ಹೂತು ಹೋದವು ಮಾತು
ಮರೆತೇ ಹೋಯಿತೆ ನಗು
ಎಲ್ಲಿಂದ ಇಳಿದಿದೀ ಮೌನ
ಮನದ ಮೂಲೆಯೊಳಗೆ
ಬರಿದಾಗಿ ಹೋಯಿತೇ ಗಾಡಿ
ಕನಸು ಕೊಳ್ಳುವ ಮುನ್ನ
ಬರೆಯಲಾಗದ ಕವನ
ಹಾಕಿ ಒಯ್ದರೇ ಕನ್ನ
ಮರೆಯಾಗದ ನೆನಪುಗಳು
ಮನದೊಳಗೆ ಮೆರೆದಿರಲು
ಉರುಟಿ ಹೋದ ಕನಸುಗಳು
ಮತ್ತೆ ಮತ್ತೆ ಮರಳಿರಲು
ಬಿಸಿ ಉಸಿರು, ಅಸಹನೆ
ತಾಳಲಾಗದ ತಪನೆ
ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ