ಜೀವನದಲ್ಲಿ ಮೊಟ್ಟಮೊದಲನೆಯ ಬಾರಿಗೆ ತಪ್ಪು ಮಾಡಿದ್ದ. ಮೇಲಾಗಿ ಸಿಕ್ಕಿ ಬಿದ್ದಿದ್ದ. ಶ್ರಾವಣಿ ನೋಡಿ ಬಿಟ್ಟಿದ್ದಳು. ಅವಳು ಈ ಹೊತ್ತಿನಲ್ಲಿ ಇಲ್ಲಿಗೇಕೆ ಬಂದಳು ಎನ್ನುವುದು ಮೋಹನನಿಗೆ ತಿಳಿಯದಾಗಿತ್ತು. ಅದೆಷ್ಟು ದಿನಗಳಿಂದ ಈಯೋಜನೆ ರೂಪಿಸಿದ್ದ ಅವನು. ಹೀಗೆ ಸಿಕ್ಕಿ ಬೀಳುವುದರಲ್ಲಿ ಅರ್ಥವೇ ಇಲ್ಲ. ಛೇ, ಈಗೇನು ಮಾಡುವುದು?ಇಷ್ಟು ಹೊತ್ತಿನಲ್ಲಿ ಶ್ರಾವಣಿ ಮನೆಗೆ ಹೋಗಿರಬಹುದಾ? ಅವಳ ಅಪ್ಪ-ಅಮ್ಮಂಗೆ ಹೇಳಿಬಿಟ್ಟಿರ‍್ತಾಳಾ? ಊಹೂಂ, ಇಲ್ಲ. ಅವಳ ಅಪ್ಪ ಅಮ್ಮ ಹೊರಗೆ ಹೋಗುವುದನ್ನ ಆಗಲೇ ನೋಡಿದ್ದ. ಹಾಗಾದ್ರೆ, ಮನೆಗೆ ಹೋಗಿ ಶ್ರಾವಣಿ ಹತ್ತಿರ ಮಾತಾಡ್ಲಾ? ಪ್ಚ, ಅಷ್ಟು ಚಿಕ್ಕ ಹುಡುಗಿಗೆ ಏನು ಅರ್ಥ ಆಗುತ್ತೆ? ಇವತ್ತಲ್ಲಾ ನಾಳೆ ಯಾರಿಗಾದ್ರೂ ಹೇಳಿಯೇ ಬಿಡ್ತಾಳೆ. ಬೇಡ, ಬೇಡ. ಏನಾದ್ರೂ ಮಾಡಲೇಬೇಕು. ಅದೂ ಅವಳ ಅಪ್ಪ ಅಮ್ಮ ಮನೆಗೆ ಬರೋದ್ರೊಳಗೇ ಆಗಬೇಕು. ಆದ್ರೆ ಏನು ಮಾಡಬೇಕು ? ಅಯ್ಯೋ, ಜೋರಾಗಿ ಉಸಿರು ಬಿಟ್ಟ. ಮೋಹನ ಎತ್ತಿ ಬೆಳೆಸಿದ ಹುಡುಗಿ ಶ್ರಾವಣಿ . ಇನ್ನೂ ಹೈಸ್ಕೂಲಿಗೆ ಹೋಗ್ತ್ತಿದ್ದಾಳೆ. ಅವಳನ್ನು ಕಂಡರೆ ಮೋಹನನಿಗೆ ಏನೋ ಪ್ರೀತಿ, ಮಮತೆ. ಆದರೆ ಈಗ ಎದುರಿಗಿರುವುದು ತನ್ನ ಜೀವನದ ಪ್ರಶ್ನೆ. ವಿಷಯ ಹೊರಗೆ ಬಂದರೆ ಜೀವನ ಪೂರ್ತಿ ಜೈಲಿನಲ್ಲಿರಬೇಕು. ಮರ್ಯಾದೆಯಂತೂ ಹರಾಜಾಗಿ ಹೋಗುತ್ತದೆ. ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ.
ಛೇ, ಶ್ರಾವಣಿ ಅಲ್ಲಿಗೆ ಬರದೇ ಹೋಗಿದ್ರೆ ಎಲ್ಲಾ ಸರಿ ಹೋಗುತ್ತಿತ್ತು.
ಈಗ್ಲೂ ಸರಿ ಹೋಗುತ್ತೆ, ಶ್ರಾವಣೀನೇ ಇಲ್ಲ ಎಂದರೆ. ಮನದಲ್ಲಿ ಯಾವುದೋ ದನಿ ಹೇಳಿದಂತಾಯಿತು.
ಛೇ, ಛೇ, ಅದೆಲ್ಲಾ ಆಗಲ್ಲ.
ಮತ್ತೆ ನೀನು ಜೈಲಿಗೆ ಹೋಗ್ತೀಯಾ?
ಹ್ಮ್...
ಮೋಹನನೀಗ ಕಸಿವಿಸಿ ಶುರುವಾಗಿತ್ತು. ತನ್ನ ಜೀವನವೋ, ಇಲ್ಲಾ ತಾನು ಎತ್ತಿ ಆಡಿಸಿದ ಜೀವವೋ?
ಈಗ್ಲೇ ಹೋದ್ರೆ ಯಾರಿಗೂ ಗೊತ್ತಾಗಲ್ಲ. ಅವಳ ಮನೇಲೂ ಯಾರೂ ಇಲ್ಲ. ಚಿಕ್ಕ ಹುಡುಗಿ. ಲೆಕ್ಕವೇ ಅಲ್ಲ. ಒಳಗಿನ ದನಿ ಹೇಳುತ್ತಲೇ ಇತ್ತು.
ಆದ್ರೆ, ಪಾಪ. ಏನೂ ಗೊತ್ತಿಲ್ಲದ ಹುಡುಗಿ. ಇನ್ನೂ ಬಾಳಿ ಬದುಕಬೇಕಾದವಳು.
ಹಾಗಂತ ನಿನ್ನ ಜೀವನ ಬಲಿ ಕೊಡ್ತೀಯಾ? ಅವಳು ಯಾರ ಹತ್ರನಾದ್ರೂ ಬಾಯಿ ಬಿಟ್ರೆ ಕಥೆ ಮುಗಿಯಿತು. ಏನೇ ಮಾಡಿದರೂ ಇನ್ನು ಹತ್ತು ನಿಮಿಷದ ಒಳಗೆ ಮಾಡಿ ಮುಗಿಸಬೇಕು. ಬೇಗ, ಬೇಗ.. ಹೊರಡು. ದನಿ ಒತ್ತಾಯ ಪಡಿಸಿತು.
ಕೊನೆಗೂ ಮೋಹನನಿಗೆ ಅವನ ಜೀವನವೇ ಮುಖ್ಯವಾಯಿತು. ದುರ್ದಾನ ತೆಗೆದುಕೊಂಡವನಂತೆ ಶ್ರಾವಣಿಯ ಮನೆ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನ ಮನವಾಗಲೇ ಕೆಲಸ ಹೇಗೆ ಮುಗಿಸಬೇಕೆಂದು ಯೋಚಿಸತೊಡಗಿತ್ತು.
*******
ಬರೆಯುತ್ತಿದ್ದ ಕಥೆ ಅರ್ಧಕ್ಕೇ ನಿಲ್ಲಿಸಿ ಮಹರ್ಷಿ ಆಕಳಿಸಿದ. ತುಂಬ ಹೊತ್ತಿನಿಂದ ಬರೆಯುತ್ತಿದ್ದುದರಿಂದ ಮೈ ಕೈ ಎಲ್ಲಾ ಹಿಡಿದಂತಾಗಿತ್ತು. ಕುರ್ಚಿಗೆ ಹಾಗೇ ಒರಗಿ ಮೈ ಮುರಿದ. ಅವನ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯಾಗಿತ್ತದು.
ಮಹರ್ಷಿಯ ಕಥೆಗಳೆಲ್ಲಾ ಸುಖಾಂತ್ಯವಾಗುತ್ತವೆ. ಅವನ ಕಥೆಗಳು ಒಂದು ಕಮರ್ಷಿಯಲ್ ಸಿನಿಮಾ ನೋಡಿದ ಹಾಗಿರುತ್ತದೆಯೇ ಹೊರತು ನಿಜ ಜೀವನಕ್ಕೆ ಹತ್ತಿರವಾಗಿರುವುದಿಲ್ಲ. ಮತ್ತೆ ಮತ್ತೆ ಕಾಡುವುದಿಲ್ಲ ಎಂಬಿತ್ಯಾದಿ ಯಾರೋ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದ್ದರು. ಮಹರ್ಷಿಗೆ ಅದನ್ನು ಒಪ್ಪಲಾಗಿರಲಿಲ್ಲ. ಪತ್ರಿಕೆಗಾಗಲೀ, ಮತ್ತಿನ್ನಾರಿಗಾದರೂ ಏನೂ ಹೇಳದಿದ್ದರೂ ತಾನೊಂದು ಹೊಸ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದ್ದ. ಅವನ ಹೊಸ ಕಥೆಯಲ್ಲಿನ ಕೇಂದ್ರ ಪಾತ್ರ ಮೋಹನನ್ನು ತುಂಬಾ ಸಜ್ಜನನಂತೆ ಚಿತ್ರಿಸಿ, ಅಂತ್ಯದಲ್ಲಿ ಕೊಲೆಗಾರನನ್ನಾಗಿಸಿ ಓದುಗನನ್ನು ದಿಗ್ಭ್ರಮೆಗೊಳಿಸುವ ಉಪಾಯ ಮಾಡಿದ್ದ. ವೈಯಕ್ತಿಕವಾಗಿ ಅವನಿಗಿದು ತೀರಾ ವ್ಯತಿರಿಕ್ತ ನಿರ್ಧಾರ. ಕಥೆ ಓದಿದ ಮೇಲೆ ಓದುಗನಿಗೊಂದು ಭರವಸೆ ಸಿಗಬೇಕೇ ಹೊರತು ಮತ್ತಷ್ಟು ಸಂಕಟಕ್ಕೀಡು ಮಾಡಬಾರದೆಂಬುದು ಅವನ ಅಭಿಪ್ರಾಯ. ಈ ಬಾರಿ ಯಾರೋ ಅವನನ್ನು ಟೀಕಿಸಿದರೆಂದು ಬಲವಂತಪೂರ್ವಕವಾಗಿ ತನ್ನ ಶೈಲಿ ಬದಲಿಸಲು ಪ್ರಯತ್ನ ಪಡುತ್ತಿದ್ದ.
ಮಹರ್ಷಿ ಬರೆಯುತ್ತಿದ್ದ ಕಥೆ ಅದಾಗಲೇ ಮುಗಿಯುವ ಹಂತಕ್ಕೆ ಬಂದಿತ್ತು. ಮೋಹನನಿಂದ ಶ್ರಾವಣಿಯ ಕೊಲೆ ಮಾಡಿಸಿದ ತಕ್ಷಣಕ್ಕೆ ಮುಗಿದು ಹೋದಂತೇ ಲೆಕ್ಕ. ಕೊಲೆ ಮಾಡಿಸಲು ಯಾವ ಮಾರ್ಗ ಹಿಡಿಯುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ, ಟಕ್ ಟಕ್ ಟಕ್ ಎಂದು ಯಾರೋ ಬಾಗಿಲು ಬಡಿದರು.
ಮಹರ್ಷಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಯಾರೋ ಮಧ್ಯ ವಯಸ್ಕ. ಸಾಕಷ್ಟು ಎತ್ತರವಾಗಿದ್ದ. ಎಲ್ಲೋ ನೋಡಿದ್ದೀನಿ ಎಂದು ಮಹರ್ಷಿಗೆ ಅನ್ನಿಸಿದರೂ ತಕ್ಷಣಕ್ಕೆ ಗೊತ್ತಾಗಲಿಲ್ಲ.
ಮಹೀ, ನೀನು ಮಾಡುತ್ತಿರುವುದು ಸರಿಯಲ್ಲ.. ಬಂದಾತ ಹೇಳಿದ.
ಮಹರ್ಷಿಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೇವಲ ಅವನ ಆಪ್ತೇಷ್ಟರಷ್ಟೇ ಅವನನ್ನು ಮಹೀ ಎಂದು ಕರೆಯುತ್ತಿದ್ದುದು. ಬಂದಾತನ ಗುರುತು ನೆನಪಾಗುತ್ತಿಲ್ಲ. ಮೇಲಾಗಿ, ತಾನು ಏನು ತಪ್ಪು ಮಾಡುತ್ತಿದ್ದೇನೆ ಎಂಬುದೇ ಅವನಿಗೆ ಹೊಳೆಯಲಿಲ್ಲ.
ಏ..ಏನು ಮಾಡ್ತಿರೋದು ಸರಿಯಲ್ಲ? ನೀವ್ಯಾರು ಗೊತ್ತಾಗಲಿಲ್ಲ. ನಿಧಾನವಾಗಿ ಹೇಳಿದ.
ಯಾಕೆ ಮಹೀ, ಏನಾಯಿತು. ಗುರುತು ಸಿಗಲಿಲ್ವ?ನಾನು ಮೋಹನ.
ಬಾಗಿಲನ್ನು ಹಿಡಿದಿರಲಿಲ್ಲವೆಂದರೆ ಮಹರ್ಷಿ ಅಲ್ಲೇ ಬಿದ್ದುಬಿಡುತ್ತಿದ್ದ. ಇದ್ದಕ್ಕಿದ್ದಂತೆ ಅವನನ್ನು ನಿಶ್ಶಕ್ತಿ ಆವರಿಸಿಕೊಂಡಿತು. ಬಂದಾತನನ್ನು ಈಗ ಗುರುತು ಹಿಡಿದ.
ಮೋಹನ, ಮೋಹನ ಅಂದ್ರೆ... ಮಹರ್ಷಿ ತೊದಲಿದ.
ಹೌದು ಅದೇ ಮೋಹನ. ನಾನು ಕೊಲೆಗಾರ ಅಲ್ಲ ಮಹೀ. ದಯವಿಟ್ಟು ನನ್ನಿಂದ ಆ ಕೆಲಸ ಮಾಡಿಸಬೇಡ.
ಮಹರ್ಷಿಗೆ ತಲೆ ತಿರುಗುವುದೊಂದು ಬಾಕಿ. ಏನು ಹೇಳಬೇಕೆಂಬುದು ತಿಳಿಯದೆ ಅವನನ್ನು ಒಳಗೆ ಕರೆದು ಕೂರಿಸಿದ.
ನೀನು, ನೀ...ನೀವು ಇಲ್ಲಿಗೆ ಹೇಗೆ ಬಂದ್ರಿ? ಕೇಳಿದ
ನೀನು ಎಂದೇ ಹೇಳು. ಬೇರೆ ಏನು ಕರೆದರೂ ಅಸಹಜವಾಗಿರುತ್ತದೆ. ಮುಖ್ಯವಾಗಿ ನೀನೀಗ ಕೇಳಬೇಕಾಗಿರುವುದು ನಾನು ಹೇಗೆ ಬಂದೆ ಎನ್ನುವುದಲ್ಲ. ಯಾಕೆ ಬಂದೆ ಎನ್ನುವುದು. ಹೇಗೆ ಎನ್ನುವುದು ಸದ್ಯಕ್ಕೆ ಬೇಕಾಗಿಲ್ಲ. ಮೋಹನ ಹೇಳಿದ.
ಹಾಂ, ಹೌದು. ಯಾಕೆ ಬಂದೆ. ಮಹರ್ಷಿಗೆ ಇನ್ನೂ ಗೊಂದಲ.
ನಾನು ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು.
ಅಂದರೆ?
ಕೊಲೆ ಮಾಡುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಮಹೀ. ಅದೂ ನಾನು ಎತ್ತಿ ಆಡಿಸಿದ ಮಗುವನ್ನು? ನಿನಗೆ ಆ ರೀತಿ ಯೋಚಿಸಲು ಮನಸ್ಸಾದರೂ ಹೇಗೆ ಬಂತು? ಆ ಕೆಲಸ ನನ್ನಿಂದ ಸಾಧ್ಯವಿಲ್ಲ. ಅವನ ಧ್ವನಿ ಭಾರವಾಗಿತ್ತು.
ಮಹರ್ಷಿಗೆ ಅವನ ದು:ಖ ನೋಡಿ ಸ್ವಲ್ಪ ಎಚ್ಚೆತ್ತಂತಾಯಿತು.
ನೀನೇನು ಹೇಳಬೇಕು ಅಂತಿದ್ದೀಯಾ? ಕೇಳಿದ.
ನೀನು ಬರೆಯುತ್ತಿರುವ ಕಥೆಯಲ್ಲಿ ಕೊಲೆ ಮಾಡಿಸಬೇಡ. ನಾನು ಮಾಡಲಾರೆ. ಮೋಹನ ಹೇಳಿದ.
ಇಷ್ಟು ಹೊತ್ತಿಗಾಗಲೇ, ಮಹರ್ಷಿಗೆ ಧೈರ್ಯ ಬಂದಿತ್ತು.
ಅದು ಹೇಗಾಗುತ್ತೆ?ಅದು ನನ್ನ ಕಥೆ. ನಾನು ಬರೆಯುತ್ತಿರುವುದು. ನಾನು ಎಣಿಸಿದಂತೆಯೇ ಇರಬೇಕು.
ಅದು ನನ್ನ ಕಥೆ ಕೂಡ ಮಹೀ. ಮೋಹನ ಹೇಳಿದ.
ನೀನು ಕೇವಲ ಪಾತ್ರ. ನೀನಿಲ್ಲಿಗೆ ಬಂದು ಈ ರೀತಿ ಮಾತನಾಡುತ್ತಿರುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಈ ರೀತಿ! ಮಹರ್ಷಿ ಹೇಳುತ್ತಲೇ ಹೋದ.
ಇದು ನನ್ನ ವ್ಯಕ್ತಿತ್ವದ ಅಳಿವು ಉಳಿವಿನ ಪ್ರಶ್ನೆ ಮಹೀ. ನಾನು ಬರಲೇ ಬೇಕಿತ್ತು. ನಾಳೆ ಬೇರೆ ಯಾರಾದರೂ ನಿನ್ನ ಕಥೆ ಹೇಳುವಾಗ ನಿಜ ಹೇಳಲಿ ಎಂದು ನೀನು ಬಯಸುವುದಿಲ್ಲವೇನು? ಇಲ್ಲ ಸಲ್ಲದ ಅಪವಾದ ಮಾಡಿದರೆ, ಇಲ್ಲವೇ ನಿನ್ನ ಸ್ವಭಾವವನ್ನೇ ತಿರುಚಿ ಬರೆದರೆ ಸುಮ್ಮನಿರುತ್ತೀಯಾ?
ಅದು ಸರಿ, ಆದರೆ ನೀನು ಇಲ್ಲಿ?
ಪದೇ ಪದೇ ಅದನ್ನೇ ಕೇಳಬೇಡ. ಈಗ ನಾನು ಹೇಳುವುದನ್ನು ನೀನು ಮಾಡ್ತೀಯೋ ಇಲ್ಲವೋ ಅಷ್ಟು ಹೇಳು. ಮೋಹನನ ಧ್ವನಿ ಗಡುಸಾಗಿತ್ತು.
ಮಹರ್ಷಿಗೆ ಸಿಟ್ಟು ಬಂತು. ಅವನು ಬರೆಯುತ್ತಿರುವ, ಅವನ ಕಥೆಯಲ್ಲಿನ ಪಾತ್ರ ಅವನಿಗೇ ಧಮಕಿ ಹಾಕುವುದನ್ನು ಅವನು ಸಹಿಸದಾದ.
ನೋಡು, ನಾನು ಹೇಳಿದಂತೆ ಮಾಡುವುದಷ್ಟೇ ನಿನ್ನ ಕೆಲಸ. ನನ್ನ ಸೃಷ್ಟಿ ನೀನು. ನನಗೇ ಬುದ್ಧಿ ಹೇಳುವಷ್ಟು ನಿನಗೆ ಅಧಿಕಾರವಿಲ್ಲ.
ಬೇಡ ಮಹೀ, ನನ್ನಿಂದ ಆ ಕೊಲೆ ಮಾಡಿಸಬೇಡ.
ನೀನು ಜೋರು ಮಾಡುತ್ತೀಯೋ, ಬೇಡುತ್ತೀಯೋ, ಏನೇ ಮಾಡಿದರೂ ನನ್ನ ಮನಸು ಬದಲಿಸಲಾರೆ. ನನ್ನ ಕಥೆ ಅದು. ನಾನು ಹೇಗೆ ಬರೆಯಬೇಕೆಂದು ನಿರ್ಧರಿಸಿದ್ದೀನೋ ಹಾಗೇ ಬರೆಯುವೆ. ಆ ಕೊಲೆ ಆಗೇ ತೀರಬೇಕು. ಅದೇ ನನ್ನ ನಿರ್ಧಾರ.
ಯಾವುದೇ ಕಾರಣಕ್ಕ್ಕೆ ನೀನು ಮನಸು ಬದಲಿಸಲಾರೆಯೇನು?
ಖಂಡಿತಾ ಸಾಧ್ಯವಿಲ್ಲ.
ಇನ್ನೊಮ್ಮೆ ಯೋಚನೆ ಮಾಡು.
ಪ್ರಶ್ನೆನೇ ಇಲ್ಲ. ಏನು ಹೆದರಿಸ್ತಾ ಇದ್ದೀಯಾ?
ಹಾಗೇ ತಿಳಿದುಕೋ. ಆದರೆ ನಾನು ಆ ಕೊಲೆ ಮಾಡಲಾರೆ.
ನಾನೂ ನೋಡೇ ಬಿಡ್ತೀನಿ.
ಬೇಡ ಮಹೀ.
ಇಲ್ಲಾ ಅಂದ್ರೆ ಏನು ಮಾಡ್ತೀಯಾ? ನಿನ್ನಿಂದ ಏನೂ ಮಾಡ್ಲಿಕ್ಕೆ ಸಾಧ್ಯವಿಲ್ಲ. ನಾನು ಹೇಳಿದಂಗೆ ನೀನು ಕೇಳ್ಬೇಕು. ಈಗ ನೀನು ಇಲ್ಲಿಂದ ಹೊರಡು. ಅದೆಲ್ಲಿಂದ ಬಂದಿದೀಯೋ ಅಲ್ಲಿಗೇ ಹೋಗು. ಮಹರ್ಷಿ ಸಿಟ್ಟಿನಿಂದ ಕೂಗಿದ.
ಮೋಹನ ನಿಟ್ಟುಸಿರುಬಿಟ್ಟ. ಸರಿ ಮಹೀ. ಕೊನೆಗೂ ನನ್ನ ಕೊಲೆಗಾರನನ್ನಾಗಿಸಿ ಬಿಡ್ತೀಯ ಅಂದಾಯ್ತು. ಹಂ, ಆಗ್ಲಿ. ಆದ್ರೆ ಶ್ರಾವಣೀನ ಕೊಲೆ ಮಾಡುವಷ್ಟು ನೀಚ ನಾನಿನ್ನೂ ಆಗಿಲ್ಲ. ಅದರ ಬದಲಿಗೆ ನಿನ್ನನ್ನೇ ಮುಗಿಸಿದರೆ ಒಂದು ಚಿಕ್ಕ ಹುಡುಗಿಯ ಪ್ರಾಣ ಉಳಿಸಿದ ತೃಪ್ತಿ ನನಗಿರುತ್ತದೆ.
ಮೋಹನ ಮುಂದೆ ಬಂದವನೇ, ಮಹರ್ಷಿಯ ಕತ್ತು ಹಿಸುಕತೊಡಗಿದ. ಮಹರ್ಷಿಯ ಕಣ್ಣು ಕತ್ತಲಾಗುತ್ತಾ ಬಂತು. ದಡಬಡಿಸಿ ಕೈ ಕಾಲು ಆಡಿಸಿದ. ಆಸರೆಗಾಗಿ ತಡಕಾಡಿದ. ಇದ್ದಕ್ಕಿದ್ದಂತೆ ಬಿಗಿತ ಸಡಿಲಾದಂತಾಯಿತು. ಮಹರ್ಷಿ ಕಣ್ಣು ತೆರೆದ. ಯಾರೂ ಇರಲಿಲ್ಲ. ಅವನು ಬರೆಯುತ್ತಾ ಕುಳಿತಿದ್ದ ಟೇಬಲ್ ಚೆಲ್ಲಾಪಿಲ್ಲಿಯಾಗಿತ್ತು. ಮಹರ್ಷಿ ಇನ್ನೂ ಕುರ್ಚಿಯಲ್ಲಿ ಕುಳಿತಿದ್ದ.
ತಾನು ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗಲಿಕ್ಕೆ ಕೆಲ ಹೊತ್ತು ಬೇಕಾಯಿತು. ಮಹರ್ಷಿ ಇನ್ನೂ ಬೆವರುತ್ತಲೇ ಇದ್ದ. ಮನಸ್ಸನ್ನು ತಹಬದಿಗೆ ತರಲು ಅವನಿಗೆ ಮತ್ತೂ ಸ್ವಲ್ಪ ಹೊತ್ತೇ ಹಿಡಿಯಿತು. ಸ್ವಲ್ಪ ಸಮಾಧಾನವಾದ ಮೇಲೆ, ಕುರ್ಚಿಯಿಂದೆದ್ದು , ಕನಸಲ್ಲಿ ಬೆಚ್ಚಿಬಿದ್ದ ರಭಸಕ್ಕೆ ಹಾರಿ ಹೋಗಿದ್ದ ಹಾಳೆಗಳನ್ನೆಲ್ಲಾ ತಂದು ಮೇಜಿನ ಮೇಲೆ ಜೋಡಿಸಿದ. ಅವನಿಗೆ ತನ್ನ ಮೇಲೇ ನಗು ಬಂತು. ಕಥೆಯೊಳಗಿನ ಪಾತ್ರ ತನ್ನ ಕೊಲೆ ಮಾಡಿದಂತೆ? ಸಣ್ಣಗೆ ನಕ್ಕ. ಸರಿ, ದಣಿವಾರಿದ್ದರಿಂದ ಕಥೆ ಮುಂದುವರೆಸೋಣವೆಂದು ಮಹರ್ಷಿ ಮತ್ತೆ ಬರೆಯಲು ಕುಳಿತ.
ಆಗ, ಟಕ್ ಟಕ್ ಟಕ್ ಎಂದು ಬಾಗಿಲು ಬಡಿದ ಸದ್ದಾಯಿತು.