ಸಾಕಷ್ಟು ನೋಡಿಯಾಗಿದೆ, ಸಾಕಷ್ಟು ಸುತ್ತಿಯಾಗಿದೆ, ಆದರೂ ಅನುಭವ ಸಾಲದು. ತಲೆಯೆತ್ತಿ ನೋಡಿದರೆ ಯಾರಾದರೂ ಕಂಡಾರೆಯೇ ಎಂದು ಕಣ್ಣರಸುತ್ತವೆ. ಏನೇ ಬಡಾಯಿ ಕೊಚ್ಚಿಕೊಂಡರೂ ಕೆಲವು ಗಳಿಗೆ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿ ಮಗುವಾಗಬೇಕೆನಿಸುತ್ತದೆ. ಮಗುವಾಗುವುದರಲ್ಲಿ ಹಿತವಿದೆ. ದೊಡ್ಡವರು ಚಿಕ್ಕ ಮಕ್ಕಳೊಂದಿಗೆ ಆಡುವುದು ಅವುಗಳನ್ನು ಖುಶಿ ಪಡಿಸಲೋ ಅಥವಾ ತಾವು ಮಗುವಾಗುವ ಹಂಬಲಕ್ಕೋ ಎಂಬ ಗೊಂದಲ ನನಗಿದೆ. ಅವುಗಳ ಮುಗ್ಧ ಲೋಕದಲ್ಲಿ ತೊದಲು ಮಾತನ್ನಾಡುತ್ತಾ ಅಂಬೆಗಾಲಿಡುವುದೇ ಒಂದು ಮಹದಾನಂದ. ಊರಿಗೆ ಹೋದಾಗಲೆಲ್ಲಾ ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಕೆಲ ಹೊತ್ತು ಮಲಗಿರುತ್ತೇನೆ. ಆ ಸಮಯದಲ್ಲಿ ಅಮ್ಮನ ಪಾಲಿಗೆ ನಾನು ಕೇವಲ ತಿಂಗಳ ಕೂಸು, ನನಗೋ ಆ ಕೆಲ ಹೊತ್ತು ಮತ್ತಾವ ಅಷ್ಟೈಶ್ವರ್ಯವೂ ಬೇಡ. ಅದೆಲ್ಲಿರುತ್ತಾರೋ ಗೊತ್ತಿಲ್ಲ, ಸರಿಯಾಗಿ ಅದೇ ಸಮಯಕ್ಕೆ ಅಪ್ಪ ಬರ್ತಾರೆ.
ಆಹಾಹ ಬಾಲ ಲೀಲೆ ನೋಡಲೇ, ಎದ್ದೇಳೋ ಭಾಡ್ಕೋವ್, ಮೆಲ್ಲನೆ ಒದೀತಾರೆ.
ಒಂಚೂರು ಕಾಫಿ ಕೊಡ್ತೀಯೇನೇ ಅಂತ ಅಮ್ಮನ ಕೇಳ್ತಾರೆ.
ನಾನು, ಅಮ್ಮ ಇಬ್ಬರೂ ಗೊಣಗ್ತೀವಿ. ಅಮ್ಮ ಎದ್ದು ಅಡಿಗೆ ಮನೆಗೆ ಹೋದ್ರೆ, ನಾನು ಲೊಕೇಷನ್ ಶಿಫ್ಟ್. ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ಮಲಗ್ತೀನಿ. ಎರಡೇ ನಿಮಿಷ ಅಷ್ಟೇ. ನಾನು ಮೈಮರೆತಿದೀನಿ ಅಂತ ಅನಿಸಿದ ಕೂಡಲೇ ಫಟ್ ಅಂತ ಕಾಲೆಳೆದುಕೊಂಡು ದೂರ ಸರೀತಾರೆ. ಧಡ್ ಅಂತ ನೆಲಕ್ಕೆ ತಲೆ ಬಡಿಯಬೇಕು. ಆದ್ರೆ ನಾನು ಬಿಸಿ ಹಾಲು ಕುಡಿದ ಬೆಕ್ಕು. ತಲೆಯನ್ನು ಗಾಳಿಯಲ್ಲಿ ಹಾಗೇ ಇಟ್ಟು ಅಪ್ಪನ ಕಡೆ ನೋಡಿ ಹೆಂಗೆ ಅಂತ ನಕ್ಕು, ಪುನಃ ತೊಡೆ ಮೇಲೆ ತಲೆಯಿಡಲು ಮಲಗಿದಂತೆಯೇ ತೆವಳಿ ಅವರ ಬಳಿ ಹೋಗ್ತೀನಿ. ಪ್ಲಾನ್ ಫೇಲ್ ಆಯ್ತು ಅಂತ ಅಪ್ಪಂಗೆ ಬೇಜಾರಾಗಿರುತ್ತೆ. ಹೋಗೋ ಬೇಕೂಫ ಅಂತ ಬೈಯ್ದು ಅವರೂ ಕುಳಿತಂತೆಯೇ ದೂರ ಸರಿಯುತ್ತಾ ಹೋಗ್ತಾರೆ. ನಾನು ತೆವಳುವುದೂ, ಅವರು ದೂರ ಸರಿಯುವುದೂ ನಡೆದೇ ಇರುತ್ತೆ, ಅಷ್ಟರಲ್ಲಿ ಅಮ್ಮ ಕಾಫಿ ಹಿಡಕೊಂಡು ಬಾಗಿಲಲ್ಲಿ ನಿಂತು 'ಅಯ್ಯೋ! ನೋಡ್ಲಿಕ್ಕಾಗಲ್ಲಪ್ಪಾ ನಿಮ್ಮಿಬ್ರನ್ನೂ' ಅಂತ ಅನ್ನಬೇಕು, ನಾವಿಬ್ರೂ ಸುಮ್ಮನಾಗಬೇಕು.
ದೊಡ್ಡವನಾಗಿದೀಯ, ಮಂಗ ಚೇಷ್ಟೆ ಬಿಡು. ವಯಸ್ಸಿಗೆ ತಕ್ಕ ಹಾಗೆ ಇರೋದನ್ನ ಕಲಿ ಅಂತ ಇತ್ಯಾದಿ ಉಪದೇಶಗಳನ್ನು ಅವಾಗವಾಗ ಅಪ್ಪ ನನ್ನ ಕಿವಿ ಮೇಲೆ ಒಗೀತಾನೇ ಇರ್ತಾರೆ. ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಅದ್ಭುತವಾದ ಕಿವಿ ನನಗಿವೆ. ಇಂಥ ಮಾತುಗಳೆಲ್ಲಾ, ಈ ಕಿವಿಯಿಂದ ಹೊರಟು ಆ ಕಿವಿಯಿಂದ ಹೊರ ಹೋಗಿ ಬಿಡ್ತಾವೆ. ನಾನು ಬಿಡುಗಡೆಯ ನಿಟ್ಟುಸಿರು ಬಿಡುತ್ತೇನೆ. ನಾನೇನು ಕಡಿಮೆಯಿಲ್ಲ, ಉಲ್ಟಾ ಶುರು ಮಾಡ್ತೀನಿ. ನೋಡಪ್ಪಾ, ನಿಂಗೂ ವಯಸ್ಸಾಯ್ತು, ಮುದುಕನಾಗಿಬಿಟ್ಟೆ ಎಂದು ಹೇಳೋದೇ ತಡ, ಮುದುಕ ಅನ್ನಬೇಡ ನನ್ನ. ನನಗೇನ್ಲೇ ವಯಸ್ಸಾಗಿರೋದು ಮಹಾ. ಇನ್ನೂ ರಿಟೈರ್ ಆಗಿಲ್ಲ ಕಣೋ ನಾನು. ವಾದ ಶುರು.
ನನ್ನ ತಂಗಿ ಮನೇಲಿ ಇದ್ದರಂತೂ ಇಬ್ಬರೂ ಸೇರಿ ಮುದುಕ ಅಂತ ಛೇಡಿಸಲು ಶುರು ಮಾಡ್ತೀವಿ. ಒಂದೆರಡು ನಿಮಿಷ ನಮ್ಮ ಜೊತೆ ವಾದ ಮಾಡಲು ನೋಡ್ತಾರೆ ಅಷ್ಟೇ, ಉಪದೇಶ ಎಲ್ಲಾ ಕಟ್, ಅಪ್ಪ ಮನೆಯಿಂದ ಎಸ್ಕೇಪ್... ಅಮ್ಮ ಮುಸಿಮುಸಿ ನಗುತ್ತಿರುತ್ತಾಳೆ.
ನಾನು ಪಿತೃಪೀಡಕನೆಂದು ನೀವಂದುಕೊಂಡರೆ ತಪ್ಪು. ಪುಣ್ಯಾತ್ಮ ನಮ್ಮಪ್ಪ ಕಾಡೋದೇ ಬೇರೆ ತರಹ. ನನ್ನ ಇಂಜಿನಿಯರಿಂಗ್ ರಿಸಲ್ಟ್ ನೋಡಲು ಕೂಡ ನನ್ನನ್ನು ಒಬ್ಬನನ್ನೇ ಕಳಿಸುತ್ತಿರಲಿಲ್ಲ. ಅದೆಷ್ಟೇ ಸಬ್ಜೆಕ್ಟಲ್ಲಿ ಫೇಲ್ ಆಗಿದ್ರೂ ಮನೆಗೆ ಬರ್ತೀನಿ ಕಣಪ್ಪಾ, ಹೊಳೆ ಹಾರುವಷ್ಟು ಮೂರ್ಖ ನಾನಲ್ಲ ಎಂದು ನಾನೇನೇ ಹೇಳಿದರೂ ಕೇಳ್ತಿರ್ಲಿಲ್ಲ.
ಕುಲೋದ್ಧಾರಕ ಕಣಪ್ಪಾ ನೀನು, ಅದ್ಹೆಂಗೋ ಒಬ್ಬನ್ನೇ ಕಳಿಸ್ಲಿ. ಜೊತೆಗೆ ನಾನೂ ಬರ್ತೀನಿ ಅಂತ ತಮಾಷಿಯಾಗೆ ತೇಲಿಸಿಬಿಡೋರು.
ರಿಸಲ್ಟ್ ನೋಡುವುದಕ್ಕೂ ಮುಂಚೆಯೇ ಜಗಳ. ಒಬ್ಬನೇ ಹೋಗ್ತೀನಿ ಅಂತ ನಾನು, ಜೊತೆಗೆ ನಾನೂ ಬರ್ತೀನಿ ಅಂತ ಅಪ್ಪ.
ಅಯ್ಯೋ ಕರ್ಕೊಂಡ್ ಹೋಗ್ಬಾರೋ, ಮನೇಲೇ ಇದ್ರೆ ನನ್ನ ಪ್ರಾಣ ತಿಂತಾರೆ ಅಂತ ಅಮ್ಮ ಜೋರು ಮಾಡ್ಬೇಕು. ಅಪ್ಪ ಏನೋ ಗೆದ್ದವರ ತರಹ ನನ್ನ ಕಡೆ ನೋಡಿ ಬಾರಲೇ ಹೋಗಣ ಅನ್ನಬೇಕು. ನಾನು ಮುಖ ಕೆಟ್ಟದಾಗಿ ಮಾಡ್ಕೊಂಡು ಗೊಣಗಾಡ್ತಾ ಹೊರಡ್ಬೇಕು.
ಸುಮಾರು ಹತ್ತನೇ ತರಗತಿಯಿಂದಲೂ ನಮ್ಮನೇಲಿ ಈ ಜಗಳ ಇದ್ದಿದ್ದೇ.
ನಮ್ಮಿಬ್ಬರ ಜಗಳದ ಫಲವೋ, ಅವಳ ಅದೃಷ್ಟವೋ ಏನೋ, ನನ್ನ ತಂಗಿಯ ರಿಸಲ್ಟ್ ನೋಡುವ ಭಾಗ್ಯ ನನ್ನ ಪಾಲಿನದ್ದು. ಆದರೆ ನಾನು ಬಿಡಬೇಕಲ್ಲ. ರಿಸಲ್ಟ್ ಹೇಳುವಾಗ ಅವಳ ಗೆಳತಿಯರದ್ದೆಲ್ಲಾ ಹೇಳಿ ಅವಳದ್ದೇ ಹೇಳ್ತಿರಲಿಲ್ಲ. ಒಂದು ವೇಳೆ ಹೇಳಿದರೂ ಎಲ್ಲಾ ತಪ್ಪು ತಪ್ಪಾಗಿ ಹೇಳ್ತಿದ್ದೆ. ಸರಿಯಾಗಿ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಲು ಅವಳು ಹರ ಸಾಹಸ ಮಾಡಬೇಕು. ಆದರೆ ಅವಳ ಕಷ್ಟ ಅಲ್ಲಿಗೇ ಮುಗಿಯಲ್ಲ. ಡಿಗ್ರಿಯಲ್ಲಿ ಒಂದಿಷ್ಟು ಗೋಲ್ಡ್ ಮೆಡಲ್ ಅವಳಿಗೆ ಕೊಡ್ತಾರೆ ಅಂತ ಹೇಳಿದ್ಲೋ ಇಲ್ವೋ, ಶುರುವಾಯ್ತಲ್ಲಪ್ಪ. ಅಪ್ಪನ ಕಡೆಯಿಂದ ಅವಳ ಗುಣಗಾನ. ಫೋನ್ ಮಾಡ್ದಾಗೊಮ್ಮೆ ಕನಕಮಾಲಾ, ಸ್ವರ್ಣಮಾಲಾ, ರತ್ನಮಾಲಾ, ರತ್ನಮಂಜರಿ ಅಂತ ಏನೇನೋ ಹೇಳ್ತಾರೆ ಕಣೋ ತಡ್ಕಳ್ಳಿಕ್ಕಾಗಲ್ಲ ಅಂತ ಹೇಳ್ತಿದ್ಲು. ಪಾಪದ ಹುಡುಗಿ. ಈಗ ನಾನು, ಅಪ್ಪ ಇಬ್ಬರೂ ಅವಳ ಗುಣಗಾನ ಮಾಡ್ತೀವಿ.
ನಮ್ಮನೇಲಿ ಎಲ್ಲರಿಗೂ ಅಡ್ಡ ಹೆಸರುಗಳಿವೆ. ಅಮ್ಮನ ಪಾಲಿಗೆ ನಾನು ನನ್ನ ತಂಗಿ ಇಬ್ರೂ ಕಂದಾ. ಅವಳು ಯಾರನ್ನ ಕರೀತಿದ್ದಾಳೆ ಅಂತ ನಾವೇ ಊಹಿಸಬೇಕು. ಇನ್ನು ಅಪ್ಪ, ನನ್ನ ಪಾಪು, ಕಂದಾ, ಹೈವಾನ್, ಭಾಡ್ಕೋವ್, ಬೇಕೂಫ ಇತ್ಯಾದಿಯಾಗಿ ಕರೆಯುತ್ತಿರುತ್ತಾರೆ. ನನ್ನ ತಂಗಿಯನ್ನಂತೂ ಅದೇನೇನೋ ಕರೀತಿರ್ತಾರೆ. ಹೆಚ್.ಎನ್, ಎನ್.ಹೆಚ್, ಹೆಚ್.ಎಮ್, ಹೆಚ್.ಹೆಚ್.ಎಮ್. ಅಪ್ಪ ಮಗಳ ಮಧ್ಯೆ ಹೀಗೆ ಅವೆಷ್ಟೋ ಕೋಡ್ ಗಳಿವೆ. ನೀನು ಏನು ಬೇಕಾದ್ರೂ ಕರಿ, ಬೇರೆಯವರಿಗೆ ಮಾತ್ರ ಗೊತ್ತಾಗಬಾರದು ಅಂತ ಅವಳು ಅಪ್ಪನಿಗೆ ತಾಕೀತು ಮಾಡಿದ್ದಾಳೆ. ಕೆಲವೊಂದು ಅತಿ ಮಧುರವಾಗಿದ್ದರೂ, ಇನ್ನು ಕೆಲವು ಪಕ್ಕಾ ಬಯಲುಸೀಮೆಯವರು ಮಾತ್ರ ಹೇಳಬಲ್ಲಂತವು. ನನ್ನ ಪಾಲಿಗೆ ಮಾತ್ರ ಅವಳು ಪುಟ್ಟು. ಕೆಲವೊಮ್ಮೆ ಪ್ರೀತಿ ಹೆಚ್ಚಾಗಿ ಪಿಶಾಚಿ ಅಂತ ಕರೆದಾಗ ಅವಳೂ ಅಷ್ಟೇ ಪ್ರೀತಿ ತೋರಿಸ್ತಾಳೆ. ಅಮ್ಮನನ್ನು ನಾನು ಗುಂಡಿ, ಸುಂದರಿ ಎಂದು ಕರೆದರೆ , ಅಪ್ಪನನ್ನು ನಾವೆಲ್ಲಾ ಪಿತಾಶ್ರೀ, ಸಾಮಿ, ಅಪಾರ ಎಂದು ಕರೀತೀವಿ. ಸಾಮಿ ಎಂಬುದು ಸ್ವಾಮಿಯ ಅಪಭ್ರಂಶವಾದರೆ, ಅಪಾರದ ಹಿಂದೆ ಒಂದು ಪುಟ್ಟ ಕಥೆಯಿದೆ.
ಸರಿಯಾಗಿ ನೆನಪಿಲ್ಲ, ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದೆ ಅಂತ ಕಾಣುತ್ತೆ. ಕುಮಾರವ್ಯಾಸನನ್ನು ಓದುವುದಾಗಿ, ಅಪ್ಪ ಓದುತ್ತಿದ್ದ ಭಾರತ ಕಥಾಮಂಜರಿಯನ್ನು ಎತ್ತಿಕೊಂಡಿದ್ದೆ. ಹೀಗೇ ಓದುತ್ತಾ ಕುಳಿತಿದ್ದಾಗ ಒಂದು ದಿನ ಹೆಸರು ಹೊಳೆದೇ ಬಿಟ್ಟಿತ್ತು. ಮನೆಗೆ ಬಂದವನೇ ಹೇಳಿದ್ದೆ. ಅಪ್ಪಾ. ಗದಗಿನ ನಾರಾಯಣ ಕುಮಾರವ್ಯಾಸನಾದರೆ, ನೀನು, ಕೊಮಾರನಹಳ್ಳಿ ನಾರಾಯಣ ಅಪಾರವ್ಯಾಸ.
ಅಮ್ಮ, ಏನೋ ಹಂಗಂದ್ರೆ ಅಂತ ಕೇಳಿದ್ಲು.
ಅದೇನಮ್ಮ, ಸುತ್ತಳತೆ ಜಾಸ್ತಿ ಇದೆಯಲ್ಲ. ಅದಕ್ಕೇ ಆ ಹೆಸರು. ಅಪಾರ-ವ್ಯಾಸ.
ಅವತ್ತು ಅಪ್ಪ ಅಟ್ಟಿಸಿಕೊಂಡು ಬಂದಿದ್ದರು.
ಈಗ ಮನೆಯಲ್ಲಿ ಎಲ್ಲರೂ ಅವರನ್ನು 'ಅಪಾರ' ಎಂದು ಪ್ರೀತಿಯಿಂದ ಕರೆಯುತ್ತೀವಿ.
ಅಪಾರನನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯವೇ. ಯಾವಾಗ ಏನು ಮಾಡ್ತಾರೆ ಅಂತ ಹೇಳೋದು ಕಷ್ಟ. ತುಲಾ ರಾಶಿಯವರೇ ಹಾಗಂತೆ ಕಣೋ, ಮನಸ್ಸು ಮರ್ಕಟವಂತೆ. ನಂಗೆ ಮದುವೆಗೂ ಮುಂಚೇನೇ ಆನೆಗುಂದ ಅಣ್ಣ ಹೇಳಿದ್ದ ಎಂದು ಅಮ್ಮ ಹೇಳಿದರೆ, ಏನೇ ಅದು? ಅಮ್ಮ ಮಗ ಸೇರ್ಕೊಂಡು ನನ್ನ ಬಗ್ಗೆ ಏನೇನೋ ಹೇಳ್ತೀರಾ ಅಂತ ಅಪ್ಪ ಗುಟುರು ಹಾಕ್ತಿರ್ತಾರೆ.
ಸಣ್ಣ ಸಣ್ಣ ವಿಷಯಕ್ಕೂ ವಿಪರೀತವಾಗಿ ಖುಶಿ ಪಡುವ ಅಪ್ಪ, ನನಗೆ ಕೆಲಸ ಸಿಕ್ತು ಅಂತ ಗೊತ್ತಾದ ತಕ್ಷಣ ಇಡೀ ಊರಿಗೆ ಊಟ ಹಾಕ್ಸಿದ್ದ.
ಯಾಕಪ್ಪಾ ಕೆಲಸ ಬೇರೆ ಯಾರಿಗೂ ಸಿಗೋದೇ ಇಲ್ವೇ, ನಂಗೊಬ್ಬನಿಗೇನಾ ಅಂತ ಕೇಳಿದರೆ, ಊರೋವರ ಕಥೆ ತಗೊಂಡು ನನಗೇನೋ. ನನ್ನ ಮಗಂಗೆ ಕೆಲಸ ಸಿಕ್ಕಿದೆ ಅಂತ ನನಗೆ ಖುಶಿ, ನಮ್ಮ ಮನೆತನದಲ್ಲೇ ಓದ್ತಾ ಇರೋವಾಗಲೇ ಕೆಲ್ಸ ಸಿಕ್ಕಿದ್ದು ನಿಂಗೇ ಮೊದಲು. ನಿಮ್ಮ ಕಾಲೇಜಿನಲ್ಲೂ ಅಷ್ಟೇ ಅಲ್ವೇನೋ, ನಿಂಗೇ ತಾನೇ ಫಸ್ಟು? ಅದೆಲ್ಲ ಬಿಡು. ನನ್ನ ಸಂತೋಷಕ್ಕೆ ನಾನು ಊಟ ಹಾಕಿಸಿದರೆ, ನಿಂಗೇನೋ ಕಷ್ಟ? ನಾನು ಸುಮ್ಮನಾಗಿದ್ದೆ.
ಏನಪ್ಪಾ ನಿನ್ಮಗ ಕೆಲ್ಸಕ್ಕೆ ಹೋಗ್ತತಾ, ಎಸ್ಟ್ ಸಣ್ಣಕೈತೆ? ಆಗ್ಲೇ ಸಿಕ್ತಾ? ಸಂಬ್ಳ ಎಸ್ಟು ಎಂಬಿತ್ಯಾದಿ ಪ್ರಶ್ನೆಗಳನ್ನು ಊರ ಜನ ಕೇಳ್ತಿದ್ರೆ, ನಾನು ನಾಚಿಕೆಯಿಂದ ಮತ್ತಷ್ಟು ಮುದುಡಿ ಸಣ್ಣಗಾಗುತ್ತಿದ್ದೆ.
ಅದಲ್ಲಿಗೇ ಮುಗಿಯಲಿಲ್ಲ, ಅವರಿಗೆಲ್ಲಾ ಏನೇನು ಹೇಳಿದ್ರೋ ಗೊತ್ತಿಲ್ಲ. ಕೆಲಸಕ್ಕೆ ಸೇರಿ ಸ್ವಲ್ಪ ದಿನದ ಮೇಲೆ ಊರಿಗೆ ಹೋಗಿದ್ದೆ. ಊರಲ್ಲಿ ತಿರುಗಾಡಿಕೊಂಡು ಬಂದು ಅಪ್ಪನಿಗೆ ಹೇಳ್ದೆ, ಯಾಕೋ ಸ್ವಲ್ಪ ಜಾಸ್ತೀನೇ ಜನ ಮಾತಾಡ್ಸಿದ್ರು ಕಣಪ್ಪಾ ಇವತ್ತು.
ಹೌದು ಮಗನೇ, ನೀನು ಅವರ ಪಾಲಿಗೆ ಯಾವುದೋ ಬೇರೆ ಲೋಕದಿಂದ ಬಂದವನು ಕಣೋ ಅಂತ ಅಪ್ಪ ಹೇಳಿದ್ರು. ಅದರ ಅರ್ಥ ನನಗೆ ಗೊತ್ತಾಗಿದ್ದು ಮರುದಿನ.
ಊರಲ್ಲಿ ಒಬ್ಬರ ಮನೆಯಲ್ಲಿ ಕುಳಿತು ಟೀವಿ ನೋಡ್ತಾ ಮಾತಾಡ್ತಿದ್ದೆ. ಪಕ್ಕದ ಮನೆಯವರ ಮಗುವೊಂದು ಅಲ್ಲಿಗೆ ಬಂದು ಓದ್ತಾ ಇತ್ತು. ಆಗಾಗ ಟೀವಿ ನೋಡುವುದೂ, ನಮ್ಮ ಮಾತು ಕೇಳುವುದೂ ಮಾಡ್ತಾ ಇತ್ತು. ಆ ಹುಡುಗನ ಅಪ್ಪ ಆಗ ಅಲ್ಲಿಗೆ ಬಂದ. ಬಂದವನೇ ಆ ಮಗುವಿನ ತಲೆಗೊಂದು ರಪ್ಪನೆ ಹೊಡೆದು, 'ಲೇ ಆ ವಣ್ಣನ ತರ ಆಗಲೇ ಅಂತ ಹೇಳಿದ್ರೆ ಕಯ್ಯಾಗ ಪಾಟಿ ಹಿಡ್ಕಂಡ್ ಟೀವಿ ನೋಡ್ತೀಯ, ಆ ವಣ್ಣನ ಅಂಗ್ ಓದ್ಬುಕು ನೀನೂ' ಅಂದ.
ನನ್ನ ಕಡೆಗೆ ತಿರುಗಿ ಹೇಳಿದ. 'ನನ್ನ ಮಗಂಗೆ ಹೇಳ್ಬಿಟ್ಟಿವ್ನಿ ಕಣಪ್ಪಾ, ನಿನ್ನಂಗಾಗ್ಬೇಕು ಅಂತ'
ಆ ಮಗುವೋ, ನನ್ನನ್ನು ಕೊಲ್ಲುವಂತೆ ನೋಡುತ್ತಿತ್ತು. ನನಗೋ ತಡೆದುಕೊಳ್ಳಲಾಗದಷ್ಟು ಮುಜುಗರ. ಆ ಕ್ಷಣದಲ್ಲಿ ಅಪ್ಪನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.
ನಾನಿಲ್ಲಿಗೆ ಬಂದ ಮೇಲೆ ಅಪ್ಪನ ದರ್ಬಾರು ಮತ್ತೂ ಕಳೆಕಟ್ಟಿದೆಯಂತೆ. ಸಂಜೆ ಹೊತ್ತು ಊರವರ ಜೊತೆ ಮಾತಾಡ್ತಿರಬೇಕಾದ್ರೆ, ನಾನೇನಾದ್ರೂ ಫೋನ್ ಮಾಡಿದ್ರೆ, ಮಗ ಫೋನ್ ಮಾಡಿದ್ದಾನೆ. ಅಮೇರಿಕಾದಿಂದ ಅಂತ ಎದ್ದು ಹೋಗ್ತಾರೆ.
ಮಾತು ಮುಗಿಸಿ ಹೋದ ಮೇಲೆ ಅವರೆಲ್ಲಾ ಸಹಜವಾಗಿಯೇ - ಯಪ್ಪಾ, ಮಗ ಅಮೆರಿಕಕ್ಕೆ ಹೋಗಯ್ತಾ? ಏನ್ಮಾಡ್ತತೆ? ಏಟು ವರ್ಸ ಆತು? ಯಾವಾಗ್ಬರ್ತತೆ? ಸಂಬ್ಳ ಎಸ್ಟು? ಲಕ್ಷಗಟ್ಳೇ ಬರ್ತಿರ್ಬೇಕ್ ಬುಡು... ಎಂದೆಲ್ಲಾ ಕೇಳ್ತಿದ್ರೆ ಅಪ್ಪ ಅಲ್ಲೆಲ್ಲೋ ಮೋಡದ ಮೇಲೆ ತೇಲಿ ತೇಲಿ...
ಅಮ್ಮ ಈ ಕಥೆಗಳನ್ನೆಲ್ಲಾ ಹೇಳ್ತಿರ್ತಾಳೆ. ನಾನು ಅಮ್ಮ ಮಾತಾಡ್ತಿರಬೇಕಾದ್ರೆ ಇವಿಷ್ಟೂ ಒಂದ್ಸಲ ಬಂದು ಹೋಗ್ಬೇಕು. ಇಬ್ರೂ ಬಿದ್ದು ಬಿದ್ದು ನಗ್ತಿದ್ರೆ, ಏಯ್ ಮಾತು ಮುಗ್ಸೇ, ಅಲ್ಲಿಂದ ಫೋನ್ ಮಾಡಿದ್ದಾನೆ. ಬಿಲ್ ಎಷ್ಟು ಬರುತ್ತೆ ಅಂತ ನಿಂಗೇನು ಗೊತ್ತು ಅಂತ ಗುಟುರು ಹಾಕ್ತಿರ್ತಾರೆ.
ಅವರು ಆಫೀಸಿಗೆ ಹೋದಾಗ್ಲೇ ಫೋನ್ ಮಾಡೋ, ನೆಮ್ಮದಿಯಾಗಿ ಮಾತಾಡೋಕೇ ಬಿಡಲ್ಲ ಅಂತ ಅಮ್ಮ ಅವರೆದುರಿಗೇ ಹೇಳ್ತಿರ್ತಾಳೆ.
ಚಿಕ್ಕವನಿದ್ದಾಗ ಅಪ್ಪ ಎಂದರೆ ಭಯ. ನಮ್ಮಿಬ್ಬರ ಮಾತುಕತೆ ಎಂದರೆ ಬಿಜಾಪುರದಲ್ಲಿ ಮಳೆ ಬಂದಂತೆ. ಏನೇ ಕೆಲಸ ಆಗಬೇಕೆಂದರೂ ಅಮ್ಮನ ಮೂಲಕವೇ. ಹಂತಹಂತವಾಗಿ ಅಪ್ಪನ ಜೊತೆ ಸಲಿಗೆ ಮೂಡುತ್ತಾ ಬಂದು, ಈಗ ಮನೆಯಲ್ಲಿ ಅಪ್ಪನ ಪಾಡು ಕೇಳತೀರದು. ಮದುವೆ ಆದ ಮೇಲೆ ಹೆಂಡತಿ ಎದುರಲ್ಲಿ ಅಪ್ಪನನ್ನು ಕಾಡಬಾರದೆಂದು ಅಜ್ಜಿ ಕಡೆಯಿಂದ ಉಪದೇಶವಾಗಿದೆ.
ನಾವು ಗೇಲಿ ಮಾಡ್ತಿದ್ರೆ, ಅಪ್ಪ ಶುರು ಮಾಡ್ತಾರೆ. ಇವತ್ತು ನಗ್ತಿದೀಯಲ್ಲ, ನಾಳೆ ನೀನೇ ಹೇಳ್ತೀಯಾ ಅಪ್ಪ ಕರಕ್ಟಾಗೇ ಹೇಳ್ತಿದ್ದ ಅಂತ. By the time you think your dad was right, your child will be thinking you to be a fool. ಗೊತ್ತಾ? ನಾನು, ನನ್ನ ತಂಗಿ ಇಬ್ರೂ ಅಪ್ಪ ಹಾಗೆ ಹೇಳಿದ್ದನ್ನೂ ಉಲ್ಟಾ ಸೀದಾ ಮಾಡಿ ಮತ್ತಷ್ಟು ನಗ್ತೀವಿ.
ಅದೆಷ್ಟೇ ಗೇಲಿ, ತಮಾಷೆ ಮಾಡಿದರೂ, ಏನೇ ಕೆಲಸ ಮಾಡಬೇಕೆಂದರೂ ಒಂದು ಸಲ ಅಪ್ಪನನ್ನು ಕೇಳಲೇ ಬೇಕು. ಒಮ್ಮೊಮ್ಮೆ ಗೇಲಿಯ ವಸ್ತುವಾಗುವ ಅಪ್ಪ, ಮತ್ತೊಮ್ಮೆ ಕೈ ಹಿಡಿದು ನಡೆಸುವ ಗುರು. ಅತ್ಯಂತ ಕಷ್ಟ ಪಟ್ಟು ಒಂದು ನೆಲೆ ಕಂಡುಕೊಂಡು, ಇವತ್ತಿಗೂ ಹೊಲ, ಅಂಗಡಿ, ಆಫೀಸು ಅಂತ ಹೋರಾಡುವ ಅಪ್ಪ, ನಾನು 'ಇವತ್ತು ಬೋರಾಗಿದೆ, ಆಫೀಸಿಗೆ ಯಾರು ಹೋಗ್ತಾರೆ' ಎಂದು ಅಂದುಕೊಳ್ಳುವ ಹೊತ್ತಿಗೆ ನೆನಪಾಗುತ್ತಾರೆ.
ಅಪಾರನನ್ನು ಅಪಾರವಾಗಿ ಮಿಸ್ ಮಾಡಿಕೊಳ್ಳುತ್ತಾ
-ಪಾಪು