Tuesday, July 5, 2011

ಪಾಪಿ ಪರದೇಶಿ



ಗುಂಪಲ್ಲಿದ್ದೂ ಇಲ್ಲದಿದ್ದಂತೆ, ಜೊತೆಯಿದ್ದೂ ದೂರವಿದ್ದಂತೆ, ಜನಜಂಗುಳಿಯಲ್ಲಿದ್ದರೂ ಒಂಟಿಯಾಗಿರುವುದು ಅತ್ಯಂತ ಯಾತನಾದಾಯಕ. ಪರದೇಶಿಯಾಗಿ, ಪರಕೀಯನಾಗಿ, ಗುಂಪಿಗೆ ಸೇರದ ಪದವಾದಾಗ ಬಾಳು ಬವಣೆ. ಜೊತೆಯಿದ್ದವರಿಂದ ದೂರವಾಗಿ ಆಚೆ ದಡದಲ್ಲಿ ಕೂತು ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿ ಸಮಯ ಮುಂದಕ್ಕೆ ಓಡುವುದನ್ನು ಕ್ಷಣ ಕ್ಷಣವೂ ಎಣಿಸಬಹುದು. ಅಲ್ಲೆಲ್ಲೋ ಇರುವುವರು ಈಗೇನು ಮಾಡುತ್ತಿರಬಹುದು, ನನ್ನ ನೆನಪಿದೆಯೇ? ನಾನಲ್ಲಿದ್ದಿದ್ದಲ್ಲಿ ಹೇಗಿರುತ್ತಿತ್ತು?‌ ಬಹುಶಃ ಅಲ್ಲಿರುವವರಿಗೂ ಇದೇ ಗೊಂದಲವಿರಬಹುದಲ್ಲವೇ? ಕೆಲವೊಮ್ಮೆ  ದುಃಖ ಹಂಚಿಕೊಳ್ಳಲು ಮನಸ್ಸಾಗದು. ಸಂತಸ ಹಂಚಿಕೊಂಡಷ್ಟು ಸುಲಭವಾಗಿ ದುಃಖ ಹಂಚಲಾಗದು. ಮನಸ್ಸು ಹಗುರಾಗುವ ಮುನ್ನ ಎಳೆಯಲಾಗದಷ್ಟು ಭಾರವಾಗುತ್ತದೆ. ಆ ಕ್ಷಣ ಹೊತ್ತು ನರಕಯಾತನೆ.

ದೂರದೂರಿಗೆ ಹೋದಷ್ಟೂ ನೆನಪುಗಳ ಭಾರ ಭಾರಿ.  ಎಲ್ಲಿ ಏನು ನೋಡಿದರೂ‌ ಹೋಲಿಸಲು ಮನ ನಿಂತುಬಿಡುತ್ತದೆ. ಅದೆಷ್ಟೇ ಎತ್ತರದ ಕಟ್ಟಡವಿದ್ದರೂ, ಊರಲ್ಲಿ ಕಟ್ಟಿದ ಎರಡಂತಸ್ತಿನ ಮನೆ ನೋಡಿದ ಖುಶಿಯಾಗದು. ಮೈ ಕೊರೆವ ಚಳಿ, ಮುಂಜಾನೆ ನದಿಯಲ್ಲಿ ಮಿಂದ ನೆನಪಿನ ಎಳೆ ಹೊತ್ತು ತರುತ್ತದೆ. ಅದೇನೇ ಪಂಚತಾರಾ ಹೋಟಲಿನ ತಿಂಡಿಯಾಗಿದ್ದರೂ ಅಮ್ಮನ ಕೈ ತುತ್ತಿನ ಮುಂದೇನೂ‌ ಅಲ್ಲ. ಮೂರು ಹೊತ್ತೂ‌ ಉರಿವ ದೀಪಗಳು 'ಅಯ್ಯೋ ಎಂಟಕ್ಕೆ ಕರೆಂಟ್ ಹೋಗುತ್ತೆ, ಬೇಗ ಮಿಕ್ಸಿ ಹಾಕು' ಅನ್ನುವ ಧಾವಂತ ದುಮ್ಮಾನಗಳಿಗೆ ಜಾಗವಿಲ್ಲದಂತೆ ಮಾಡಿದೆ. ಅದೆಲ್ಲಾ ಈಗ ಮತ್ತೆ ಬೇಕಾಗಿದೆ. ಸುಖದ ಸುಪ್ಪತ್ತಿಗೆಯಿದ್ದರೂ ಏನೋ ಅತೃಪ್ತಿ. ಕಳಚಿದ ಕೊಂಡಿಗೆ ಮನ ತಡಪಡಿಸುತ್ತಿದೆ. ಮಲಗುವ ಮುನ್ನ ಈ ದಿನ ಅಮ್ಮ ಕ್ಯಾಲೆಂಡರಿನಲ್ಲಿ ಮತ್ತೊಂದು ಗೀಟನ್ನೆಳೆದಿರುತ್ತಾಳೆ ಎಂಬ ನೆನಪಾಗುತ್ತದೆ. ದಿನದ ಲೆಕ್ಕ ಅವಳಿಟ್ಟರೆ, ಈ ಹೊತ್ತಿಗೆ ನಾನೇನು ಮಾಡುತ್ತಿರುತ್ತೀನಿ ಎಂಬ ಲೆಕ್ಕ ಅಪ್ಪನ ಪಾಲಿನದ್ದು. ಅವರಿಬ್ಬರ ಲೆಕ್ಕದ ವರದಿ ನನಗೊಪ್ಪಿಸುವುದು ನನ್ನ ತಂಗಿಯ ಕೆಲಸ.
ಸದಾ ಗೆಳೆಯರ ಬಳಗದಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊಸ ಹವೆ ಇನ್ನೂ ಒಗ್ಗಿಲ್ಲ. ಪಾಪಿಗಳು, ಮಾತಿಗೆ ಸಿಕ್ಕಾಗೊಮ್ಮೆ ತಾವೇನೇನು ಮಾಡಿದೆವೆಂಬ ಸುದ್ದಿ ಹೇಳಿ ಹೊಟ್ಟೆ ಉರಿಸುತ್ತಾರೆ. ಸದ್ಯಕ್ಕೆ ಸಂಗೀತವೊಂದೇ ಸಂಗಾತಿಯಾಗಿದೆ.

---

ಮನಸು ಹುಚ್ಚು ಹಯದ ಮೇಲೆ ಹೊರಟಿದೆ. ಒಮ್ಮೊಮ್ಮೆ ತೀವ್ರವಾಗಿ ಕಾಡುವ ಒಂಟಿತನ, ಮತ್ತೊಮ್ಮೆ ಮುದ ನೀಡುತ್ತದೆ. ಕ್ಷಣ ಚಿತ್ತ, ಕ್ಷಣ ಪಿತ್ಥ. ಸುಮ್ಮನೆ ಬರೆಯುತ್ತಾ ಹೊರಟರೆ ಏನಾದರೂ ಸಿಗಬಹುದೆಂದು ಭಾವಿಸಿದವನಿಗೆ ಆತ್ಮಾವಲೋಕನಕ್ಕೊಂದು ಅವಕಾಶ ಸಿಕ್ಕಂತಾಗಿದೆ. ಕೆಲವೊಮ್ಮೆ ಜೀವನದ ನಿರರ್ಥಕತೆಯ ಬಗ್ಗೆ ಯೋಚಿಸಿದರೆ, ಮಗದೊಮ್ಮೆ ಅತುಲ ಸಾಧ್ಯಾ ಸಾಧ್ಯತೆಗಳ ಬಗ್ಗೆ, ವಿಪುಲ ಅವಕಾಶಗಳ ಬಗ್ಗೆ ಯೋಚಿಸುವಂತಾಗುತ್ತದೆ. ಒಟ್ಟಿನಲ್ಲಿ ಹೂಳೆತ್ತಬೇಕಾಗಿದೆ. ಜಡವಾಗಿರುವುದು ನನಗೇ ಗೊತ್ತಾಗುವಷ್ಟು ಬೇಸರವಾಗಿದೆ. ಕನಸಿನ ರೆಕ್ಕೆ ಬಿಚ್ಚಿ ಹಾರಬೇಕೆಂದುಕೊಂಡರೂ‌ ಮೇಲೆ ಯಾವುದೋ‌ ಅದೃಶ್ಯ ಪಂಜರವಿದೆಯೇನೋ ಎಂಬಂತೆ ಸುಮ್ಮನೆ ಕುಳಿತಿದ್ದೀನಿ. ಬಹುಶಃ ಇದೇ ಮೊದಲ ಬಾರಿಗೆ ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಯೋಚಿಸಿದ್ದರ ಫಲವಿರಬೇಕು. ಸುಮ್ಮನಿದ್ದುಬಿಡಬೇಕು. ಸುಮ್ಮನಿರುವುದು ಬಲು ಕಷ್ಟ. ದೈನಂದಿನ ಕಾರ್ಯ ಕಲಾಪಗಳು ಹೇಗೋ‌ ನಡೆದು ಹೋಗುತ್ತವೆ. ಯಾವುದರಲ್ಲೂ ಮನಸ್ಸಿಲ್ಲ. ಅಪ್ಪನಿಗೆ ಕಣ್ಣು ಹೊಡೆದು, ಒಂದಿಷ್ಟು ಪ್ರೇಮ ಕಾವ್ಯ ಸಂಕಲನಗಳನ್ನೆತ್ತುಕೊಂಡು ಬಂದವನು ಅದರಲ್ಲಿ ಒಂದನ್ನೂ ಮುಟ್ಟಿಲ್ಲ. ವ್ಯಾಸರ ಕತೆಗಳು ಈ ಸಮಯದಲ್ಲಿ ಹೆಚ್ಚಾಗಿ ಅರ್ಥವಾಗುತ್ತಿವೆ. ಬರೆಯ ಹೊರಟರೆ ವಿಚಾರಗಳೇ ಇಲ್ಲ. ಯಾವತ್ತೋ ಅರ್ಧ ಬರೆದ ಕತೆಗಳನ್ನು ಮುಂದುವರೆಸೋಣವೆಂದರೆ, ಬರೆದ ಅರ್ಧವೇ ನೆನಪಿಲ್ಲ. ಒಲವಿನ ಹಂಗಿಲ್ಲದೆ ಕವಿತೆ ಬರೆಯಲೂ ಮನಸ್ಸಿಲ್ಲ. ನನ್ನೆಲ್ಲ ಕಥೆಗಳೂ ನನ್ನ ಒಂದಿಲ್ಲೊಂದು ಭಾವ ತೀವ್ರತೆಯಲ್ಲಿ ಬರೆದಂತವು. ಈ ಭಾವ ಹೀನತೆಯಲ್ಲಿ ಏನಾದರೂ‌ ಹುಟ್ಟಬಹುದೆಂಬ ನಿರೀಕ್ಷೆಯಲ್ಲಿ...

---

ಮನೆಯೆದುರು ಬಿದ್ದಿರುವ ಹಿಮವನ್ನೇ ದಿಟ್ಟಿಸುತ್ತಾ ಕುಳಿತಿದ್ದೇನೆ. ಕೋಣೆಯೊಳಗಿಂದ ಕಲ್ಯಾಣಿ ತೇಲಿ ಬರುತ್ತಿದೆ. ನೆನಪುಗಳು ಒಂದೊಂದಾಗಿ ಬಂದು ಕದ ತಟ್ಟುತ್ತಿವೆ. ಕೆಲವು ಅತೀ ಮಧುರ, ಕೆಲವು ಹಾಗೇ ಘಟಿಸಿದಂತವು, ಮತ್ತೆ ಕೆಲವು ಇನ್ನೂ ಅರಗಿಸಿಕೊಳ್ಳಲಾಗದಂತಹವು. ಎಲ್ಲವೂ ನನ್ನವೇ. ಮನೆ ನನ್ನದೇ, ಮನ ನನ್ನದೇ. ಕದ ತೆರೆದರೆ ಸಾಕು ಒಳಮನೆಯಿಂದ ನಡು ಮನೆಗೆ ಬಂದು ಕೂರುತ್ತವೆ. ಎದೆಯ ಕಪಾಟಿನಲ್ಲಿ ಎಷ್ಟೆಲ್ಲಾ ಅಡಗಿದ್ದವು. ಪ್ರೀತಿ, ಅಸೂಯೆ, ಸಣ್ಣತನ, ಸಾವು, ಹಗೆ, ದುಃಖ, ನಗೆ, ನಲಿವು, ಸಾಧನೆ. ನಾನು ಸುಮ್ಮನೆ ನಗುತ್ತೇನೆ.  ಅವೂ ಸುಮ್ಮನೆ ನಗುತ್ತವೆ. ಮತ್ತದೇ ಮೌನ. ಅದು ಶಾಂತಿಯೋ, ರುದ್ರ ತಾಂಡವದ ಮುನ್ಸೂಚನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಸಹನೀಯ. ಸುಮ್ಮನೆ ಯೋಚಿಸುತ್ತಾ ಕುಳಿತರೆ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋದಂತೆ ಭಾಸ. ರುದ್ರ ರಮಣೀಯ. ಅಲೆಗಳ ರೌದ್ರತೆಯಲ್ಲೂ ಒಂದು ಲಯ, ತಾಳವಿದ್ದಂತೆ. ಅವುಗಳಿಗೆ ನನ್ನನ್ನೊಪ್ಪಿಸಿ ಶರಣಾಗುತ್ತೇನೆ. ಒಂದು ವಿಲಕ್ಷಣ ಆನಂದ.  ಕಲ್ಯಾಣಿ ಮುಗಿದರೂ ಕಣ್ತೆರೆಯಲು ಮನಸ್ಸಿಲ್ಲ.

---

ಈಗ ಮತ್ತೆ ನ್ಯೂಯಾರ್ಕ್ ಗೆ ಹೋಗಿ ಬಂದೆ. ಕೆಲಸದ ಮೇಲೆ ಬೇರೆ ಊರಿಗೆ ಹೋದ ಮೇಲೆ ಪುನಃ ಅಲ್ಲಿಗೆ ಹೋಗಲಾಗಿರಲಿಲ್ಲ. ಎಲ್ಲಿಗೇ ಹೋದರೂ ಕೆಲ ಕಾಲ ಇದ್ದ ತಕ್ಷಣ ಅದೆಷ್ಟು ನಮ್ಮದು ಅನಿಸುತ್ತದೆ. ಅರೇ, ನಾನು ಹೋಗಿ ಬರುತ್ತಿದ್ದ ದಾರಿ, ಹತ್ತುತ್ತಿದ್ದ ರೈಲು, ಕಾಫಿ ಕುಡಿಯುವ ಜಾಗ, ಸಿನಿಮಾ ಥಿಯೇಟರು, ಎಲ್ಲವೂ ನನ್ನದೆನ್ನುವ ಭಾವ. ಬಹುಶಃ ನಾವಿರುವುದೇ ಹಾಗೇನೋ. ಊರಿಂದೂರಿಗೆ, ಪರದೇಶಕ್ಕೇ ಹೋದರೂ  ಕೆಲವೇ ದಿನಗಳಲ್ಲಿ ಎಲ್ಲವೂ ನಮ್ಮದೆನಿಸುತ್ತವೆ. ಒಂದಿಷ್ಟು ಜನರ ಪರಿಚಯವಾಗುತ್ತದೆ. ಗೆಳೆತನ ಮೂಡುತ್ತದೆ. ಮತ್ತೊಂದಿಷ್ಟು ದಿನಗಳಲ್ಲಿ ಅವರ ಮನೆಯಲ್ಲಿ ಯಾರಿದ್ದಾರೆ, ನಮ್ಮ ಮನೆಯಲ್ಲಿ ಎಷ್ಟು ಜನ, ನಮ್ಮಗಳ ಕಷ್ಟ ಸುಖ ಎಲ್ಲದರ ಪ್ರವರವೂ ಆಗಿ ಹೋಗುತ್ತದೆ. ನಮ್ಮದೇ ಪ್ರಪಂಚ ಹುಟ್ಟುಕೊಂಡಿರುತ್ತದೆ, ಕೇವಲ ನಮ್ಮದೇ ಆದ ಪ್ರಪಂಚ. ಅದೆಷ್ಟು ವಿಚಿತ್ರವಲ್ಲವೇ, ನಮ್ಮ ಕುಟುಂಬ, ನಮ್ಮ ಊರು, ನಮ್ಮ ಬಳಗ, ನಮ್ಮ ಸ್ನೇಹಿತರು ಎಲ್ಲರನ್ನೂ ಬಿಟ್ಟು ಬಂದಿದ್ದೀವಿ ಎಂದು ಕೊರಗುವಷ್ಟರಲ್ಲಿಯೇ ನಮಗರಿವಿಲ್ಲದಂತೆಯೇ ಮತ್ತೊಂದು ಎಲ್ಲಾ "ನಮ್ಮಗಳು"‌ಹುಟ್ಟಿಕೊಂಡಿರುತ್ತವೆ. ಎಲ್ಲೆಲ್ಲಿಯೋ ಕಟ್ಟಿದ ಅನೇಕ ಚಿಕ್ಕ ಚಿಕ್ಕ ಪ್ರಪಂಚಗಳ ಸಮೂಹವೇ ನನ್ನ ಬದುಕು.

ಹುಟ್ಟಿದ ಊರಲ್ಲಿ ಬೆಳೆಯಲಿಲ್ಲ, ಬೆಳೆದ ಕಡೆ ಉಳಿಯಲಿಲ್ಲ. ಇದು ನನ್ನದು ಎಂದು ಅನಿಸುವಷ್ಟರಲ್ಲಿಯೇ ಕಾಲಿಗೆ ಚಕ್ರ ಕಟ್ಟಿಕೊಂಡಾಗಿದೆ. ನಮ್ಮದೇ ಊರು, ನೆಲ, ಜನ ಎಲ್ಲವನ್ನೂ ಬಿಟ್ಟು ಮುಂದೆ ಬಂದಾಗಿದೆ. ಬದುಕು ಎಲ್ಲಿಂದಲೋ ಶುರುವಾಗಿ ಅದೆಲ್ಲಿಗೆ ಕರೆದೊಯ್ಯುತ್ತಿದೆಯೋ ಗೊತ್ತಾಗುತ್ತಿಲ್ಲ.

---

ಇಲ್ಲಿಗೆ ಎಲ್ಲಾ ಮುಗಿಯಿತು ಎಂದು ಯಾವಾಗ ಅನಿಸುತ್ತದೋ ಆಗ ಸಮಯ ಓಡಲು ಶುರು ಮಾಡುತ್ತದೆ. ಅಯ್ಯೋ ಅಲ್ಲಿಗೆ ಹೋಗಬೇಕಿತ್ತು, ಅದನ್ನು ನೋಡಬೇಕಿತ್ತು, ಛೇ, ಆ ಡ್ರೆಸ್ ಪುಟ್ಟುಗೆ ಚೆನ್ನಾಗಿರ್ತಿತ್ತೇನೋ ತಗೊಂಡು ಬಿಡಬೇಕಿತ್ತು. ಮನಸ್ಸು ಯೋಚಿಸುವ ಧಾಟಿಯೇ ಬದಲಾಗುತ್ತದೆ. ಮನೆಗೆ ಹೋಗುವ ಸಮಯ ಹತ್ತಿರವಾಗುತ್ತಿದೆ. ದೇಶ ಬಿಟ್ಟು ಬಂದು ಕಾಲವಾಗಿದ್ದರೂ, ನಮ್ಮೂರು, ನಮ್ಮೋರು ಎಲ್ಲ ನೆನಪುಗಳೂ ಇನ್ನೂ ಹಸಿರು.
ಇಲ್ಲಿಗೆ ಬಂದ ಮೇಲೆ ಬರೆದ ಒಂದಿಷ್ಟು ಸಾಲುಗಳನ್ನು ಡೈರಿಯಿಂದ ಹಾಗೇ ಎತ್ತಿ ಇಲ್ಲಿಟ್ಟಿದ್ದೇನೆ. ಡೈರಿಯಿಂದ ಇನ್ನೊಂದಿಷ್ಟು  ಎತ್ತಬಹುದಿತ್ತೇನೋ, ಆದರೆ ಮನಸ್ಸಿಲ್ಲ. ಅದಾಗಲೇ ಊರಿಗೆ ಹೋಗಿಯಾಗಿದೆ. ಇನ್ನು ನಾನು ಹೋಗಬೇಕಷ್ಟೇ.

ಅಪ್ಪನಿಗೆ ಫೋನ್ ಮಾಡಿದರೆ, 'ಬಾ ಮಗನೇ ಬಾ. ಅಲ್ಲಿಗೆ ಹೋಗಿ ಕೊಬ್ಬಿದೀಯಾ, ಇಲ್ಲಿಗೆ ಬಂದ ಮೇಲೆ ಕುತ್ತಿಗೆಗೆ ಒಂದು ಗುದಿ ಕಟ್ತೀನಿ. ಅವಾಗ ಬುದ್ದಿ ಬರುತ್ತೆ' ಎಂದು ಹೆದರಿಸ್ತಿದಾರೆ. ನನ್ನ ತಂಗಿಯಂತೂ 'ಏಯ್ ಐಫೋನ್ ತಗೊಂಡ್ಯೇನೋ' ಅಂತ ಆವಾಜ್ ಹಾಕ್ತಿದಾಳೆ.  ಬೆಂಗಳೂರಿನ ರೂಂಮೇಟ್ 'ನಂಗೆ ಲ್ಯಾಪ್ ಟಾಪ್ ತರ್ಲಿಲ್ಲ ಅಂದ್ರೆ ಬರಲೇ ಬೇಡ' ಅಂತ ಹೇಳಿದ್ದಾನೆ. ಯಾರಿಗೆ ಏನು ತಗೊಂಡು ಹೋಗ್ಬೇಕೋ ಗೊತ್ತಾಗ್ತಿಲ್ಲ. ಅಮ್ಮ ಮಾತ್ರ, 'ಏನೂ ತರಬೇಡ ಮಗನೇ, ಸುಖವಾಗಿ ಬಂದ್ಬಿಡು ಅಷ್ಟೇ ಸಾಕು' ಅಂತ ಹೇಳ್ತಿದಾಳೆ.  ನಾನು ಈ ಸಲ ಅಮ್ಮನ ಮಾತು ಮೀರಲ್ಲ.