Wednesday, December 9, 2009

ನಾನು ನಾಳೆಯಿಂದ ಇರಲ್ಲ

ಇವತ್ತೇ ನನ್ನ ಕೊನೆಯ ದಿನ.

ನನಗೆ ಗೊತ್ತಾಗಿ ಹೋಗಿತ್ತು. ಬೆಳಗ್ಗೆ ಎದ್ದು ಮುಖ ತೊಳೆದು, ಬ್ರಶ್ ಮಾಡೋವಾಗ ಯೋಚ್ನೆ ಬಂದಿತ್ತು. ಅಕಸ್ಮಾತ್ ಇದೇ ನನ್ನ ಕೊನೆಯ ದಿನ ಅಂತ ಗೊತ್ತಾಗಿ ಬಿಟ್ಟರೆ? ತಿಂಡಿ ತಿನ್ನೋ ಹೊತ್ತಿಗೆ ಖಾತರಿಯಾಗಿತ್ತು. ನನ್ನ ಪಾಲಿಗೆ ನಾಳೆ ಅನ್ನೋದಿಲ್ಲ. ಅದು ವಿಚಿತ್ರ ಅಂತ ಅನ್ನಿಸಲೇ ಇಲ್ಲ. ನಾಳೆಯಿಂದ ಆಫೀಸಿಗೆ ಬರೋಲ್ಲ ಅಂತ ಬಾಸ್ ಗೆ ಹೇಳಿಬಿಡ್ಲಾ ಯೋಚಿಸ್ತಾ ಇದ್ದೆ. ಅಷ್ಟರಲ್ಲಿ. ಅವಳು ಕಾಫಿ ತಗೊಂಡು ಬಂದಳು.

ರೀ ಈ ವಾರ ಊರಿಗೆ ಹೋಗ್ಬರೋಣ. ಅಪ್ಪ ಅಮ್ಮನ್ನ ನೋಡಿ ಬರೋಣ. ಯಾಕೋ ಫೋನ್ ಮಾಡ್ದಾಗ ತುಂಬಾ ಬೇಜಾರಲ್ಲಿದ್ದರು.

ನನಗೆ ಏನ್ ಹೇಳ್ಲಿ ಅಂತ ಗೊತ್ತಾಗ್ಲಿಲ್ಲ. ವಿಚಿತ್ರವಾಗಿ ಅವಳನ್ನೊಮ್ಮೆ ನೋಡಿ, ಬ್ಯಾಗ್ ತಗೊಂಡು ಆಫೀಸಿಗೆ ಹೊರಟ್ಬಿಟ್ಟೆ.
ಅವಳಿಗೆ ಏನನ್ನಿಸ್ತೋ ಏನೋ?

ಬಸ್ ಸ್ಟ್ಯಾಂಡ್ ಗೆ ಬಂದಾಗ ಎಂದಿನಂತೆ ರಾಯರು ಕಾಯ್ತಾ ಇದ್ದರು. ಸಮವಯಸ್ಕರಲ್ಲದಿದ್ದರೂ ಹೇಗೋ ಏನೋ ಸ್ನೇಹ ಕುದುರಿತ್ತು.

ಎಂಥಾ ಕತೆ ಮಾರಾಯ್ರೆ, ಸಾಂಬಯ್ಯನ ವಿಷ್ಯ ಗೊತ್ತಾಯ್ತೊ? ಅದೇ ಮೂಲೆ ಮನೆ ಕೇಶವನ ಜೊತೆ ಮೊನ್ನೆ ಜಗಳ ಆಯ್ತಲ್ಲ, ರಾತ್ರಿಯೆಲ್ಲಾ ಅವರ ಮನೆ ನಾಯಿ ಬೊಗಳಿ ನಿದ್ದೆ ಕೆಡಿಸ್ತು ಅಂತ. ಹೋಗ್ಬಿಟ್ನಂತೆ. ವಯಸ್ಸಾಗಿತ್ತು ಬಿಡಿ. ಪುಣ್ಯಾತ್ಮ. ರಾತ್ರಿ ಮಲಗಿದೋನು ಬೆಳಗ್ಗೆಗೆ ಇಲ್ಲ.

ಅವರು ಇನ್ನೂ ಏನೇನೋ ಹೇಳ್ತಾ ಹೋದ್ರು. ನನಗೆ ಅದರ ಬಗ್ಗೆ ಗಮನನೇ ಇರಲಿಲ್ಲ. ನಾಳೆ ನನ್ನ ಬಗ್ಗೇನೂ ಇವರು ಮತ್ತೊಬ್ಬರಿಗೆ ಹೀಗೇ ಹೇಳ್ತಾರೇನೋ ಅಂತ ಯೋಚಿಸ್ತಾ ಇದ್ದೆ.

ಎಂಥಾ ಕತೆ ಮಾರಾಯ್ರೆ, ನಿನ್ನೆ ನಾನು ಅವನು ಒಟ್ಟಿಗೇ ಬಸ್ಸಲ್ಲಿ ಹೋದ್ವಿ ಅಂತೀನಿ. ಚೆನ್ನಾಗೇ ಇದ್ದ....

ನನ್ನ ಸ್ಟಾಪ್ ಬಂದಿತ್ತು. ರಾಯರಿಗೆ ನಮಸ್ತೆ ಹೇಳಿ ನಾನು ಆಫೀಸಿಗೆ ಹೋದೆ.

ಗೇಟಲ್ಲಿ ವಾಚ್‌ಮನ್ ನಮಸ್ಕಾರ ಮಾಡಿದ. ಇವನು ಇಷ್ಟು ದಿನ ನಮಸ್ಕಾರ ಮಾಡ್ತಿದ್ನಾ? ನೆನಪಿಗೆ ಬರಲಿಲ್ಲ. ಆದ್ರೆ ನಾನು ಅವನಿಗೆ ಮೊದಲ ಬಾರಿಗೆ ತಿರುಗಿ ನಮಸ್ಕಾರ ತಿಳಿಸಿದೆ. ನಾನು ಗೇಟ್ ದಾಟಿ ಒಳಗೆ ಹೋಗೊವರೆಗೂ ಅವನು ನನ್ನನ್ನೇ ನೋಡ್ತಿದ್ದ ಅನ್ನಿಸ್ತು.

ಬಾಸ್, ನಾನು ಒಳಗೆ ಹೋಗ್ತಿದ್ದ ಹಾಗೇ ಕರೆದರು.

ನೋಡಿ, ಡೆಡ್‌ಲೈನ್ ಚೇಂಜ್ ಮಾಡ್ತಿದ್ದೀನಿ. ಆ ಹೊಸ module ಮೇಲೆ ಕೆಲ್ಸ ಮಾಡ್ತಿದ್ದಿರಲ್ಲ, ಅದನ್ನ ಈ ಸಂಜೆಗೆ ಕೊಟ್ಬಿಡಿ.

ನನಗೆ ಅನುಮಾನ ಶುರುವಾಯ್ತು. ಇವರಿಗೆ ಹೇಗೆ ಗೊತ್ತಾಯ್ತು ನಾನು ನಾಳೆಯಿಂದ ಬರಲ್ಲ ಅಂತ ? ನನ್ನ ಲೈಫ್ ಲೈನ್ ಮುಗಿದದ್ದಕ್ಕೇ ಡೆಡ್‌ಲೈನ್ ಚೇಂಜ್ ಮಾಡಿದ್ರಾ?

ಹೊತ್ತು ಕಳೆದ ಹಾಗೇ ಎಲ್ರೂ ನನ್ನ ವಿಚಿತ್ರವಾಗಿ ನೋಡ್ತಾ ಇದ್ದಾರೆ ಅನ್ನಿಸ್ತು. ಮದ್ಯಾಹ್ನಕ್ಕೆ ಅವಳು ಮಾಡಿ ಕೊಟ್ಟಿದ್ದ ಅಡುಗೆ ತುಂಬಾ ರುಚಿಯಾಗಿತ್ತು. ನಾಳೆ ತಿಂಡಿಗೆ ದೋಸೆ ಮಾಡು ಅಂತ ಮನೇಲಿ ಮಗಳು ಹೇಳ್ತಾ ಇದ್ದಿದ್ದು ನೆನಪಾಯ್ತು. ಅವಳು ದೋಸೆ ತುಂಬಾ ಚೆನ್ನಾಗಿ ಮಾಡ್ತಾಳೆ. ಛೇ, ಮಿಸ್ಸಾಗುತ್ತಲ್ಲಾ!

ಯಾಕೋ ಇದ್ದಕ್ಕಿದ್ದಂತೆ ಎದೆ ಹಿಂಡಿದಂಗಾಯ್ತು. ಹೌದು ಏನೆಲ್ಲಾ ಮಿಸ್ ಆಗುತ್ತಲ್ಲಾ ನಾಳೆಯಿಂದ. ಅಥವಾ ನಾನು ನಾಳೆಯಿಂದ ಇದನ್ನೆಲ್ಲಾ, ಇವರನ್ನೆಲ್ಲಾ ಮಿಸ್ ಮಾಡ್ಕೊಳ್ತೀನಾ ?

ಯಾರಿಗೂ ಹೇಳ್ದೆ ಸೀದಾ ಆಫೀಸಿಂದ ಹೊರಗೆ ಬಂದ್ಬಿಟ್ಟೆ. ಸ್ವಲ್ಪ ದೂರದಲ್ಲೇ ಪಾರ್ಕ್ ಇತ್ತು. ಅದೇ ಮೊದಲ ಬಾರಿಗೆ ( ನಾಳೆಯಿಂದ ಮತ್ತೆ ಆಗಲ್ಲ ) ಒಳಗೆ ಹೋದೆ. ಯಾರೂ ಇರಲಿಲ್ಲ. ಆ ಹೊತ್ತಲ್ಲಿ ಯಾರಿರ್ತಾರೆ ? ಮಕ್ಕಳು ಶಾಲೆಗೆ ಹೋಗಿರ್ತಾರೆ. ವಯಸ್ಸಾದೋರು ಮನೇಲಿ ಮದ್ಯಾಹ್ನ ಊಟ ಮಾಡಿ ಮಲಗಿರ್ತಾರೆ. ಪ್ರೇಮಿಗಳು ಬರೋ ಪಾರ್ಕ್ ಇದಲ್ಲ. ಮಾಲಿ ಕೂಡ ಇರಲಿಲ್ಲ. ನಾಳೆ ತನಕ ಇಲ್ಲೇ ಉಳಿದುಬಿಡಲಾ ? ಯಾಕೋ ಒಳಗೆ ಕೂರಲಿಕ್ಕೆ ಮನಸೇ ಆಗಲಿಲ್ಲ. ತಿರುಗಿ ಬಂದ್ಬಿಟ್ಟೆ.

ಸುಮ್ನೆ ಓಡ್ಲಿಕ್ಕೆ ಶುರು ಮಾಡ್ದೆ. ಹತ್ತು ಮಾರು ಹೋಗ್ತಿದ್ದ ಹಾಗೇ ಏದುಸಿರು ಬಿಡ್ಲಿಕ್ಕೆ ಶುರುವಾಯ್ತು. ವ್ಯಾಯಾಮ ಮಾಡ್ಲಿಲ್ಲ ಅಂದ್ರೆ ಹೀಗೇ ಆಗುತ್ತೆ. ನಾಳೆಯಿಂದ ಜಾಗಿಂಗ್ ಹೋಗ್ಬೇಕು. ಇಲ್ಲ, ಇಲ್ಲ. ಸಾಧ್ಯ ಇಲ್ಲ. ಅದು ಹೇಗಾಗುತ್ತೆ?

ನಾಳೆಯಿಂದ ಅದನ್ನು ಮಾಡ್ಬೇಕು ಇದನ್ನ ಮಾಡ್ಬೇಕು. ಮಗಳನ್ನ ಬೇರೆ ಸ್ಕೂಲ್ ಗೆ ಸೇರಿಸ್ಬೇಕು. ಮುಂದಿನ ವಾರ ಊರಿಗೆ ಬೇರೆ ಹೋಗ್ಬೇಕು.... ಏನೇನೋ ಯೋಚನೆ, ಯೋಜನೆ ಎಲ್ಲಾ ಒಟ್ಟಿಗೇ ಬರತೊಡಗಿದವು. ಅಯ್ಯೋ ನನಗೆ ಒಂದ್ ವಾರ ಮುಂಚೆನಾದ್ರೂ ಗೊತ್ತಾಯ್ತಾ? ಗೊತ್ತಾಗ್ದಿದ್ರೇನೇ ಚೆನ್ನಾಗಿತ್ತು. ಈಗ ಏನ್ ಮಾಡ್ಲಿ, ಏನ್ ಬಿಡ್ಲಿ?

ಅಲ್ಲೇ ಫುಟ್ ಪಾತ್ ಮೇಲೆ ಕುಳಿತುಬಿಟ್ಟೆ. ಒಬ್ಬಬ್ಬರಾಗಿ ಎಲ್ರೂ ನೆನಪಾಗತೊಡಗಿದರು. ಬೆಳಗ್ಗೆ ಏನೂ ಅನ್ನಿಸ್ದೆ ಇದ್ದದ್ದು ಈಗ ತಡಕೊಳ್ಳೋಕೆ ಆಗದಷ್ಟು ಸಂಕಟ ಆಗೋಕೆ ಶುರುವಾಯ್ತು. ಅಲ್ಲೇ ಜೋರಾಗಿ ಅಳೋದಕ್ಕೆ ಶುರು ಮಾಡ್ದೆ. ಹೋಗೋರು ಬರೋರು ಯಾರದ್ದೂ ಪರಿವೇನೇ ಇರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಯಾರೋ ಹೆಗಲ ಮೇಲೆ ಕೈಯಿಟ್ಟಂತಾಯಿತು. ತಲೆ ಎತ್ತಿ ನೋಡಿದೆ ಯಾರೋ ತುಂಬಾ ವಯಸ್ಸಾದೋರು.

ಮನೆಗೆ ಹೋಗಪ್ಪಾ, ಎಲ್ಲಾ ಸರಿಯಾಗುತ್ತೆ. ಕಷ್ಟಗಳು ಬರುತ್ವೆ ಹೋಗುತ್ವೆ. ಯಾವ್ದೂ ಕಡೆ ತನಕ ಇರಲ್ಲ. ಸಮಾಧಾನ ಮಾಡ್ಕೊ. ಎದ್ದೇಳು.

ಅವರಿಗೆ ನನ್ನ ನೋಡಿ ಏನನ್ನ್ಸಿಸ್ತೋ ಏನೋ?

ನಾನು ಎದ್ದು, ಆಟೋ ಹಿಡಿದು ಸೀದಾ ಮನೆಗೆ ಬಂದೆ.

ಅವಳಿಗೆ ಗಾಬರಿ. ರೀ ಏನಾಯ್ತು, ಯಾಕೆ ಇಷ್ಟು ಬೇಗ.. , ಇದೇನು ಮುಖ ಹೀಗಾಗಿದೆ... ಕೇಳ್ತಾನೇ ಹೋದ್ಲು.

ನಾನು ಸೋಫಾ ಮೇಲೆ ಕೂರ್ತಾ ಹೇಳಿದೆ.. "ನಾನು ನಾಳೆ ದೋಸೆ ತಿನ್ಬೇಕು"

ಅವಳು ತಬ್ಬಿಬ್ಬು. ನಾನು ಹೀಗೆ ಬಂದಿದ್ದಕ್ಕೂ , ಕೇಳ್ತಿರೋದಕ್ಕೂ ಅವಳಿಗೆ ಏನು ಮಾಡ್ಬೇಕು ಅಂತನೇ ತೋಚಿರಲಿಕ್ಕಿಲ್ಲ.

ಎರಡು ನಿಮಿಷ ಸುಧಾರಿಸ್ಕೊಂಡು ನಿಧಾನವಾಗಿ ಕೇಳಿದ್ಲು , ’ಮನೇಲಿ ಉದ್ದು ಖಾಲಿಯಾಗಿದೆ, ಉಪ್ಪಿಟ್ಟು ಮಾಡಿದ್ರೆ ಆಗಲ್ವಾ?’

11 comments:

  1. nija anand, kelavomme heege ansuthe. Nangu kooda ee reethi agide adre adu long-term (innu swalpa time ide). Astralli andokondirodella madi mugisbidbeku. Aa reethi adre santhosha, aglilla andre innu santhosha. Anyhow, baraha thumba chennagide. ಕಷ್ಟಗಳು ಬರುತ್ವೆ ಹೋಗುತ್ವೆ. ಯಾವ್ದೂ ಕಡೆ ತನಕ ಇರಲ್ಲ. Ee salugalu ellarigu anvayisuthe.

    ReplyDelete
  2. ನಿಶಾ,
    ನೀವು ಅಂದ್ಕೊಂಡಿರೊದನ್ನೆಲ್ಲಾ ಮಾಡಿ ಮುಗಿಸಿ, ಆದರೆ ’ಆ ರೀತಿ’ ಆಗೋದು ಬೇಡ ಅನ್ನೋದು ನನ್ನ ಹಾರೈಕೆ.
    ಅಂದ್ಕೊಂಡಿರೋದನ್ನೆಲ್ಲಾ ಮುಗಿಸಿದ ಮೇಲೆ, ಇನ್ನಷ್ಟು ಅಂದ್ಕೊಳ್ಳಿ!
    Let's be greedy :)

    ReplyDelete
  3. super story! tumba chennaagide.

    Keshav (www.kannada-nudi.blogspot.com)

    ReplyDelete
  4. ವಿಚಾರ ಚೆನ್ನಾಗಿದೆ. ಮನುಷ್ಯನಿಗೆ ಇವತ್ತೆ ಕೊನೆದಿನ ಅ೦ತ ಗೊತ್ತಾದ ತಕ್ಷಣ ಅವ ಒಳ್ಳೆಯಕೆಲಸಗಳನ್ನೆ ಮಾಡಲು ಯೋಚಿಸುತ್ತಾನ೦ತೆ.. !! ಮತ್ತು ಸಣ್ಣ ಪುಟ್ಟ ಆಸೆಗಳನ್ನ ತೀರಿಸಿಕೊಳ್ಳುವುದು... ಆತ ಆಶಾವಾದಿಯೇ ಇರಬೇಕು..ನಾಳೆ ಇರೋಲ್ಲ ಅ೦ತ ಗೊತ್ತಾದ ಮೇಲೂ ದೋಸೆ ಬಯಕೆ...!!!
    ವ೦ದನೆಗಳು.

    ReplyDelete
  5. ಕಲ್ಪನೆಯ ಓಟಕ್ಕೆ ಉತ್ತಮವಾದ ನಿದರ್ಶನವೆನ್ನಿಸುವ ಸುಂದರ ಕತೆ.

    ReplyDelete
  6. ಈ ಕಥೆ ನಲ್ಲಿ ಹೆದರಿಕೆ ಜೊತೆಗೆ ಜೀವನ ಓಟದ ವೇಗ ತುಂಬಾ ಚೆನ್ನಾಗಿ ಬಂದಿದೆ ಅಂತ ಅನಿಸಿಕೆ ಇದೆ.. ನಾಳೆ ಆಗೋದು ಇವತ್ತೇ ಗೊತ್ತ ಆದ್ರೆ ಎಷ್ಟು ಈಜಿ ಅಲ್ವ ಲೈಫ್ ..? :) :)
    ನಿಮ್ಮವ,
    ರಾಘು.

    ReplyDelete
  7. ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು

    ReplyDelete
  8. ತು೦ಬಾ ಓಟದ ಕಥೆ. ಮನಸ್ಸಿನ ಹುಚ್ಚು ವಿವೇಚನೆಗಳ ಸುತ್ತ ಕಥೆ ತಿರುಗಿ ಆಶಾದಾಯಕವಾಗಿ (ನಾಳೆ ಇಲ್ಲ ಎ೦ದರು ದೋಸೆ ತಿನ್ನೋ ಬಯಕೆ)ಮುಗಿಯುವಲ್ಲಿ ಕಥೆ ಅನೂಹ್ಯ ಅ೦ತ್ಯ ಕ೦ಡಿದೆ.

    ReplyDelete
  9. ತುಂಬಾ ತುಂಬಾ ಚೆನ್ನಾಗಿದೆ...ಮನಸಿಗೆ ತೀರ ಹತ್ತಿರ ಬಂದು ಯಾರೋ ಇದನ್ನೆಲ್ಲಾ ಹೇಳಿದಂತಾಯ್ತು....
    ನಮ್ಮ ಪಾಲಿಗೆ ನಾಳೆಯಿಲ್ಲ ಎಂದಾದರೆ ನಮ್ಮ ಬದುಕು, ಭಾವನೆ ಎಲ್ಲ ಎಷ್ಟು ಗಲಿಬಿಲಿ ಆಗಿಬಿಡುತ್ತದಲ್ಲ ಎನಿಸಿತು...

    ReplyDelete
  10. ನನ್ನಬ್ಲಾಗಿನಲ್ಲಿದ್ದ ತಮ್ಮ ಕಾಮೆಂಟಿನ ಜಾಡು ಹಿಡಿದು ಇಲ್ಲಿ ಬಂದು ಮುಟ್ಟಿದೆ. ತಮ್ಮ ಬರಹಗಳು ತುಂಬಾ ಖುಶಿಕೊಡುವುವು. especially ಈ ಬರಹ ಗಮನ ಸೆಳೆಯಿತು. ಇದ್ದಕ್ಕಿದ್ದಂತೆ "ನಾನು ನಾಳೆ ಸತ್ತುಹೋಗಬಹುದು" ಎನ್ನುವ ’ಅನಿಸಿಕೆ’, ಅಸಂಗತವೆನ್ನುವಮಟ್ಟಿಗೆ ಅದೊಂದು ’ಮಾಹಿತಿ’ಯಾಗಿ ಬದಲಾದಾಗ ವ್ಯಕ್ತಿಯಲ್ಲಿ ಏನಾಗಬಹುದು, ಅತ್ಯುತ್ತಮ ಕಲ್ಪನೆ. ಬಹು ನೈಜವಾಗಿ ಮೂಡಿಬಂದಿದೆ. ಇವನ ಆಲೋಚನೆ, ನಡುವಳಿಕೆಗಳು ಇವನಷ್ಟಕ್ಕೆ ಬಹು ಸಮಂಜಸವಾಗೂ, ಆದರೆ ಮೂಲ ಕಾರಣದ ಅಸಂಗತತೆಯಿಂದಾಗಿಯೇ ಹೊರಪ್ರಪಂಚಕ್ಕೆ ಅಸಂಗತವಾಗೂ ಕಾಣುತ್ತಾ ಹೋಗುತ್ತವೆ.

    ಪಾರ್ಕಿನಲ್ಲಿ ಆ ವಯೋವೃದ್ಧರು ಹೇಳುವ ಸಾಂತ್ವನ, ನಾಯಕನ ಆಲೊಚನೆ, "ಕಾಲ್ಪನಿಕ" ತೊಂದರೆಗಳ ಕ್ಷಣಿಕತೆಯನ್ನು ಮತ್ತಷ್ಟು ಸ್ಫುಟಗೊಳಿಸುತ್ತವೆ.

    ಕೊನೆಗೆ ಮನೆಯಾಕೆ ಹೇಳುವ ಮಾತು "ಉದ್ದು ಖಾಲಿಯಾಗಿದೆ, ಉಪ್ಪಿಟ್ಟು ಮಾಡಿದ್ರೆ ಆಗಲ್ವಾ?"; ದೋಸೆತಿನ್ನಲೆಂದೇ ಬದುಕಲೆಳಸುವವನ ಬದುಕುವ ಆಸೆಯನ್ನೇ ನಿರರ್ಥಕಗೊಳಿಸುತ್ತದೆ; ಹೀಗಾಗಿ ಬದುಕುವ ಆಸೆಯೂ ಸಾಯುವ ಯೋಚನೆಯಷ್ಟೇ ಅಸಂಗತವಾಗಿಬಿಡುತ್ತದೆ.

    Brilliantly woven story. Enjoyed it.

    ReplyDelete