ದೂರ ಹೋಗುವ ಮಾತನಾಡಿದಾಗ, ನೀವು ತೋರಿಸಿದ ಪ್ರೀತಿ, ಹಾರೈಕೆ, ಸಾಂತ್ವನಗಳಿಗೆ ಆಭಾರಿ. ಅವುಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಕ್ಷಮೆಯಿರಲಿ.
ಈಗ ಎಲ್ಲಾ ಒಂದು ಹಂತಕ್ಕೆ ಬಂದಂತಿದೆ. ಅಬ್ಬ, ಇಲ್ಲಿಗೆ ಎಲ್ಲಾ ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೇನಾದರೂ ಅನಾಹುತವಾಗುತ್ತಿತ್ತು. ಸಣ್ಣವನಿದ್ದಾಗ ಸಾವು ನೋವು ನೋಡಿದ್ದು ಬಿಟ್ಟರೆ, ಇಲ್ಲಿಯವರೆಗೂ ಆ ಸಂಕಟ ಮತ್ತೆ ಅನುಭವಿಸಿರಲಿಲ್ಲ. ಅದೂ ಮೇಲಿಂದ ಮೇಲೆ. ಕಳೆದ ಕೆಲವು ತಿಂಗಳುಗಳಲ್ಲಿ ಬದುಕು ಸಾಕಷ್ಟು ಪಾಠ ಕಲಿಸಿದೆ. ಒಂದೇ ಗುಕ್ಕಿನಲ್ಲಿ ಸಾವು, ನೋವು, ಸಂಭ್ರಮ ಸಂತೋಷ ಎಲ್ಲವನ್ನೂ ಅನುಭವಿಸಿದ್ದೇನೆ. ರಜೆ ಹಾಕಿದ್ದು ಸಾಕು ಅಂತ ಅನಿಸಿದರೂ, ಮನಸ್ಸಿಗಿನ್ನೂ ಸೂತಕ ಕಳೆದಿಲ್ಲ. ಮನೆ-ಆಫೀಸು ಅಂತ ಇಷ್ಟರಲ್ಲೇ ದಿನ ಕಳೆದು ಹೋಗುತ್ತಿದೆ. ನನಗಾಗಿ ಒಂದಿಷ್ಟು ಸಮಯ ಎತ್ತಿಟ್ಟುಕೊಳ್ಳಬೇಕೆನ್ನುವುದು ಕೇವಲ ಮಾತಲ್ಲೇ ಉಳಿದು ಹೋಗುತ್ತದೆಯೆನ್ನುವ ಭಯದಿಂದ ಇವತ್ತು ಮತ್ತೆ ಬರೆಯಲು ಕುಳಿತಿದ್ದೇನೆ.
ಒಪ್ಪಿಕೊಂಡ ಕೆಲಸಗಳು ಒಂದಿಷ್ಟು ಹಾಗೇ ಉಳಿದಿವೆ. ಒಂದೊಂದಾಗಿ ಎಲ್ಲವನ್ನೂ ಮುಗಿಸಬೇಕಾಗಿದೆ. ನಾನು ತಪ್ಪಿಸಿಕೊಂಡ ನಿಮ್ಮೆಲ್ಲರ ಬರಹಗಳನ್ನು ಓದಬೇಕು, ಈ ಮುಂಚೆ ಅರ್ಧಕ್ಕೇ ನಿಲ್ಲಿಸಿರುವ ಕಥೆಗಳಿಗೊಂದು ಅಂತ್ಯ ಕಾಣಿಸಬೇಕು. ರಜೆ ಹಾಕಿದ ಇಷ್ಟು ದಿನಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹ ಲೋಕಕ್ಕೆ ಮತ್ತೆ ಮರಳಬೇಕು. ಹಾಗೆಂದು ನಿರ್ಧರಿಸಿದ್ದೇನೆ.