ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನಿದ್ದು ಬಿಟ್ಟರೆ (ಆಸ್ಪತ್ರೆಯಲ್ಲಿದ್ದು ಬಂದಂತೆ), ಮತ್ತೆ ಮೊದಲಿನ ವೇಗಕ್ಕೆ ಮರಳಲು ಕೆಲ ಸಮಯ ಬೇಕಾಗುತ್ತದೆ. ಅದು ಮನಸ್ಸಿಗೂ ಅನ್ವಯಿಸುತ್ತದೆ ಅಂತ ಈಗ ಗೊತ್ತಾಗಿದೆ. ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಇಷ್ಟು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ, ಆಫೀಸು-ಮನೆ ಅಂತ ಸುತ್ತಾಡುತ್ತಿದವನು ದಿಢೀರ್ ಆಗಿ ಪುಸ್ತಕ ಪೆನ್ನು ಎತ್ತಿಕೊಂಡರೆ, ಅಯ್ಯೋ ಊಹೂಂ ಏನೂ ಹೊಳೆಯುತ್ತಿಲ್ಲ. ಅರ್ಧ ಬರೆದ ಕತೆಗಳು ನನ್ನೆಡೆಗೆ ದೈನೇಸಿ ನೋಟ ಬೀರುತ್ತಿದ್ದರೆ, ನಾನು ಮುಖ ಮುಚ್ಚಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸುತ್ತಾಡುತ್ತಿದ್ದಾಗ, ಸಿನಿಮಾ ನೋಡುತ್ತಿದ್ದಾಗ ಅಥವಾ ಏನಾದರೂ ಮಾಡುತ್ತಿದ್ದಾಗ ಒಂದಿಷ್ಟು ಯೋಚನೆಗಳು ಮೂಡುತ್ತಿದ್ದವು. ರಾತ್ರಿ ಬರೆಯೋಣವೆಂದು ಕುಳಿತರೆ, ಅಷ್ಟೊತ್ತಿಗಾಗಲೇ ಆ ಭಾವ ತೀವ್ರತೆ ಇರುತ್ತಿರಲಿಲ್ಲ. ಹೀಗೇ ಆದರೆ ಸರಿಯಿಲ್ಲ, ಏನಾದರೂ ಬರೆಯಲೇಬೇಕು ಅಂತ ನಿರ್ಧಾರ ಮಾಡಿ ಕುಳಿತಾಗ ಹೊಳೆದದ್ದೇ ಈ ಲೇಖನ.
ನನಗೆ ಮೊದಲಿನಿಂದಲೂ ಓದುವ ಗೀಳು. ನಾವು ಕೆಲವು ಗೆಳೆಯರು ಸೇರಿಕೊಂಡಾಗ ಬರೀ ಪುಸ್ತಕಗಳ ಬಗ್ಗೆಯೇ ಚರ್ಚೆ ಮಾಡುತ್ತಿರುತ್ತೇವೆ. ಒಂದು ಹೊಸ ಪುಸ್ತಕ, ಇಲ್ಲವೇ ಎಲ್ಲರೂ ಓದಿರುವ ಪುಸ್ತಕಕ್ಕೆ ಒಂದು ಹೊಸ ನೋಟ, ಇತ್ಯಾದಿ ಮಾತನಾಡಲು ತುಂಬ ಖುಶಿಯಾಗುತ್ತೆ. ಅದನ್ನೇ ಇಲ್ಲಿಯೂ ಮಾಡುವ ಪ್ರಯತ್ನ ಮಾಡಿದ್ದೇನೆ. ಒಂದಿಷ್ಟು ಪುಸ್ತಕಗಳನ್ನು ಓದಿದಾಗ ನನಗಾದ ಸಂತೋಷ, ಸಂಕಟಗಳನ್ನು ಹಂಚಿಕೊಳ್ಳುವ ಬಯಕೆಯಿದೆ. ಸ್ವಂತವಾಗಿಯಾದರೆ ಏನಾದರೂ ಬರೆಯಬಹುದು. ಆದರೆ, ಪರಿಚಯ? ಉಹುಂ, ನನಗಿನ್ನೂ ಬರುವುದಿಲ್ಲ. ನನ್ನ ಮೊದಲ ಪ್ರಯತ್ನವಿದು. ನಿಮಗಿಷ್ಟವಾದಲ್ಲಿ ಮುಂದಿನದ್ದು ಯೋಚಿಸಿದರಾಯಿತು.
ಧರ್ಮ, ದೇವರು, ಭಕ್ತಿ, ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಮೇಲೆ, ಕಾಲಾಂತರದಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. ಪರ ವಿರೋಧ ಎಂದಿಗೂ ಇದ್ದಿದ್ದೇ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ, ಯೋಚನೆಗಳನ್ನು ಚರ್ಚಿಸುವ ಹಕ್ಕು, ಸ್ವಾತಂತ್ರ್ಯ ಇದ್ದೇ ಇದೆ. ವೈಯಕ್ತಿಕವಾಗಿ ಏನು ಮಾಡಿದರೂ ಚೆನ್ನವೇ. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಲು ಪ್ರಯತ್ನಿಸಿದಾಗಲೇ ತೊಂದರೆ ಶುರುವಾಗುವುದು.
ದೇವರೆಂಬ ಕಲ್ಪನೆ(!), ಮನುಷ್ಯನ ನೆನಪು ಎಲ್ಲಿಯವರೆಗೆ ಹೋಗುವುದೋ ಅಲ್ಲಿಯವರೆಗೆ ಸಾಗುತ್ತದೆ. ದೇವರು ಕಲ್ಪನೆಯೋ, ಸಾಧ್ಯತೆಯೋ ನಾನು ಚರ್ಚಿಸಲು ಹೋಗುವುದಿಲ್ಲ. ಕನ್ನಡದಲ್ಲಿ ಅನೇಕ ಹಿರಿಯರು ಇದೇ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕಾರಂತರ ಮೂಕಜ್ಜಿ ಹೇಳುವ ದೇವರು ಎಷ್ಟು ಆಸಕ್ತಿಕರವಾಗಿದೆಯೋ, ಮೂರ್ತಿರಾಯರ ದೇವರೂ ಸಹ ಅಷ್ಟೇ ಚೆನ್ನಾಗಿದೆ. ಈ ಲೇಖನದ ಉದ್ದೇಶ ದೇವರಲ್ಲ. ಆದರೆ, ದೇವರೆಂಬ ಕಲ್ಪನೆ ಮತ್ತು ನಂಬಿಕೆಗಳ ಸುತ್ತ ಹೆಣೆದಿರುವ ಒಂದು ಪುಸ್ತಕ ಸರಣಿಯೊಂದರ ಪರಿಚಯ ಮಾಡಿಸುವ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ.
ನೀವು ಭೈರಪ್ಪನವರ ಪರ್ವ ಓದಿದ್ದಲ್ಲಿ, ಈ ರೀತಿಯ ಪ್ರಯತ್ನವನ್ನು ಖಂಡಿತಾ ಪ್ರಶಂಸಿಸುತ್ತೀರಿ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು, ಆದರೆ ಅಷ್ಟು ವಿಭಿನ್ನವಾಗಿ ಯೋಚಿಸುವುದು ನಿಜಕ್ಕೂ ಅಭಿನಂದನಾರ್ಹ.
Philip Pullman ಬರೆದಿರುವ "His Dark Materials" - trilogy ಈ ಲೇಖನದ ಉದ್ದೇಶ.
ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಈ ಕಥಾ ಸರಣಿ, ಮೂರು ಪುಸ್ತಕಗಳಲ್ಲಿ , ಅತ್ಯಂತ ವಿವಾದಕ್ಕೀಡಾದ, ಚರ್ಚೆಗೊಳಗಾದ ಕಥೆ ಹೇಳುತ್ತದೆ. ( Northern Lights, Subtle Knife, Amber Spyglass ). ಈ ಸರಣಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.
ಕಥೆ ಪ್ರಾರಂಭಿಸುವ ಮುನ್ನ ಲೇಖಕ ಈ ಕೆಳಗಿನ ಪದ್ಯ ಉಲ್ಲೇಖಿಸುತ್ತಾನೆ. ಇಲ್ಲಿಂದಲೇ ಸರಣಿಯ ಹೆಸರನ್ನೂ ಎರವಲು ಪಡೆದಿದ್ದಾನೆ. ಮಿಲ್ಟನ್ ನ ಪುಸ್ತಕದ ಪ್ರಭಾವ, ಲೇಖಕನೇ ಒಪ್ಪಿಕೊಂಡಂತೆ, ಗಾಢವಾಗಿದೆ.
Into this wild abyss,
The womb of nature and perhaps her grave,
Of neither sea, nor shore, nor air, nor fire,
But all these in their pregnant causes mixed
Confusedly, and which thus must ever fight,
Unless the almighty maker them ordain
His dark materials to create more worlds,
Into this wild abyss the wary fiend
Stood on the brink of hell and looked a while,
Pondering his voyage...
John Milton: Paradise Lost, Book II
ದೇವರು, ವಿಜ್ಞಾನ ಮತ್ತು ಕಲ್ಪನೆಯನ್ನು ಈ ಸರಣಿಯಲ್ಲಿ ಎಷ್ಟು ಸುಂದರವಾಗಿ ಹೆಣೆಯಲಾಗಿದೆಯೆಂದರೆ, ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸದೆ ಕೆಳಗಿಡಲು ಮನಸ್ಸಾಗುವುದಿಲ್ಲ.ಒಂದು ಅದ್ಭುತ ಕಥೆಯಾಗಿಯೂ, ಧರ್ಮ ವಿರೋಧಿಯಾಗಿಯೂ ಎದ್ದು ನಿಲ್ಲುವುದು ಈ ಪುಸ್ತಕಗಳ ವಿಶೇಷ.
ಕೇವಲ ಕಥೆಯಾಗಿ ಓದುವುದಾದರೆ, ಒಂದು ಅದ್ಭುತ ಲೋಕವನ್ನು ಲೇಖಕ ಬಿಚ್ಚಿಡುತ್ತಾನೆ. ಆ ಲೋಕದಲ್ಲಿ, ಕೇವಲ ರವಿಯಿಲ್ಲ, ಭುವಿಯಿಲ್ಲ. ಬದಲಿಗೆ ಅನೇಕಾನೇಕ ಭುವಿಗಳಿವೆ. ಒಂದು ಸುಂದರ ಸಮಾನಾಂತರ ಜಗತ್ತುಗಳ ಕಲ್ಪನೆಯಿದೆ. ಅಲ್ಲಿ ಒಂದು ವಿಶ್ವದಿಂದ ಮತ್ತೊಂದು ವಿಶ್ವಕ್ಕೆ ಹೋಗಬಹುದು. ನಿಮ್ಮ ಆತ್ಮದ ಜೊತೆ ಮಾತನಾಡಬಹುದು. ಖುದ್ದು ಭಗವಂತನಿಗೇ ಯುದ್ಧಕ್ಕೆ ಆಹ್ವಾನ ನೀಡಬಹುದು!
ತುಂಬ ಕುತೂಹಲಕಾರಿಯಾಗಿ ಬರೆದಿರುವ ಈ ಸರಣಿಯನ್ನು ಸಿನಿಮಾ ಮಾಡುವ ಪ್ರಯತ್ನ ಕೂಡ ನಡೆಯಿತು. Golden Compass ಎನ್ನುವ ಹೆಸರಲ್ಲಿ ಬಿಡುಗಡೆಯಾದ ಚಿತ್ರ, ಈ ಸರಣಿಯಲ್ಲಿ ಮೊದಲ ಭಾಗದ ಕಥೆಯನ್ನು ಮಾತ್ರ ಹೇಳುತ್ತದೆ. ಚಿತ್ರ ಬಿಡುಗಡೆಯಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.
ಒಬ್ಬ ಹನ್ನೆರಡು ವರ್ಷದ ಹುಡುಗಿಯ ಸುತ್ತ ಗಿರಕಿ ಹೊಡೆಯುವ ಈ ಕಥೆಯಲ್ಲಿ ಅನೇಕ ಅನೂಹ್ಯ ಕಲ್ಪನಾ ಪ್ರಯೋಗಗಳಿವೆ. ಮೊದಲಿಗೆ , ಲೇಖಕ, Daemon ಎನ್ನುವ ಹೊಸ ಕಲ್ಪನೆ ತೇಲಿ ಬಿಡುತ್ತಾನೆ. ನಿಮ್ಮ ಆತ್ಮದಿಂದ ಒಂದು ಭಾಗವನ್ನು ತೆಗೆದು ಅದಕ್ಕೊಂದು ರೂಪ ಕೊಟ್ಟರೆ, ಅದು Daemon. ನೀವು ಮತ್ತು ನಿಮ್ಮ Daemon ಒಬ್ಬರನ್ನೊಬ್ಬರು ಬಿಟ್ಟು ದೂರ ಹೋಗಲು ಸಾಧ್ಯವಿಲ್ಲ. Daemonಗಳ ರೂಪ ಕೂಡ ವಿಶಿಷ್ಟ. ಚಿಕ್ಕ ಮಕ್ಕಳ Daemonಗಳು ಯಾವ ವೇಷ ಬೇಕಾದರೂ ಧರಿಸಬಹುದು. ( ಬೆಕ್ಕು, ಗಿಳಿ, ನಾಯಿ ಇತ್ಯಾದಿ ). ದೊಡ್ಡವರ Daemonಗಳು ಒಂದೇ ರೂಪದಲ್ಲಿ ಸ್ಥಿರಗೊಂಡಿರುತ್ತವೆ. Daemonಗಳು ವ್ಯಕ್ತಿಗಳ ಸ್ವಭಾವಕ್ಕ್ಕೆ ತಕ್ಕಂತೆ ಇರುತ್ತವಾದ್ದರಿಂದ, ಸೇವಕರ Daemonಗಳು ಸಾಮಾನ್ಯವಾಗಿ ನಾಯಿಗಳಾಗಿರುತ್ತವೆ. ಸೈನಿಕರಿಗೆ ತೋಳ, ಹುಲಿ Daemonಗಳು. ನೀಚ ಬುದ್ಧಿಯವರಿಗೆ ಹಾವು ಇತ್ಯಾದಿ. ಅದೆಷ್ಟು ವಿಚಿತ್ರ ಈ ಕಲ್ಪನೆ!
ನಂತರ ಲೇಖಕ ಬೇರೆ ಬೇರೆ ವಿಶ್ವಗಳ ಬಗ್ಗೆ ಹೇಳುತ್ತಾನೆ. ವಿಜ್ಞಾನ ಹೇಳುತ್ತಾ ಬಂದಿರುವಂತೆ, ಈ ಬ್ರಹ್ಮಾಂಡದಲ್ಲಿ ನಮ್ಮದಷ್ಟೇ ಅಲ್ಲ, ಅನೇಕ ಭುವಿಗಳಿವೆ. ಅಲ್ಲಿಯೂ ಜೀವ ವಿಕಸನವಾಗಿದೆ. ಇಲ್ಲಿಯವರೆಗೂ ಸರಿ, ಎಲ್ಲರೂ ಒಪ್ಪುವಂಥದ್ದೇ. ಅಲ್ಲಿಂದ ಮುಂದೆ ಲೇಖಕ Quantum Physicsಗೆ ಸಾಗುತ್ತಾನೆ. ಸಮಾನಾಂತರ ಜಗತ್ತು ಬಿಚ್ಚಿಕೊಳ್ಳುತ್ತದೆ. ವಿಚಾರ ಮಾಡಿ, ಎರಡು ವಿಶ್ವಗಳು ಒಟ್ಟೊಟ್ಟಿಗೇ ವಿಕಸನಗೊಳ್ಳುತ್ತವೆ. ಎರಡೂ ಕಡೆ ಒಂದೇ ರೀತಿಯ ಜೀವ ಸಂಕುಲ. ನೀವು ಇಲ್ಲಿ ಇದ್ದಲ್ಲಿ, ಆ ವಿಶ್ವದಲ್ಲಿಯೂ ಇರಬಹುದು. ಆದರೆ ಇಲ್ಲಿ ಆದದ್ದೆಲ್ಲಾ ಅಲ್ಲಿಯೂ ಆಗಬೇಕೆಂದೇನಿಲ್ಲ. ಅವೆರಡೂ ಸಮಾನಾಂತರ ವಿಶ್ವಗಳಷ್ಟೇ (parallel universe).
ಈಗ ಸಮಾನಾಂತರ ಅಥವಾ ಅನೇಕ ವಿಶ್ವಗಳಿದ್ದಲ್ಲಿ, ಒಂದರಿಂದ ಮತ್ತೊಂದಕ್ಕೆ, ಅಥವಾ ಎಲ್ಲಾ ವಿಶ್ವಗಳಿಗೂ ಹೋಗಿ ಬರುವ ಅವಕಾಶವಿಲ್ಲದಿದ್ದಲ್ಲಿ ಕಥೆ ಕುತೂಹಲಕಾರಿಯಾಗಿರುವುದಿಲ್ಲ. ಹಾಗಾಗಿ, ಅದನ್ನು ಸಾಧಿಸಲು ಲೇಖಕ ಚಾಕುವೊಂದನ್ನು ಸೃಷ್ಟಿಸುತ್ತಾನೆ. ಈ ಚಾಕುವಿನ ಅಲಗು ಬರಿಗಣ್ಣಲ್ಲಿ ನೋಡಲಾಗದಷ್ಟು ಹರಿತ. ಅದು ಎಷ್ಟು ಶಕ್ತಿಶಾಲಿಯೆಂದರೆ, ಅದು ಯಾವ ವಸ್ತುವನ್ನು ಬೇಕಾದರೂ ತುಂಡು ಮಾಡೀತು. ಅದನ್ನು ಉಪಯೋಗಿಸಿ ವಿಶ್ವಗಳನ್ನು ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಕೂಡ ಸೀಳಬಹುದು.
ಮನುಷ್ಯ ಮಾತ್ರನಿಗೆ ಈ ಅನೇಕ ವಿಶ್ವಗಳ ಬಗೆಗೆ ಕಲ್ಪನೆ ಬಂದದ್ದಾದರೂ ಹೇಗೆ? ಅವನು ಬೌದ್ಧಿಕವಾಗಿ ಇಷ್ಟು ಬೆಳವಣಿಗೆ ಹೊಂದಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕ ಮತ್ತೊಂದು ಹೊಸ ವಿಚಾರವನ್ನು ಹೇಳುತ್ತಾನೆ. ಅವನ ಪ್ರಕಾರ ಇದಕ್ಕೆಲ್ಲಾ ಕಾರಣ Dust! ಹೌದು Dust ಅಥವಾ ಆಡು ಭಾಷೆಯಲ್ಲಿ ಹೇಳುವುದಾದರೆ , ಧೂಳು ಇದಕ್ಕೆಲ್ಲಾ ಕಾರಣ. ಆದರೆ Dust ಎಂದರೆ ಸಾಧಾರಣ ಧೂಳಿನ ಕಣಗಳಲ್ಲ. ಅವು ಪ್ರಜ್ಞೆ . ಅವೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ. ಭೌತಶಾಸ್ತ್ರ ಹೇಳುವಂತೆ, neutron, proton, electronಗಳ ತರಹ Dust ಕೂಡ ಒಂದು ಪರಮಾಣು ಕಣ. ಈಗ ಈ ಕಣಗಳಿಗೆ ಪ್ರಜ್ಞೆ ಇದ್ದಲ್ಲಿ, ಅವಕ್ಕೆ ತಮ್ಮದೇ ಆದ ಇಚ್ಛೆ ಇದ್ದಲ್ಲಿ, ಉದ್ದೇಶವಿದ್ದಲ್ಲಿ! ಲೇಖಕ ಅವುಗಳಿಗೆ Dust ಅಥವಾ Dark Matter ಎಂದು ಕರೆಯುತ್ತಾನೆ. ಅವುಗಳಿಗೆ ತಮ್ಮದೇ ಆದ ಉದ್ದೇಶವಿದ್ದಿದ್ದರಿಂದ ಅವು ಮನುಷ್ಯನ ಬೆಳವಣಿಗೆಗೆ ಸಹಕರಿಸಿದವು. ಬೇರೆ ಇನ್ಯಾವುದೋ ವಿಶ್ವದಲ್ಲಿ, ಅವುಗಳ ಅನುಕೂಲಕ್ಕೆ ತಕ್ಕಂತೆ ಮತ್ತೆ ಬೇರೆ ಯಾವ ಪ್ರಾಣಿಗೋ ಅವು ಸಹಕರಿಸಿದ್ದಾವು!
ಮಕ್ಕಳೊಂದಿಗೆ Dustನ ನಂಟು ಸ್ವಲ್ಪ ಕಡಿಮೆ. ಹಾಗಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಕಡಿಮೆ. ಅವುಗಳ ವ್ಯಕ್ತಿತ್ವ ಇನ್ನೂ ಪರಿಪೂರ್ಣವಾಗಿ ರೂಪುಗೊಂಡಿಲ್ಲವಾದ್ದರಿಂದ ಮಕ್ಕಳ daemonಗಳಿಗೆ ಒಂದು ಸ್ಥಿರವಾದ ರೂಪವಿಲ್ಲ ! ಹರೆಯಕ್ಕೆ ಬರುತ್ತಿದ್ದಂತೆ, Dustನ ಸಾಂದ್ರತೆ ಹೆಚ್ಚಾಗುವುದರಿಂದ, ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸ್ಪಷ್ಟವಾಗುತ್ತದೆ. Daemonಗಳೂ ಒಂದು ರೂಪದಲ್ಲಿ ಸ್ಥಿರವಾಗುತ್ತವೆ.
ಇಷ್ಟೆಲ್ಲಾ ಅನೂಹ್ಯ ಸಂಗತಿಗಳನ್ನು ಹೇಳುತ್ತಾ ಹೋಗುವ ಲೇಖಕ, ಕಥೆಯನ್ನು ಇನ್ನೂ ಕುತೂಹಲಕಾರಿಯನ್ನಾಗಿಸಲು, ಇಡೀ ಬ್ರಹ್ಮಾಂಡಕ್ಕೇ ಆಪತ್ತನ್ನು ತಂದಿಡುತ್ತಾನೆ, ಚಾಕುವಿನಿಂದ.ವಿಷಯವೇನೆಂದರೆ, ವಿಶ್ವದಿಂದ ವಿಶ್ವಕ್ಕೆ ಹೋಗಲು ಚಾಕುವಿನಿಂದ ಕನ್ನ ಕೊರೆದ ಮೇಲೆ, ಅದನ್ನು ಮುಚ್ಚದಿದ್ದಲ್ಲಿ, Dust ಪಾತಾಳಕ್ಕೆ ಸೋರಿಹೋಗುತ್ತದಂತೆ. ಹಾಗೂ ಪ್ರತಿ ಬಾರಿ ಕನ್ನ ಕೊರೆದಾಗ ಪಾತಾಳದಿಂದ ಒಂದು ದುಷ್ಟ ಕಣದ ಸೃಷ್ಟಿಯಾಗುತ್ತದಂತೆ. ಮತ್ತೆ ಆ ದುಷ್ಟ ಕಣದ ಆಹಾರವೇ ಸಮಸ್ತ ಲೋಕದ ಅಭ್ಯುದಯಕ್ಕೆ ಕಾರಣವಾದ Dust. ಹೀಗಾಗಿ, ಸೋರಿ ಹೋಗುತ್ತಿರುವ Dust ಉಳಿಸುವ ಮತ್ತು ಪಾತಾಳ ಲೋಕದ ದುಷ್ಟ ಕಣಗಳನ್ನು ನಾಶ ಮಾಡುವ ಜವಾಬ್ದಾರಿ, ನಮ್ಮ ಕಥಾನಾಯಕಿ, ಹನ್ನೆರಡು ವರ್ಷದ ಪೋರಿಯ ಮೇಲೆ ಬೀಳುತ್ತದೆ. ಇನ್ನೂ ಮಜವಾದ ಸಂಗತಿಯೆಂದರೆ, ಆಕೆ ತನಗರಿವಿಲ್ಲದಂತೆಯೇ ಈ ಕಾರ್ಯ ಮಾಡಿ ಮುಗಿಸಬೇಕು. ಆಕೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಯಾರಾದರೂ ಆಕೆಗೆ ಏನು ಮಾಡಬೇಕೆಂದು ಹೇಳಿದರೆ, ಭವಿಷ್ಯವೇ ಬದಲಾಗಬಹುದು. ಹೀಗಾಗಿ, ವಿಷಯ ಗೊತ್ತಿದ್ದವರು ಆಕೆಗೆ ಏನೂ ಹೇಳುವಂತಿಲ್ಲ, ಆದರೆ ಆಕೆಗೆ ಖುದ್ದು ವಿಷಯವೇ ಗೊತ್ತಿಲ್ಲ. In her ignorance lies the fate of the world!
ಸರಣಿಯ ಮೂರನೆಯ ಪುಸ್ತಕದಲ್ಲಿ, ಲೇಖಕ, ಅತ್ಯಂತ ಚರ್ಚೆಗೊಳಗಾದ ಭಗವಂತನ ಕುರಿತಾದ ತನ್ನ ಕಲ್ಪನೆಯನ್ನು ಹಂಚಿಕೊಳ್ಳುತ್ತಾನೆ. ಅವನ ಪ್ರಕಾರ, ಅನೇಕಾನೇಕ ವಿಶ್ವಗಳಿದ್ದಂತೆ, ನಮ್ಮ ಭೂಮಿಯಿದ್ದಂತೆ, ಸ್ವರ್ಗ (heaven) ಕೂಡ ಒಂದು ಲೋಕ. ಅಲ್ಲಿ ದೇವತೆಗಳು (Angel) ಇರುತ್ತಾರೆ. ಅದಕ್ಕೆ ಸರಿಯಾಗಿ ನರಕ ಸಹ ಮತ್ತೊಂದು ಲೋಕ. ಲೇಖಕ ಅದನ್ನು ಸತ್ತವರ ಲೋಕವೆಂದು ಕರೆಯುತ್ತಾನೆ.
ಲೇಖಕ ಹೇಳುವಂತೆ, ಜೀವ ವಿಕಸನದ ಪ್ರಕ್ರಿಯೆಯಲ್ಲಿ, ಭಗವಂತ (Authority) ಮೊದಲಿಗೆ ಜನಿಸಿದ. ಆ ನಂತರ ಹುಟ್ಟಿದವರಿಗೆ ಅವನೇ ಅವರನ್ನೆಲ್ಲ ಸೃಷ್ಟಿಸಿದ್ದೆಂದು ಸುಳ್ಳು ಹೇಳಿದ. ದೇವ, ದೇವತೆಗಳೆಂದರೆ, ಜೀವ ವೈವಿಧ್ಯತೆಯಲ್ಲಿ ಒಂದು ಬಗೆ. ಮನುಷ್ಯ, ಪ್ರಾಣಿ, ಪಕ್ಷಿಗಳಂತೆ ದೇವತೆಗಳೂ ಒಂದು ಬಗೆಯ ಜೀವಿ. Angels are one of those creatures which have evolved in some world, and Authority is just another angel. But he happens to be the first one to evolve.
ದೇವತೆಗಳಿಗೆ ದೇಹವಿಲ್ಲ. ಅವರ ಶರೀರ ಸಂಪೂರ್ಣವಾಗಿ Dustನಿಂದ ಕೂಡಿದೆ. ಕೇವಲ ಕಣಗಳಿಂದ ಮಾಡಲ್ಪಟ್ಟಿರುವುದರಿಂದ ಅವರಿಗೆ ದೇಹವಿಲ್ಲ. ಹಾಗಾಗಿ, ದೈಹಿಕವಾಗಿ ಅವರು ಮಾನವರಿಗಿಂತ ದುರ್ಬಲರು. ಅವರಲ್ಲಿ ಕೆಲವರು ದೇವತೆಗಳಾಗಿಯೇ ಜನಿಸುತ್ತಾರೆ. ಇನ್ನು ಕೆಲವು ಮಾನವರು ದೇವತೆಗಳ ಸಹಾಯದಿಂದ ಸತ್ತ ಮೇಲೆ ದೇವತೆಗಳಾಗುತ್ತಾರೆ.
ಇನ್ನು ಸಾವು! ಸಾವಿನ ಕಲ್ಪನೆ ಕೂಡ ಸೊಗಸಾಗಿದೆ. ಸಾವು ಸದಾ ನಮ್ಮೊಡನೆಯೇ ಇರುತ್ತದಂತೆ. ಪ್ರತಿಯೊಬ್ಬರಿಗೂ ಅವರದೇ ಆದ ಸಾವು ಇರುತ್ತದೆ. ಆದರೆ, ಸಾವನ್ನು ನೋಡಲು ಸಾಮಾನ್ಯವಾಗಿ ಯಾರೂ ಇಷ್ಟ ಪಡದ ಕಾರಣ, ಅದು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುತ್ತದೆ. ಸಾವಿನೊಂದಿಗೆ ಮನಸಾರೆ ಸ್ನೇಹ ಬಯಸಿದಲ್ಲಿ, ಸಾವಿನ ಸಾಂಗತ್ಯದಲ್ಲಿಯೇ ಬದುಕಬಹುದು. ಕೊನೆಗೆ , ಸಮಯ ಬಂದಾಗ ಸತ್ತವರ ಲೋಕಕ್ಕೆ ಕರೆದೊಯ್ಯಲು ಸಾವು ಸಹಾಯ ಮಾಡುತ್ತದೆ. ಕೇವಲ ಸಾವಿಗೆ ಮಾತ್ರ ಅಲ್ಲಿಗೆ ಹೋಗುವ ದಾರಿ ತಿಳಿದಿರುತ್ತದೆ. ಅಲ್ಲಿಗೆ ಕರೆದೊಯ್ದು ಬಿಟ್ಟ ಮೇಲೆ ಅದರ ಕರ್ತವ್ಯ ಮುಗಿಯುತ್ತದೆ.
ಕಥೆಯ ಕೊನೆಯ ಭಾಗ ರೋಚಕವಾಗಿದೆ. ಭಗವಂತನಿಗೀಗ ವಯಸ್ಸಾಗಿದೆ. ಈಗ ಆತ ಹೊರಗೆಲ್ಲೂ ಬರುವುದಿಲ್ಲ. ಆತನಿಗೊಬ್ಬ ಸೇನಾಧಿಕಾರಿಯಿದ್ದಾನೆ. ಭಗವಂತನಿಗೀಗ ವಯಸ್ಸಾಗಿರುವುದರಿಂದ ಸೇನಾಧಿಕಾರಿಯೇ ಎಲ್ಲ ಕಾರ್ಯಕಲಾಪಗಳನ್ನು ನೋಡಿಕೊಳ್ಳುತ್ತಾನೆ. ಬ್ರಹ್ಮಾಂಡದಲ್ಲಿನ ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳು ಅತ್ಯಂತ ಸ್ವತಂತ್ರರಾಗಿದ್ದಾರೆಂದು ಭಗವಂತನಿಗೆ ಅನಿಸಿದೆ. ಅವನು ಮತ್ತೆ ಸೇನಾಧಿಕಾರಿ ಸೇರಿ ಈ ಬಗ್ಗೆ ಮೊದಲೇ ವಿಚಾರ ಮಾಡಿದ್ದರಿಂದ, ಸೇನಾಧಿಕಾರಿ ಎಲ್ಲ ವಿಶ್ವಗಳ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ ಮಾನವನೊಬ್ಬ ಸಿಡಿದೇಳುತ್ತಾನೆ. ಬ್ರಹ್ಮಾಂಡದೆಲ್ಲೆಡೆಯಿಂದ ಅವನಿಗೆ ಸಹಾಯ ಹರಿದು ಬರುತ್ತದೆ. ಈ ದೇವ-ಮಾನವ ಯುದ್ಧವನ್ನು ಪುಸ್ತಕದಲ್ಲಿ ಓದುವುದೇ ಒಂದು ಮುದ.
ಕಥೆಯ ಕೊನೆಯ ಹಂತದಲ್ಲಿ ಲೇಖಕ Butterfly Effect ಎಂಬ ಮತ್ತೊಂದು ಭೌತಶಾಸ್ತ್ರದ ಎಳೆಯೊಂದನ್ನು ತಂದು ಮುಕ್ತಾಯಗೊಳಿಸುತ್ತಾನೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಯಾವುದೇ ಅತಿ ಚಿಕ್ಕ ಘಟನೆ ಕಾಲಾಂತರದಲ್ಲಿ ಅತ್ಯಂತ ದೊಡ್ಡ ಘಟನೆಗೆ ಕಾರಣವಾಗುತ್ತದೆ. ಈ ಸಿದ್ಧಾಂತ ಎಷ್ಟು ವಿಚಿತ್ರವಾದ ವಿಷಯಗಳನ್ನು ಹೇಳುತ್ತದೆಯೆಂದರೆ, ಬೆಂಗಳೂರಲ್ಲಿ ಇವತ್ತು ಚಿಟ್ಟೆಯೊಂದು ರೆಕ್ಕೆ ಬಡಿದರೆ ಮುಂದೆ ಯಾವತ್ತೋ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವೇಳುತ್ತದೆಯಂತೆ!
ಕಥಾನಾಯಕಿ, ಕಥೆ ಮುಗಿಯುವ ಹಂತಕ್ಕೆ ಬಂದಾಗ ಹರೆಯಕ್ಕೆ ಬರುತ್ತಾಳೆ. ಗೆಳೆಯನೊಂದಿಗೆ ಪ್ರೇಮಾಂಕುರವಾಗುವುದರೊಂದಿಗೆ (Original sin ?) ಜಗತ್ತಿಗೆ ಬಂದಿದ್ದ ಗಂಡಾಂತರ ತೊಲಗುತ್ತದೆ. ಯಾವುದೇ ನದಿಯ ಹರಿವನ್ನು ಬದಲಿಸಲು, ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಒಂದೇ ಒಂದು ಚಿಕ್ಕ ಕಲ್ಲನ್ನಿಟ್ಟರೆ ಸಾಕೋ, ಅದೇ ರೀತಿ, ಕಥಾನಾಯಕಿಯ ಪ್ರೇಮಪ್ರಸಂಗ ಬ್ರಹ್ಮಾಂಡದ ಚಲನೆಯನ್ನೇ ಬದಲಿಸುತ್ತದೆ.
ಕೊ: ಇದೇ ಲೇಖಕನ ಇನ್ನೊಂದು ಕೃತಿ "Good Man Jesus and the Scoundrel Christ" ಇತ್ತೀಚಿಗೆ ಬಿಡುಗಡೆಯಾಗಿದೆ. ಒಂದು ಅಧ್ಯಾಯ ಇಲ್ಲಿದೆ.
ಕಥಾಸರಣಿಯ ದರ್ಶನ ಸುಲಭದರಲ್ಲಿ ಮಾಡಿಸಿದಿರಿ. ರೋಚಕ ಫ್ಯಾಂಟಸಿ ಕಥೆಯಿದ್ದು ಕುತೂಹಲಕಾರಿಯಾಗಿದೆ ಎನಿಸಿತು. ಆದರೆ ನನಗೆ ಆ೦ಗ್ಲ ಕಾದಂಬರಿ ಓದಲ್ಲಿಕ್ಕೆ ಮನಸ್ಸು ಸುಲಭಲ್ಲಿ ಬಾಗದು :-(
ReplyDeleteತಮ್ಮ ಪರಿಚಯ ಲೇಖನಕ್ಕೆ ಧನ್ಯವಾದಗಳು.
welcome back to blog loka. nice article. keep writing Anand.
ReplyDeleteತುಂಬ ವಿಚಿತ್ರ ಕಲ್ಪನೆಯ ಕಾದಂಬರಿಯೊಂದನ್ನು ನಮಗೆ ಪರಿಚಯಿಸಿದ್ದೀರಿ. ಧನ್ಯವಾದಗಳು,ಆನಂದ.
ReplyDeleteಆನ೦ದ್,
ReplyDeleteಮತ್ತೆ ಬರೆಯಲು ಶುರುಮಾಡಿದ್ದಿರಿ.. ಸ೦ತೋಷವಾಯ್ತು. ಪುಸ್ತಕ ಪರಿಚಯದ ಬರಹ ಚೆನ್ನಾಗಿದೆ.ಧನ್ಯವಾದಗಳು..ಬರೆಯುತ್ತಿರಿ.
ಆನಂದ್.
ReplyDeleteಮತ್ತೆ ಬಂದಿದ್ದಕ್ಕೆ ಧನ್ಯವಾದ..... ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದೀರಾ.... ಈಗ ರೆಗುಲರ್ ಆಗಿ ಬರೆಯಬೇಕು ಆಯ್ತಾ....?
ಆನಂದ್ ಸೊಗಸಾಗಿ ಒಂದು ವಿಶಿಷ್ಟ ಕೃತಿಯ ಪರಿಚಯ ಮಾಡಿಸಿರುವಿರಿ ಧನ್ಯವಾದಗಳು
ReplyDeleteheege bareyutti iri sir.. :)
ReplyDeleteಸೀತಾರಾಮ್ ಸರ್
ReplyDeleteಕಥೆ ನಿಜಕ್ಕೂ ರೋಚಕವಾಗಿದೆ. ನನ್ನಿಂದ ಪೂರ್ತಿಯಾಗಿ ಕಥೆ ಹೇಳಲಾಗಿಲ್ಲ. ಸಾಧ್ಯವಾದಲ್ಲಿ ಒಮ್ಮೆ ಓದಿ ನೋಡಿ.
ಸುಮ ಮೇಡಂ,
ಧನ್ಯವಾದಗಳು. ಬರೆಯುವ ಪ್ರಯತ್ನ ಖಂಡಿತಾ ಜಾರಿಯಲ್ಲಿರುತ್ತದೆ.
ಸುನಾಥ ಕಾಕಾ,
ನಿಮಗಿಷ್ಟವಾದದ್ದು ತಿಳಿದು ಖುಶಿಯಾಯಿತು.
ಮನಮುಕ್ತಾರವರೆ,
ReplyDeleteಬರವಣಿಗೆ ಪ್ರಾರಂಭಿಸಿರುವುದು ನನಗೂ ಸಂತೋಷದ ವಿಷಯವೇ.
ಧನ್ಯವಾದಗಳು.
ದಿನಕರ್ ಸರ್
ನಿಮ್ಮ ಪ್ರೋತ್ಸಾಹಕ್ಕ್ಕೆ ಧನ್ಯವಾದಗಳು. ಆಯ್ತು ಸರ್, ಪ್ರಯತ್ನ ಖಂಡಿತಾ ಜಾರಿಯಲ್ಲಿರುತ್ತದೆ.
ಉಮೇಶ್ ಸರ್, snow white,
ನಿಮಗಿಷ್ಟವಾದದ್ದು ತಿಳಿದು ಖುಶಿಯಾಯಿತು.
ಆಂಗ್ಲ ಕತೆಗಳನ್ನು ನಾನೂ ಜಾಸ್ತಿ ಓದಿಲ್ಲ. ತಾವು ಪರಿಚಯಿಸಿದ ಕತೆ ಬಹಳ ಚೆನ್ನಾಗಿದೆ. ಚಿಟ್ಟೆಯಂತೆ ಹಕ್ಕಿಗಳೆಲ್ಲ ರೆಕ್ಕೆ ಬಡಿಯುತ್ತದೆ, ಸುನಾಮಿಗೆ ಇದೇ ಕಾರಣವಾಯ್ತೇನೋ(ಸುಮ್ನೆ ಹೇಳ್ದೆ)
ReplyDeleteನಿಮ್ಮ ನಿರೂಪಣೆಯಿಂದ ಆ ಪುಸ್ತಕ ಓದಬೇಕೆನಿಸುತ್ತಿದೆ..
ReplyDeleteಆನಂದ್ ಸರ್, ಚೆನ್ನಾಗಿ ವಿಮರ್ಶಿಸಿದ್ದೀರಿ, ಬಹಳ ದಿನಗಳಿಂದ ನಿಮ್ಮ ಬರಹ ಕಂಡಿರಲಿಲ್ಲ, ಹಿಂದೊಮ್ಮೆ ನಾನು ಪ್ರತಿಕ್ರಿಯಿಸಿದ್ದು ನೆನಪಾಗ್ತಾ ಇದೆ, ಬರಹ ಕಾಯಂ ಆಗಲಿ, ಬದುಕು ಬರಹದ ಕಣಜವಾಗಲಿ ಎಂದು ಹಾರೈಸುತ್ತೇನೆ, ನಿಮಗೆ ಪುನರ್ಸ್ವಾಗತ ಮತ್ತು ಅಭಿನಂದನೆಗಳು
ReplyDeleteವಿಮರ್ಶೆ ತುಂಬಾ ಚೆನ್ನಾಗಿದೆ.
ReplyDeletePhilip Pullman ಬರೆದಿರುವ "His Dark Materials" - trilogy ಓದುವ ಮತ್ತು Golden Compass ಎಂಬ ಚಲನಚಿತ್ರ ನೋಡುವ ಬಯಕೆ ಹುಟ್ಟಿದೆ.
ಕಥೆಯಲ್ಲಿ ಕೆಲವು ನಿಜವಾದ ಭೌತಶಾಸ್ತ್ರದ ಅಂಶಗಳಿರುವುದು ಇನ್ನೂ ಕುತೂಹಲ ಪಡಿಸಿದೆ. Butterfly Effect ನ ಬಗ್ಗೆ ಓದಿ ಖುಶಿಯಾಯಿತು. ಅದೇ ರೀತಿಯ Hoyle–Narlikar theory ಯು ಇಡೀ ಬ್ರಹ್ಮಾಂಡದಲ್ಲಿನ ಆಗು ಹೋಗುಗಳ ಪರಸ್ಪಪ ಸಂಬಂಧವನ್ನು ಸೂಚಿಸಿವಂತಹದು ಎಂದು ಎಲ್ಲೋ ಓದಿದ್ದೆ.
ಈ ರೀತಿಯ ರೋಚಕ ಮತ್ತು ಕುತೂಹಲ ಪುಸ್ತಕಗಳ ಪರಿಚಯ ಮಾಡುತ್ತಿರು.
ಧನ್ಯವಾದಗಳು.
ಚೆನ್ನಾಗಿದೆ, ಫ್ಹಿಲಿಪ್ ಫುಲ್ಲ್ಮನ್ ರನ್ನು ಮತ್ತೆ ಓದುವ ಹಾಗೆ ಮಾಡಿದಿರಿ.ಹಾಗು ನಿಮ್ಮ ಬರಹಗಳನ್ನು ಮತ್ತೆ ಮತ್ತೆ ಓದುವ ಹಂಬಲದೊಂದಿಗೆ..
ReplyDelete