ಶಹರಿನ ಗಗನಚುಂಬಿ ಕಟ್ಟಡಗಳ
ಬೆಂಕಿ ಪಟ್ಟಣದಂಥ ಗೂಡೊಳಗೆ
ಕೂತು ಗಾಜಿನ ಕಿಟಕಿಯಿಂದ
ಆಚೆ ನೋಡುವಾಗಲೇ ಬಿಟ್ಟು ಬಂದ
ಊರ ಮೂಲೆಯ ಮರದ ಮೇಲೆ ಹತ್ತಿ
ಆಡಿದ್ದು ನೆನಪಾಗುವುದು.
ಇಲ್ಲಿ ಒಂಟಿ ಮರಗಳಿಲ್ಲ, ಕೊಳ್ಳಿ
ದೆವ್ವಗಳಿಲ್ಲ ಚೌಡಿ ಮಾರಿಗಳಂತೂ
ಹತ್ತಿರಕ್ಕೂ ಸುಳಿಯುವುದಿಲ್ಲ.
ಬೀಸುವ ಗಾಳಿಯ ತುಂಬಾ ಸೋರಿ
ಹೋದ ಕನವರಿಕೆಗಳು ಮೈಗಂಟಿ
ದಂತಾಗಿ ಬೆಚ್ಚಿ ಬೀಳಬೇಕು.