಿರ‍್ತೀಯಾ ಅಂತ ಗದರಿಸೋಳು.

ಕಾಲೇಜಿಗೆ ಹೋಗೋವಾಗ ’ಏನೇ ಮರಿ ಹಾಕ್ತಾ’ ಅಂತ ಕೇಳಿದ್ರೆ? ’ಅವಾಗೆಲ್ಲ ಎಷ್ಟು ಮಜ ಇರ್ತಿತ್ತು ಅಲ್ವಾ’ ಅಂತ ಗರೀನ ತನ್ನ ಕೆನ್ನೇಗೆ ಒತ್ತಿಕೊಳ್ಳೋಳು.

ನಾನಾದ್ರೂ ಆ ಗರಿ ಆಗ್ಬಾರ‍್ದಾ ಅಂತ ಆ ಗರಿ ಮೇಲೆ ಹೊಟ್ಟೆಕಿಚ್ಚು ನಂಗೆ.

ಒಂದಿನ ಗರೀನ ಕದ್ದು ಮನೆಗೊಯ್ದಿದ್ದೆ. ಅವಳದೆಷ್ಟು ಸಂಕಟ ಪಟ್ಟು ಅದನ್ನು ಹುಡುಕಿದ್ಳೂಂದ್ರೆ, ನಂಗೇ ತಡಕೊಳ್ಳೋಕಾಗ್ದೆ, ’ತಗೋಳೇ ಮನೆಗೆ ಹೋಗೋ ದಾರೀಲಿ ಸಿಕ್ತು’ ಅಂತ ವಾಪಸ್ ಕೊಟ್ಬಿಟ್ಟಿದ್ದೆ. ಅವಳ ಕಣ್ಣಲ್ಲಿ ಮಿಂಚು.

ಓದು ಮುಗಿದ ಮೇಲೆ ಅವಳು ಮನೇಲಿ ಉಳಿದಳು. ನಾನು ಊರು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋದೆ. ಊರಿಗ್ಹೋದಾಗೆಲ್ಲಾ ಸಿಗೋಳು.
ನೀನಿಲ್ದಿದ್ರೂ ಅವಾಗವಾಗ ಮನೇಗೆ ಬಂದು ಹೋಗ್ತಾಳೆ ಕಣೋ ಅಂತ ಅಮ್ಮ ಹೇಳ್ತಿದ್ರು.

ಕಣ್ಣು ಮುಚ್ಚಿ ತೆಗೆಯೋದರಳೊಗೆ ಅವಳಿಗೆ ಪ್ರಸ್ತಾಪ ಬಂದು, ನಿಶ್ಚಿತಾರ್ಥ ಆಗಿ ಮದುವೇನೂ ಆಗ್ಹೋಯ್ತು. ಅವಳೇ ಖುದ್ದಾಗಿ ಬಂದು ಕಾರ್ಡು ಕೊಟ್ಟಿದ್ದಳು. ಅವಳ ಕಣ್ಣು ತುಂಬಿ ಬಂದಿತ್ತಾ? ಬರ್ತೀನಿ ಕಣೋ ಅಂತ ಓಡ್ಹೋಗ್ ಬಿಟ್ಟಿದ್ದಳು.

ಈಗ್ಲೂ ಊರಿಗೆ ಹೋದಾಗ ಸಿಕ್ತಾಳೆ. ಈಗ ನವಿಲುಗರಿ ಮರಿ ಹಾಕಿದೆ. ಅವಳದನ್ನ ಕಂಕುಳಲ್ಲಿ ಎತ್ತುಕೊಂಡು ಅಡ್ಡಾಡುತ್ತಿರುತ್ತಾಳೆ.
.

12 comments:

 1. ನವಿಲುಗರಿಯಂತೆಯೇ ನವಿರಾದ ಕತೆ ಇದು!

  ReplyDelete
 2. ನವಿಲು ಗರಿ ಮಾರಿಹಕಿತೋ ಇಲ್ಲವೋ ಗೊತ್ತಿಲ್ಲ. ಆದ್ರೆ ನವಿಲಿನಂತ ಹುಡಿಗಿ ಮರಿ ಹಾಕಿದಳು.
  ನಿಮ್ಮ ಬರವಣೆಗೆಯ ಶೈಲಿ ತುಂಬಾ ಚನ್ನಾಗಿದೆ.
  ಲೇಖನ ಓದುವಾಗ ನನ್ನ ಮನ ಕಲುಕಿತು.

  ReplyDelete
 3. ಕಥೆ ಚೆನ್ನಾಗಿದೆ.. ನಿರೂಪಿಸಿದ ಶೈಲಿ ಇಷ್ಟವಾಯ್ತು...

  ReplyDelete
 4. ನಿಮ್ಮ ಬ್ಲಾಗಿಗೆ ಮೊದಲ ಭೇಟಿ.. ಚ೦ದದ ಕಥೆಗೆ ಭಾವತು೦ಬಿದ ಬರಹ ಚೆನ್ನಾಗಿದೆ ಇಷ್ಟ ಆಯ್ತು. :)

  ReplyDelete
 5. ಬಾಲ್ಯದ ಕಲ್ಪನೆಗಳು, ಈಗದರ ನೆನಪು ಎಷ್ಟು ಚ೦ದ.. ನವಿಲುಗರಿಯ೦ತೆ...!!!!

  ReplyDelete
 6. ಸರಳ ಸುಂದರ ಬರಹ. ಚೆನ್ನಾಗಿದೆ.

  ReplyDelete
 7. ನಾನು ಕೂಡ ಚಿಕ್ಕವನಿರುವಾಗ ನವಿಲುಗರಿಯನ್ನು ಪುಸ್ತಕದಲ್ಲಿ ಇಡ್ತಿದ್ದೆ... ಅದು ನನ್ನ ಅಜ್ಜಿ ಮನೆಯಲ್ಲಿ ನನ್ನ ಅಕ್ಕನ ಹತ್ರ ತಕೊಂಡಿದ್ದು... ಆ ನೆನಪುಗಳು ಮಾಸದೆ ಹೇಗೆ ನೆನಪಿನಲ್ಲೇ ಇರುತ್ತೆ..!!
  ಚೆನ್ನಾಗಿದೆ ಬರಹ..
  ನಿಮ್ಮವ,
  ರಾಘು.

  ReplyDelete
 8. ಆನಂದ...

  ಸುಂದರವಾಗಿ, ಹೃದಯಸ್ಪರ್ಷಿಯಾಗಿದೆ...

  ಹೇಳಲಾಗದೆ
  ಒಳಗೇ ಉಳಿದು ಹೋದ
  ಭಾವಗಳ ನೆನಪು
  ನೋವಾಗಿದ್ದರೂ ಒಂಥರಾ ಸುಖ....

  ಚಂದದ ಬರಹ..
  ಅಭಿನಂದನೆಗಳು...

  ReplyDelete
 9. ಸುನಾಥ ಕಾಕಾ,
  ನೆನಪುಗಳು ಯಾವಾಗಲೂ ನವಿರಾಗಿಯೇ ಇದ್ದರೆ ಎಷ್ಟು ಚೆನ್ನ ಅಲ್ಲವೇ...
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  ಶಿವಪ್ರಕಾಶ್,
  ಹೌದು ಕಣ್ರೀ, ಅಲ್ಲಾ ಹೀಗೇ ಆದರೆ ನನ್ನಂಥೋರ ಕತೆ ಏನಂತೀನಿ.. :)
  ನನ್ನ ಬರಹ, ಶೈಲಿ ಮೆಚ್ಚಿದ್ದಕ್ಕೆ ಧನ್ಯವಾದಗಳು

  ದಿಲೀಪ್,
  ಧನ್ಯವಾದಗಳು

  ಮುಸ್ಸಂಜೆ ಇಂಪು,
  ಪರಮೇಶ್ವರ ಹೆಗಡೆಯವರಿಗೆ ಸ್ವಾಗತ
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಹೀಗೇ ಬರ್ತಾ ಇರಿ :)

  ಚುಕ್ಕಿಚಿತ್ತಾರ,
  ವಿಜಯಶ್ರೀಯವರೆ, ಬಾಲ್ಯದ ನೆನಪು ಯಾವುದಾದ್ರೂ ಮಧುರ ಅಲ್ವಾ ( ಮೇಷ್ಟ್ರು ಹೊಡೆದಿದ್ದನ್ನ ಈಗ ನೆನಸಿಕೊಳ್ಳೋಕೆ ಒಂಥರಾ ಮಜವಾಗೇ ಇರುತ್ತೆ.. )

  ತೇಜಸ್ವಿನಿ ಹೆಗಡೆ,
  ಧನ್ಯವಾದಗಳು

  ರಾಘು,
  ನಾವು ಮರೀತೀವೆಂದರೂ ನೆನಪುಗಳು ನಮ್ಮನ್ನು ಬಿಟ್ಟು ಹೋಗಲ್ಲ.
  ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್

  ಸಿಮೆಂಟು ಮರಳಿನ ಮಧ್ಯೆ,
  ನೆನಪುಗಳು ಬರೀ ಚಿತ್ರಗಳಾಗಿರದೇ ಜೊತೆಯಲ್ಲೇ ನೋವು ನಲಿವೆರಡನ್ನೂ ತರುತ್ತವೆ.
  ಪ್ರಕಾಶ್ ಸರ್, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  ReplyDelete
 10. ಛೇ! ಏನ್ರಿ ನೀವು ? Invitation ಕೊಡೋಕೆ ಬಂದಾಗ್ಲಾದ್ರೂ ಹೇಳಿದ್ದಿದ್ರೆ ನವಿಲು ಗರಿಯ ಮರಿ ನಿಮ್ದೇ ಆಗ್ತಿರ್ಲಿಲ್ವಾ ?

  ReplyDelete
 11. ನಿಮ್ಮಗಳ ಬೆಂಬಲ ಹೀಗಿರುತ್ತೆ ಅಂತ ಗೊತ್ತಿದ್ದರೆ ನವಿಲನ್ನ ಹೋಗ್ಲಿಕ್ಕೇ ಬಿಡ್ತಿರಲಿಲ್ಲ. :)
  ಅರೆ ಇದ್ಯಾವ್ದು ಹಂಸ ಈ ಕಡೇನೇ.................

  ReplyDelete